ಕೂಟ ಮಹಾಜಗತ್ತು ಮಂಗಳೂರು: ಗುರು ನರಸಿಂಹ ಹೋಮದ ಪೂರ್ವಭಾವಿ ಮಂತ್ರಪಠಣ ಸಂಕಲ್ಪ

Upayuktha
0




ಮಂಗಳೂರು: ಕೂಟ ಮಹಾಜಗತ್ತು ಮಂಗಳೂರು ಅಂಗ ಸಂಸ್ಥೆಯ ವತಿಯಿಂದ ಲೋಕಕಲ್ಯಾಣದ ಮಹಾ ಸಂಕಲ್ಪದೊಂದಿಗೆ ಜ. 18ರಂದು ನಡೆಯಲಿರುವ ಗುರುನರಸಿಂಹ ಹೋಮದ ಪೂರ್ವಭಾವಿ ಯಾಗಿ ಮಂತ್ರಪಠಣ ಸಂಕಲ್ಪ ಕಾರ್ಯಕ್ರಮವನ್ನು ನಗರದ ಪಾಂಡೇಶ್ವರದಲ್ಲಿರುವ ಗುರುನರಸಿಂಹ ಸಭಾಭವನದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.


ಜ. 18ರಂದು ಇದೇ ಗುರುನರಸಿಂಹ ಸಭಾಭವನದಲ್ಲಿ ಭವ್ಯವಾಗಿ ಆಯೋಜಿಸಲಿರುವ ಗುರುನರಸಿಂಹ ಹೋಮದ ಯಶಸ್ಸಿಗಾಗಿ, ಮಂಗಳೂರು ವ್ಯಾಪ್ತಿಯ ಪ್ರತಿಯೊಬ್ಬ ಕೂಟ ಬಂದು ಸದಸ್ಯರು ಶ್ರೀಗುರುನರಸಿಂಹ ಮಂತ್ರವನ್ನು ಪ್ರತಿದಿನ ಕನಿಷ್ಠ ನೂರು ಬಾರಿ ಪಠಿಸುವ ಸಂಕಲ್ಪವನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿದರು. ಇದು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಸಮಾಜದ ಒಳಿತಿಗಾಗಿ ವ್ಯಕ್ತಿಯ ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸುವ ಆಧ್ಯಾತ್ಮಿಕ ಸಾಧನೆಯೆಂದು ಅಭಿಪ್ರಾಯ ವ್ಯಕ್ತವಾಯಿತು.


ಶ್ರೀಕ್ಷೇತ್ರ ಮಂಗಳಾದೇವಿಯ ಅನುವಂಶಿಕ ಅರ್ಚಕರಾದ ವೇದಮೂರ್ತಿ ಚಂದ್ರಶೇಖರ ಐತಾಳ್ ಹಾಗೂ ದೈವಜ್ಞರಾದ ಶ್ರೀರಂಗ ಐತಾಳ್ (ಕದ್ರಿ) ಅವರು ಮಂತ್ರೋಚ್ಚಾರಣೆಯೊಂದಿಗೆ ಸಂಕಲ್ಪ ವಿಧಿಯನ್ನು ನೆರವೇರಿಸಿಕೊಟ್ಟರು.


ಬಳಿಕ ಮಾತನಾಡಿದ ವೇದಮೂರ್ತಿ ಚಂದ್ರಶೇಖರ ಐತಾಳ್, “ದೈವಿಕ ಗುರಿಯನ್ನು ಸಾಧಿಸಲು ಮನಸ್ಸು ಮತ್ತು ಆತ್ಮವನ್ನು ಏಕಾಗ್ರಗೊಳಿಸುವ ಸಾಧನಾ ಪಥವೇ ಸಂಕಲ್ಪ. ದೃಢನಿಶ್ಚಯದೊಂದಿಗೆ ಕೈಗೊಳ್ಳುವ ಈ ಆಧ್ಯಾತ್ಮಿಕ ಕ್ರಮ ಬದುಕಿನಲ್ಲಿ ಸ್ಥಿರತೆ, ಶಾಂತಿ ಮತ್ತು ಗುರಿ ಸಾಧನೆಯ ಶಕ್ತಿಯನ್ನು ನೀಡುತ್ತದೆ” ಎಂದು ಹೇಳಿದರು.


ದೈವಜ್ಞರಾದ ಶ್ರೀರಂಗ ಐತಾಳ್ ಮಾತನಾಡಿ, “ಸಮಾಜಮುಖಿ ಕಾರ್ಯಗಳಲ್ಲಿ ಸಾಮೂಹಿಕ ಪಾಲ್ಗೊಳ್ಳುವಿಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಸಂಕಲ್ಪವು ವ್ಯಕ್ತಿಯನ್ನು ಸಂಘಟನೆಯೊಂದಿಗೆ ಆತ್ಮೀಯವಾಗಿ ಜೋಡಿಸುತ್ತದೆ. ಗುರುನರಸಿಂಹ ಹೋಮ ಹಾಗೂ ಮಂತ್ರಪಠಣದಿಂದ ಮನೋಬಲ ವೃದ್ಧಿಯಾಗುತ್ತದೆ, ಆತ್ಮಶಕ್ತಿ ಗಟ್ಟಿಯಾಗುತ್ತದೆ. ಇದು ಜೀವನದ ಸಾರ್ಥಕ ಗುರಿ ಸಾಧನೆಗೆ ದಾರಿದೀಪವಾಗುತ್ತದೆ” ಎಂದರು.


ಕೇಂದ್ರ ಅಧಿವೇಶನಕ್ಕೆ ಸಿದ್ಧತೆ


ಈ ಸಂದರ್ಭ ಮಾತನಾಡಿದ ಮಂಗಳೂರು ಘಟಕದ ಅಧ್ಯಕ್ಷ ಶ್ರೀಧರ ಹೊಳ್ಳ, “ಕೂಟ ಸಮಾಜದ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳೂರು ಘಟಕದ ನೇತೃತ್ವದಲ್ಲಿ ಕೇಂದ್ರ ಅಧಿವೇಶನವನ್ನು ಮುಂದಿನ ದಿನಗಳಲ್ಲಿ ಆಯೋಜಿಸುವ ಉದ್ದೇಶವಿದೆ. ಇದು ಸಂಘಟನೆಯ ಶಕ್ತಿ, ಏಕತೆ ಮತ್ತು ಸಾಮಾಜಿಕ ಬದ್ಧತೆಯನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಮಹತ್ವದ ಹೆಜ್ಜೆಯಾಗಿದ್ದು, ಇದಕ್ಕಾಗಿ ಎಲ್ಲರ ಸಹಕಾರ ಅತ್ಯಗತ್ಯ” ಎಂದು ಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪ್ರಭಾಕರ ಐತಾಳ್, ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ, ಸಂಘಟನಾ ಕಾರ್ಯದರ್ಶಿ ಕೃಷ್ಣ ಮಯ್ಯ, ಪ್ರಬಂಧಕ ಶಿವರಾಮ ರಾವ್, ಹಿರಿಯರಾದ ಶಿವರಾಮಯ್ಯ, ಮಹಿಳಾ ಪ್ರತಿನಿಧಿಗಳಾದ ಲಲಿತಾ ಉಪಾಧ್ಯಾಯ, ಅನುಪಮಾ, ವೀಣಾ ಮಯ್ಯ, ಪಂಕಜ, ವಸಂತಿ ಸೇರಿದಂತೆ ಹಲವರು ಉಪಸ್ಥಿತರಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top