ಅಭಿಮಾನ ಮತ್ತು ಅಂಧಾಭಿಮಾನ– ಇವೆರಡರ ಅರ್ಥ ನಮಗೆಲ್ಲ ತಿಳಿದಿದ್ದರೂ, ಹೆಚ್ಚಿನ ಸಂದರ್ಭಗಳಲ್ಲಿ ನಾವು ಅಂಧರಾಗಿ ವರ್ತಿಸುವುದೇ ಹೆಚ್ಚು. ಅಭಿಮಾನಿಯಾಗುವುದು ತಪ್ಪಲ್ಲ; ಹಾಗೆ ಹೇಳಿಕೊಳ್ಳುವುದಲ್ಲಿಯೂ ತಪ್ಪೇನಿಲ್ಲ. ಆದರೆ ನೀವು ಅಭಿಮಾನಪಡುವವರು ಮಾಡುವ ಪ್ರತಿಯೊಂದನ್ನೂ, ಹೇಳುವ ಪ್ರತಿಯೊಂದನ್ನೂ ಪ್ರಶ್ನಿಸದೇ ಒಪ್ಪಿಕೊಳ್ಳುವ, ಸ್ವೀಕರಿಸುವ ಸ್ವಭಾವವನ್ನು ಬೆಳೆಸಿಕೊಳ್ಳುವುದು ಮಹಾತಪ್ಪು.
ನೀವು ಅಭಿಮಾನಿಸುವವರ ತಪ್ಪುಗಳನ್ನು ಸೂಚಿಸುವವರ ವಿರುದ್ಧ ನಿಂತು ವಾಗ್ವಾದ ನಡೆಸುವುದೋ, ಅಥವಾ ಅವರನ್ನು ಹೊಗಳುವವರ ಪರವಾಗಿ ಸಮರ್ಥನೆಗೆ ಇಳಿಯುವುದೋ ನಿಮ್ಮ ವಿವೇಕದ ಕೊರತೆಯನ್ನು ತೋರಿಸುತ್ತದೆ. ಯಾವ ಕಾಲಕ್ಕೂ ನೀವು ಅಭಿಮಾನಿಸುವ ವ್ಯಕ್ತಿಯನ್ನು ಅತಿಶಯವಾಗಿ, ಅತೀಂದ್ರಿಯವಾಗಿ ನೋಡುವ ತಪ್ಪು ಮಾಡಬಾರದು. ಏಕೆಂದರೆ, ಇಂದ್ರಿಯಗಳ ಮೇಲೆ ನಂಬಿಕೆ ಕಳೆದುಕೊಂಡವನು ಮಾತ್ರ ಅತೀಂದ್ರಿಯಗಳಲ್ಲಿ ನಂಬಿಕೆ ಇಡುತ್ತಾನೆ.
ಅವರಲ್ಲಿ ತಪ್ಪುಗಳಿದ್ದರೆ ನಿರ್ದಾಕ್ಷಿಣ್ಯವಾಗಿ ಖಂಡಿಸಬೇಕು. ಅವರನ್ನು ಅವರು ಇದ್ದಂತೆಯೇ, ಸೂಕ್ಷ್ಮವಾಗಿ ಅವಲೋಕಿಸಬೇಕು. ಅವರಲ್ಲಿ ನೀವು ಅಭಿಮಾನಪಡುವ ಗುಣ, ಸಾಧನೆ ಅಥವಾ ವಿಚಾರವನ್ನು ಮಾತ್ರ ಗ್ರಹಿಸಬೇಕು. ಆದರೆ ಅದೇ ಆಧಾರದ ಮೇಲೆ “ಅವರೇ ಸದಾ ಸರಿ” ಎಂಬ ಶಾಶ್ವತ ತೀರ್ಮಾನಕ್ಕೆ ಬರಬಾರದು.
ಅವರ ಸಾಧನೆ, ಸಾಹಸ, ಹೆಚ್ಚುಗಾರಿಕೆಯನ್ನು ಇದ್ದಹಾಗೆಯೇ ಸ್ವೀಕರಿಸಿ ಮೆಚ್ಚಬೇಕು, ಹಾಡಿಹೊಗಳಬೇಕು. ಆದರೆ ಅವರನ್ನು ಮೆಚ್ಚದವರ ವಿರುದ್ಧ ಹೋರಾಟ ನಡೆಸುವುದು ಅಸಹಜವೂ ಅರ್ಥವಿಲ್ಲದದ್ದೂ ಆಗಿದೆ. ಯಾವ ಕಾರಣಕ್ಕೂ ನೀವು ಅಭಿಮಾನಿಸುವವರನ್ನು ದೇವರನ್ನಾಗಿಸಬಾರದು. ದೇವರನ್ನಾಗಿಸಿದ ಕ್ಷಣದಿಂದಲೇ, ಅವರಿಗೆ ತಪ್ಪು ಮಾಡುವ ಅವಕಾಶವೇ ಉಳಿಯುವುದಿಲ್ಲ.
ಬದುಕಿನುದ್ದಕ್ಕೂ ನಿಮ್ಮ ಅಭಿಮಾನವೇ ಅವರಿಗೆ ಎದುರಾಗುವ ಅತ್ಯಂತ ದೊಡ್ಡ ಸಂದಿಗ್ಧತೆ ಇದೇ.
- ಟಿ. ದೇವಿದಾಸ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


