ಕಿಶೋರನ ಆತ್ಮಕ್ಕೆ ಸದ್ಗತಿ ದೊರೆಯಲಿ. ಕಿಶೋರನ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ಭಗವಂತನು ಕರುಣಿಸಲಿ
ನಿನ್ನೆ ಕಿಶೋರನ ಪಾರ್ಥೀವ ಶರೀರದ ಪಕ್ಕ ನಿಂತು ಇಷ್ಟನ್ನು ಮನಸ್ಸಿನಲ್ಲೇ ಪ್ರಾರ್ಥಿಸಿ ಮನೆಗೆ ಬಂದು ತೋಟಕ್ಕೆ ಹೋದರೆ, ಆತ ಹೂಡು ಅಡಿಕೆ ಮರಗಳನ್ನು ಹತ್ತಿ ಔಷಧಿ ಹೊಡೆಯುತ್ತಿದ್ದ ಕ್ಷಣಗಳು ಮನಸ್ಸಿಗೆ ಬಂದು ಬಂದು ತಾಗಿತು.
ಯಾಕೋ ಕಿಶೋರನ ಅಕಾಲಿಕ ಅಗಲಿಕೆಯನ್ನು ಈಗಲೂ ನಂಬಲಾಗುತ್ತಿಲ್ಲ.
ಕಳೆದ ಆರೇಳು ವರ್ಷಗಳಿಂದ ನಮ್ಮ (ನನ್ನ ಮತ್ತು ನನ್ನ ತಮ್ಮನ) ತೋಟದ ಔಷಧಿ ಹೊಡೆಯುತ್ತಿದ್ದ ಕಿಶೋರ್ ಇವತ್ತಿಲ್ಲ.
ಕಿಶೋರ್ ಕೆಲವು ದಿನಗಳಿಂದ ಜ್ವರದಿಂದ ಬಳಲಿ, ಯಾವ ಔಷದೋಪಚಾರಕ್ಕೂ ಫಲ ಸಿಗದೆ, ನಿನ್ನೆ ಬೆಳಗ್ಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಅಸು ನೀಗಿದ್ದಾನೆ ಎಂದು ಸುದ್ಧಿ ಕೇಳಿದಾಗ ದಿಗ್ಬ್ರಮೆ. "ಅರೆ, ಮನುಷ್ಯನ ಜೀವನ ಇಷ್ಟು ಸೂಕ್ಷ್ಮವಾ? ಇಷ್ಟು ಕ್ಷಣಿಕವಾ?" ಅನ್ನುವ ಯೋಚನೆ.
ಮೊನ್ನೆ ಮಳೆಗಾಲದಲ್ಲಿ ನಮ್ಮ ತೋಟದ ಮೂರನೆ ಔಷಧಿ ಮುಗಿಸಿ, ಕೈಕಾಲು ತೊಳೆದು, ಊಟ ಮಾಡುತ್ತಿರುವಾಗ "ನೋಡುವ, ನಾಲ್ಕನೆ ಔಷಧಿ ಬೇಡ ಅನಿಸುತ್ತೆ. ನಾಲ್ಕನೆ ಔಷಧಿ ಹೊಡೆದಿಲ್ಲ ಅಂದ್ರೆ, ಮುಂದಿನ ವರ್ಷ ಜೂನ್ ಹತ್ತು ಹನ್ನೆರಡಕ್ಕೆ ಮೊದಲ ಔಷಧಿ ಹೊಡೆಯುವ" ಅಂತ ನಾನು ಪ್ರತೀ ವರ್ಷದಂತೆ ತಮಾಷೆಯಾಗಿ ಅಡ್ವಾನ್ಸ್ ಆಗಿ ಡೇಟ್ ಫಿಕ್ಸ್ ಮಾಡಿ ಕಿಶೋರ್ ಬಳಿ ಮಾತಾಡಿದ್ದು, "ಅಯ್ಯ ಎಲೆಚುಕ್ಕಿ ಎಂತ ಯಾವ ಔಷಧಿನೂ ಹೊಡೆಯಲ್ವಾ?" ಅಂತ ಕಿಶೋರ್ ಪ್ರಶ್ನಿಸಿದ್ದು... ಎಲ್ಲ ಮೊನ್ನೆ ಮೊನ್ನೆ ಸಂಭಾಷಣೆ ಮಾಡಿದ ಹಾಗಿದೆ.
ಇವತ್ತು ಕಿಶೋರ್ ಇಲ್ಲಾಂದ್ರೆ.... ಮನಸ್ಸು ಒಪ್ತಾ ಇಲ್ಲ.
ಕಿಶೋರ್ ಒಳ್ಳೆ ಕ್ರಿಕೇಟ್ ಆಡ್ತಾ ಇದ್ದ. ಆತನ ಬಾಯಲ್ಲಿ ಒಂದು ಕೆಟ್ಟ ಶಬ್ದ ಪ್ರಯೋಗ ನಾವ್ಯಾರು ಕೇಳಿಲ್ಲ. ಮೃದು ಸ್ವಭಾವದ ಮನುಷ್ಯ. ಒಂದು ಕೆಟ್ಟ ಚಟವೂ ಇಲ್ಲದ ವ್ಯಕ್ತಿತ್ವ. ತಾನಾಯಿತು ತನ್ನ ಕೆಲಸ ಆಯ್ತು ಅನ್ನುವಂತೆ ಸೈಲೆಂಟ್, ಮಾತು ಕಡಿಮೆ.
ಮಂಗನ ಕಾಯಿಲೆಯಿಂದ ಸಾವು ಅಂತ ಇವತ್ತು ಟಿವಿ ವರದಿ ನೋಡುವಾಗ ಕಣ್ಣು ಮತ್ತಷ್ಟು ಪಸೆ ಆಗ್ತಾ ಇದೆ.
ಮತ್ತೊಮ್ಮೆ ಕಿಶೋರನ ಆತ್ಮಕ್ಕೆ ಸದ್ಗತಿ ದೊರೆಯಲಿ. ಕಿಶೋರನ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ಭಗವಂತನು ಕರುಣಿಸಲಿ ಅಂತ ಮತ್ತೊಮ್ಮೆ ಪ್ರಾರ್ಥಿಸುವುದು. ಅಷ್ಟೆ.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

