ರಥಸಪ್ತಮಿ ಪ್ರಯುಕ್ತ ವಿವೇಕಾನಂದ ಪದವಿಪೂರ್ವ ಕಾಲೇಜಿನ ಮುಂಭಾಗ 108 ಸಾಮೂಹಿಕ ಸೂರ್ಯ ನಮಸ್ಕಾರ – 700ಕ್ಕೂ ಹೆಚ್ಚು ಮಂದಿ ಭಾಗಿ
ಪುತ್ತೂರು: “ಸಂಸ್ಕಾರ, ಸಂಘಟನೆ ಮತ್ತು ಸೇವೆ ಇವು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮೂಲ ಧ್ಯೇಯೋದ್ದೇಶಗಳಾಗಿವೆ. ಇದೇ ಮೌಲ್ಯಗಳನ್ನು ವಿವೇಕಾನಂದ ವಿದ್ಯಾಸಂಸ್ಥೆಗಳೂ ಅಳವಡಿಸಿಕೊಂಡು ಸಂಸ್ಕಾರಯುತ ಹಾಗೂ ಸಂಘಟಿತ ಸಮಾಜದ ನಿರ್ಮಾಣಕ್ಕೆ ನಿರಂತರವಾಗಿ ಶ್ರಮಿಸುತ್ತಿವೆ. ಅನೇಕ ಸಂಘಸಂಸ್ಥೆಗಳಲ್ಲಿ ಸಮಾನಮನಸ್ಕರು ಒಟ್ಟಾಗುತ್ತಾರೆ. ಆದರೆ ಪತಂಜಲಿ ಯೋಗ ಶಿಕ್ಷಣ ಸಮಿತಿಯಲ್ಲಿ ಯೋಗಬಂಧುಗಳು ಅತ್ಯಂತ ಕ್ರಿಯಾಶೀಲರಾಗಿ ಒಂದೇ ಮನಸ್ಸಿನಿಂದ, ಒಂದೇ ಸೂರಿನಡಿ ಸಂಘಟಿತರಾಗಿರುವುದು ವಿಶೇಷ,” ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ. ಹೇಳಿದರು.
ಅವರು ರಥಸಪ್ತಮಿ ಪ್ರಯುಕ್ತ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ, ನೇತ್ರಾವತಿ ವಲಯ, ಪುತ್ತೂರು ತಾಲೂಕು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇವರ ಸಹಯೋಗದಲ್ಲಿ ಪುತ್ತೂರಿನ ನೆಹರುನಗರದ ವಿವೇಕಾನಂದ ಆವರಣದಲ್ಲಿ ಇರುವ ವಿವೇಕಾನಂದ ಪದವಿಪೂರ್ವ ಕಾಲೇಜಿನ ಮುಂಭಾಗದಲ್ಲಿ ಹಮ್ಮಿಕೊಳ್ಳಲಾದ “ಸಾಮೂಹಿಕ 108 ಸೂರ್ಯ ನಮಸ್ಕಾರ” ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದರು.
“ರಥಸಪ್ತಮಿಯಂದು ಸೂರ್ಯನ ಪ್ರಖರತೆ ಹೆಚ್ಚಿರುವುದರಿಂದ ಇದು ಸೂರ್ಯಾರಾಧನೆಗೆ ಅತ್ಯಂತ ಶ್ರೇಷ್ಠವಾದ ದಿನವೆಂದು ಪರಿಗಣಿಸಲಾಗಿದೆ. ತೆಂಕಿಲದ ವಿವೇಕಾನಂದ ಆವರಣದಲ್ಲಿ ಪ್ರತಿವರ್ಷ ನಮ್ಮ ವಿದ್ಯಾರ್ಥಿಗಳು ರಥಸಪ್ತಮಿಯ ಸಂದರ್ಭದಲ್ಲಿ ಸೂರ್ಯ ನಮಸ್ಕಾರ ನಡೆಸುತ್ತಿದ್ದಾರೆ. ಈ ಬಾರಿ ನೆಹರುನಗರದ ವಿವೇಕಾನಂದ ಆವರಣದಲ್ಲೂ ಈ ಆಚರಣೆ ನಡೆಯುತ್ತಿರುವುದು ಸಂತಸದ ವಿಷಯ. ಸೇವಾಭಾವ ಸದಾ ನಮ್ಮೊಳಗಿರಲಿ. ಸಂಸ್ಕಾರಯುತ ಸಮಾಜದ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣ. ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಕ್ರಮಗಳಿಗೆ ವಿವೇಕಾನಂದ ವಿದ್ಯಾಸಂಸ್ಥೆಗಳು ಸದಾ ಸಹಕಾರ ನೀಡಲಿದೆ,” ಎಂದರು.
ಈ ಸಂದರ್ಭದಲ್ಲಿ ವಿವೇಕಾನಂದ ವಸತಿನಿಲಯಗಳ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಪ್ರಭು, ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಿಚರಣ್ ರೈ, ತಾಲೂಕು ಸಂಚಾಲಕ ಕೃಷ್ಣಾನಂದ, ಶುಭ, ಶಶಿಕಲಾ ಹಾಗೂ ಬಾಲಕೃಷ್ಣ ಉಪಸ್ಥಿತರಿದ್ದರು.
ಸೂರ್ಯಾರಾಧನೆಯ ವೈಜ್ಞಾನಿಕ ಮಹತ್ವವನ್ನು ಜನಸಾಮಾನ್ಯರಿಗೆ ಪರಿಚಯಿಸುವುದು, ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವುದು ಮತ್ತು ಯೋಗದ ಮಹತ್ವವನ್ನು ಸಮಾಜದ ಎಲ್ಲಾ ವರ್ಗಗಳಿಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನೂರಾರು ಯೋಗಬಂಧುಗಳು ಒಂದೇ ವೇದಿಕೆಯಲ್ಲಿ 108 ಸೂರ್ಯ ನಮಸ್ಕಾರಗಳನ್ನು ನೆರವೇರಿಸುವ ಮೂಲಕ ಆರೋಗ್ಯ, ಶಿಸ್ತು ಮತ್ತು ಸಂಸ್ಕಾರದ ಸಂದೇಶವನ್ನು ಸಾರಿದರು.
700ಕ್ಕೂ ಹೆಚ್ಚು ಮಂದಿ ಭಾಗಿ
ಮುಂಜಾನೆ ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ಮೂರು ಹಂತಗಳಲ್ಲಿ 108 ಸೂರ್ಯ ನಮಸ್ಕಾರ ನೆರವೇರಿಸುವ ಮೂಲಕ ಸಮಾಪನಗೊಂಡಿತು. ರಥಸಪ್ತಮಿಯಂದು ಸೂರ್ಯನಮಸ್ಕಾರ ಮಾಡುವ ಮಹತ್ವವನ್ನು ಯೋಗಬಂಧು ಜಯಲಕ್ಷ್ಮಿ ವಿವರಿಸಿದರು. ಯೋಗಬಂಧುಗಳಾದ ಅಶ್ವಿನಿ, ದಯಾನಂದ ಹಾಗೂ ರೂಪ ಅವರು ಮೂರು ಹಂತಗಳಲ್ಲಿ ಸೂರ್ಯನಮಸ್ಕಾರವನ್ನು ಕ್ರಮವಾಗಿ ನಡೆಸಿಕೊಟ್ಟರು. ಕಾರ್ಯಕ್ರಮದ ಆರಂಭದಲ್ಲಿ ಮಾನಸಿಕ ಸಿದ್ಧತೆಯನ್ನು ಸುಮಾ ನೆರವೇರಿಸಿದರು.
ಪ್ರಾತ್ಯಕ್ಷಿಕೆಯಲ್ಲಿ ಯೋಗಬಂಧುಗಳಾದ ಭವ್ಯ, ಶರಣಾಕ್ಷಿ, ಕುಸುಮಾಧರ, ರವಿಶಂಕರ, ರಕ್ಷಿತ್, ಚೇತನ, ನಿಶಾಂತ್, ಸಂಧ್ಯಾ, ಪ್ರದೀಪ್, ಪವಿತ್ರ, ಸಂತೋಷ, ಜ್ಯೋತಿ, ಮೋಹನ, ರಾಧಿಕಾ, ಪೂರ್ಣಿಮ ಹಾಗೂ ಕುಶಾಲ ಸಹಕರಿಸಿದರು. ದಿವ್ಯ ಸ್ವಾಗತಿಸಿ, ರಮೇಶ್ ಪ್ರಭು ವಂದಿಸಿದರು. ಜೈತ್ರಿಕ ಕಾರ್ಯಕ್ರಮ ನಿರೂಪಿಸಿದರು.
ಪುತ್ತೂರಿನ ಸುತ್ತಮುತ್ತಲಿನ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗಬಂಧುಗಳು, ನಾಗರಿಕರು ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಒಳಗೊಂಡಂತೆ 700ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


