ನಶಾಮುಕ್ತ ಭಾರತ: ಬೃಹತ್ ವಾಕಥಾನ್- ಅಂಗಾಂಗ ದಾನ- ವ್ಯಸನ ಮುಕ್ತ ಸಂದೇಶ ಸಾರಿದ ಯುವಜನತೆ

Upayuktha
0

ದುಶ್ಚಟಗಳಿಂದ ಯುವಜನತೆ ರಕ್ಷಣೆ- ನಮ್ಮ ಹೊಣೆ: ಡಾ. ಭಗವಾನ್



ಮೂಡುಬಿದಿರೆ: ‘ಇಂದಿನ ಯುವಜನತೆಯನ್ನು ದುಶ್ಚಟಗಳಿಂದ ರಕ್ಷಿಸುವುದು ನಮ್ಮ ಆಯ್ಕೆ ಅಲ್ಲ. ಅನಿವಾರ್ಯತೆ’ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಡಾ.ಭಗವಾನ್ ಹೇಳಿದರು.


85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಅಂಗವಾಗಿ ವಿಶ್ವವಿದ್ಯಾಲಯವು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ಮಂಗಳವಾರ ನಗರದಲ್ಲಿ ಹಮ್ಮಿಕೊಂಡ ‘ನಶಾಮುಕ್ತ ಭಾರತ ಅಭಿಯಾನ ಮತ್ತು ಅಂಗಾAಗ ದಾನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


‘ಯುವಜನತೆಯನ್ನು ವ್ಯಸನಮುಕ್ತಗೊಳಿಸುವ ನಿಟ್ಟಿನಲ್ಲಿ ದಿಶಾ ಬೋಧ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಯೋಗ ಮತ್ತು ಧ್ಯಾನ ಕಾರ್ಯಕ್ರಮ ಆರಂಭಿಸಲಾಗುವುದು’ ಎಂದರು.



‘ಮಾದಕ ದ್ರವ್ಯ ವ್ಯಸನವು ಖಿನ್ನತೆಗೆ ತಳ್ಳುತ್ತದೆ. ಆರೋಗ್ಯದ ಜೊತೆ ಬದುಕನ್ನು ಕೆಡವುತ್ತದೆ’ ಎಂದ ಅವರು, ‘ಸಶಕ್ತೀಕರಣಕ್ಕಾಗಿ ಸ್ವಾಮಿ ವಿವೇಕಾನಂದ ಅವರ ತತ್ವ ಸಿದ್ಧಾಂತಗಳನ್ನು ಪಾಲಿಸಿ’ ಎಂದರು.



ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಬಳಿಕ ರಾಷ್ಟ್ರಗೀತೆ ಹಾಡಲಾಯಿತು. ಅನಂತರ ಚೌಟರ ಅರಮನೆಯ ರಾಣಿ ಅಬ್ಬಕ್ಕ ಪ್ರತಿಮೆಯ ವೃತ್ತದಿಂದ ಸ್ವರಾಜ್ ಮೈದಾನದ ವರೆಗೆ ವಾಕಥಾನ್ ಸಾಗಿ ಬಂತು.  


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಡಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಾಕಾಥಾನ್‌ನಲ್ಲಿ ಪಾಲ್ಗೊಂಡರು. ಕುಲಪತಿ ಡಾ.ಭಗವಾನ್ ಪ್ರತಿಜ್ಞಾ ವಿಧಿ ಬೋಧಿಸಿದರು.



ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ, ಇಫ್ತೀಕರ್, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮೊಹಮ್ಮದ್ ಮೊಹಿಸೀನ್, ಶ್ರೀಕ್ಷೇತ್ರ ಧರ್ಮಸ್ಥಳ ಶಿಕ್ಷಣ ಸಮಾಜದ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ವಿ.ವಿ. ಕುಲಸಚಿವ ಅರ್ಜುನ್ ಒಡೆಯರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ ಮತ್ತು ಡಾ.ವಿನಯ್ ಆಳ್ವ, ದಿಶಾಬೋಧ ಪ್ರತಿಷ್ಠಾನದ ಶಿವಾಂಗಿ ರೆಡ್ಡಿ ಮತ್ತು ಜೀತು ಥಾಮಸ್ ಮತ್ತಿತರರು ಇದ್ದರು.


‘ಮಾದಕ ವ್ಯಸನಕ್ಕೆ ಇಲ್ಲ ಹೇಳಿ, ಬದುಕಿಗೆ ಹೌದು ಎನ್ನಿ’ ಎಂಬ ಘೋಷವಾಕ್ಯದ ಜೊತೆ ಕಾರ್ಯಕ್ರಮ ಸಂಪನ್ನಗೊಂಡಿತು.



Post a Comment

0 Comments
Post a Comment (0)
To Top