ಇತ್ತೀಚೆಗೆ ರಾಜ್ಯದಲ್ಲಿ 2,000+ ಮಳೆ ಮಾಪನ ಯಂತ್ರಗಳು ರಿಪೇರಿ ಇಲ್ಲದೆ ಕೆಟ್ಟು ನಿಂತಿವೆ ಎಂಬ ಆಘಾತಕಾರಿ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.
ಮಳೆ ಮಾಪನ ಯಂತ್ರಗಳು ಕೆಟ್ಟು ನಿಂತ ಪರಿಣಾಮ ಮಲೆನಾಡು-ಕರಾವಳಿಯ ನೂರಾರು ಪಂಚಾಯತಿಗಳ ರೈತರೂ ಸೇರಿದಂತೆ, ರಾಜ್ಯದ ಲಕ್ಷಾಂತರ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಬಾರಿ ಅನ್ಯಾಯ ಆಗಿದ್ದು, ಶೃಂಗೇರಿ, ಕೊಪ್ಪ, ಸಾಗರ, ಶಿರಸಿ, ತೀರ್ಥಹಳ್ಳಿ, ಶಿವಮೊಗ್ಗ ಮುಂತಾದ ಅನೇಕ ಕಡೆಗಳಲ್ಲಿ ರೈತ ಪ್ರತಿಭಟನೆಗಳು ನಡೆದಿವೆ ಮತ್ತು ನಡೆಯುತ್ತಿವೆ. ಟೆಲಿಮೆಟ್ರಿಕ್ ಮಳೆ ಮಾಪಕ ಯಂತ್ರಗಳು ಕೆಟ್ಟು ಹೋಗಿದ್ದು, ಹವಾಮಾನ ಮಾಪನ ಕೇಂದ್ರಗಳ ಅಸಮರ್ಪಕ ನಿರ್ವಹಣೆಗಳ ಪರಿಣಾಮ, ವಿಮಾ ಪರಿಹಾರದಲ್ಲಿ ಆದ ಮೋಸ ಮತ್ತು ಪರಿಹಾರ ಹಂಚಿಕೆಯಲ್ಲಿ ಆಗುತ್ತಿರುವ ವಿಳಂಬಗಳಿಂದ ರೈತರಿಗೆ ಪರಮ ಅನ್ಯಾಯ ಆಗುತ್ತಿದೆ. ವಿಮಾ ವರ್ಷ ಮುಗಿದು ಐದು ತಿಂಗಳು ಕಳೆದಿದ್ದರೂ ಇನ್ನೂ ಕಾಳು ಮೆಣಸು ಮತ್ತು ಅಡಿಕೆ ಬೆಳೆಗಳಿಗೆ ಅನೇಕ ಗ್ರಾಮ ಪಂಚಾಯತಿಗಳಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಬಿಡುಗಡೆ ಆಗಿಲ್ಲ. ಮಳೆ ಮಾಪನ ಯಂತ್ರ ಕೆಟ್ಟು ನಿಂತ ಗ್ರಾಮ ಪಂಚಾಯತಿಗಳಿಗೆ ಪಕ್ಕದ ಕಡಿಮೆ ಮಳೆ ಬಿದ್ದ ಗ್ರಾಮ ಪಂಚಾಯತಿಯ ಮಳೆ ಮಾಪನ ಆಧಾರದಲ್ಲಿ ಅವೈಜ್ಞಾನಿಕ ವಿಮಾ ಪರಿಹಾರ ಹಂಚಿಕೆಯಾಗಿಯೂ ಅನ್ಯಾಯ ಆಗಿರುತ್ತದೆ.
ಮಳೆ ಮಾಪನ ಯಂತ್ರಗಳು ವರ್ಷಗಟ್ಟಲೆ ಕೆಟ್ಟು ನಿಂತರೂ, ಸರಿಪಡಿಸುವವರು ಯಾರೂ ಇಲ್ಲದೆ ರಾಜ್ಯದಲ್ಲಿ 2,000+ ಮಳೆ ಮಾಪನಗಳು ಅನಾಥವಾಗಿ ಗ್ರಾಮ ಪಂಚಾಯತಿಗಳಲ್ಲಿ ಬಿದ್ದಿದ್ದವು. ಕೆಲವು ಗ್ರಾಮ ಪಂಚಾಯತಿಗಳಲ್ಲಿ (ಉದಾಹರಣೆಗೆ ಕೊಪ್ಪ ತಾಲೂಕಿನ ಅಸಗೋಡು ಗ್ರಾಮ ಪಂಚಾಯತಿ) ಯಂತ್ರಗಳನ್ನು ಕಳ್ಳತನ ಆಗಿದ್ದರೂ ಅದರ ಬಗ್ಗೆ ಯಾರೂ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಲಾಗಿತ್ತು.
ಕೃಷಿ ಬಗ್ಗೆ ಸರಕಾರದ ನಿರ್ಲಕ್ಷ್ಯತೆ ಮತ್ತು ಅರಾಜಕತೆ ಮಳೆಮಾಪನ ಯಂತ್ರಗಳ ನಿರ್ವಹಣೆಯಲ್ಲೂ ವಿಸ್ತರಿಸಿರುವುದು ಸ್ಪಷ್ಟವಾಗಿದ್ದು, ಕೆಟ್ಟು ನಿಂತ ಮಳೆ ಮಾಪನ ಯಂತ್ರಗಳು ಸಾಕ್ಷೀಕರಿಸಿವೆ!
ಮಳೆ ಮಾಪನ ಯಂತ್ರಗಳ ನಿರ್ವಹಣೆಯ ಗೊಂದಲಗಳಿಗೆ ಈಗ ಎಚ್ಚೆತ್ತುಕೊಂಡಿರುವ ಸರಕಾರ, ಒಂದು ಸಕಾರಾತ್ಮಕ ನಿಲುವು ತೆಗೆದುಕೊಂಡು, ಆದೇಶ ಹೊರಡಿಸಿದ್ದು, ಇನ್ನು ಮುಂದಿನ ದಿನಗಳಲ್ಲಿ ಮಳೆ ಮಾಪನ ಯಂತ್ರಗಳ ನಿರ್ವಹಣೆಯ ಜವಾಬ್ದಾರಿಯನ್ನು VAO, ಅಪರ ಜಿಲ್ಲಾಧಿಕಾರಗಳ ಮತ್ತು ಜಿಲ್ಲಾಧಿಕಾರಿಗಳ ಹೆಗಲಿಗೆ ವಹಿಸಿದೆ.
ಇನ್ನು ಮುಂದೆ ಪ್ರತಿ ಟೆಲಿಮೆಟ್ರಿಕ್ ಮಳೆ ಮಾಪಕ (TRG's: Telemetric Rain Gauge) ಗಳ ನಿರ್ವಹಣೆಯನ್ನು ಅಯಾ ಗ್ರಾಮ ಪಂಚಾಯಿತಿಗಳ ಗ್ರಾಮ ಆಡಳಿತ ಅಧಿಕಾರಿಗಳು (VAO: Village Administrative Officer- ಹಿಂದೆ ಇವರನ್ನು ಗ್ರಾಮ ಲೆಕ್ಕಿಗ ಅಥವಾ Village Accountant ಎಂದು ಕರೆಯಲಾಗುತ್ತಿತ್ತು) ದಿನ ನಿತ್ಯ ಸಮರ್ಪಕ ಕಾರ್ಯ ನಿರ್ವಹಣೆಯ ಮೇಲ್ವಿಚಾರಣೆ ಮತ್ತು ನಿಗಾವಹಿಸುವ ಜವಾಬ್ದಾರಿ ಹೊಂದಿರುತ್ತಾರೆ ಮತ್ತು ಯಾವುದೇ ಟೆಲಿಮೆಟ್ರಿಕ್ ಮಳೆಮಾಪಕ (TRG's)ಗಳು ಕಾರ್ಯ ನಿರ್ವಹಿಸದಿದ್ದರೆ ತಕ್ಷಣವೇ ತಮ್ಮ ತಹಶೀಲ್ದಾರ್ ಮೂಲಕ ಅಪರ ಜಿಲ್ಲಾಧಿಕಾರಿಗೆ (ADC) ವರದಿ ಮಾಡಬೇಕು. ಅಪರ ಜಿಲ್ಲಾಧಿಕಾರಿಗಳು, ಪ್ರತಿವಾರ ಸಮಸ್ಯೆಯಿರುವ ಟೆಲಿಮೆಟ್ರಿಕ್ ಮಳೆ ಮಾಪಕ (TRG's)ಗಳ ವಿವರಗಳನ್ನು ಪಟ್ಟಿ ಮಾಡಿ ಮತ್ತು ಇವುಗಳನ್ನು ಸಕ್ರಿಯಗೊಳಿಸಲು ಸಂಬಂಧಿಸಿದ ನಿರ್ವಹಣಾ ಸಂಸ್ಥೆಗೆ ಲಿಖಿತವಾಗಿ ಸೂಚನೆ ನೀಡುತ್ತಾರೆ. ಇನ್ನು ಮುಂದೆ, KSNDMC ವತಿಯಿಂದ ಪ್ರತಿ VAO ಗೆ ಪ್ರತಿ ತಿಂಗಳು ರೂ.250/- ಮೇಲ್ವಿಚಾರಣಾ ಶುಲ್ಕವನ್ನು ಹೆಚ್ಚುವರಿಯಾಗಿ ಪಾವತಿಸಲಾಗುತ್ತದೆ. VAO ರವರು TRGಗಳ ಕಳ್ಳತನ ಮತ್ತು ಹಾನಿಯಾಗದಂತೆ ನೋಡಿ ಕೊಳ್ಳಬೇಕು ಮತ್ತು ಯಾವುದೇ ಕಳ್ಳತನ ಸಂಭವಿಸಿದಲ್ಲಿ ತಾಲ್ಲೂಕಿನ ತಹಶೀಲ್ದಾರರ ಮೂಲಕ F.I.R. ಗಳನ್ನು ದಾಖಲಿಸುತ್ತಾರೆ.
ಇದರ ಜೊತೆಗೆ ಹವಾಮಾನ ಮಾಪನ ಕೇಂದ್ರಗಳು (TWS: Telemetric Weather Station) ಹೋಬಳಿ/ತಾಲೂಕು ಮಟ್ಟದಲ್ಲಿದ್ದು, ಹೋಬಳಿ/ತಾಲೂಕು ಆಡಳಿತಾಧಿಕಾರಿಗಳಿಂದ ನಿರ್ವಹಿಸಲ್ಪಡುತ್ತದೆ.
ಅಪರ ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಯಾದ್ಯಂತ ಸ್ಥಾಪಿಸಲಾದ ಟೆಲಿಮೆಟ್ರಿಕ್ ಮಳೆಮಾಪಕ (TRG's)ಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕಾಗಿ ನೋಡಲ್ ಅಧಿಕಾರಿಯಾಗಿರುತ್ತಾರೆ ಮತ್ತು ಟೆಲಿಮೆಟ್ರಿಕ್ ಮಳೆಮಾಪಕ (TRG's) ಕೇಂದ್ರಗಳ ಸಮರ್ಪಕ ಕಾರ್ಯ ನಿರ್ವಹಣೆಗೆ ಒಟ್ಟಾರೆ ಜವಾಬ್ದಾರರಾಗಿರುತ್ತಾರೆ.
ಜಿಲ್ಲಾಧಿಕಾರಿಗಳು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥರಾಗಿದ್ದು, ಟೆಲಿಮೆಟ್ರಿಕ್ ಮಳೆಮಾಪಕ ಮತ್ತು ಹವಾಮಾನ ಮಾಪಕ (TRG's and TWS's)ಗಳ ಸಂಪೂರ್ಣ ನಿಯಂತ್ರಣ ಹೊಂದಿರುತ್ತಾರೆ.
***
ರೈತರಾಗಿ ನಾವೇನು ಮಾಡಬಹುದು!?
1) ಮಳೆ ಮಾಪನ ಯಂತ್ರಗಳ ಕಾರ್ಯಕ್ಷಮತೆ ಬಗ್ಗೆ ಗ್ರಾಮ ಆಡಳಿತಾಧಿಕಾರಗಳನ್ನು (VAO) ಆಗಾಗ ವಿಚಾರಿಸಬಹುದು.
2) ಆರು ತಿಂಗಳಿಗೊಮ್ಮೆ ನೆಡೆಯುವ ಗ್ರಾಮ ಸಭೆಗಳಲ್ಲಿ ಈ ಬಗ್ಗೆ ಚರ್ಚಿಸಿ, ಯಂತ್ರಗಳ ಕಾರ್ಯಕ್ಷಮತೆ ಬಗ್ಗೆ ದೃಢೀಕರಿಸಿಕೊಳ್ಳಬಹುದು.
***
ಉಳಿದಂತೆ, ಲಗತ್ತಿಸಿದ ಮಳೆ ಮಾಪನ ಯಂತ್ರಗಳ ವಿಚಾರದ ಆದೇಶ ಪತ್ರವನ್ನು ಗಮನಿಸಬಹುದು. ಆದೇಶ ಪತ್ರವನ್ನು ಸೇವ್ ಮಾಡಿ ಇಟ್ಟುಕೊಂಡರೆ ಒಳ್ಳೆಯದು, ಮುಂದೆ ಎಂದಾದರೂ ಉಪಯೋಗಕ್ಕೆ ಬರಬಹುದು.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


