ರವಿವಾರ ರಜಾ ದಿನ, ವಾರದ ಜಂಜಾಟ ನೂರಿದ್ದರೂ ಬೆಳಿಗ್ಗೆ ಒಮ್ಮೆ ರೋಗಿಗಳನ್ನು ನೋಡಿ ಬಂದು ಮನೆಕೆಲಸ ಮುಗಿಸಿ ಒಂದು ಒಳ್ಳೆಯ ಮಧ್ಯಾಹ್ನದ ನಿದಿರೆ ಮುಗಿಸಿದರೆ ದೇಹ ಮನಸ್ಸು ವಾರದ ದಣಿವಾರಿಸಿಕೊಂಡು ಹೊಸ ಚೈತನ್ಯ ಪಡೆಯುತ್ತದೆ. ಆ ಭಾನುವಾರ ಸಂಜೆಯೂ ಹಾಸಿಗೆ ದಿಂಬಿಗೆ ತಲೆಯಿಟ್ಟು ನಿದ್ರೆಗೆ ಜಾರಿದ್ದೆ, ವಾರ್ಡ್ ನಲ್ಲಿದ್ದ ಒಂದು ಗರ್ಭಪಾತ ಕೇಸ್ ಮನದ ಮೂಲೆಯಲ್ಲಿ ಅವಳನ್ನೇ ನೆನಪಿಸುತ್ತಿರಲು ಎದ್ದು ಹೋಗಿ ಒಮ್ಮೆ ನೋಡಿ ಬರುವ ಎಂದು ಯೋಚಿಸುವ ಹೊತ್ತಿಗೆ ನನ್ನ ಜಂಗಮವಾಣಿ ಗಂಟೆ ಬಾರಿಸಲು ಕರೆಗೆ ಕಿವಿಕೊಡಲು ಕಣ್ಣು ಬಿಟ್ಟೆ.
ಕರೆಯಲ್ಲಿ ಆ ಕಡೆಯಿಂದ ಸುಬ್ರಹ್ಮಣ್ಯ ಆಸ್ಪತ್ರೆ ವೈದ್ಯರು ಬೆಂಗಳೂರಿಂದ ಕುಕ್ಕೆಗೆ ದೇವಸ್ಥಾನಕ್ಕೆ ಬಂದಿರುವ ಮಹಿಳೆಗೆ ಹೆರಿಗೆ ನೋವು ಕಾಣಿಸಿದ್ದು ಭಾನುವಾರ ಸಂಜೆ ನೀವು ಇದ್ದೀರಿ ಅಥವಾ ಇಲ್ಲವಾ ತಿಳಿದುಕೊಂಡು ನಿಮ್ಮಲ್ಲಿಗೆ ಕಳುಹಿಸಬಹುದಾ ವಿಚಾರಿಸಲು ಕರೆ ಮಾಡಿದೆ ಎಂದರು. ಅಂದು ನಾನು ಎಲ್ಲೂ ಹೊರಗಡೆ ಹೋಗಿರಲಿಲ್ಲ, ನಮ್ಮ ಅರವಳಿಕೆ ತಜ್ಞರೂ ಕರ್ತವ್ಯದಲ್ಲಿ ಇದ್ದರು." ಹೂಂ ಸರ್, ನಮಗೆ ಕಳುಹಿಸಿ, ನಾವು ಲಭ್ಯವಿದ್ದೇವೆ" ಎಂದು ಉತ್ತರಿಸಿದೆ.
ಎದ್ದು ಮುಖ ತೊಳೆಯುತ್ತಾ, ಬೆಂಗಳೂರಿಂದ ಕುಕ್ಕೆಗೆ ದೇವಸ್ಥಾನಕ್ಕೆ ಯಾವ ತುಂಬು ಗರ್ಭಿಣಿ ಬರುತ್ತಾರೆ, ಆರೇಳು ತಿಂಗಳ ಗರ್ಭಿಣಿಯಾ? ಕೇಳಬೇಕಿತ್ತು, ಮಕ್ಕಳ ತೀವ್ರ ಘಟಕದ ಅವಶ್ಯಕತೆ ಬಂದರೆ ಯೋಚಿಸಿದೆ. ಸರಿ ಹೋಗಲಿ ಬಿಡು ಅವರು ಬರಲಿ ನೋಡೋಣ ಅಂತ ಗರ್ಭಪಾತ ರೋಗಿಯನ್ನು ನೋಡಲು ಹೋದೆ.
ಎರಡು ಮಕ್ಕಳ ತಾಯಿ ಗಂಡನ ಕಳೆದುಕೊಂಡು ವಿಧವೆಯಾಗಲು ಮಕ್ಕಳಿಗೋಸ್ಕರ ಮರು ವಿವಾಹಕ್ಕೆ ಅವಕಾಶ ಸಿಗಲು ಹೊಸ ಬದುಕಿನ ಆಶಾಗೋಪುರ ಕಟ್ಟಿ ನಡೆದಳು. ವಿಧಿ ಅವಳು ಮತ್ತೆ ಗರ್ಭಧರಿಸಲು ಎರಡನೇ ಗಂಡನನ್ನು ಶಿವನ ಪಾದ ಸೇರಿಸಲು ಆ ಮಗುವಿನ ಭಾರ ಹೊರಲು ಅವಳಿಗೆ ಯಾರೂ ಆಸರೆಯಿರಲಿಲ್ಲ. ಅಮ್ಮ ಎರಡು ಹೆಣ್ಣು ಮಕ್ಕಳು ಬಿಟ್ಟರೆ ಬೇರೇನೂ ಇಲ್ಲ. ಅತ್ತೆ ಮನೆಯವರೂ ಗಂಡ ಕಾಲವಾದ ಬಳಿಕ ಕೈಬಿಡಲು ಮಗು ಅವಳಿಗೆ ಭಾರವೆನಿಸಿ ಕಣ್ಣೀರಿಡುತ್ತಾ ಗರ್ಭಪಾತದ ಮೊರೆಯಿಟ್ಟಳು, ತಾಯಿಯೊಂದಿಗೆ ನಮ್ಮಲ್ಲಿ ಚಿಕಿತ್ಸೆಗೆ ಬಂದಿದ್ದರು. ಅವರ ಪರಿಸ್ಥಿತಿ ಹೇಗಿತ್ತೆಂದರೆ ಅವರು ನನ್ನಲ್ಲಿ ಮಾತಾಡಿಕ್ಕಿಂತ ಅತ್ತಿರುವುದೇ ಹೆಚ್ಚು, ಎದುರು ಸಿಕ್ಕರೆ ಕಣ್ಣೀರಿಡುತ್ತಿದ್ದ ಅವರ ಪರಿಸ್ಥಿತಿ ನನಗೂ ಹಿಂಸೆ ಎನಿಸುತಿತ್ತು. ಕಷ್ಟ ಅನುಭವಿಸಿದವರಿಗೇ ಹೆಚ್ಚು ಪರೀಕ್ಷೆ ಕೊಡುವ ದೇವರು ಅವಳ ಗರ್ಭಪಾತ ಸಮಯಕ್ಕೂ ನಮಗೆ ಸ್ವಲ್ಪ ಸವಾಲುಗಳು ಕೊಟ್ಟ, ನಾನು ಅದನ್ನು ನಿಭಾಯಿಸುತ್ತಾ ಆಸ್ಪತ್ರೆಯ ಹೆರಿಗೆ ಕೋಣೆಯಲ್ಲೇ ಭಾನುವಾರ ಸಂಜೆ ಕಳೆಯುತ್ತಿದ್ದೆ.
ನಮ್ಮ ಶುಶ್ರೂಷಕಿಯರಿಗೆ ಸುಬ್ರಹ್ಮಣ್ಯದಿಂದ ಬಂದ ಕರೆಯ ಬಗ್ಗೆ ಹೇಳಿ ಆ ರೋಗಿ ಬರಬಹುದು ಎಂದೆ. ನಮ್ಮ ಸಿಬ್ಬಂದಿ ಯಾವ ತುಂಬು ಗರ್ಭಿಣಿ ಬೆಂಗಳೂರಿಂದ ಕುಕ್ಕೆಗೆ ಪ್ರಯಾಣ ಮಾಡುತ್ತಾರೆ, ಕರಾವಳಿಯಲ್ಲಿ ಏಳು ತಿಂಗಳಿಗೆ ಸೀಮಂತ, ನಂತರ ಎಲ್ಲಾ ದೇವಸ್ಥಾನಕ್ಕೂ ಅವರ ಪ್ರವೇಶ ನಿಷಿದ್ದ ಎಂದು ಇಲ್ಲಿಯ ಪದ್ಧತಿಗಳ ಬಗ್ಗೆ ಹೇಳುತ್ತಿದ್ದರು. ನಾನು ಬೆಂಗಳೂರು ಜನ ಜ್ಯೋತಿಷಿ ಪೂಜೆ ಪುನಸ್ಕಾರ ನಂಬಿಕೆ ಜಾಸ್ತಿ, ಯಾರಾದರೂ ಏನಾದರೂ ಹರಿಕೆ ಹೇಳಿರಬೇಕು, ಕಾರು ಇದ್ದರೆ ಹೋಗಿ ಬರಬಹುದು ಎಂದು ಯಾರೋ ಸಿರಿವಂತರು ಪೂಜೆಗೆ ಬಂದಿರಬಹುದು ಎಂದೆ. ಮೇಡಂ ನಿಮ್ಮ ಕೈಲಿ ಹೆರಿಗೆಯಾಗಲು ಬೆಂಗಳೂರು ಸಿರಿವಂತರು ಸುಳ್ಯಕ್ಕೆ ಬರ್ತಿದ್ದಾರೆ ನೋಡಿ ಸ್ವಲ್ಪ ತಮಾಷೆ ಮಾತುಕಥೆ ಮಾಡುತ್ತಾ ಗರ್ಭಪಾತ ರೋಗಿಯ ಎಲ್ಲಾ ಕೆಲಸ ಮುಗಿಸಿದೆವು.
ಅಂಬುಲೆನ್ಸ್ ರೋಗಿಯನ್ನು ಕರೆತರಲು ಸುಬ್ರಹ್ಮಣ್ಯ? ಅಂದೇ, ಹೂ ಎಂದರು. ಅವಳು ನೋವಿನಲ್ಲಿದ್ದಳು, ಮುಖ ಚಹರೆ ಬೇಗ ಹೆರಿಗೆಯಾಗುವಷ್ಟು ವೇದನೆ ಪರಿಚಯಿಸಲು ತಡಮಾಡದೆ ಅವಳ ಪರೀಕ್ಷೆಗೆ ಮುಂದಾಗಲು, ಕಾಂಪೌಂಡ್ ಪ್ರೆಸೆಂಟೇಷನ್ ಎನ್ನುವ ಪರಿಸ್ಥಿತಿ ನನಗೆ ಮನದಟ್ಟಾಗಲು, ತಕ್ಷಣ ಸಿಸೇರಿಯನ್ ಮಾಡದೆ ಹೋದರೆ ಮಗುವಿಗೆ ಅಪಾಯವಿರುವುದು ಎಣಿಸಿ ತಕ್ಷಣ ರೋಗಿಯ ಸಂಬಂಧಿಕರಿಗೆ ಮಾತನಾಡಲು ಹೊರಬಂದೆ. ರೋಗಿಯ ವಯಸ್ಸಾದ ತಾಯಿ, ಅಷ್ಟು ಮಾನಸಿಕ ಸ್ಥಿಮಿತವಿಲ್ಲದ ಚಿಕ್ಕ ವಯಸ್ಸಿನ ತಂಗಿ, ಗಂಡಸರಿಲ್ಲವಾ? ಪ್ರಶ್ನೆಗೆ ಇಲ್ಲ, ಮೂರೇ ಜನ ಎನ್ನುವ ಉತ್ತರ. ಅರೆಕ್ಷಣ ನಾನು ಬೆಚ್ಚಿಬಿದ್ದೆ. ತಿಂಗಳಿಗೊಮ್ಮೆ ಸುಳ್ಯದಿಂದ ಹಾಸನಕ್ಕೆ ಹೋಗಿ ಬರುವಷ್ಟರಲ್ಲಿ ಆ ಪ್ರಯಾಣ ನನ್ನನ್ನು ಉಸ್ ಎನ್ನಿಸುತ್ತದೆ, ಮೂವರೇ ಹೆಂಗಸ್ರು ತುಂಬು ಗರ್ಭಿಣಿಯೊಂದಿಗೆ ಬೆಂಗಳೂರಿಂದ ಸುಬ್ರಮಣ್ಯಕ್ಕೆ ಕೆಂಪು ಬಸ್ ಹತ್ತಿ ಬಂದ್ರಾ?? ಎಲ್ಲಾ ಉಚಿತ ಬಸ್ ಪ್ರಯಾಣ ಅಭಯದ ಮೊಂಡು ಧೈರ್ಯ. ಸರಿ, ನಿಮ್ಮ ಗಂಡಸರಿಗೆ ಕರೆ ಮಾಡಿ ವಿಷಯ ತಿಳಿಸಿ, ತಕ್ಷಣ ಸಿಸೇರಿಯನ್ ಮಾಡಬೇಕು ಎಂದರೆ ಫೋನ್ ಕೂಡ ಇಲ್ಲ, ಗಂಡಸರು ಯಾರೂ ಇಲ್ಲ ಬಂದಿಲ್ಲ ಎನ್ನುವ ಅಸಹಾಯಕ ಉತ್ತರ.
ಆ ಕ್ಷಣಕ್ಕೆ ಮಗುವಿಗೆ ಅಪಾಯವಾದರೆ ಎಂಬ ಭಯ, ತಕ್ಷಣ ಸಿಸೇರಿಯನ್ ಗೆ ಅವಳನ್ನು ತಯಾರು ಮಾಡಿ ಬಂದ ಕೆಲವು ನಿಮಿಷಗಳಲ್ಲಿ ಮಗುವನ್ನು ಹೊರ ತೆಗೆದು ಆಗಬಹುದಾದ ಅನಾಹುತ ತಪ್ಪಿಸಿದ ಸಮಾಧಾನ. ಆದರೂ ಮೂರೇ ಜನ ಆಸರೆಗೆ ಒಂದು ಫೋನ್ ನಂಬರ್ ಕೂಡ ಇಟ್ಟುಕೊಳ್ಳದೇ ಆಧಾರ್ ಕಾರ್ಡ್ ಇಟ್ಟುಕೊಂಡು ತುಂಬು ಗರ್ಭಿಣಿಯೊಂದಿಗೆ ಅಷ್ಟು ದೂರ ಪೂಜೆ ಹರಕೆ ನೆಪವೊಡ್ಡಿ ಪ್ರಯಾಣಿಸುವುದು ಒಂದೆಡೆ ಅವರ ಮೂರ್ಖತನವನ್ನು ತೋರಿದರೆ ಮತ್ತೊಂದೆಡೆ ಜನಕ್ಕೆ ಒಳಿತಾಗಲಿ ಎಂದು ಕೊಡುವ ಸರ್ಕಾರದ ಸೌಲಭ್ಯಗಳು ಇವರಿಗೆ ಕೊಡುವ ಮೊಂಡು ಧೈರ್ಯವನ್ನು ಪರಿಚಯಿಸಿತು.
ಹಾಗೇ ಶಸ್ತ್ರ ಚಿಕಿತ್ಸೆ ಸಮಯಕ್ಕೆ ಅವಳನ್ನು ಮಾತನಾಡಲು ಗಂಡ ಹೆಂಡತಿ ಸಂಬಂಧದಲ್ಲಿ ಬಿರುಕು, ಆ ವಿಷಯಕ್ಕೆ ಇವಳು ತವರು ಪಾಲಾಗಿರುವುದು, ಬಹುಶಃ ಆ ನೋವಿಗೆ ದೇವರ ಮೊರೆ ಬಂದಿರಬಹುದು ನಮ್ಮೊಳಗೆ ನಮ್ಮ ಊಹಾಪೋಹಗಳು.
ಸರಿ, ಆಗುವ ಅಪಾಯ ತಪ್ಪಿತು. ಅವರು ಹೆರಿಗೆಗೆ ಯಾವುದೇ ತಯಾರಿ ಮಾಡಿರಲಿಲ್ಲ. ಮಗುವಿಗೆ ಬೇಕಾದ ಬಟ್ಟೆಯಿಂದ ಎಲ್ಲವನ್ನೂ ಸಿಬ್ಬಂಧಿಗಳು ಹೊಂದಿಸಿ ಅವಳನ್ನು ವಾರ್ಡ್ ಗೆ ವರ್ಗಾಯಿಸಿದರು.
ಸದಾ ಸ್ತ್ರೀ ಸಾಮಾಜಿಕ ಪರಿಸ್ಥಿತಿಗೆ ಮರುಗುವ ನನ್ನ ಮನಸ್ಸು ಅವರ ನಂಬಿಕೆ ಮತ್ತು ಧೈರ್ಯವನ್ನು ಪ್ರಶ್ನಿಸುತ್ತಾ, ದಾರಿಯಲ್ಲಿ ಆ ತಿರುವುಗಳಲ್ಲಿ ಬಸ್ ಅಲ್ಲಿ ಏನಾದರೂ ಆಗಿದ್ದರೆ, ಎಷ್ಟೋ ದೂರ ಒಂದು ಆಸ್ಪತ್ರೆ ಹೋಗಲಿ ಅದು ಮನೆಗಳೂ ದಿಕ್ಕಿಲ್ಲದ ಜಾಗ, ಏನಾದರೂ ಅನಾಹುತವಾಗಿ ತಾಯಿ ಮಗುವಿಗೆ ತೊಡಕಾಗಿದ್ದರೆ ಯೋಚಿಸುತ್ತಾ ಬಹುಶಃ ದೇವರ ಮೇಲಿನ ಅವರ ನಂಬಿಕೆಯೇ ಅವರನ್ನು ಸಮಯಕ್ಕೆ ಸರಿಯಾಗಿ ನಮ್ಮ ಕೈಸೇರಿಸಿತು, ಅದೃಷ್ಟವಶಾತ್ ಭಾನುವಾರವಾದರೂ ನಾನು ಮಕ್ಕಳ ತಜ್ಞರು ಅರವಳಿಕೆ ತಜ್ಞರು ಆ ದಿನ ಲಭ್ಯವಿದ್ದೆವು, ಎಲ್ಲಾ ಒಳ್ಳೆಯದಾಯಿತು ಎಂದು ಎಣಿಸಿ ಮಲಗಲು ಸಿದ್ಧವಾದೆ.
ರಾತ್ರಿ ಸುಮಾರು ಹನ್ನೊಂದು ಗಂಟೆ, ವಾರ್ಡ್ ಶುಶ್ರೂಷಕಿ ಕರೆಮಾಡಿ ಅವರಿಗೆ ಊಟಕ್ಕೂ ಏನೂ ಇಲ್ಲ, ಕೈಲಿ ಬಿಡಿಗಾಸಿಲ್ಲ, ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿಯವರು ಸ್ವಲ್ಪ ಬಟ್ಟೆ ಕೊಟ್ಟು ಹೋದರು, ರೋಗಿ ಜೊತೆ ಇರುವವರಿಗೂ ಊಟ ಇಲ್ಲ, ಭಾನುವಾರ ರಾತ್ರಿ ಎಲ್ಲೂ ಊಟ ತರಿಸಲು ಸಾಧ್ಯವಿಲ್ಲ, ರೋಗಿಗಳ ಊಟದ ಸಮಯ ಮುಗಿದು ಯಾರ ಬಳಿಯೂ ಆಹಾರವಿಲ್ಲ, ಅವಳ ಚಿಕ್ಕ ತಂಗಿ ಹಸಿವಿದ್ದರೂ ಪಾಪ ಏನೂ ಕೇಳಲಾಗದೆ ಮೂಲೆಯಲ್ಲಿ ಕುಳಿತಿದ್ದಾಳೆ ಎನ್ನಲು ಆ ಕ್ಷಣ ಸರ್ಕಾರಿ ವೈದ್ಯೆಯ ಇನ್ನೊಂದು ಆಯಾಮ ಪರಿಚಯವಾಯಿತು. ಎದ್ದು ಅಡುಗೆ ಕೋಣೆಯಲ್ಲಿ ಅನ್ನ ಬಿಸಿ ಮಾಡಿ ಸ್ವಲ್ಪ ಹಣ್ಣು ಬಿಸ್ಕೆಟ್ ಎಲ್ಲಾ ಡಬ್ಬಿಗೆ ತುಂಬಿಸಿ ಸರಿರಾತ್ರಿ ನಮ್ಮ ಗ್ರೂಪ್ ಡಿ ಕರೆದು ಕೊಟ್ಟು ಕಳುಹಿಸುವಾಗ ಇಡಿ ಅನ್ನದ ಅವಶ್ಯಕತೆ ಮತ್ತೆ ಹೊಸ ಪಾಠ ಹೇಳಿತ್ತು.
ಅಂದು ಈ ರೋಗಿ ಮತ್ತೆ ಮನೆ ಸೇರುವವರೆಗೂ ನನ್ನ ಜವಾಬ್ದಾರಿ ನನಗೆ ಅರಿವಾಯಿತು.
ಅಂತೆಯೇ ಮರುದಿನ ಆಸ್ಪತ್ರೆಯಲ್ಲಿ ನಮ್ಮ ಆಡಳಿತ ವೈದ್ಯಾಧಿಕಾರಿಗೆ ತಿಳಿಸಿ ಮೂರು ಜನಕ್ಕೂ ಊಟದ ವ್ಯವಸ್ಥೆ ಮಾಡಿದೆವು, ಅಕ್ಕ ಪಕ್ಕದ ರೋಗಿಗಳು, ಸಿಬ್ಬಂಧಿಗಳು, ಆರೋಗ್ಯ ರಕ್ಷಾ ಸಮಿತಿಯವರು ರೋಗಿಗೆ ಮಗುವಿಗೆ ಅವಶ್ಯ ವಸ್ತುಗಳನ್ನು ಕೊಟ್ಟರು. ತಾಯಿ ಮಗು ಸುರಕ್ಷಿತರಾದರು.
ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದರೆ ತಾಯಿ ಮಗುವನ್ನು ಮತ್ತೆ ಮನೆಗೆ ಬಿಡಲು "ನಗುಮಗು" ಎಂಬ ವಾಹನ ಸರ್ಕಾರ ವ್ಯವಸ್ಥೆ ಮಾಡಿದೆ. ಆದರೆ ಜಿಲ್ಲೆಯಿಂದ ಜಿಲ್ಲೆಗೆ ಆ ಸೌಲಭ್ಯ ಕಲ್ಪಿಸಲು ಕೊಂಚ ಅಡೆತಡೆಯಿವೆ. ಅಲ್ಲದೇ ಸುಳ್ಯದಿಂದ ಬೆಂಗಳೂರು ದೂರದ ಪ್ರಯಾಣ, ಅಷ್ಟು ದೂರ ಇವರನ್ನು ತಲುಪಿಸುವುದು ಹೇಗೆ ನನಗೆ ದೊಡ್ಡ ತಲೆ ನೋವಾಗಿ ಹೋಯ್ತು. ಕೆಲವರು ಆಧಾರ್ ಕಾರ್ಡ್ ಇಡಿದು ಬಂದರು, ಬಸ್ ಹತ್ತಿಸಿ ಹೋಗ್ತಾರೆ ವ್ಯಂಗ್ಯ ಮಾತು ಆಡಿದರು, ಕೆಲವರು ರೈಲು ಹತ್ತಿಸಿ ಎಂದರು. ವೈದ್ಯೆಯಾಗಿ ಸಿಸೇರಿಯನ್ ಆದ ತಾಯಿ ಮಗುವನ್ನು ಅಷ್ಟು ದೂರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಲ್ಲಿ ಕಳುಹಿಸಲು ನನ್ನ ಮನಸ್ಸು ಒಪ್ಪಲಿಲ್ಲ, ಖಾಸಗಿ ಅಂಬುಲೆನ್ಸ್ ಸಹಾಯ ಪಡೆದು ಯಾರಾದರೂ ದಾನಿಗಳ ಸಹಾಯ ಪಡೆಯಲಾ ಎಂದರೆ ಹತ್ತು ಸಾವಿರಕ್ಕೂ ಕಮ್ಮಿ ಯಾವ ಖಾಸಗಿ ಅಂಬುಲೆನ್ಸ್ ಬರುವುದಿಲ್ಲ ಎಂಬ ವಿಷಯ ಯಾರೂ ನನಗೆ ಸಹಾಯ ಮಾಡುವುದಿಲ್ಲ ಎಂಬುದು ನನಗೆ ಬೇಗ ಅರಿವಾಯಿತು.
ಹೀಗೆ ದಿನ ಕಳೆಯಲು ಮುಂದಿನ ಭಾನುವಾರ ಮಧ್ಯಾಹ್ನ ಒಂದು ವಾರ ಆಯಿತು, ನಾಳೆ ಅವರನ್ನು ಕಳುಹಿಸಬೇಕು, ಸರಿ ಸ್ಲೀಪರ್ ಬಸ್ ಬುಕ್ ಮಾಡಿ ಕಳುಹಿಸಿಬಿಡುವ ಎಂದು ಬಸ್ ಬುಕ್ ಮಾಡಲು ಮೊಬೈಲ್ ತೆಗೆದೆ. ಎಲ್ಲೋ ಇದು ನಾನೊಬ್ಬಳೇ ನಿರ್ಧಾರ ಮಾಡುವ ವಿಷಯವಲ್ಲ, ದಾರಿಯಲ್ಲಿ ಏನೇ ತೊಂದರೆಯಾದರೆ ನನ್ನನ್ನು ಇಲಾಖೆ ಪ್ರಶ್ನಿಸಬಹುದು ಎನ್ನಿಸಿತು. ಮಗದೊಂದೆಡೆ ಅವಳು ಬೆಂಗಳೂರಿನಲ್ಲಿ ಎಷ್ಟು ಮಾತ್ರ ಆರೋಗ್ಯ ಇಲಾಖೆಯವರ ಸಂಪರ್ಕದಲ್ಲಿ ಇದ್ದಾಳೆ, ಅಲ್ಲಿ ಹೋದ ಮೇಲೆ ತಾಯಿ ಮಗುವಿನ ಕಾಳಜಿಗೆ ವ್ಯವಸ್ಥೆ ಮಾಡಬೇಕು ಎಂದು ಯೋಚಿಸಿ ತಕ್ಷಣ ನಮ್ಮ ಡಿ ಹೆಚ್ ಓ "ತಿಮ್ಮಯ್ಯ" ಸರ್ ಗೆ ಕರೆ ಮಾಡಿದೆ. ಬಹುಶಃ ಅನುಭವ ಮತ್ತು ಅಧಿಕಾರ ಎಂಥಾ ಕ್ಲಿಷ್ಠಕರ ವಿಷಯವನ್ನೂ ಎಷ್ಟು ಸುಲಭ ಮಾಡಬಹುದು ಎಂಬದಂತೆ ಸರ್ ನೀವು ನಮಗೆ ವಾಹನ ವ್ಯವಸ್ಥೆ ಕುರಿತು ಒಂದು ಪತ್ರ ಬರೆಯಿರಿ, ಮುಂದೆ ನಾನು ನೋಡಿಕೊಳ್ಳುವೆ ಎಂದರು.
ಮರುದಿನ ನಮ್ಮ ಅಂಬುಲೆನ್ಸ್ ಹೋಗಬೇಕಾದರೆ ಎಂಬ ವಿಷಯ ಚರ್ಚೆಗೆ ಬರಲು ರೋಗಿಗಳ ಹುಚ್ಚುತನಕ್ಕೆ ಅಷ್ಟು ದೂರ ಅಂಬುಲೆನ್ಸ್ ಹೋಗಬೇಕೇ ಸ್ವಲ್ಪ ಪರ ವಿರೋಧ ಮಾತುಗಳು ಬಂದವು. ನಾವು ಜಿಲ್ಲಾ ಅಧಿಕಾರಿಗಳಿಗೆ ಪತ್ರ ಬರೆದೆವು. ಆ ರಾತ್ರಿ ಆ ಹುಡುಗಿಯ ಅಪ್ರಾಪ್ತ ತಂಗಿ ಮಾನಸಿಕ ಸಮಸ್ಯೆಯಾಗಿ ವಾರ್ಡ್ನಲ್ಲಿ ಸ್ವಲ್ಪ ಕಿರಿ ಕಿರಿ ಮಾಡಿದಳು . ಅವಳಿಗೂ ಚಿಕಿತ್ಸೆ ಮಾಡಿ ನೋಡಿಕೊಂಡೆವು. ಮರುದಿನ ರಾತ್ರಿ ಆದ ಸಮಸ್ಯೆ ಎಲ್ಲರಲ್ಲೂ ಅವರದೇ ಚರ್ಚೆ. ಗಾಡಿ ವ್ಯವಸ್ಥೆಗೆ ನಾನು ಮತ್ತೆ ಡಿ ಹೆಚ್ ಓ ಸರ್ ಗೆ ವಿನoತಿ ಮಾಡಲು ಸರ್ " ಅವರು ಮಾಡಿರುವುದು ತಪ್ಪು ಆದರೆ ನಾವು ಈಗ ಪರಿಸ್ಥಿಯಲ್ಲಿ ಬಂಧಿ, ಪ್ರಯಾಣದ ಸಮಯದಲ್ಲಿ ತಾಯಿ ಮಗುವಿಗೆ ಏನೇ ತೊಂದರೆಯಾದರೂ ನಾವು ಸರ್ಕಾರಕ್ಕೆ ಉತ್ತರ ನೀಡಬೇಕು" ಎಂದು ಎಲ್ಲರಿಗೂ ಮನದಟ್ಟು ಮಾಡಿ ಅವರ ಅಧಿಕಾರ ವ್ಯಾಪ್ತಿಯಲ್ಲಿ ಮಾನವೀಯತೆ ದೃಷ್ಟಿಯಿಂದ ತಾಯಿ ಮಗು ಮನೆ ಸೇರಿಸಲು ಅಂಬುಲೆನ್ಸ್ ವ್ಯವಸ್ಥೆ ಮಾಡಿ ಆದೇಶ ಹೊರಡಿಸಿದರು. ಅಷ್ಟಲ್ಲದೇ ಬೆಂಗಳೂರು ಡಿ ಹೆಚ್ ಓ ಗೆ ಕರೆ ಮಾಡಿ ಅವರ ಆರ್ಥಿಕ ಸಾಮಾಜಿಕ ಪರಿಸ್ಥಿತಿ ತಿಳಿಸಿ ಅಲ್ಲಿ ಅವರು ತಲುಪಿದ ಮೇಲೆ ತಾಯಿ ಮಗುವಿನ ಸುರಕ್ಷತೆ ಬಗ್ಗೆ ಎಚ್ಚರ ವಹಿಸಲು ತಿಳಿಸಿದರು. ಅಧಿಕಾರಿಯಾಗಿ ಒಬ್ಬ ಒಳ್ಳೆಯ ಮನುಷ್ಯನಾಗಿ ಅವರ ಆದರ್ಶಗಳು ಮತ್ತೆ ದಿಟ್ಟ ನಡೆ ಸದಾ ಅನುಕರಣೀಯ.
ಅಂತೂ ಗುರುವಾರ ಸಂಜೆ ಹದಿನಾಲ್ಕನೇ ದಿನಕ್ಕೆ ಅವರು ಊರಿಗೆ ವಾಪಸಾಗಲು ವ್ಯವಸ್ಥೆಯಾಯಿತು. ಅವರು ಗಾಡಿ ಬಳಿ ನಿಂತರು. ಅವರಿಗೆ ನಾವು ಪಟ್ಟ ಪರಿಪಾಟಲಾಗಲಿ , ಅವರು ಎದುರಿಸಿದ ಸಮಸ್ಯೆಗಳು ಏನೂ ಹೆಚ್ಚೆನಿಸುತ್ತಿಲ್ಲ, ಹೇಗೋ ಗೂಡು ಸೇರಲು ದಾರಿ ಸಿಕ್ಕಿತು ಎಂಬ ಭಾವ, ನಿಟ್ಟುಸಿರು. ಬಹುಶಃ ಒಂದು ಧನ್ಯವಾದದ ನಿರೀಕ್ಷೆಯೂ ಇಲ್ಲದೆ ಕೆಲವೊಮ್ಮೆ ಕೆಲವರಿಗೆ ದಾರಿ ತೋರಿಸಿ ಸುಮ್ಮನೆ ಬೆನ್ನು ಮಾಡಿಬಿಡಬೇಕು ಎಂಬ ಜೀವನದ ಪಾಠ ಇವರ ಕಥೆ. ಹೋಗಿ ಬರುತ್ತೇವೆ, ಅಲ್ಲಿಂದ ಬಂದ ನಮಗೆ ಇಷ್ಟು ನೆರವು ನೀಡಿದ್ದೀರಾ ಎಂಬ ಒಂದು ಮಾತೂ ಆಡದೇ ಯಾರಿಗೂ ಏನೂ ಹೇಳದೆ ಅವರು ಗಾಡಿ ಹತ್ತಿ ಹೊರಟರು. ನಾನು ಅವರಿಗೆ ಸಹಾಯ ಮಾಡಿದ್ದಕ್ಕೆ ಡಿ ಹೆಚ್ ಓ ಸರ್ ಗೆ ಸಂದೇಶ ಕಳುಹಿಸಿ ಅವರು ಹೊರಟರು ಧನ್ಯವಾದ ಸರ್ ಎನ್ನಲು ಅವರು ನಮ್ಮೊಳಗೆ ಉಳಿಸಿ ಹೋದ ಪ್ರತಿಫಲ ಬಯಸದೇ ಮಾನವೀಯ ಮೌಲ್ಯಕ್ಕೆ ಬೆಲೆ ಕೊಡುವ ಬಾಳಿನ ಪಾಠ ಮನದಟ್ಟು ಮಾಡಿತು.
ಈ ಮಧ್ಯೆ ಕೆಲವರ ಬಳಿ ಈ ವಿಚಾರ ಹಂಚಿಕೊಂಡಿರಲು ಪ್ರತಿ ನಿತ್ಯ ಅವರಿಗೆ ಏನಾದರೂ ಸಹಾಯ ಬೇಕಾ ಎಂಬ ಕೆಲವು ಒಳ್ಳೆ ಮನಸ್ಸುಗಳ ಪ್ರತಿ ನಿತ್ಯದ ಕಾಳಜಿಯೂ ನನ್ನ ಸುತ್ತಲಿರುವ ಕೆಲವರ ಮಾನವೀಯತೆಯ ನಿದರ್ಶನವಾಗಿತ್ತು. ಈ ಹದಿನೈದು ದಿನ ಅವರೊಂದಿಗಿನ ಒಡನಾಟ ನಾನು ಪಟ್ಟ ತೊಳಲಾಟ ಅವರಿಗಾಗಿ ನಡೆದ ಸಂಭಾಷಣೆ ನನಗೆ ಅನೇಕ ಅಂಶಗಳನ್ನು ಪರಿಚಯಿಸಿತು.
ಎಂಟನೇ ತರಗತಿಯಲ್ಲಿ "ಮಾನವೀಯತೆ ರಸ್ತೆಯಲ್ಲಿ ಅಳುತ್ತಿದೆ, ನರಳುತ್ತಿದೆ" ಎಂಬ ಪದ್ಯ ಓದಿದ ನೆನಪು, ಆ ಪದ್ಯ ನನಗೆ ವೈಯಕ್ತಿಕವಾಗಿ ಮಾನವೀಯ ಗುಣ ಮರೆಯಬಾರದು ಎಂಬುದಕ್ಕೆ ಒಂದು ಎಚ್ಚರಿಕೆ ಗಂಟೆ. ಸರ್ಕಾರಿ ವೈದ್ಯರಿಗೆ ನಾವೇ ಅಮಾನವೀಯರಾಗಬೇಕೆಂದರೂ ನಮ್ಮೊಳಗಿನ ಮಾನವೀಯತೆ ಜಾಗರೂಕವಾಗಲು ನಮ್ಮೆದುರು ಹತ್ತಾರು ಅಸಹಾಯಕ ಅಮಾಯಕ ಅನಾಗರೀಕ ಕಥೆಗಳು. ಸಾವಿರ ವ್ಯಥೆಗಳ ನಡುವೆ ಮಾನವೀಯತೆ ಮತ್ತೆ ನಮ್ಮೊಂದಿಗೆ ಮಾತನಾಡುತ್ತದೆ, ನಮ್ಮ ವೈಯಕ್ತಿಕ ಕೆಲಸಗಳನ್ನೂ ಮರೆತು ನಮ್ಮ ರೋಗಿಗಳ ಕಥೆಗೆ ಮನ ಮಿಡಿಯುತ್ತದೆ. ಹತ್ತು ವರ್ಷಗಳ ಸರ್ಕಾರಿ ಸೇವೆಯ ನನ್ನ ಅನುಭವ ನನ್ನೊಳಗೆ ಮತ್ತೆ ಮತ್ತೆ ಮಾನವೀಯತೆ ಎಂಬ ತಾಯಿಯನ್ನು ಪರಿಚಯಿಸಿ ಎಚ್ಚರಗೊಳಿಸಲು ನನಗೆ "ನನ್ನ ಸರ್ಕಾರಿ ಕೆಲಸ ಮನುಷ್ಯತ್ವದ ಕನ್ನಡಿ".
- ಡಾ ಶಾಲಿನಿ ವಿ ಎಲ್
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ
ಸಾರ್ವಜನಿಕ ಆಸ್ಪತ್ರೆ ಸುಳ್ಯ


