ಭಾರತ ಮಾತೆಯ ವೀರ ಪುತ್ರ ನೀನು, ಎದೆಯಲಿ ಕೆಚ್ಚಿನ ಕಿಡಿ ಹೊತ್ತಿಸಿದವನು,
ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿ, ಸ್ವಾತಂತ್ರ್ಯದ ಹಸಿವನು ಜಾಗೃತಗೊಳಿಸಿದವನು ll೦೧ll
"ರಕ್ತವ ನೀಡಿರಿ, ಸ್ವಾತಂತ್ರ್ಯ ಕೊಡುವೆ" ಎಂದ ನಿನ್ನ ಆ ಗಂಭೀರ ವಾಣಿ,
ಗುಲಾಮಗಿರಿಯ ಸಂಕೋಲೆ ಕಡಿಯಲು ಹರಿಸಿದೆ ನವ ಯುವಶಕ್ತಿಯ ಪಾಣಿ ll೦೨ll
ಕಾಡಿನ ಹಾದಿಯಲಿ, ಕಡಲ ಆಚೆಯಲಿ ಕಟ್ಟಿ ನಿಲ್ಲಿಸಿದೆ "ಆಜಾದ್ ಹಿಂದ್ ಫೌಜ್",
ಹೆದರದೇ ಹೋರಾಡುವ ಛಲವ ಕಲಿಸಿದ ಎದೆಯಂತೂ ಹಸಿರಾಗಿಹುದು ಇಂದಿಗೂ ನಿನ್ನ ಓಜಸ್ ll೦೩ll
ಸೂರ್ಯ ಮುಳುಗದ ನಾಡಿನವರ ಬೆದರಿಸಿ, ದಿಲ್ಲಿ ಚಲೋ ಎಂದು ಕರೆ ನೀಡಿದವನೇ,
ಕೋಟಿ ಭಾರತೀಯರ ಕನಸಿನ ಕಣ್ಮಣಿಯಾಗಿ ಅಪ್ರತಿಮ ದೇಶಪ್ರೇಮದ ಕಡಲಾದವನೇ ll೦೪ll
ಬದುಕಿದ್ದರೂ ಇಲ್ಲದಿದ್ದರೂ ನಿನ್ನ ಹೆಸರೇ ಒಂದು ಅದಮ್ಯವಾದ ಚೈತನ್ಯದ ಸೆಲೆ,
ನಿನ್ನ ತ್ಯಾಗದ ಮುಂದೆ ಜಗತ್ತಿನ ಯಾವುದೇ ಆಸ್ತಿಗೂ ಇಲ್ಲ ಅಷ್ಟೊಂದು ಬೆಲೆ ll೦೫ll
ಸವಿಯುತ್ತಿರುವ ಈ ಸ್ವಾತಂತ್ರ್ಯದ ಗಾಳಿಯಲ್ಲಿ ನಿನ್ನ ಉಸಿರಿನ ಕಂಪು ಬೆರೆತಿದೆ,
ನೇತಾಜಿ... ಪ್ರತಿ ಭಾರತೀಯನ ಹೃದಯದ ಬಡಿತದಲ್ಲಿ ನಿನ್ನ ಧೀರ ಕಥೆ ಅಚ್ಚೊತ್ತಿದೆ ll೦೬ll
- ಕುಮಾರಿ ರೂಪಾ ಬಿ. ನಾಟೀಕಾರ, ಮುದ್ದೇಬಿಹಾಳ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


