ಕಾಸರಗೋಡು: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹವ್ಯಕ ಮಹಾಮಂಡಲದ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯ, ಶ್ರಾವಣಕರೆ ಘಟಕದ ವ್ಯಾಪ್ತಿಯ ಪುತ್ತಿಗೆ ಕೃಷ್ಣಯ್ಯ ಹೆಬ್ಬಾರರ ಶಿಥಿಲಾವಸ್ಥೆಯಲ್ಲಿದ್ದ ಮನೆ ನವೀಕರಣ ಕಾರ್ಯಕ್ಕೆ ಜ.4ರಂದು ಚಾಲನೆ ನೀಡಲಾಯಿತು.
ಇದಕ್ಕೂ ಮುನ್ನ ಮುಳ್ಳೇರಿಯ ಮಂಡಲದ ಗುರಿಕಾರರು ಹಾಗೂ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮನೆಯ ಸ್ಥಿತಿಗತಿಗಳನ್ನು ಪರಿಶೀಲಿಸಿ ಅಗತ್ಯ ದುರಸ್ತಿ ಕಾರ್ಯಗಳಿಗೆ ಸಂಬಂಧಿಸಿದ ಸಲಹೆ–ಸೂಚನೆಗಳನ್ನು ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ಭಾನುವಾರ ಬೆಳಗ್ಗೆ ಮನೆ ದುರಸ್ತಿ ಕಾರ್ಯ ಆರಂಭಗೊಂಡಿದ್ದು, ಈ ಸಂದರ್ಭದಲ್ಲಿ ಗುಂಪೆ ವಲಯದ ಅಧ್ಯಕ್ಷ ಕುಮಾರ ಸುಬ್ರಮಣ್ಯ ಕೊಂದಲಕಾಡು ಅವರ ಅಧ್ಯಕ್ಷತೆಯಲ್ಲಿ ಸ್ಥಳದಲ್ಲೇ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪುತ್ತಿಗೆ ಪಂಚಾಯತ್ ಮಾಜಿ ಸದಸ್ಯ ಫಾಲಾಕ್ಷ ಅವರು, ಶ್ರೀರಾಮಚಂದ್ರಪುರ ಮಠದ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹದೊಂದಿಗೆ ಮನೆ ದುರಸ್ತಿ ಕಾರ್ಯ ಶೀಘ್ರ ಪೂರ್ಣಗೊಂಡು ವಾಸಯೋಗ್ಯವಾಗಿ ಕೃಷ್ಣಯ್ಯ ಹೆಬ್ಬಾರರಿಗೆ ಹಸ್ತಾಂತರವಾಗಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಇ.ಎಸ್. ಮಹಾಬಲೇಶ್ವರ ಭಟ್ ಎಡಕ್ಕಾನ ಅವರು, ಸಮಾಜದ ಅಗತ್ಯವಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ನಡೆಯುವ ಇಂತಹ ಸೇವಾ ಕಾರ್ಯಗಳು ಮಾದರಿಯಾಗಬೇಕು. ಈ ಪುಣ್ಯ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಹೇಳಿದರು.
ಕೆಲವು ವರ್ಷಗಳ ಹಿಂದೆ ಗುಂಪೆ ವಲಯಾಧ್ಯಕ್ಷರಾಗಿದ್ದ ಅಮ್ಮಂಕಲ್ಲು ರಾಮ ಭಟ್ ಅವರ ನೇತೃತ್ವದಲ್ಲಿ ಈ ಮನೆಗೆ ನೆರವು ನೀಡಿದ್ದ ವಿಚಾರವನ್ನು ಸ್ಮರಿಸಿದ ಬೆಜಪ್ಪೆ ಘಟಕದ ಗುರಿಕಾರ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಅವರು, ಗೋಮಾತೆಯ ಅನುಗ್ರಹದಿಂದ ಈ ಕುಟುಂಬಕ್ಕೆ ಆದಷ್ಟು ಶೀಘ್ರವಾಗಿ ವಾಸಯೋಗ್ಯ ಮನೆ ದೊರಕಲಿ ಎಂದು ಸದಾಶಯ ವ್ಯಕ್ತಪಡಿಸಿದರು.
ಗುಂಪೆ ವಲಯದ ಅಧ್ಯಕ್ಷ ಕುಮಾರ ಸುಬ್ರಮಣ್ಯ ಕೊಂದಲಕಾಡು ಅವರು ಮಾತನಾಡಿ, ಅಸಹಾಯಕ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿ ಮನೆ ನವೀಕರಣ ಕಾರ್ಯಕ್ಕೆ ಬೆಂಬಲ ನೀಡಿರುವ ಶಾಂಭವೀ ಫ್ಯಾಮಿಲಿ ಟ್ರಸ್ಟ್ ಎಡಕ್ಕಾನ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಇ.ಎಸ್. ಮಹಾಬಲೇಶ್ವರ ಭಟ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯ ಯಶಸ್ವಿಗೆ ಎಲ್ಲರೂ ತನು–ಮನ–ಧನಗಳಿಂದ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಪುತ್ತಿಗೆ ಪಂಚಾಯತ್ ಮಾಜಿ ಸದಸ್ಯ ಫಾಲಾಕ್ಷ, ಇಂಜಿನಿಯರ್ ಕೆ. ರಾಮಚಂದ್ರ ಶಾಸ್ತ್ರಿ, ಶಾಂಭವೀ ಫ್ಯಾಮಿಲಿ ಟ್ರಸ್ಟ್ ಎಡಕ್ಕಾನ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಇ.ಎಸ್. ಮಹಾಬಲೇಶ್ವರ ಭಟ್, ಶ್ರಾವಣಕರೆ ಘಟಕದ ಗುರಿಕಾರ ನಾರಾಯಣರಾವ್, ಗುಂಪೆ ವಲಯದ ವಿವಿಧ ಘಟಕಗಳ ಗುರಿಕಾರರು, ಪದಾಧಿಕಾರಿಗಳು, ಶಿಷ್ಯಬಂಧುಗಳು ಹಾಗೂ ವಿವಿಧ ಸಾಮಾಜಿಕ ಸಂಘ–ಸಂಸ್ಥೆಗಳ ಗಣ್ಯರು ಉಪಸ್ಥಿತರಿದ್ದರು.
ಶ್ರೀಗುರುವಂದನೆ ಹಾಗೂ ಗೋಸ್ತುತಿಯೊಂದಿಗೆ ಆರಂಭಗೊಂಡ ಸಭೆಯು, ಗುಂಪೆ ವಲಯದ ಲೇಖ ವಿಭಾಗದ ಇ.ಎಚ್. ಗೋವಿಂದ ಭಟ್ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಸಂಪನ್ನವಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


