ಕುಂಬಳೆ: ಭಾರತೀಯ ಸಂಸ್ಕೃತಿಯನ್ನು ನೀಡುತ್ತಾ ಮಕ್ಕಳನ್ನು ಸಂಸ್ಕಾರಯುತರನ್ನಾಗಿಸುವುದಲ್ಲದೆ ಮನೆಮಂದಿಯೂ ಉತ್ತಮ ಸಂಸ್ಕಾರವನ್ನು ರೂಢಿಸಿಕೊಳ್ಳುವ ವಾತಾವರಣವನ್ನು ಈ ಶಾಲೆಯು ನಿರ್ಮಿಸಿದೆ. ಗುರುಹಿರಿಯರನ್ನು ಗೌರವದಿಂದ ಕಾಣಬೇಕು ಎಂಬ ಚಿಂತನೆ ಮಕ್ಕಳಲ್ಲಿ ಮನೆ ಮಾಡುವಂತಹ ಶಿಕ್ಷಣವನ್ನು ಇಲ್ಲಿ ನೀಡುತ್ತಿರುವುದು ಶ್ಲಾಘನೀಯ ಎಂದು ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಎಂ.ಶಶಿಧರ ಹೇಳಿದರು.
ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ವರ್ಧಂತ್ಯುತ್ಸವದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 25 ವರ್ಷಗಳ ಬಾಲ್ಯದಲ್ಲಿ ಈ ವಿದ್ಯಾಸಂಸ್ಥೆಯಿದೆ. ಇನ್ನಷ್ಟು ಅಭಿವೃದ್ಧಿ ಪಥದತ್ತ ಸಾಗುತ್ತಾ ನಾಡಿಗೆ ಉತ್ತಮ ಜನಾಂಗವನ್ನು ನೀಡುವಂತಾಗಲಿ ಎಂದರು. ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಅಧ್ಯಕ್ಷತೆ ವಹಿಸಿ ಶಾಲೆಯ ವಿವಿಧ ಕಾರ್ಯಗಳ ಕುರಿತು ಬೆಳಕನ್ನು ಚೆಲ್ಲಿದರು.
ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯ ಮಂಡಲ ಗುರಿಕ್ಕಾರರಾದ ಸತ್ಯನಾರಾಯಣ ಭಟ್ ಮೊಗ್ರ, ಮಹಾಮಂಡಲ ಸೇವಾವಿಭಾಗದ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಜಯದೇವ ಖಂಡಿಗೆ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉದಯಕುಮಾರ್ ಮಾಯಿಪ್ಪಾಡಿ, ಮಾತೃಸಂಘದ ಅಧ್ಯಕ್ಷ ದೀಪಶ್ರೀ ದೊಡ್ಡಮಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಅಡೂರು ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥ ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ಕೊಡಮಾಡುವ ಪ್ರಶಸ್ತಿಯನ್ನು ಈ ಬಾರಿ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗೆ ವಿತರಿಸಿ ಚುಟುಕು ಸಾಹಿತ್ಯ ಪರಿಷತ್‌ನ ಕಾಸರಗೋಡು ಜಿಲ್ಲಾ ಅಧ್ಯಕ್ಷ ವಿರಾಜ್ ಅಡೂರು ಮಾತನಾಡಿದರು. ಶಾಲಾ ಆಡಳಿತ ಮಂಡಳಿಯ ಬಾಲಕೃಷ್ಣ ಶರ್ಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಅಧ್ಯಾಪಿಕೆ ಚಿತ್ರಾ ಸರಸ್ವತಿ ವಾರ್ಷಿಕ ವರದಿಯನ್ನು ಓದಿದರು. ಅಧ್ಯಾಪಿಕೆ ಶ್ರೀದೇವಿ ವಿವಿಧ ದತ್ತಿನಿಧಿಗಳ ವಿವರಗಳನ್ನು ತಿಳಿಸಿದರು.
ಹಳೆವಿದ್ಯಾರ್ಥಿಗಳ ನೇತೃತ್ವದಲ್ಲಿ ಶಾಲಾ ಮುಖ್ಯೋಪಾಧ್ಯಾಯರನ್ನು ಗೌರವಿಸಲಾಯಿತು. ಅಧ್ಯಾಪಕ ಹರಿಪ್ರಸಾದ್ ಮಾತನಾಡಿದರು. ಅಧ್ಯಾಪಿಕೆ ಚೈತ್ರ ಸ್ವಾಗತಿಸಿ, ಮುಖ್ಯೋಪಾಧ್ಯಾಯ ಶ್ಯಾಮಭಟ್ ದರ್ಭೆಮಾರ್ಗ ವಂದಿಸಿದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


