ಕನ್ನಡ- ತುಳು ಸಂಬಂಧ ಅನನ್ಯ: ಡಾ. ಧನಂಜಯ ಕುಂಬ್ಳೆ

Upayuktha
0

 ವಿವಿ ತುಳುಪೀಠದಿಂದ 'ತುಳುವೇತರರಿಗೆ ತುಳು' ಮಾಲಿಕೆ




ಮುಡಿಪು: ಕನ್ನಡ ರಾಜಮನೆತನಗಳ ಆಳ್ವಿಕೆಯಲ್ಲಿ ತುಳುನಾಡಿನ ಅಳುಪರು ಸಾಮಂತರಾಜರಾಗಿದ್ದರೂ ತುಳು ಕನ್ನಡದ ನಡುವೆ ಬಾಂಧವ್ಯ ಉತ್ತಮವಾಗಿತ್ತು. 14-15 ನೇ ಶತಮಾನದ ತುಳು ಕಾವ್ಯಗಳಾದ ಅರುಣಾಬ್ಜ ಕವಿಯ ಮಹಾಭಾರತೊ, ವಿಷ್ಣುತುಂಗ ಕವಿಯ ಶ್ರೀಭಾಗವತೊ ಕೃತಿಗಳು ಕನ್ನಡ ಕೃತಿಗಳ ಪ್ರೇರಣೆಯನ್ನು ಪಡೆದಿವೆ. ಅಂತೆಯೇ ಕನ್ನಡ ಏಕೀಕರಣ ಹೋರಾಟಕ್ಕೆ ತುಳುವರ ಬೆಂಬಲವಿತ್ತು. ಇಂದಿಗೂ ತುಳು ಕನ್ನಡದ ನಡುವಿನ ಬಾಂಧವ್ಯ ಅನನ್ಯವಾದುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ತುಳು ಅಧ್ಯಯನ ಪೀಠದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಹೇಳಿದರು.


ಅವರು ಇತ್ತೀಚೆಗೆ ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಆಶ್ರಯದಲ್ಲಿ ದಾವಣಗೆರೆ ವಿವಿಯ ಕನ್ನಡ ವಿಭಾಗದ ಸಭಾಂಗಣದಲ್ಲಿ 'ತುಳುವೇತರರಿಗೆ ತುಳು ಪರಿಚಯ ಮಾಲಿಕೆ'ಯಡಿ ತುಳು ಭಾಷೆ  ಮತ್ತು ಸಾಹಿತ್ಯ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.


ಪಂಚ ದ್ರಾವಿಡ ಭಾಷೆಗಳಲ್ಲಿ ತುಳುವೂ ಕೂಡ ಸತ್ವಪೂರ್ಣವಾದ ಭಾಷೆ. ಸ್ವತಂತ್ರ ಲಿಪಿ ಹಾಗೂ ಸಮೃದ್ಧವಾದ ಪಳಂತುಳು ಮತ್ತು ಆಧುನಿಕ ಸಾಹಿತ್ಯ ಪರಂಪರೆ ಈ ಭಾಷೆಗಿದೆ. ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯ ಕುರಿತು ಶಾಸನ, ಲಿಖಿತ ಪರಂಪರೆ ಹಾಗೂ ಮೌಖಿಕ ಸಾಹಿತ್ಯದಲ್ಲಿ ಸಾಕಷ್ಟು ವಿವರಗಳಿದ್ದು ಕರ್ನಾಟಕದ ಸಂಶೋಧಕರು ಈ ಕಡೆಗೆ ಗಮನಹರಿಸಬೇಕೆಂದು ಅವರು ಹೇಳಿದರು.


ಮುಖ್ಯ ಅತಿಥಿಯಾಗಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಹಾಸನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಶಂಕರ್ ಮಾತನಾಡಿ ಭಾಷೆಗಳ ರಕ್ಷಣೆಯಿಂದ ಬಹುಸಂಸ್ಕೃತಿಯನ್ನು ಕಾಪಾಡಬಹುದು. ದ್ರಾವಿಡ ಭಾಷೆಗಳಲ್ಲಿ ತುಳು ಭಾಷೆಯ ಬಗೆಗೆ ಹೆಚ್ಚು ಚರ್ಚೆಗಳಾಗಿಲ್ಲ. ತುಳುವೇತರರಿಗೆ ತುಳುವಿನ ಮಹತ್ವವನ್ನು ಸಾರುವ ಪ್ರಯತ್ನ ಶ್ಲಾಘನೀಯ ಎಂದರು.


ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ಜಯರಾಮಯ್ಯ ಮಾತನಾಡಿ, ಹಲ್ಮಿಡಿ ಶಾಸನಕ್ಕೇ ತುಳುನಾಡನ್ನು ಆಳಿದ ಅಳುಪರ ಸಂಬಂಧವಿದೆ. ವಿಜಯನಗರ ಸಾಮ್ರಾಜ್ಯಕ್ಕೂ ತುಳುವರಿಗೂ ಸಂಬಂಧವಿತ್ತು. ತುಳುಭಾಷೆ, ತುಳುನಾಡಿಗೆ ಪ್ರಾಚೀನ ಇತಿಹಾಸವಿದೆ ಎಂದರು.


ಸಮಾರಂಭದಲ್ಲಿ ದಾವಣಗೆರೆ ವಿವಿ ಪ್ರಾಧ್ಯಾಪಕರಾದ ಪ್ರೊ. ಜೋಗಿನಕಟ್ಟೆ ಮಂಜುನಾಥ, ಪ್ರೊ. ಮಲ್ಲಿಕಾರ್ಜುನ ಕೆ. ಡಾ. ಮಹಾಂತೇಶ ಪಾಟೀಲ, ಡಾ. ಭೀಮಾಶಂಕರ ಜೋಷಿ ಉಪಸ್ಥಿತರಿದ್ದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top