ವಿವಾಹವು ಭಾರತೀಯ ಸಮಾಜದಲ್ಲಿ ಅತ್ಯಂತ ಪವಿತ್ರ ಹಾಗೂ ಸಂಸ್ಕೃತಿಪರ ಆಚರಣೆ. ಇದು ಕೇವಲ ಎರಡು ವ್ಯಕ್ತಿಗಳ ಸಂಬಂಧವಲ್ಲ; ಎರಡು ಕುಟುಂಬಗಳ, ಸಂಪ್ರದಾಯಗಳ ಮತ್ತು ಮೌಲ್ಯಗಳ ಸಂಗಮ. ಇಂತಹ ಮಹತ್ವದ ಸಂದರ್ಭದಲ್ಲಿ ನಡೆಯುವ ಪ್ರತಿಯೊಂದು ಆಚರಣೆಯೂ ಅರ್ಥಪೂರ್ಣವಾಗಿರಬೇಕು ಎಂಬ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ವಿವಾಹ ಸಮಾರಂಭಗಳಲ್ಲಿ ಶುಭಾಶಯ ಸಲ್ಲಿಸುವ ವೇಳೆ ವಧು–ವರರ ಮೇಲೆ ಅಕ್ಷತೆ ಹಾಕುವ ಪದ್ಧತಿ ಸಾಮಾನ್ಯ. ಅಕ್ಕಿ ಸಮೃದ್ಧಿ, ಶುಭ ಮತ್ತು ದೇವರ ಅನುಗ್ರಹದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ಇಂದಿನ ಸಂದರ್ಭದಲ್ಲಿ ಈ ಆಚರಣೆಯ ರೂಪವು ಅದರ ಅರ್ಥಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಬೇಸರದ ಸಂಗತಿ.
ಮದುವೆ ಮಂಟಪದಲ್ಲಿ ಹಾಕಲಾಗುವ ಅಕ್ಷತೆ ಬಹುಪಾಲು ನೆಲಕ್ಕೆ ಬೀಳುತ್ತದೆ. ದಿನವಿಡೀ ಅತಿಥಿಗಳು ಅದೇ ಅಕ್ಕಿಯ ಮೇಲೆ ಕಾಲಿಡುತ್ತಾರೆ. ಅನ್ನವನ್ನು ದೇವರ ರೂಪವೆಂದು ಪೂಜಿಸುವ ಸಮಾಜದಲ್ಲಿ, ಅದೇ ಅನ್ನ ಹೀಗೆ ತುಳಿಯಲ್ಪಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ ನಮ್ಮಲ್ಲಿ ಉದ್ಭವ ಆಗಬೇಕು. ಸಂಪ್ರದಾಯ ಉಳಿಯಬೇಕೆಂದರೆ, ಅದರ ಮೌಲ್ಯವೂ ಉಳಿಯಬೇಕು.
ಇನ್ನೊಂದು ಕಡೆಯಿಂದ ನೋಡಿದರೆ, ದೇಶದಲ್ಲಿ ಹಸಿವು ಇನ್ನೂ ದೊಡ್ಡ ಸಮಸ್ಯೆಯಾಗಿ ಉಳಿದಿದೆ. ಸಂಯುಕ್ತ ರಾಷ್ಟ್ರಗಳ ಆಹಾರ ಮತ್ತು ಕೃಷಿ ಸಂಸ್ಥೆ (FAO) ಹಾಗೂ ಇತರ ಸಾಮಾಜಿಕ ಅಧ್ಯಯನಗಳ ಪ್ರಕಾರ, ಭಾರತದಲ್ಲಿ ಲಕ್ಷಾಂತರ ಜನರು ಪ್ರತಿದಿನ ಸಮರ್ಪಕ ಆಹಾರವಿಲ್ಲದೆ ಮಲಗುತ್ತಿದ್ದಾರೆ. ಅಪೌಷ್ಟಿಕತೆ, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಲ್ಲಿ, ಗಂಭೀರ ಸಮಸ್ಯೆಯಾಗಿ ಮುಂದುವರಿದಿದೆ. ಇಂತಹ ಸಂದರ್ಭದಲ್ಲಿ ಆಹಾರದ ವ್ಯರ್ಥತೆ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ.
ಈ ಸಮಸ್ಯೆಗೆ ಪರಿಹಾರ ದೊಡ್ಡದಾಗಿರಬೇಕೆಂದಿಲ್ಲ. ಸಣ್ಣ ಬದಲಾವಣೆ ಸಾಕು. ವಿವಾಹ ಸಮಾರಂಭಗಳಲ್ಲಿ ಅಕ್ಷತೆ ಹಾಕುವ ಪದ್ಧತಿಯನ್ನು ಸಂಪೂರ್ಣವಾಗಿ ನಿಲ್ಲಿಸುವ ಅಗತ್ಯವಿಲ್ಲ. ಆದರೆ ಅದನ್ನು ವಧು–ವರರ ತಂದೆ-ತಾಯಿಗಳು, ಹಿರಿಯರು ಅಥವಾ ಆಶೀರ್ವಾದ ನೀಡುವ ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಸೀಮಿತಗೊಳಿಸಬಹುದು. ಉಳಿದ ಅತಿಥಿಗಳು ಮಾತಿನ ಮೂಲಕ, ಹೃದಯಪೂರ್ವಕ ಶುಭಾಶಯಗಳ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಬಹುದು.
ಮದುವೆಗೆ ಬಳಸುವ ಅಕ್ಕಿಯನ್ನು ನಂತರ ಅನ್ನದಾನ ಕಾರ್ಯಕ್ರಮಗಳಿಗೆ, ಅನಾಥಾಶ್ರಮ, ವೃದ್ಧಾಶ್ರಮ ಅಥವಾ ಬಡವರಿಗೆ ನೀಡಿದರೆ, ಅದರಿಂದ ಸಮಾಜಕ್ಕೆ ನಿಜವಾದ ಉಪಯೋಗವಾಗುತ್ತದೆ. ಒಂದು ಕಡೆ ಅನ್ನದ ಪವಿತ್ರತೆಗೆ ಗೌರವ ಸಿಗುತ್ತದೆ; ಇನ್ನೊಂದು ಕಡೆ ಹಸಿದ ಹೊಟ್ಟೆಗಳಿಗೆ ಆಹಾರ ದೊರೆಯುತ್ತದೆ.
ಸಂಪ್ರದಾಯ ಎಂದರೆ ಬದಲಾವಣೆ ಇಲ್ಲದ ಸ್ಥಿತಿ ಅಲ್ಲ. ಕಾಲಕ್ಕೆ ತಕ್ಕಂತೆ ಅರ್ಥಪೂರ್ಣ ರೂಪಾಂತರಗೊಂಡಾಗಲೇ ಸಂಸ್ಕೃತಿ ಜೀವಂತವಾಗಿರುತ್ತದೆ. ವಿವಾಹದಂತಹ ಶುಭ ಸಂದರ್ಭಗಳಲ್ಲಿ ಆಹಾರದ ಗೌರವವನ್ನು ಕಾಪಾಡುವ ಈ ಸಣ್ಣ ಹೆಜ್ಜೆ, ಮಾನವೀಯತೆಯ ದೊಡ್ಡ ಸಂದೇಶವನ್ನು ಸಮಾಜಕ್ಕೆ ನೀಡಬಲ್ಲದು.
ಆಚರಣೆಗಳಲ್ಲಿ ಸಣ್ಣ ಬದಲಾವಣೆ- ಸಮಾಜದಲ್ಲಿ ದೊಡ್ಡ ಪರಿಣಾಮ ಮೂಡಿಸುತ್ತದೆ. ಬದಲಾವಣೆ ನಮ್ಮಿಂದ ಆರಂಭವಾಗಲಿ.
- ವೈಶಾಖ್ ರಾಜ್ ಜೈನ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

