ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರೂ, ಆಡಳಿತಾಂಗ ಕುಲಸಚಿವರೂ ಆಗಿರುವ ಪ್ರೊ. (ಡಾ.) ಶ್ರೀಧರ ಎನ್. ಭಟ್ಟ ಅವರಿಗೆ “ಶಿಕ್ಷಾಪ್ರದಾನ ಶಿರೋಮಣಿ” ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು.
ಕರ್ನಾಟಕ ಗಮಕ ಕಲಾಪರಿಷತ್ತು, ಹಾಸನ ಜಿಲ್ಲಾ ಘಟಕವು ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ “ಗಮಕ ಹಬ್ಬ – ಕವಿನಮನ” ಕಾರ್ಯಕ್ರಮದಲ್ಲಿ ಇತ್ತೀಚೆಗೆ ಈ ಗೌರವ ನೀಡಲಾಯಿತು. ಪ್ರಾಧ್ಯಾಪಕರಾಗಿ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಆದರ್ಶ ಸೇವೆ ಹಾಗೂ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿನ ಸಕ್ರಿಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಕರ್ನಾಟಕ ಗಮಕ ಕಲಾಪರಿಷತ್ತು (ರಿ) ಬೆಂಗಳೂರು, ಹಾಸನ ಜಿಲ್ಲಾ ಘಟಕ, ಶ್ರೀ ಸೀತಾರಾಮಾಂಜನೆಯ ಸೇವಾಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂಸ್ಕಾರ ಭಾರತಿ ಹಾಸನ ಘಟಕದ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗಮಕ ವಾಚನ–ವ್ಯಾಖ್ಯಾನ ಕಾರ್ಯಕ್ರಮವೂ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಗಮಕಿ ವಿಷ್ಣುಪ್ರಸಾದ್ ಕಲ್ಲೂರಾಯ ಅವರು ಸರಳ ಕವಿ ಆಸೂರಿ ಕೆ. ರಾಮಸ್ವಾಮಿ ಅಯ್ಯಂಗಾರ್ ವಿರಚಿತ “ಗೋಕರ್ಣ ಮಹಿಮಾದರ್ಶ” ಕಾವ್ಯದ ಆತ್ಮಲಿಂಗ ಪ್ರಸಂಗವನ್ನು ತಮ್ಮ ಸುಶ್ರಾವ್ಯ ಕಂಠಸಿರಿಯಿಂದ ಗಾಯನ ಮಾಡಿ ಶ್ರೋತೃವರ್ಗಕ್ಕೆ ಮುದ ನೀಡಿದರು. ಅವರ ಗಾಯನಕ್ಕೆ ವಿದ್ವಾನ್ ಡಾ. ಶ್ರೀಧರ ಎನ್. ಭಟ್ಟ ಅವರು ನೀಡಿದ ವಿದ್ವತ್ಪೂರ್ಣ ವ್ಯಾಖ್ಯಾನ ಶ್ರೋತೃಗಳನ್ನು ಮಂತ್ರಮುಗ್ಧಗೊಳಿಸಿತು.
ಇದೇ ಸಂದರ್ಭದಲ್ಲಿ ಆಸೂರಿ ಅವರ ಮರುಮುದ್ರಿತ ಕೃತಿ “ಭರತಭಕ್ತಿಕಾವ್ಯ”ವನ್ನು ಡಾ. ಶ್ರೀಧರ ಎನ್. ಭಟ್ಟ ಅವರು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಾಯೋಜಕರಾದ ವಿದುಷಿ ಪದ್ಮಜಾ ಶ್ರೀನಿವಾಸನ್ ಪರಿವಾರದವರು, ಗಮಕ ಕಲಾಪರಿಷತ್ತಿನ ಅಧ್ಯಕ್ಷ ಕಲಾಶ್ರೀ ಗಣೇಶ್ ಉಡುಪ ಹಾಗೂ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕುಮಾರಿ ತನುಶ್ರೀ ಪ್ರಾರ್ಥನೆ ಸಲ್ಲಿಸಿದರೆ, ಪ್ರೊ. ಜಿ.ಎನ್. ಅನಸೂಯ ಕಾರ್ಯಕ್ರಮ ನಿರೂಪಿಸಿದರು. ಮಮತಾ ವಿ. ಅವರು ಸನ್ಮಾನ ಪತ್ರ ವಾಚಿಸಿದರು. ಕೊನೆಯಲ್ಲಿ ಕಲಾಶ್ರೀ ಗಣೇಶ್ ಉಡುಪ ವಂದನಾರ್ಪಣೆ ಮಾಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


