ಮಂಗಳೂರು: ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಕೃತಿ ಲೋಕಾರ್ಪಣೆ, ತುಳು ಮತ್ತು ಕನ್ನಡ ಕವಿಗೋಷ್ಠಿಯನ್ನು ಒಳಗೊಂಡ “ಸಾಹಿತ್ಯ ವೈಭವ–2026” ಕಾರ್ಯಕ್ರಮವು ಭಾನುವಾರ (ಜ.25) ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಮಂಗಳೂರು ಇಲ್ಲಿನ ಅಭಿಷೇಕ ಮಂದಿರ ಸಭಾಂಗಣದ ಚುಟುಕು ಬ್ರಹ್ಮ ದಿನಕರ ದೇಸಾಯಿ ವೇದಿಕೆಯಲ್ಲಿ ಭವ್ಯವಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ನೇಮು ಪೂಜಾರಿ (ಇರಾ) ಅವರ “ಚುಟುಕು ಕಾವ್ಯ ಕಾಮಿನಿ” ಹಾಗೂ ಜಿಲ್ಲಾ ಅಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು ಅವರ “ಕೋಲ್ಮಿಂಚು” (ನ್ಯಾನೋ ಕತೆಗಳ ಸಂಕಲನ) ಕೃತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಲೋಕಾರ್ಪಣೆಗೊಳಿಸಿದರು.
ಚುಟುಕು ಕಾವ್ಯ ಕಾಮಿನಿ ಕೃತಿಯನ್ನು ಕವಯಿತ್ರಿ, ಸಾಹಿತಿ ಹಾಗೂ ವಿಮರ್ಶಕರಾದ ವಿ. ಸೀತಾಲಕ್ಷ್ಮಿ ವರ್ಮ (ವಿಟ್ಲ ಅರಮನೆ) ಪರಿಚಯಿಸಿದರೆ, ಕೋಲ್ಮಿಂಚು ಕೃತಿಯನ್ನು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಹಿತೇಶ್ ಕುಮಾರ್ ಎ. ಪರಿಚಯಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಗಳೂರಿನ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಎಸ್. ಗಣೇಶ್ ರಾವ್ ಉದ್ಘಾಟಿಸಿದರು. ಅವರು ಮಾತನಾಡಿ, “ಮನುಷ್ಯ–ಮನುಷ್ಯನ ನಡುವಿನ ಸಂಬಂಧವನ್ನು ಚುಟುಕು ಸಾಹಿತ್ಯ ಇನ್ನಷ್ಟು ಬಲಪಡಿಸಬೇಕು. ಸಾಹಿತ್ಯ ನಿಂತ ನೀರಾಗದೆ ನಿರಂತರವಾಗಿ ಹರಿಯಬೇಕು” ಎಂದು ಆಶಯ ವ್ಯಕ್ತಪಡಿಸಿ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶಿವರಾಮ ಕಾಸರಗೋಡು, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಪ್ರೊ. ಪಿ. ಕೃಷ್ಣಮೂರ್ತಿ, ಹಿರಿಯ ಕವಿಗಳಾದ ಗುಣಾಜೆ ರಾಮಚಂದ್ರ ಭಟ್, ಡಾ. ಸುರೇಶ್ ನೆಗಳಗುಳಿ, ರೇಮಂಡ್ ಡಿಕೂನ ತಾಕೊಡೆ, ಸುಭಾಷ್ ಪೆರ್ಲ ಸೇರಿದಂತೆ ಹಲವರು ಗೌರವ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕೃತಿಕಾರರನ್ನು ಫಲಪುಷ್ಪ ಹಾಗೂ ಶಾಲು ಹೊದಿಸಿ ಗೌರವಿಸಲಾಯಿತು.
ಕು. ದಿಶಾ ಸಿ.ಜಿ. ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗೋಪಾಲಕೃಷ್ಣ ಶಾಸ್ತ್ರಿ ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು ವಂದಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಪರಿಷತ್ತಿನ ಕಾರ್ಯದರ್ಶಿ ರಶ್ಮಿ ಸನಿಲ್, ಜೊತೆ ಕಾರ್ಯದರ್ಶಿ ರಾಜೇಶ್ವರಿ ಎಚ್. ಬಜ್ಪೆ, ಕೋಶಾಧಿಕಾರಿ ಭಾಸ್ಕರ್ ಎ. ವರ್ಕಾಡಿ ಹಾಗೂ ಕವಯಿತ್ರಿ ಸೌಮ್ಯಾ ಗೋಪಾಲ್ ವಹಿಸಿದ್ದರು.
ನಂತರ ಕವಯಿತ್ರಿ ಹಾಗೂ ಸಂಘಟಕರಾದ ಗೀತಾ ಲಕ್ಷ್ಮೀಶ್ ಅವರ ಅಧ್ಯಕ್ಷತೆಯಲ್ಲಿ ತುಳು ಕವಿಗೋಷ್ಠಿ ಹಾಗೂ ಹಿರಿಯ ಕವಿಗಳಾದ ಎನ್. ಸುಬ್ರಾಯ ಭಟ್ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಕವಿಗೋಷ್ಠಿ ನಡೆಯಿತು. ಎರಡೂ ಕವಿಗೋಷ್ಠಿಗಳಲ್ಲಿ ಅನೇಕ ಕವಿಗಳು ಭಾಗವಹಿಸಿ ತಮ್ಮ ಸೃಜನಶೀಲ ಕಾವ್ಯ ಪಠಣದ ಮೂಲಕ ಕಾರ್ಯಕ್ರಮಕ್ಕೆ ಸಾಹಿತ್ಯಿಕ ವೈಭವವನ್ನು ನೀಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

