ಮಂಗಳೂರು: ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಿ ಬೆಳೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಕೊಂಕಣಿ ಲೇಖಕ್ ಸಂಘ್, ಕರ್ನಾಟಕವು 2026ನೇ ಸಾಲಿನ ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಕೊಂಕಣಿ ಲೇಖಕ ಶ್ರೀ ಪೆಟ್ರಿಕ್ ಕಾಮಿಲ್ ಮೊರಾಸ್ (ಎಮ್. ಪೆಟ್ರಿಕ್) ಅವರನ್ನು ಆಯ್ಕೆ ಮಾಡಿದೆ.
ಕೊಂಕಣಿ ಲೇಖಕ್ ಸಂಘ್ ಕರ್ನಾಟಕವು 2018ರಲ್ಲಿ ಸ್ಥಾಪನೆಯಾಗಿದ್ದು, 2022ರಿಂದ ಕೊಂಕಣಿ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ ಹಿರಿಯ ಹಾಗೂ ಖ್ಯಾತ ಲೇಖಕರನ್ನು ಗುರುತಿಸಿ ಗೌರವಿಸುವ ಪರಂಪರೆಯನ್ನು ಆರಂಭಿಸಿದೆ. ಈ ಪ್ರಶಸ್ತಿಯು ರೂ. 25,000/- ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.
ನವೆಂಬರ್ 17, 1945ರಂದು ಜನಿಸಿದ ಪೆಟ್ರಿಕ್ ಕಾಮಿಲ್ ಮೊರಾಸ್ ಅವರು ಕೊಂಕಣಿ ಸಾಹಿತ್ಯ ಲೋಕದಲ್ಲಿ ಎಮ್. ಪೆಟ್ರಿಕ್ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಬಾಲ್ಯದ ಅನೇಕ ಕಷ್ಟಗಳನ್ನು ಎದುರಿಸಿ, ಕುಟುಂಬದ ಆಧಾರವಾಗಬೇಕಾದ ಕಾರಣ ಐದನೇ ತರಗತಿಯಲ್ಲೇ ಶಿಕ್ಷಣವನ್ನು ನಿಲ್ಲಿಸಬೇಕಾದ ಪರಿಸ್ಥಿತಿಯಲ್ಲೂ ಅವರು ಸಾಹಿತ್ಯದತ್ತ ತಮ್ಮ ಒಲವನ್ನು ಕಳೆದುಕೊಳ್ಳಲಿಲ್ಲ. ಖ್ಯಾತ ಸಾಹಿತಿ ಜೆ. ಬಿ. ರಸ್ಕೀನ್ಹಾ ಅವರು ಇವರಿಗೆ ಮಾರ್ಗದರ್ಶಕರಾಗಿ ಲಭಿಸಿ, ಸಾಹಿತ್ಯ ಪುಸ್ತಕಗಳನ್ನು ಒದಗಿಸುವುದರ ಜೊತೆಗೆ ಮನೆಮನೆಗೆ ತೆರಳಿ ಪುಸ್ತಕ ಮಾರಾಟ ಮಾಡುವ ಮೂಲಕ ಸಾಹಿತ್ಯ ಸೇವೆಗೆ ಪ್ರೇರಣೆ ನೀಡಿದರು.
ಹದಿನೆಂಟನೇ ವಯಸ್ಸಿನಲ್ಲಿ ಪುಸ್ತಕ ಮಾರಾಟಗಾರರಾಗಿ ಹಾಗೂ ‘ಕಾಣಿಕ್’ ಪತ್ರಿಕೆಯ ಸಹ-ಸಂಪಾದಕರಾಗಿ ವೃತ್ತಿಜೀವನ ಆರಂಭಿಸಿದ ಎಮ್. ಪೆಟ್ರಿಕ್ ಅವರು, ಮುಂದಿನ ದಿನಗಳಲ್ಲಿ 800ಕ್ಕೂ ಹೆಚ್ಚು ಸಣ್ಣ ಕಥೆಗಳು, 400ಕ್ಕೂ ಹೆಚ್ಚು ಲೇಖನಗಳು ಮತ್ತು 10 ಕಾದಂಬರಿಗಳನ್ನು ರಚಿಸಿದ ಬಹುಮುಖ ಸಾಹಿತಿಯಾಗಿ ತಮ್ಮದೇ ಆದ ಸ್ಥಾನವನ್ನು ಗಳಿಸಿಕೊಂಡರು. ತಮ್ಮ ‘ನಿತ್ಯಾದರ್ ಪ್ರಕಾಶನ’ದ ಮೂಲಕ ನಾಟಕಗಳು, ಪತ್ತೇದಾರಿ ಕಥೆಗಳು ಸೇರಿದಂತೆ ಅನೇಕ ಕೃತಿಗಳನ್ನು ಪ್ರಕಟಿಸಿ, ಕೊಂಕಣಿ ಭಾಷೆ ಮತ್ತು ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ.
ಇವರ ವಿಶಿಷ್ಟ ಸಾಹಿತ್ಯ ಸೇವೆಯನ್ನು ಗುರುತಿಸಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ‘ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ – 2026’ ಇವರಿಗೆ ಲಭಿಸಿದೆ.
ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಫೆಬ್ರವರಿ 07, 2026 (ಶನಿವಾರ) ಸಂಜೆ 6.30ಕ್ಕೆ, ಸಂದೇಶ ಪ್ರತಿಷ್ಠಾನ, ಬಜ್ಜೋಡಿ, ಮಂಗಳೂರು ಇಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಸಂಚಾಲಕರಾದ ರಿಚರ್ಡ್ ಮೊರಾಸ್, ಸಮಿತಿ ಸದಸ್ಯರಾದ ಡೊಲ್ಫಿ ಎಫ್. ಲೋಬೊ ಹಾಗೂ ಸಲಹಾ ಸಮಿತಿ ಸದಸ್ಯರಾದ ಡಾ. ಜೆರಿ ನಿಡ್ಡೋಡಿ ಮತ್ತು ಜೆ. ಎಫ್. ಡಿಸೋಜಾ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

