ನಾ. ಡಿಸೋಜರ ಪ್ರಥಮ ಪುಣ್ಯ ಸ್ಮರಣೆ ಕಾರ್ಯಕ್ರಮ

Upayuktha
0


ಮಂಗಳೂರು: ವರುಷದ ಹಿಂದೆ ನಮ್ಮನಗಲಿದ ಡಾ.ನಾ.ಡಿಸೋಜರವರ ಪ್ರಥಮ ಪುಣ್ಯ ಸ್ಮರಣೆ ಕಾರ್ಯಕ್ರಮ "ಸ್ಮರಣೆ" ಸಾಗರದ ಗೋಪಾಲ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷರಾಗಿ ವಿಜಯವಾಮನರವರು ಉಪಸ್ಥಿತರಿದ್ದರು. ಕಾರ್ಯಕ್ರಮ ಉದ್ಘಾಟನೆ ಶಿವಾನಂದ ಕುಗ್ವೆ ನಡೆಸಿಕೊಟ್ಟರು.


"ಡಾ.ನಾ ಡಿ'ಸೋಜರವರು ದಂತಗೋಪುರದಲ್ಲಿ ಬೆಳೆದ ಸಾಹಿತಿಯಲ್ಲ, ಸಮುದಾಯದ ನಡುವೆ ರೂಪುಗೊಂಡ ಬರಹಗಾರರು. ಅಧ್ಯಯನ ಶೀಲತೆಯ ಗುಣ ಅವರ ಬರವಣಿಗೆಯ ಜೀವದ್ರವ್ಯವಾಗಿತ್ತು" ಎಂದು ಹೇಳಿದರು. "ಮಲೆನಾಡಿನ ತಳ ಸಮುದಾಯಗಳ ಹಬ್ಬ-ಹರಿದಿನ, ಸಾಂಪ್ರದಾಯಿಕ ಆಚರಣೆ ಹಸೆ ಚಿತ್ತಾರ ಕಲೆ ಮೊದಲಾದ ಸಂಗತಿಗಳ ಕುರಿತು ಅಧ್ಯಯನ ನಡೆಸಿ ದಾಖಲು ಮಾಡಿರುವುದು ನಾಡಿಸೋಜರವರ ವಿಶೇಷತೆ" ಎಂದರು.


ಕರ್ನಾಟಕದ ಸಾಹಿತ್ಯ, ಸಾಂಸ್ಕ್ರತಿಕ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿರುವ ನಾ.ಡಿಸೋಜರ ಹೆಸರಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಶಿಕಾರಿಪುರದ ಸುವ್ವಿ ಪ್ರಕಾಶನದವರು ನವೀನ್ ನಾ.ಡಿಸೋಜರವರ ಸಂಪಾದಕತ್ವದಲ್ಲಿ ಹೊರ ತಂದಿರುವ  ನಾ. ಡಿಸೋಜರವರ "ಮುಳುಗಡೆಯ ಕತೆಗಳು" ಕೃತಿಯನ್ನು ಪರಿಸರ ಹೋರಾಟಗಾರ ಆಖಿಲೇಶ್ ಚಿಪ್ಲಿಯವರು ಬಿಡುಗಡೆ ಮಾಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು "ಮಲೆನಾಡಿನಲ್ಲಿ ನಡೆದ ಪ್ರಮುಖ 'ರೈಲು ಹೋರಾಟ. ಶರಾವತಿ ನದಿ ಉಳಿಸಿ' ಹೋರಾಟಗಳ ಯಶಸ್ಸಿನ ಹಿಂದೆ ನಾ. ಡಿಸೋಜರವರ ಬಹು ಮುಖ್ಯ ಪಾತ್ರವಿದೆ" ಎಂದರು.


ಸಾಗರದಲ್ಲಿ ನಾ.ಡಿಸೋಜರವ ಹೆಸರನ್ನು ಪುನಶ್ಚೇತನಗೊಂಡ ಕೆರೆಗೆ, ಸಾಗರದ ಯಾವುದಾದರು ಒಂದು ಮಾರ್ಗಕ್ಕೆ ಇಡಬೇಕು. ಹಾಗೆಯೇ ಸಾಗರದಲ್ಲಿ ನಿರ್ಮಾಣವಾಗಲಿರುವ ನೂತನ ರಂಗ ಮಂದಿರಕ್ಕೆ ಡಿಸೋಜರವ ಹೆಸರು ಇಡಬೇಕು ಎಂದು ಒತ್ತಾಯಿಸಿದರು. "ಮುಳುಗಡೆಯ ಕತೆಗಳು" ಕುರಿತು ಮಾತನಾಡಿದ ಲೇಖಕ ಜಿ.ಟಿ. ಸತ್ಯನಾರಾಯಣ ಅವರು "ಮುಳುಗಡೆ ಸಂತ್ರಸ್ತರಿಗೆ "ವಿಳಾಸ" ಕೊಟ್ಟ ಲೇಖಕ ನಾ.ಡಿಸೋಜರು. ಅಭಿನೃದ್ಧಿ ಹೆಸರಿನಲ್ಲಿ ಕೈಗೊಳ್ಳುವ ಯೋಜನೆಯಿಂದ ನೋವುಂಡವರು ಯಾರು? ಫಲಾನುಭವಿಗಳು ಯಾರು ಎಂಬ ವಾಸ್ತವಕ್ಕೆ ಅವರ ಕತೆಗಳು ಕನ್ನಡಿಯಂತಿವೆ" ಎಂದರು. ನಾಡಿಸೋಜರ ಮಗಳು ಶೋಭಾ ನರೇಶ್ ಕಾರ್ಯಕ್ರಮವನ್ನು ನಿರೂಪಿಸಿದರು. ರೇಷ್ಮಾ ನವೀನ್ ಡಿಸೋಜ ಸ್ವಾಗತಿಸಿದರು.


Post a Comment

0 Comments
Post a Comment (0)
To Top