ಹುನಗುಂದ: ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರ ಉದ್ಘಾಟಿಸಿದ ಶಾಸಕ ಕಾಶಪ್ಪನವರ

Upayuktha
0

ಪ್ರತಿ ಕ್ವಿಂಟಲ್ ಗೆ 8 ಸಾವಿರ ನಿಗದಿ: 90 ದಿನ ಖರೀದಿ ಕಾರ್ಯ 




ಹುನಗುಂದ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಟಿಎಪಿಸಿಎಂಎಸ್ ಸಹಯೋಗದಲ್ಲಿ 2025-26ನೇ ಸಾಲಿನ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಮಂಗಳವಾರ ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸುವ ಮೂಲಕ ಖರೀದಿಗೆ ಚಾಲನೆ ನೀಡಿದರು.


ಈ ವೇಳೆ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ತೊಗರಿ ಪ್ರತಿ ಕ್ವಿಂಟಲಗೆ 8 ಸಾವಿರ ರೂ ದಂತೆ ಬೆಂಬಲ ಬೆಲೆಯನ್ನು ನಿಗಧಿಗೊಳ್ಳಿಸಿ ಖರೀದಿಸುವ ಮೂಲಕ ರೈತರ ಬೆಳೆದ ಬೆಳೆಗೆ ಪ್ರಾಮಾಣಿಕ ಬೆಲೆ ಕಲ್ಪಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕೃಷಿ ಸಚಿವ ಚೆಲುವರಾಯಸ್ವಾಮಿ ಮಾಡಿದ್ದಾರೆ. ಈಗಾಗಲೇ ಸೂರ್ಯಕಾಂತಿ, ಹೆಸರು ಸೇರಿದಂತೆ ಅನೇಕ ಬೆಳೆಗಳಿಗೆ ಬೆಂಬಲ ಬೆಲೆಯಲ್ಲಿ ಖರೀದಿಸಲಾಗಿದೆ. ಮೆಕ್ಕೆಜೋಳಕ್ಕೂ ಕೂಡಾ ಬೆಂಬಲ ಬೆಲೆಯಲ್ಲಿ ಖರೀದಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಶೀಘ್ರದಲ್ಲೇ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಕೂಡಾ ಆರಂಭಿಸಲಾಗುವುದು. ಈ ಬಾರಿ ಅತಿಯಾದ ಮಳೆಯಿಂದ ರೈತರ ಸಾಕಷ್ಟು ಬೆಳೆ ನಷ್ಟವಾಗಿದೆ. ನಷ್ಟವಾದ ಬೆಳೆಗೆ ನಮ್ಮ ಸರ್ಕಾರ ಈಗಾಗಲೇ 2600 ಕೋಟಿ ನಷ್ಟ ಪರಿಹಾರವನ್ನು ಕೂಡಾ ರೈತರಿಗೆ ನೀಡಿದೆ. ಈ ಬಾರಿ ಹುನಗುಂದ ಮತ್ತು ಇಳಕಲ್ ಅವಳಿ ತಾಲೂಕಿನ ರೈತರು ಹೆಚ್ಚಿನ ಕ್ಷೇತ್ರದಲ್ಲಿ ತೊಗರಿಯನ್ನು ಬೆಳೆದಿದ್ದಾರೆ. ರೈತರಿಗೆ ಅನುಕೂಲವಾಗಲಿ ಎಂದು ಜಿಲ್ಲಾಧಿಕಾರಿಗಳಿಗೆ ಮಾತನಾಡಿ ಅವಳಿ ತಾಲೂಕಿನಲ್ಲಿ ಹೆಚ್ಚಿನ ಖರೀದಿ ಕೇಂದ್ರ ತೆರೆಯಬೇಕೆಂದು ತಿಳಿಸಿದಾಗ ಈ ಬಾರಿ 17 ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು ರೈತರು ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.



ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ರಾಘವೇಂದ್ರ ದಂಡಿನ ಮಾತನಾಡಿ, ಸರ್ಕಾರ ಮತ್ತು ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯ ಆದೇಶದಂತೆ ತೊಗರಿ ಬೆಳೆಗೆ ಪ್ರತಿ ಕ್ವಿಂಟಲ್‍ಗೆ 8 ಸಾವಿರದಂತೆ ಖರೀದಿಸುತ್ತಿದ್ದಾರೆ. ಈಗಾಗಲೇ ಅವಳಿ ತಾಲೂಕಿನಲ್ಲಿ 4929 ತೊಗರಿ ಬೆಳೆದ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಕಾರ್ಯ 80 ದಿನಗಳವರೆಗೆ ನಡೆದಿದ್ದು, ಖರೀದಿ ಪ್ರಕ್ರಿಯೆ 90 ದಿನಗಳವರೆಗೆ ನಡೆಯಲಿದೆ ಎಂದರು.


ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಟಿಪಿಸಿಎಂಎಸ್ ಅಧ್ಯಕ್ಷ ಜೈನಸಾಬ ಹಗೇದಾಳ, ಮುಖಂಡರಾದ ಶೇಖರಪ್ಪ ಬಾದವಾಡಗಿ, ಬಸವರಾಜ ಗದ್ದಿ, ಸಂಗಣ್ಣ ಗಂಜಿಹಾಳ, ಸಂಜೀವ ಜೋಶಿ, ಮಹಾಲಿಂಗಯ್ಯ ಹಿರೇಮಠ, ಪ್ರಭು ಇದ್ದಲಗಿ ಸೇರಿದಂತೆ ಟಿಪಿಸಿಎಂಎಸ್ ನ ಸದಸ್ಯರು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ಸಿಬ್ಬಂದಿಗಳು ಸೇರಿದಂತೆ ಅನೇಕರು ಇದ್ದರು.


ರೈತರ ಮೇಲೂ  ಮಲತಾಯಿ ಧೋರಣೆ

ರೈತರು ಬೆಳೆದ ಪ್ರತಿಯೊಂದು ಬೆಳೆಗೆ ಬೆಲೆ ನಿಗದಿಗೊಳಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದ್ದು. ಇತ್ತೀಚಿಗೆ ಕಬ್ಬು ಬೆಳೆಗಾರರು ಕಬ್ಬು ಬೆಳೆಗೆ ಸೂಕ್ತ ಬೆಲೆಯನ್ನು ನಿಗದಿಗೊಳಿಸುವಂತೆ ಹೋರಾಟ ಮಾಡಿದಾಗಲೂ ಕೇಂದ್ರ ಸರ್ಕಾರ ರೈತರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಕಬ್ಬಿಗೆ ಸೂಕ್ತ ಬೆಲೆಯನ್ನು ನಿಗದಿಗೊಳಿಸದೇ ರೈತರೊಂದಿಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆಯನ್ನು ತೋರಿದಾಗ ನಮ್ಮ ಸರ್ಕಾರ ಪ್ರತಿ ಟನ್ ಗೆ 250 ರೂ ಕಬ್ಬು ಬೆಳೆಗಾರರಿಗೆ ಸಹಾಯ ಧನ  ನೀಡಿದೆ. ಇನ್ನು ಕಳೆದ ನಾಲ್ಕು ವರ್ಷ ಬಿಜೆಪಿ ಸರ್ಕಾರ ಅವಧಿಯಲ್ಲಿ ಒಂದು ಬೆಳೆಗೂ ಕೂಡಾ ಬೆಂಬಲ ಬೆಲೆಯನ್ನು ಕೊಡಲಿಲ್ಲ. 

- ವಿಜಯಾನಂದ ಕಾಶಪ್ಪನವರ

ಶಾಸಕರು, ಹುನಗುಂದ ಮತಕ್ಷೇತ್ರ.



ತೊಗರಿ ಬೆಳೆಗೆ 450 ರೂ ಸಹಾಯ ಧನ ನೀಡಲು ರೈತರ ಮನವಿ:

ತೊಗರಿ ಬೆಳೆಗೆ ಸರ್ಕಾರ ಈಗಾಗಲೇ ಪ್ರತಿ ಕ್ವಿಂಟಲ್ ಗೆ 8 ಸಾವಿರ ಬೆಂಬಲ ಬೆಲೆ ಘೋಷಿಸಿದ್ದು ಅದರ ಜೊತೆಗೆ ಸರ್ಕಾರ 450 ರೂ ಹೆಚ್ಚಿನ ಸಹಾಯ ಧನ ನೀಡಬೇಕೆಂದು ರೈತ ಮುಖಂಡರು ಶಾಸಕರಿಗೆ ಮನವಿ ಸಲ್ಲಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top