ಹಾಸನ: ಭಾರತ ದೇಶ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುತ್ತದೆ. ವಿವಿಧ ಧರ್ಮ, ಜಾತಿ, ಜನಾಂಗ, ಭಾಷೆ, ಉಡುಪು ಮತ್ತು ಆಹಾರದ ಪದ್ಧತಿಗಳಲ್ಲಿ ವಿಭಿನ್ನತೆಗಳಿದ್ದರೂ ನಾವೆಲ್ಲರೂ ಒಂದೇ. ನಾವು ಭಾರತೀಯರು ಎಂಬ ಭಾವನೆಯಿಂದ ಒಂದಾಗಿ ಬದುಕುತ್ತಿದ್ದೇವೆ ಎಂದು ಪ್ರಧಾನ ಶಾಲೆಯ ಉಪಪ್ರಾಂಶುಪಾಲರಾದ ಮಂಜುನಾಥ್ ರವರು ಹೇಳಿದರು.
ನಗರದ ಆರ್.ಸಿ. ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರಧಾನ) ಪ್ರೌಢಶಾಲಾ ವಿಭಾಗ ಆರ್.ಸಿ. ರಸ್ತೆ, ಹಾಸನ ಇಲ್ಲಿ ಆಯೋಜನೆಗೊಂಡಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಲ್ಲರನ್ನು ಉದ್ದೇಶಿಸಿ ಮಾತನಾಡುತ್ತಾ ಮಕ್ಕಳು ಈಗಿನಿಂದಲೇ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಶಿಸ್ತುಬದ್ಧ ಅಧ್ಯಯನವು ಸಾಧನೆಗೆ ಪ್ರೇರಣೆ ನೀಡುತ್ತದೆ. ನಮ್ಮ ಶಾಲೆಯಲ್ಲಿ 2024- 25 ನೇ ಸಾಲಿನಲ್ಲಿ 10ನೇ ತರಗತಿ ವ್ಯಾಸಂಗ ಮಾಡಿ, ಸಾಧನೆ ಮಾಡಿದ ವಿದ್ಯಾರ್ಥಿನಿ ಕು. ಸುಕನ್ಯ ತಾಲ್ಲೂಕು ಹಂತದಲ್ಲಿ ಮೂರನೇ ಸ್ಥಾನ ಪಡೆದಿದ್ದು, ಶಾಲೆಗೆ ಕೀರ್ತಿ ತಂದಿರುತ್ತಾಳೆ. ಶಾಲೆಯು ವಿದ್ಯಾರ್ಥಿನಿಗೆ ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದು ಹೇಳಿದರು.
ಶಾಲೆಯ ಸಹ ಶಿಕ್ಷಕ ಕೆ.ಎನ್. ಚಿದಾನಂದರವರು ಪ್ರಧಾನ ಭಾಷಣಕಾರರಾಗಿ ಮಾತನಾಡುತ್ತಾ, 2026ರ ಗಣರಾಜ್ಯೋತ್ಸವದ ವಿಷಯವು ಭಾರತದ ದೀರ್ಘಕಾಲೀನ ರಾಷ್ಟ್ರೀಯ ದೃಷ್ಟಿಕೋನವಾದ "ವಿಕಸಿತ್ ಭಾರತ" ವನ್ನು ಪ್ರತಿಧ್ವನಿಸುತ್ತಲೇ ಇದೆ. ಈ ವಿಷಯವು 2047 ರ ವೇಳೆಗೆ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತವೆ. ಅಲ್ಲದೇ ಪ್ರಾಚೀನ ಕಾಲದಿಂದಲೂ ಆಳವಾಗಿ ಬೇರೂರಿರುವ ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಪುನರುಚ್ಚರಿಸುತ್ತವೆ. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶವು 562 ಸಂಸ್ಥಾನಗಳಿಂದ ಕೂಡಿದ್ದು, ಅವೆಲ್ಲವನ್ನು ಒಂದಾಗಿಸಿ, ಅಖಂಡ ಭಾರತವನ್ನು ನಿರ್ಮಿಸಲಾಯಿತು. ರಾಷ್ಟ್ರಕ್ಕೊಂದು ಬೃಹತ್ ಲಿಖಿತ ಸಂವಿಧಾನವು ಜಾರಿಗೆ ಬಂದ ದಿನವಾಗಿದೆ. ಒಂದು ಸಂವಿಧಾನದಡಿಯಲ್ಲಿ ನಾವೆಲ್ಲರೂ ಒಂದಾಗಿ ಬದುಕುತ್ತಿರುವುದೇ ವಿಶೇಷವಾಗಿದ್ದು, ಭಾರತ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸುತ್ತಿದೆ ಎಂದರು.
ಸಂವಿಧಾನವು ನಮ್ಮ ಭಾರತವನ್ನು ಸರ್ವತಂತ್ರ ಸ್ವತಂತ್ರ, ಪ್ರಜಾಸತ್ತಾತ್ಮಕ, ಜಾತ್ಯಾತೀತ, ಸಾರ್ವಭೌಮ ರಾಷ್ಟ್ರವಾಗಿ ಪರಿಗಣಿಸಿದೆ. ನಮ್ಮ ಸಂವಿಧಾನವು ದೇಶದ ಪ್ರಜೆಗಳಿಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಮೂಲಭೂತ ಹಕ್ಕುಗಳನ್ನು ನೀಡಿದೆ. ಸರ್ಕಾರದ ಕಾರ್ಯ ವಿಧಾನಗಳ ಬಗ್ಗೆ ನೀತಿಯನ್ನು ರೂಪಿಸಿದೆ. ನಿರ್ದೇಶಾತ್ಮಕ ತತ್ವಗಳನ್ನು ನೀಡಿದೆ. ತನ್ನ ರಾಷ್ಟ್ರೀಯ ಹಾಗೂ ವಿದೇಶಾಂಗ ನೀತಿಗಳನ್ನು ರೂಪಿಸಿ ಕಾರ್ಯಗತಗೊಳಿಸುವ ಅಧಿಕಾರ ಭಾರತ ಸರ್ಕಾರಕ್ಕೆ ನೀಡಿದೆ. ವಿಶ್ವದ ಎಲ್ಲಾ ರಾಷ್ಟ್ರಗಳೊಡನೆ ಸ್ನೇಹ ಸಂಬಂಧ, ಸಾಂಸ್ಕೃತಿಕ, ಆರ್ಥಿಕ, ವಾಣಿಜ್ಯ- ವ್ಯವಹಾರ ಸಂಬಂಧಗಳನ್ನು ಬೆಳೆಸಲು ನಮ್ಮ ಸಂವಿಧಾನವು ಭಾರತಕ್ಕೆ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಅನ್ನಪೂರ್ಣರವರು ಗಣರಾಜ್ಯೋತ್ಸವದ ಸಂದೇಶ ನೀಡಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರು, ಪ್ರೌಢಶಾಲೆಯ ಎಲ್ಲಾ ಶಿಕ್ಷಕರೂ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಶಿಕ್ಷಕರಾದ ರುದ್ರೇಶ್ ರವರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರ ತಂಡವು ಪ್ರಾರ್ಥನೆ, ನಾಡಗೀತೆ, ರಾಷ್ಟ್ರಗೀತೆಗಳನ್ನು ಹಾಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


