ವಂದಿಸುವೆ ಮೋದದಲಿ ಪರಶಿವನ ಗಣಂಗಳು
ಪೂಜಿಸುವೆ ಮಹದೇವ ಲಿಂಗಕ್ಕೆ ಭಕ್ತಿಯಲಿ
ಸತ್ಪಾತ್ರರೊಂದಾಗಿ ಸ್ಥಾಪಿಸಿದ ಲಿಂಗಕ್ಕೆ
ನಮಿಸುವೆನು ಭಕ್ತಿಯಲಿ ಶಂಕರನ ನೆನೆದು!
ಭಸ್ಮಧಾರಿಯು ಶಿವನು ನಿಜದೊಲವ ಭೂಷಣನು
ಭವರೋಗ ವೈದ್ಯನವ ಸುಪ್ರಭುವು ಈಶ್ವರನು
ದೇವಗಣದಿಂದವನು ನಿತ್ಯ ಪೂಜಿತನಿರಲು
ನಮಿಸುವೆವು ಶ್ರೀ ಸೋಮ ಈಶ್ವರಗೆ ನಾವು! II೧II
ದಕ್ಷಿಣ ವಾಹಿನಿಯ ಭೀಮಾ ನದಿ ತೀರದಲಿ
ಮಂದಾರ ಗ್ರಾಮದಲಿ ಉದ್ಭವಿಸಿ ಪರಶಿವನು
ಶ್ರೀರಾಮಚಂದ್ರನಿರೆ ಶಿವಲಿಂಗ ಸ್ಥಾಪಕನು
ನಿತ್ಯ ಸತ್ಯದಿ ಹರಸಿ ರಾಮಲಿಂಗೇಶ್ವರನು
ಸಾಲಿಗ್ರಾಮ ಶಿಲೆಯ ಅಲಂಕೃತ ದೇವನೆನೊ
ತ್ರಿನೇತ್ರ ಜಾತ್ಯೋದ್ಭವ ಲಿಂಗಕ್ಕೆ ನಮನ! II೨II
ನಂದೀಶನಭಿಮುಖದಿ ಶಿವಲಿಂಗವಿಲ್ಲಿಹುದು
ಸನಿಹದಲಿ ಗಜಮುಖನು ಸದಾಸೀನದಲ್ಲಿಹನು
ಶ್ರೀಚಕ್ರಧಾರಿಯೆಡೆ ಶಿಖರರೂಪಿ ಶಿವನು
ನಾಗಾಲಂಕೃತವ ಅನುದಿನವು ಸೊಬಗಿನಲಿ
ವೇದಭೂಷಿತನವನು ಭವರೋಗ ವೈದ್ಯನಿಹ
ಉಮಾಭೂಷಿತನಿಗೆ ಅನುದಿನವು ನಮನ! II೩II
ಕಾಶೀಪುರಾಧೀಶನು ನಮ್ಮೆದೆಯ ಈಶ್ವರನು
ದಕ್ಷಿಣದ ಕಾಶಿಯೆನೊ ಮಂದಾರ ಪುರದಲ್ಲಿ
ಬಾಣಾಲಂಕೃತದ ಲಿಂಗವಿದು ನಿಜದಲ್ಲಿ
ವರಕಾಮೇಶ್ವರನ ಸರಿಸಮದಿ ಶೋಭೆಯಲಿ
ಭೀಮಾತ್ಮಜ ವಂಶಜ ಸ್ಥಾಪಿಸಿದ ಶಿವಲಿಂಗ
ವಜ್ರೇಶ್ವರನೆಂದೆನಿಸಿ ಕಂಗೊಳಿಸೆ ನಮನ! II೪II
ಅದ್ವೈತರೆಲ್ಲರೂ ಒಂದಾಗಿ ಪ್ರತಿದಿನವೂ
ಓಂಕಾರ ಕಪಾಲ ಈಶ್ವರಗೆ ಪೂಜೆಯಲಿ
ಪಂಚಾಕ್ಷರಿ ಮಂತ್ರ ಪ್ರಾಣ ಜೀವಾಳವಿರೆ
ನಮೋನಮೋ ಎನುತ ಭೀಮಾಶಂಕರನಿಗೆ
ದೇವರೊಡನೆ ಯತಿಗಳೂ ಸರ್ವಶ್ರೇಷ್ಠರು ಎನಿಸಿ
ಯೋಗೇಶ್ವರ ನೀನೆಂದು ಜಪಿಸುತಲಿ ನಮನ! II೫II
ತ್ರಿನೇತ್ರ ವರನನೇ ತ್ರಿಪುಂಡಧಾರಿಯೇ
ಅನುದಿನವು ತ್ರಯಂಬಕ ಈಶ್ವರನು ಎನಿಸುತಲಿ
ನೆಲೆಸು ನೀ ಗುರುವಾಗಿ ನಮ್ಮೊಡನೆ ಪ್ರೀತಿಯಲಿ
ವಿಶ್ವೇಶ್ವರ ನೀನು ನಮ್ಮೆಲ್ಲರೆದೆ ದೈವ
ರೋಗಿಯಾಗಿರೆ ನಾನು ನೀನೆನಗೆ ಭವವೈದ್ಯ
ವೈದ್ಯೇಶ್ವರ ನಿನಗೆ ಒಲವೆದೆಯ ನಮನ! II೬II
ಭೂತನಾಥನು ನೀನು ಸರ್ವರಧಿಪತಿಯಿರಲು
ನಮ್ಮೆದುರು ಪ್ರತ್ಯಕ್ಷ ಭೂತನಾಥೇಶ್ವರ
ಮಂದಾರ ಗ್ರಾಮದಿಹ ನಿನಗೆನ್ನ ವಂದನೆಯು
ಸುರೇಶ್ವರನು ನೀನು ಯತಿಗಳಿಗೆ ಗುರುವು! II೭II
ಮೋಕ್ಷದಾರಿಯ ತೋರೋ ವರಬಿಲ್ವವೃಕ್ಷನಿರೆ
ಒಲವಿನಲಿ ಪೂಜಿತನು ಭಕ್ತವೃಂದದಿ ನಿತ್ಯ
ಬಗೆಬಗೆಯ ಮಂತ್ರಗಳ ತಂತ್ರಗಳ ಸಹಿತದಲಿ
ಲಕ್ಷ ಬಿಲ್ವಾರ್ಚನೆಯ ಗೈದಿರುವ ನಮ್ಮನ್ನು
ಉದ್ಧರಿಸು ಶಶಿ ಶೇಖರ ದೇವನೆ ಎಂದೆಲ್ಲ
ಬೇಡುವರು ವಂದಿಸುತ ಶಶಿಪತಿಗೆ ಮುದದಿ! II೮II
ಪರಶಿವನೆ ನನ್ನೆದೆಯ ಅಜ್ಞಾನ ಕಳೆಯುತಲಿ
ಕರುಣಿಸುತ ನೀನೆನಗೆ ಸುಜ್ಞಾನ ಅನುದಿನವು
ದೇವದೇವನು ನೀನು ಶೀವೋಹಂ ಎನ್ನುತಲಿ
ದಾರಿದ್ರ್ಯ ಕಳೆಯುತಿರೆ ಸದಾಶಿವನೆಂದಾಗಿ
ಸನ್ಮಂಗಲ ನೀಡೆನಗೆ ದೊರೆ ಸೋಮೇಶ್ವರನೆ! II೯II
- ಶ್ರೀನಿವಾಸ ಜಾಲವಾದಿ
ಸುರಪುರ, 9886563179
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

