ಭುವನೇಶ್ವರದಲ್ಲಿ ಜ. 17ರಿಂದ ಅಂಧ ಮಹಿಳೆಯರ ರಾಷ್ಟ್ರೀಯ ಟಿ20 ಕ್ರಿಕೆಟ್ ಟೂರ್ನಿ

Upayuktha
0


ಭುವನೇಶ್ವರ (ಒಡಿಶಾ), ಜನವರಿ 15, 2026: ಭಾರತದಲ್ಲಿ ಅಂಧರಿಗಾಗಿ ಕ್ರಿಕೆಟ್ ಅಸೋಸಿಯೇಷನ್ (CABI) ಮತ್ತು ಸಮರ್ಥನಂ ಟ್ರಸ್ಟ್ ಫಾರ್ ದ ಡಿಸೇಬಲ್ಡ್ ಸಂಸ್ಥೆಗಳು, ಒಡಿಶಾದ ದೃಷ್ಟಿಹೀನರ ಕ್ರಿಕೆಟ್ ಅಸೋಸಿಯೇಷನ್ (CAVI) ಸಹಯೋಗದಲ್ಲಿ, ಇಂಡಸ್‌ಇಂಡ್ ಬ್ಯಾಂಕ್ ಬೆಂಬಲಿತ ಮಹಿಳೆಯರ ಅಂಧರ ರಾಷ್ಟ್ರೀಯ ಟಿ20 ಕ್ರಿಕೆಟ್ ಟೂರ್ನಿ–2026 ಅನ್ನು ಜನವರಿ 17ರಿಂದ 22ರವರೆಗೆ ಭುವನೇಶ್ವರದಲ್ಲಿ ಆಯೋಜಿಸಲಿವೆ.


ಈ ಟೂರ್ನಿಗೆ ಹೈಟೆಕ್ ಮೆಡಿಕಲ್ ಕಾಲೇಜು ಅಧಿಕೃತ ವೈದ್ಯಕೀಯ ಪಾಲುದಾರರಾಗಿದ್ದು, ಒಡಿಶಾ ಸರ್ಕಾರದ ಕ್ರೀಡೆ ಮತ್ತು ಯುವಸೇವೆಗಳ ಇಲಾಖೆ, ಹೈಟೆಕ್ ಮೆಡಿಕಲ್ ಕಾಲೇಜು ಹಾಗೂ ಅಂಸೂಮನ್ ಮೆಮೋರಿಯಲ್ ಟ್ರಸ್ಟ್ ಸಂಸ್ಥೆಗಳ ಮಹತ್ವದ ಬೆಂಬಲ ಲಭ್ಯವಾಗಿದೆ.


ಒಟ್ಟು 18 ತಂಡಗಳು ಐದು ಗುಂಪುಗಳಾಗಿ ವಿಭಜನೆಗೊಂಡು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಲೀಗ್ ಪಂದ್ಯಗಳು ಜನವರಿ 17ರಂದು ಆರಂಭವಾಗಲಿದ್ದು, ಮಹಾ ಫೈನಲ್ ಪಂದ್ಯ ಜನವರಿ 22ರಂದು ನಡೆಯಲಿದೆ. ಟೂರ್ನಿಯ ಉದ್ಘಾಟನಾ ಸಮಾರಂಭವು ಜನವರಿ 16ರಂದು ಸಂಜೆ 7.30ಕ್ಕೆ ಹೈಟೆಕ್ ಮೆಡಿಕಲ್ ಕಾಲೇಜು ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಒಡಿಶಾ ಸರ್ಕಾರದ ಗೌರವಾನ್ವಿತ ಕ್ರೀಡಾ ಸಚಿವರು ಸೇರಿದಂತೆ ಕಾರ್ಪೊರೇಟ್ ಹಾಗೂ ರಾಜಕೀಯ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.


CABI ಅಧ್ಯಕ್ಷ ಡಾ. ಮಹಾಂತೇಶ್ ಜಿ. ಕಿವಡಸನ್ನವರ ಮಾತನಾಡಿ, “ಕಳೆದ ವರ್ಷದಿಂದ ಮಹಿಳಾ ಕ್ರಿಕೆಟ್‌ಗೆ ಹೆಚ್ಚಿನ ಚೈತನ್ಯ ದೊರೆತಿದ್ದು, ರಾಷ್ಟ್ರೀಯ ಮಟ್ಟದ ಟೂರ್ನಿಗಳು ಹೊಸ ಪ್ರತಿಭೆಗಳನ್ನು ಗುರುತಿಸಿ ಬೆಳೆಸಲು ಪ್ರಮುಖ ಪಾತ್ರವಹಿಸುತ್ತವೆ. ಭಾರತೀಯ ಮಹಿಳಾ ತಂಡದ ವಿಶ್ವಕಪ್ ಜಯ ದೇಶಕ್ಕೆ ಹೆಮ್ಮೆ ತಂದಿದೆ. ವಿಶ್ವಕಪ್ ತಂಡದ ಎಲ್ಲಾ 16 ಆಟಗಾರ್ತಿಯರೂ ಈ ರಾಷ್ಟ್ರೀಯ ಟೂರ್ನಿಯಲ್ಲಿ ತಮ್ಮ ರಾಜ್ಯಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇಂಡಸ್‌ಇಂಡ್ ಬ್ಯಾಂಕ್‌ನ ಬೆಂಬಲವು ಅಂಧರ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಮಹತ್ವದ ಶಕ್ತಿ ನೀಡಿದೆ,” ಎಂದರು.


CABI ಮಹಿಳಾ ಕ್ರಿಕೆಟ್ ಅಧ್ಯಕ್ಷ ಹಾಗೂ ಖಜಾಂಚಿ ಜಿ. ಶ್ರೀಧರ್ ಅವರು, “ಲೀಗ್ ಮತ್ತು ಕ್ವಾರ್ಟರ್ ಫೈನಲ್ ಪಂದ್ಯಗಳು ಜನವರಿ 20ರಂದು ಮುಕ್ತಾಯಗೊಳ್ಳಲಿದ್ದು, ಸೆಮಿಫೈನಲ್‌ಗಳು ಜನವರಿ 21ರಂದು ನಡೆಯಲಿವೆ. ಜನವರಿ 22ರಂದು ಹೈಟೆಕ್ ಮೆಡಿಕಲ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಒಟ್ಟು 31 ಪಂದ್ಯಗಳು ನಡೆಯಲಿವೆ. ಚಾಂಪಿಯನ್ ತಂಡಕ್ಕೆ ₹1,50,000 ನಗದು ಬಹುಮಾನ ಮತ್ತು ರನ್ನರ್ಸ್-ಅಪ್ ತಂಡಕ್ಕೆ ₹1,25,000 ನೀಡಲಾಗುತ್ತದೆ. ಮೂರು ವಿಭಿನ್ನ ದೃಷ್ಟಿ ವರ್ಗಗಳ ಆಟಗಾರ್ತಿಯರಿಗೆ ‘ಪ್ಲೇಯರ್ ಆಫ್ ದ ಸೀರೀಸ್’ ಪ್ರಶಸ್ತಿಯಾಗಿ ತಲಾ ₹15,000 ನೀಡಲಾಗುತ್ತದೆ. ಪ್ರತಿ ಪಂದ್ಯದಲ್ಲಿನ ‘ಪ್ಲೇಯರ್ ಆಫ್ ದ ಮ್ಯಾಚ್’ಗೆ ₹5,000 ಹಾಗೂ ಪ್ರತಿಯೊಬ್ಬ ಆಟಗಾರ್ತಿಗೆ ಪಂದ್ಯ ಶುಲ್ಕವಾಗಿ ₹1,000 ನೀಡಲಾಗುತ್ತದೆ,” ಎಂದು ತಿಳಿಸಿದರು.


CAVI ಅಧ್ಯಕ್ಷ ಮೊಹಮ್ಮದ್ ಜಾಫರ್ ಇಕ್ಬಾಲ್ ಮಾತನಾಡಿ, “ಒಡಿಶಾದಲ್ಲಿ ಮೊದಲ ಬಾರಿಗೆ ಮಹಿಳೆಯರ ಅಂಧರ ರಾಷ್ಟ್ರೀಯ ಕ್ರಿಕೆಟ್ ಟೂರ್ನಿ ಆಯೋಜಿಸಲಾಗುತ್ತಿರುವುದು ಹೆಮ್ಮೆಯ ಸಂಗತಿ. ಒಡಿಶಾ ಸರ್ಕಾರ ಹಾಗೂ ಕ್ರೀಡೆ ಮತ್ತು ಯುವಸೇವೆಗಳ ಇಲಾಖೆಯ ನಿರಂತರ ಬೆಂಬಲದಿಂದ ಅಂಧರ ಕ್ರಿಕೆಟ್ ಮಹಿಳಾ ಆಟಗಾರ್ತಿಯರ ಜೀವನದಲ್ಲಿ ಮಹತ್ವದ ಬದಲಾವಣೆ ತಂದಿದೆ,” ಎಂದರು.


ತಂಡಗಳ ಗುಂಪುಗಳು:

ಗುಂಪು A: ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಕೇರಳ

ಗುಂಪು B: ಕರ್ನಾಟಕ, ಜಾರ್ಖಂಡ್, ದೆಹಲಿ, ಗುಜರಾತ್

ಗುಂಪು C: ಒಡಿಶಾ, ಆಂಧ್ರಪ್ರದೇಶ, ಬಿಹಾರ, ಚಂಡೀಗಢ

ಗುಂಪು D: ಮಹಾರಾಷ್ಟ್ರ, ತೆಲಂಗಾಣ, ಉತ್ತರ ಪ್ರದೇಶ

ಗುಂಪು E: ಪಶ್ಚಿಮ ಬಂಗಾಳ, ಹರಿಯಾಣ, ಅಸ್ಸಾಂ


ಹಿಂದಿನ ಐದನೇ ಆವೃತ್ತಿಯಲ್ಲಿ ಮಧ್ಯಪ್ರದೇಶ ಚಾಂಪಿಯನ್ ಆಗಿತ್ತು. ಕಳೆದ ಐದು ಆವೃತ್ತಿಗಳಲ್ಲಿ ಒಡಿಶಾ ಮೂರು ಬಾರಿ ಪ್ರಶಸ್ತಿ ಗೆದ್ದಿದ್ದು, 2022ರಲ್ಲಿ ಕರ್ನಾಟಕ ಚಾಂಪಿಯನ್ ಆಗಿತ್ತು. ಆರನೇ ಆವೃತ್ತಿಯಲ್ಲಿ ಹೊಸ ಚಾಂಪಿಯನ್ ಉದಯಿಸುವುದೇ ಎಂಬುದರತ್ತ ಕ್ರಿಕೆಟ್ ಅಭಿಮಾನಿಗಳ ಗಮನ ನೆಟ್ಟಿದೆ.



Post a Comment

0 Comments
Post a Comment (0)
To Top