- ನದಿ ತಿರುವು ಯೋಜನೆಯಿಂದ ಹಿಂದೆ ಸರಿಯುವಂತೆ ಸರ್ಕಾರಗಳಿಗೆ ಆಗ್ರಹ
- ಜನವರಿ 11 ರಂದು ಶಿರಸಿಯಲ್ಲಿ ನಡೆಯುವ ಬೃಹತ್ ಜನ ಸಮಾವೇಶಕ್ಕೆ ಬೆಂಬಲ
ಬೆಂಗಳೂರು: ನದಿಗಳು ಮಾನವ ಸಮುದಾಯದ ಜೀವನಾಡಿಗಳಾಗಿದ್ದು, ಅವುಗಳ ನೈಸರ್ಗಿಕ ಹರಿವಿನಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಯೋಜನೆಗಳು ಜೀವಸಂಕುಲಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತವೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೊದಲು ದೀರ್ಘಕಾಲೀನ ಪರಿಣಾಮಗಳನ್ನು ಸಮಗ್ರವಾಗಿ ಹಾಗೂ ವೈಜ್ಞಾನಿಕವಾಗಿ ಅಧ್ಯಯನ ಮಾಡುವುದು ಅತ್ಯಾವಶ್ಯಕವಾಗಿದೆ. ಈ ರೀತಿಯ ಅಧ್ಯಯನವಿಲ್ಲದ ಅಭಿವೃದ್ಧಿ ಮುಂದಿನ ದಿನಗಳಲ್ಲಿ ಜನಜೀವನ ಹಾಗೂ ಪರಿಸರಕ್ಕೆ ಮಾರಕವಾಗಲಿದೆ ಎಂದು ಶ್ರೀ ಅಖಿಲ ಹವ್ಯಕ ಮಹಾಸಭೆ ಎಚ್ಚರಿಸಿದೆ.
ಶ್ರೀ ಅಖಿಲ ಹವ್ಯಕ ಮಹಾಸಭೆ (ರಿ) ಅಧ್ಯಕ್ಷ ಡಾ. ಗಿರಿಧರ ಕಜೆ ಅವರು ಈ ಕುರಿತು ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬೇಡ್ತಿ ಹಾಗೂ ಅಘನಾಶಿನಿ ನದಿಗಳ ತಿರುವು ಯೋಜನೆಯಿಂದ ಸರ್ಕಾರಗಳು ತಕ್ಷಣವೇ ಹಿಂದೆ ಸರಿಯಬೇಕು ಎಂದು ಮಹಾಸಭೆ ಆಗ್ರಹಿಸಿದೆ. ಬೇಡ್ತಿ–ಅಘನಾಶಿನಿ ಹಾಗೂ ಶರಾವತಿ ನದಿಗಳು ಉತ್ತರ ಕನ್ನಡ ಜಿಲ್ಲೆಯ ಜೀವನಾಡಿಗಳಾಗಿದ್ದು, ರಾಜ್ಯದ ಅಭಿವೃದ್ಧಿಗಾಗಿ ಈ ಪ್ರದೇಶ ಈಗಾಗಲೇ ಹಲವಾರು ತ್ಯಾಗಗಳನ್ನು ಮಾಡಿದೆ. ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಉತ್ತರ ಕನ್ನಡದ ಮೇಲೆ ಅಭಿವೃದ್ಧಿಯ ಹೆಸರಿನಲ್ಲಿ ಮತ್ತಷ್ಟು ಭಾರ ಹಾಕುವುದು ಜನಜೀವನ ಮತ್ತು ಪ್ರಾಕೃತಿಕ ಸಂಪತ್ತಿನ ಮೇಲಿನ ದೌರ್ಜನ್ಯವಾಗಿದೆ ಎಂದು ಮಹಾಸಭೆ ಅಭಿಪ್ರಾಯಪಟ್ಟಿದೆ.
ಬಹು ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸಲಾದ ಎತ್ತಿನಹೊಳೆ ಯೋಜನೆ ಬಹುತೇಕ ನಿರೀಕ್ಷಿತ ಫಲ ನೀಡದಿರುವುದು ಎಲ್ಲರ ಮುಂದಿರುವ ಉದಾಹರಣೆ ಆಗಿರುವಾಗ, ಇದೀಗ ಪರಿಸರಕ್ಕೆ ಮತ್ತೊಂದು ಮಾರಕ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿರುವುದು ಪರಿಸರ, ಜನಜೀವನ, ಆರ್ಥಿಕತೆ ಮತ್ತು ಭವಿಷ್ಯ ಎಲ್ಲ ದೃಷ್ಟಿಯಿಂದಲೂ ಅವೈಜ್ಞಾನಿಕ ಕ್ರಮವಾಗಿದೆ ಎಂದು ಹೇಳಲಾಗಿದೆ.
ಪರಿಸರದೊಂದಿಗೆ ಬದುಕನ್ನು ಕಟ್ಟಿಕೊಂಡಿರುವ ಉತ್ತರ ಕನ್ನಡದ ಜನರು ಹಾಗೂ ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಹವ್ಯಕ ಸಮಾಜದ ಬಂಧುಗಳ ಬದುಕಿಗೆ ಈ ನದಿ ತಿರುವು ಯೋಜನೆ ವರ್ತಮಾನದಲ್ಲಿಯೂ ಭವಿಷ್ಯದಲ್ಲಿಯೂ ಅಪಾಯಕಾರಿಯಾಗಿದೆ. ಸೂಕ್ಷ್ಮ ಪರಿಸರ ವ್ಯವಸ್ಥೆಗೆ ತೀವ್ರ ಹಾನಿ ಉಂಟುಮಾಡುವ ಈ ಯೋಜನೆಯನ್ನು ಅಖಿಲ ಹವ್ಯಕ ಮಹಾಸಭೆ ತೀವ್ರವಾಗಿ ಖಂಡಿಸಿದೆ.
ಇದೇ ಸಂದರ್ಭದಲ್ಲಿ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಆಯೋಜನೆಯಲ್ಲಿ ಹಾಗೂ ನಾಡಿನ ವಿವಿಧ ಸಂತರ ನೇತೃತ್ವ ಮತ್ತು ಬೆಂಬಲದೊಂದಿಗೆ ಜನವರಿ 11ರಂದು ಶಿರಸಿಯಲ್ಲಿ ನಡೆಯಲಿರುವ ಬೃಹತ್ ಜನ ಸಮಾವೇಶಕ್ಕೆ ಮಹಾಸಭೆ ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ. ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜನ ವಿರೋಧಿ ಯೋಜನೆಗೆ ತಮ್ಮ ವಿರೋಧವನ್ನು ದಾಖಲಿಸಬೇಕೆಂದು ಮಹಾಸಭೆ ಮನವಿ ಮಾಡಿದೆ.
ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಂಡು ಬೇಡ್ತಿ–ಅಘನಾಶಿನಿ ನದಿ ತಿರುವು ಸೇರಿದಂತೆ ಪರಿಸರಕ್ಕೆ ಮಾರಕವಾಗಿರುವ ಎಲ್ಲಾ ಯೋಜನೆಗಳಿಂದ ಹಿಂದೆ ಸರಿಯಬೇಕು ಎಂದು ಅಖಿಲ ಹವ್ಯಕ ಮಹಾಸಭೆ ತೀಕ್ಷ್ಣವಾಗಿ ಆಗ್ರಹಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

