ಒಂದು ರಾಷ್ಟ್ರದ ನೈಜ ಸಂಪತ್ತು ಅದರ ಭೂಗರ್ಭದಲ್ಲಿರುವ ಖನಿಜಗಳಲ್ಲ ಅಥವಾ ಗಗನಚುಂಬಿ ತಂತ್ರಜ್ಞಾನದ ಕಟ್ಟಡಗಳಲ್ಲ; ಬದಲಾಗಿ ಅಲ್ಲಿನ ಚೈತನ್ಯಶೀಲ ಯುವಶಕ್ತಿ. ಈ ನಂಬಿಕೆಯ ಮೇಲೆ ನಿಂತೇ ಸ್ವಾಮಿ ವಿವೇಕಾನಂದರು ಅಂದು ದೇಶದ ಜನತೆಗೆ ಕರೆ ನೀಡಿದ್ದರು: "ನನಗೆ ನೂರು ಜನ ದೃಢಕಾಯರಾದ, ನಿಸ್ವಾರ್ಥಿಗಳಾದ ಯುವಕರನ್ನು ಕೊಡಿ, ನಾನು ಈ ದೇಶದ ಮುಖಪುಟವನ್ನೇ ಬದಲಾಯಿಸಿ ಹೊಸ ಭಾರತವನ್ನು ನಿರ್ಮಿಸುತ್ತೇನೆ" ವಿವೇಕಾನಂದರ ಈ ಮಾತುಗಳು ಯುವಜನತೆ ರಾಷ್ಟ್ರದ ಬೆನ್ನೆಲುಬು ಎಂಬುದನ್ನು ಸಾಬೀತುಪಡಿಸುತ್ತವೆ.
ರಾಷ್ಟ್ರದ ಶಕ್ತಿಯಾಗಬೇಕಿದ್ದ ಯುವ ಪೀಳಿಗೆ ಇಂದು ಸಾಗುತ್ತಿರುವ ಹಾದಿ ಆತಂಕಕಾರಿಯಾಗಿದೆ. ನೈತಿಕತೆ ಎಂಬುದು ಇಂದು ಕೇವಲ ಭಾಷಣಗಳಿಗೆ ಮತ್ತು ಶಾಲಾ ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾದಂತಿದೆ. ಸಂಬಂಧಗಳ ಮೌಲ್ಯ, ಆರೋಗ್ಯದ ಕಾಳಜಿ, ಬದುಕಿನ ಶೈಲಿ ಮತ್ತು ವೃತ್ತಿ ಬದುಕಿನ ಗುಣಮಟ್ಟ - ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಅವನತಿ ಕಂಡುಬರುತ್ತಿದೆ.
ಯುವಕರ ಕೌಶಲ್ಯ ಅಭಿವೃದ್ಧಿಗೆ ಪೂರಕವಾಗಬೇಕಿದ್ದ ತಂತ್ರಜ್ಞಾನ ಇಂದು ಅವರ ಬದುಕನ್ನೇ ಬರಿದಾಗಿಸುತ್ತಿದೆ. 'ಸೋಶಿಯಲ್ ಮೀಡಿಯಾ' ಎಂಬ ಮಾಯಾಭೂತ ಯುವಜನತೆಯನ್ನು ತನ್ನ ಇಚ್ಛೆಯಂತೆ ಆಡಿಸುತ್ತಿದೆ. ಮೊಬೈಲ್ ಎಂಬ ವ್ಯಸನವು ನೆಮ್ಮದಿಯ ನಿದ್ರೆಯ ಜೊತೆಗೆ ಮಾನಸಿಕ ಆರೋಗ್ಯವನ್ನೂ ಕಸಿದುಕೊಳ್ಳುತ್ತಿದೆ. ವಾಟ್ಸಪ್ ಸ್ಟೇಟಸ್‌ಗಳಲ್ಲಿ ಮತ್ತು ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಹಂಚಿಕೊಳ್ಳುವ ನೈತಿಕತೆಯ ಪೋಸ್ಟ್‌ಗಳು ಕೇವಲ 'ಲೈಕ್' ಪಡೆಯುವ ಸಾಧನಗಳಾಗಿವೆಯೇ ಹೊರತು, ಜೀವನದಲ್ಲಿ ಅಳವಡಿಸಿಕೊಳ್ಳುವ ಸೂತ್ರಗಳಾಗುತ್ತಿಲ್ಲ.
ಹಿರಿಯರ ಅನುಭವದ ಮಾತುಗಳಿಗೆ ಕಿವಿಯಾಗದೆ, ಬದುಕಿನ ಸಣ್ಣ ಸಣ್ಣ ಸವಾಲುಗಳನ್ನೂ ಎದುರಿಸಲಾಗದೆ ಯುವಜನತೆ ದಿಕ್ಕೆಡುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಾಗದ ಗೊಂದಲದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮುಖ್ಯ ಕಾರಣ- ನಮ್ಮ ಶಿಕ್ಷಣ ಪದ್ಧತಿಯು ಕೇವಲ 'ಉದ್ಯೋಗ' ಪಡೆಯುವುದನ್ನೇ ಗುರಿಯಾಗಿಸಿಕೊಂಡಿರುವುದು. ಶಿಕ್ಷಣದಲ್ಲಿ ಮೌಲ್ಯಗಳ ಕೊರತೆ ಮತ್ತು ನೈತಿಕ ಜ್ಞಾನದ ಅಲಭ್ಯತೆಯು ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಅಡ್ಡಿಯಾಗಿದೆ.
ನೂರಾರು ನೀತಿ ಮಾತುಗಳನ್ನು ಹೇಳುವುದು ಸುಲಭ, ಆದರೆ ಅದರಲ್ಲಿ ಒಂದನ್ನಾದರೂ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಬಂಗಾರವಾಗುತ್ತದೆ. ರಾಷ್ಟ್ರ ನಿರ್ಮಾಣಕ್ಕೆ ಯುವಶಕ್ತಿ ಅನಿವಾರ್ಯ, ಆದರೆ ಆ ಶಕ್ತಿಗೆ ನೈತಿಕತೆಯ ಬಲವಿರಬೇಕು. ಯುವಜನತೆ ಮೊದಲು ನೀತಿಯುಕ್ತ ಮನುಜರಾದಾಗ ಮಾತ್ರ ಅವರು ಕಟ್ಟುವ ದೇಶ ಸುಭದ್ರವಾಗಿರಲು ಸಾಧ್ಯ.
- ಪ್ರಿಯಾ ಶ್ರೀವಿಧಿ
ದ್ವಿತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


