ಗರುಡವಾಹನನಾದ ಶ್ರೀಹರಿಯ ಮಹಿಮೆ ಅನಂತ, ಗರುಡನ ಮಹಿಮೆ ಅಚಿಂತ್ಯ.ಗರುಡವಾಹನನಾದ ಶ್ರೀಹರಿಯ ಮಹಿಮೆ ಅನಂತ, ಇಂಥ ಗರುಡದೇವರು ಗುರು-ಹಿರಿಯರ, ತಂದೆ-ತಾಯಿಯರ ಕರುಣೆಗೆ ಪಾತ್ರರಾದರು.ಏತನ್ಮೂಲಕ ಸ್ವರ್ಗಲೋಕಕ್ಕೆ ತೆರಳಿ ಅಮೃತವನ್ನೂ ಕೂಡ ಪಡೆದರು.ಇವರ ಮಾರ್ಗದರ್ಶನದಂತೆ ಗುರು-ಹಿರಿಯರ, ತಂದೆ-ತಾಯಿಯರ ಕರುಣೆಗೆ ಪಾತ್ರರಾಗುವುದೇ ಜೀವನದ ಮುಖ್ಯಉದ್ದೇಶ ಎಂಬ ನೀತಿಯನ್ನು ತಿಳಿಯಬೇಕು.
ಭೂಮಿಗೆ ಭಾರರಾದ ಹತ್ತಾರು ಮಕ್ಕಳನ್ನು ಪಡೆಯುವುದಕ್ಕಿಂತ ಗರುಡನಂಥ ಒಬ್ಬ ಸಾತ್ವಿಕ ಮಗನನ್ನು ಪಡೆಯುವುದೇ ಸಾರ್ಥಕ ಎಂಬ ನೀತಿಯನ್ನು ಗರುಡನ ಚರಿತ್ರೆಯಿಂದ ಮಹಾಭಾರತವು ತಿಳಿಸಿದೆ.
ಗರುಡನು ವಿನುತೆಯ ಮಗ. ವಿನುತೆಯ ಕದ್ರುವಿನ ದಾಸಿಯಾದ ಮೇಲೆ ತಾಯಿಯು ಇಲ್ಲದ ಸಂದರ್ಭದಲ್ಲಿ ಮಹಾತೇಜಸ್ವಿಯಾದ ಗರುಡನು ಮೊಟ್ಟೆಯನ್ನು ಒಡೆದುಕೊಂಡು ಹೊರಗೆ ಬಂದನು.ಒಂದು ಸಾವಿರ ವರ್ಷಗಳ ಕಾಲ ಮೊಟ್ಟೆಯ ಒಳಗಿದ್ದುಕೊಂಡು ದಿವ್ಯವಾದ ಶರೀರವನ್ನು ಪಡೆದ ಇವನ ಪರಾಕ್ರಮ, ಇವನ ತೇಜಸ್ಸು ಮೂರು ಲೋಕಗಳನ್ನೇ ಗೆಲ್ಲುವಂತಿತ್ತು. ಹುಟ್ಟಿದ ಕೂಡಲೇ ಅತ್ಯಂತ ದೊಡ್ಡದಾದ ದೇಹವನ್ನು ಧರಿಸಿ ಪಕ್ಷಿಯಾಗಿ ಆಕಾಶಕ್ಕೆ ಹಾರುತ್ತಾನೆ. ಅಗ್ನಿಯ ರಾಶಿಯೇ ಆಕಾಶದಲ್ಲಿ ಹಾರುವಂತೆ ಎಲ್ಲಾ ಪ್ರಜೆಗಳಿಗೆ ಕಾಣಿಸುತ್ತದೆ. ಕುಪಿತನಾದ ಅಗ್ನಿಯು ಸಮಸ್ತ ಲೋಕವನ್ನೇ ಸುಡಲು ಹೀಗೆ ಮಾಡುತ್ತಿದ್ದಾನೆಂದು ಎಲ್ಲರೂ ಭ್ರಾಂತರಾಗುತ್ತಾರೆ.ಕೂಡಲೇ ಅಗ್ನಿಯನ್ನು ಕುರಿತು ಶರಣಾಗತರಾಗಿ ನೀನು ಹೀಗೆ ಅಭಿವೃದ್ಧಿಯನ್ನು ಹೊಂದಬಾರದು.ನಮ್ಮನ್ನೆಲ್ಲಾ ದಹಿಸಬಾರದು ಎಂದು ಎಲ್ಲರೂ ಪ್ರಾರ್ಥನೆ ಮಾಡುತ್ತಾರೆ.
ಅಗ್ನಿಯು ನಗುತ್ತಾ ಉತ್ತರಿಸುತ್ತಾನೆ. ಆಕಾಶ ಮಾರ್ಗದಲ್ಲಿ ಅಂತಹ ಕಾಂತಿಯಿಂದ ಹಾರುತ್ತಿರುವವನು ನಾನಲ್ಲ. ನನಗಿಂತ ಉತ್ತಮವಾದ ಗರುಡನು ಇವನು. ಕಶ್ಯಪರ ಮಗನಾಗಿ ಇವನು ಜನಿಸಿದ್ದಾನೆ. ದೇವತೆಗಳಿಗೆ ಅತ್ಯಂತ ಹಿತವನ್ನೇ ಉಂಟುಮಾಡುವ ಇವನು ದೈತ್ಯರನ್ನು ರಾಕ್ಷಸರನ್ನು ಸದೆಬಡಿಯುತ್ತಾನೆ. ಎಲ್ಲಾ ಸರ್ಪಗಳನ್ನೂ ನಾಶ ಮಾಡುತ್ತಾನೆ. ಇವನ ಪರಾಕ್ರಮಕ್ಕೆ ಸರಿಸಾಟಿಯಾದ ಮತ್ತೊಬ್ಬ ವ್ಯಕ್ತಿ ಲೋಕದಲ್ಲೇ ಇರುವುದಿಲ್ಲ. ಅವನನ್ನೇ ಕುರಿತು ನಾವೆಲ್ಲರೂ ಪ್ರಾರ್ಥನೆ ಮಾಡೋಣ ಎಂದು ಅಗ್ನಿಯು ಹೇಳುತ್ತಾನೆ.
ದೇವತೆಗಳು, ಸಮಸ್ತ ಋಷಿಗಳು, ಪ್ರಜೆಗಳು ಎಲ್ಲರೂ ಗರುಡನ ಸಮೀಪಕ್ಕೆ ಹೋಗಿ ವಿಧವಿಧವಾಗಿ ಗರುಡನನ್ನು ಸ್ತುತಿಸುತ್ತಾರೆ.ದೇವತೆಗಳ ಪ್ರಾರ್ಥನೆಯನ್ನು ಕೇಳಿ ಸಂತೋಷವನ್ನು ಹೊಂದಿದ ಗರುಡನು ತನ್ನ ದೇಹವನ್ನು ತಾನೇ ನೋಡಿಕೊಳ್ಳುತ್ತಾನೆ. ಎಲ್ಲರಿಗೂ ಇದರಿಂದ ಭಯವಾಗುತ್ತದೆ ಎಂದು ತಿಳಿದು ಸಂಕೋಚ ಮಾಡಿಕೊಳ್ಳುತ್ತಾನೆ. ತನ್ನ ಪ್ರಖರವಾದ ತೇಜಸ್ಸನ್ನು ಉಪಸಂಹಾರ ಮಾಡುತ್ತಾನೆ.
ಮಹಾಪರಾಕ್ರಮಿಯಾದ ಗರುಡನು ಅಂತರಿಕ್ಷಕ್ಕೆ ಹಾರಿ ತಮ್ಮನಾದ ಅರುಣನನ್ನು ಸಂದರ್ಶಿಸಿದನು.ಅವನನ್ನು ತನ್ನ ಬೆನ್ನಿನ ಮೇಲೆ ಕುಳ್ಳಿರಿಸಿಕೊಂಡು ತನ್ನ ತಂದೆಯಾದ ಕಶ್ಯಪರನ್ನು ಭೇಟಿಮಾಡಿ ನಮಸ್ಕರಿಸಿದನು.ಅಲ್ಲಿಂದ ಸಮುದ್ರದ ಮತ್ತೊಂದು ತೀರದಲ್ಲಿ ಕದ್ರುವಿನ ದಾಸಿಯಾಗಿ ನೆಲೆಸಿರುವ ತನ್ನ ತಾಯಿಯಾದ ವಿನುತೆಯನ್ನು ಸಂಪರ್ಕಿಸಿ ನಮಸ್ಕರಿಸಿದನು.ಪುತ್ರನಾದ ಗರುಡನ ಆಗಮನವನ್ನು ನೋಡಿ, ತಾಯಿಯಾದ ವಿನುತೆಯು ಆನಂದಬಾಷ್ಪವನ್ನು ಸುರಿಸಿದಳು.
‘ಗ’ ಎಂದರೆ ಗತಿ.ಗತಿ ಪದಕ್ಕೆ ಗಮನ, ಸಂಚಾರ, ಉಪಾಯ, ಯುಕ್ತಿ ಎಂಬೆಲ್ಲ ಅರ್ಥಗಳುಂಟು.ಗರುಡ ಗಗನದಲ್ಲಿ ಸುಮಾರು 200 ಮೀಟರಿಗಿಂತಲೂ ಹೆಚ್ಚು ಎತ್ತರದಲ್ಲಿ ಹಾರುತ್ತ ಮಿಂಚಿನ ವೇಗದಲ್ಲಿ ತಾನು ಗುರಿಯಾಗಿಸಿಕೊಂಡ ಭೂಮಿಯ ಮೇಲಿರುವ ವಸ್ತುವನ್ನು ತೀಕ್ಷ್ಣದೃಷ್ಟಿಯಿಂದ ಗ್ರಹಿಸಬಲ್ಲ, ಗ್ರಹಿಸಿ ಹಿಡಿಯ ಬಲ್ಲ ಸಾಮಥ್ರ್ಯ ಸಾಧನೆಗೆ ಗರುಡನಿಗೆ ಗರುಡನೇ ಸಾಟಿ.ಆತ ಛಲದಂಕಮಲ್ಲ ಹಿಡಿದಿರುವ ಕಾರ್ಯವನ್ನು ಸಾಧಿಸದೇ ಬಿಡಲಾರದ ಹಟವಾಡಿ.ಇದಕ್ಕೆ ಆತನ ಸುತ್ತ ಹೆಣೆದಿರುವ ಪೌರಾಣಿಕ ಕಥೆಯೇ ಸಾಕ್ಷಿ.
ಕದ್ರು ಹಾಗೂ ವಿನುತೆ ಅಕ್ಕತಂಗಿಯರು.ಕಶ್ಯಪ ಋಷಿಯ ಪತ್ನಿಯರು.ಕದ್ರು ನಾಗಗಳ ಮಾತೆ.ಗರುಡ ಹಾಗೂ ಅರುಣ ವಿನುತೆಯ ಮಕ್ಕಳು.ಕದ್ರುವಿಗೆ ಸಹೋದರಿಯ ಮಾತ್ಸರ್ಯ.ಅಕ್ಕತಂಗಿಯರ ಮಧ್ಯೆ ಏರ್ಪಟ್ಟ ಪಣವೊಂದರಲ್ಲಿ ಅಕ್ಕನ ಮೋಸದಿಂದ ಸೋತ ವಿನತೆ ಆಕೆಗೆ ದಾಸಿಯಾಗುತ್ತಾಳೆ.ಗರುಡ ಅದನ್ನು ಸಹಿಸದೇ ತಾಯಿಯ ದಾಸ್ಯಕ್ಕೆ ಕಳೆಯುವುದಕ್ಕಾಗಿ ಆಕೆಯ ಸ್ವಾತಂತ್ರ್ಯ ರಕ್ಷಿಸುವುದಕ್ಕಾಗಿ ಮಲತಾಯಿಯ ಆಸೆಯಂತೆ ದಾಯಾದಿ ನಾಗಗಳಿಗೆ ಎಲ್ಲಾ ಅಡೆ ತಡೆಗಳನ್ನು ಎದುರಿಸಿ ಛಲದಿಂದ ಕಾರ್ಯಸಿದ್ಧಿ ಅತ್ಯಂತ ದುರ್ಲಭವಾದ ಅಮೃತವನ್ನು ದೇವಲೋಕದಿಂದ ತಂದ ಮಹಾಪ್ರತಾಪಿ.ಆಗ ಆತನ ಗುರಿ ಒಂದೇ ಆಗಿತ್ತು ತಾಯಿಯ ದಾಸ್ಯತ್ವ ಕೊನೆಗಾಣಿಸಬೇಕೆಂಬುದು.ದೇವೇಂದ್ರ ಅಡ್ಡ ಬಂದರೂ, ಆತನ ವಜ್ರಾಯುಧ ಕೂಡ ಗರುಡನನ್ನು ಬಾಧಿಸಲಿಲ್ಲ. ವಜ್ರಾಯುಧ ದಧೀಚಿ ಮಹರ್ಷಿಗಳ ಬೆನ್ನೆಲುಬಿನಿಂದಾದುದೆಂದು ಗೌರವ ಸೂಚಿಸಲು ತನ್ನ ಒಂದು ರೆಕ್ಕೆ ಬೀಳಿಸಿದ ವಿನೀತನೀತ ಈ ವೈನತೇಯ. ಆತನ ಶಕ್ತಿ ಧೈರ್ಯಗಳನ್ನು ಕಂಡು ಬೆರಗಾದ ಇಂದ್ರ ತನ್ನ ಸ್ನೇಹಿತನನ್ನಾಗಿ ಮಾಡಿಕೊಂಡನು.ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಲು ಉಪಾಯವೊಂದನ್ನು ಹೇಳಿಕೊಟ್ಟನು.ಇಂದ್ರನ ಮಾತಿನಂತೆ ನಡೆದು ದಾಯಾದಿಗಳೊಡನೆ ಕಲಹವಿಲ್ಲದೇ ಸುರಲೋಕವನ್ನೇ ಜಯಿಸಿ ಅಮೃತ ತಂದು ತಾಯಿಯ ದಾಸ್ಯ ಬಿಡಿಸಿದ ಮಾತೃಭಕ್ತ.
‘ನಃ ಮಾತು ಪರದೈವತಮ್’ ಎಂಬ ನಮ್ಮ ಸಂಸ್ಕøತಿಯ ಮೂಲಾಧಾರವಾದ ಮಾತೃಭಕ್ತಿಯ ಪ್ರತೀಕ ಗರುಡ.ಅಮೃತ ಕುಂಭವೇ ಆತನ ಕೈಯಲ್ಲಿದ್ದರೂ ಅದನ್ನು ಸೇವಿಸದ ನಿಷ್ಠಾವಂತ, ಪ್ರಾಮಾಣಿಕ ವ್ಯಕ್ತಿ.ಅದಕ್ಕೆ ಆಸೆಪಡಲಿಲ್ಲ. ಆತ ನಿಷ್ಠೆಯನ್ನು ಮೆಚ್ಚಿ ಮಹಾವಿಷ್ಣು ತನ್ನ ವಾಹನವನ್ನಾಗಿ ಮಾಡಿಕೊಂಡ.
ಭಗವದ್ಗೀತೆಯ ಹತ್ತನೆಯ ಅಧ್ಯಾಯದ 30ನೇ ಶ್ಲೋಕದಲ್ಲಿ ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ ಕಾಲಃ ಕಲಯತಾಮಹಮ್| ಮೃಗಾಣಾಂ ಚ ಮೃಗೇಂದ್ರೋ$ಹಂ ‘ವೈನತೇಯಶ್ವ ಪಕ್ಷಿಣಾಮ್’|| ಎಂದು ಸಾರಿ ಹೇಳಿರುವುದು ಗರುಡನ ಹಿರಿಮೆಗೆ ಸಾಕ್ಷಿ.ಗರುಡನ ಸಾಮಥ್ರ್ಯವನ್ನು ಕಂಡು ವಿಷ್ಣುವು ಈತನಿಗೆ ಸುಪರ್ಣನೆಂಬ ಹೆಸರು ಕೊಟ್ಟು ತನ್ನ ವಾಹನವನ್ನಗಿ ಮಾಡಿಕೊಂಡನು.ಅವನನ್ನು ಧ್ವಜದಲ್ಲಿಟ್ಟುಕೊಂಡು ಗರುಡಧ್ವಜನಾದನು.ವೇದಗಳಲ್ಲಿ ಸ್ಯೇನನೆಂದು ಉಲ್ಲೇಖಿಸಲಾಗಿದೆ.ಗಗನೇಶ್ವರ, ಕಾಮಾಯುಷ, ಕಶ್ಯಪಿ, ಖಗೇಶ್ವರ, ನಾಗಾಂತಕ, ಸಿತಾನನ, ಸುಧಾಹರ, ಸುಪರ್ಣ, ವೈನತೇಯ, ವಿಷ್ಣುರಥ, ತಾಕ್ಷ್ರ್ಯ, ಗರುತ್ಮಾನ್, ಅಜಿತ, ಮುಂತಾದ ಹೆಸರುಗಳಿಂದ ವೇದ, ಉಪನಿಷತ್ತು, ಪುರಾಣ, ರಾಮಾಯಣ, ಮಹಾಭಾರತ, ಭಗವದ್ಗೀತೆ, ಯೋಗಸೂತ್ರಗಳಲ್ಲಿ ಬಣ್ಣಿಸಲ್ಪಟ್ಟಿದ್ದಾನೆ.
ಕೃಷ್ಣಾವತಾರದಲ್ಲಿ ಕೃಷ್ಣ ಸತ್ಯಭಾಮೆಯೊಡನೆ ಗರುಡ ವಾಹನನಾಗಿ ಬಂದು ನರಕಾಸುರನನ್ನು ಕೊಂದದ್ದು ಹಾಗೂ ಶ್ರೀಹರಿ ಗಜೇಂದ್ರನನ್ನು ರಕ್ಷಿಸಲು ಗರುಡವಾಹನನಾಗಿ ಬಂದನೆಂಬುದು ಜಗಜ್ಜನಿತ.ಮಹಾಭಾರತದಾದ್ಯಂತ ಉಗ್ರ ಶಕ್ತಿ, ವಾಯುವೇಗ ಮಿಂಚಿನ ತೇಜಸ್ಸು ಮುಂತಾದ ಗುಣಗಳ ಸಂಕೇತವಾಗಿ ಗರುಡ ಗುರುತಿಸಲ್ಪಟ್ಟಿದ್ದಾನೆ.
ಕುರುಕ್ಷೇತ್ರ ಯುದ್ಧದಲ್ಲಿ ಸೇನಾಧಿಪತಿಗಳಾಗಿದ್ದ ಭೀಷ್ಮ, ದ್ರೋಣರು ತಮ್ಮ ಸೇನಾದಳವನ್ನು ಗರುಡವ್ಯೂಹದಲ್ಲಿ ರಚಿಸಿದ್ದಾರೆಂಬ ರಚಿಸಿದ್ದರೆಂಬ ವಿಷಯ ತಿಳಿದದ್ದೇ.ತಿರುಮಲ ಬೆಟ್ಟದ ಇನ್ನೊಂದು ಹೆಸರು ಗರುಡಾಚಲ.ಹೀಗೆ ಗರುಡನ ಜನಪ್ರಿಯತೆ ಸಾಗುತ್ತದೆ.
ವಿಷ್ಣುವನ್ನು ಗರುಡ ವಾಹನನೆಂದು ಕೇಳಿರಬಹುದು.ಅವತಾರವೆತ್ತಿದ ಗರುಡನ ಮಹಿಮೆ ಎಲ್ಲಿ ದೊರೆಯಬಹುದೆಂದು ಚಡಪಡಿಸಿರಬಹುದು.ಗರುಡನ ಅದ್ಭುತ ಜನನ ಹಾಗೂ ಸಾಧನದ ವಿವರಗಳ ಆಕರ ಮಹಾಭಾರತದ ಆದಿಪರ್ವ.ಭಗವಂತನ ವಿಭೂತಿರೂಪ, ವಿಶೇಷ ಆವೇಶ, ಜೀವರಲ್ಲಿ ಉತ್ತಮತ್ವ ಇವು ಗರುಡನ ಹೆಗ್ಗಳಿಕೆ.
ಗರುಡನ ಸ್ಮರಣೆಯನ್ನು ಪ್ರತಿನಿತ್ಯ ಮಾಡಲೇಬೇಕು.ಅದರಿಂದ ಆಹಾರದಲ್ಲಿರುವ ವಿಷಭಾದೆಗಳು ಪರಿಹಾರವಾಗುತ್ತವೆ. ಗರುಡ ಧ್ಯಾನದಿಂದ ವಿಷವೃತ್ತಿ ಉಂಟಾಗುತ್ತದೆಂಬುದನ್ನು ಶಾಸ್ತ್ರಗಳಲ್ಲಿ ಹೇಳಿದ್ದಾರೆ.ಅನೇಕರ ಜಾತಕದಲ್ಲಿ ಸರ್ಪದೋಷ ಇರುತ್ತದೆ. ಅದರ ಪರಿಹಾರಕ್ಕೂ ಗರುಡನ ಆರಾಧನೆಯನ್ನೇ ಮಾಡಬೇಕು.ಗರುಡನ ಸ್ಮರಣೆಯಿಂದ ಸರ್ಪದೋಷವು ಪರಿಹಾರವಾಗುವುದಷ್ಟೇ ಅಲ್ಲದೇ ಸರ್ಪಗಳ ಬಾಧೆಯೂ ಇರುವುದಿಲ್ಲ.
ಸರಸ್ವತಿ-ಭಾರತಿಯರ ನಂತರದ ಸ್ಥಾನ ಹೊಂದಿದವನು.ಗರುಡ, ಶೇಷ, ರುದ್ರರು ಸಮವಾಗಿರುವರು. ‘ಪ್ಲವಗ ಪನ್ನಗ ಪಾಹಿ ಭೂಷಣ ಯುವತಿಯರು ಸಮ ತಮ್ಮೊಳಗೆ ಜಾಂಬುವಂತಿಗಿಂತಲಿ ಕಡಿಮೆ ಇವರಿಂದಿಂದ್ರಕಾಮರಿಗೆ’ ಹಾಗೂ ‘ಖಗಪ ಫಣಿಪತಿ ಮೃಡರು ಸಮ ವಾಣಿಗೆ ಶತಗುಣಾವರರು ಮೂವರು ಮಿಗಿಲೆನಿಸುವನು ಶೇಷಪದದಿಂದಲಿ ತ್ರಿಯಂಬಕೆಗೆ’ ಹದಿನಾಲ್ಕು ಲೋಕವನ್ನು ಹೊತ್ತವನು ಶೇಷ, ಅವನನ್ನು ಹೊತ್ತವನು ವಾಯುಕೂರ್ಮ, ಅವನನ್ನು ಹೊತ್ತವನು ಮಹಾಕೂರ್ಮ. ಈ ಮಹಾಕೂರ್ಮನನ್ನು ಹೊತ್ತು ತಿರುಗಾಡುವವನು ಗರುಡ.
ಚೇತನಕ್ಕೆ ಅಭಿಮಾನಿಗರುಡನೇ.ತೊವ್ವೆಗೆ ಅಭಿಮಾನಿ ಗರುಡನೇ. ಅಷ್ಟೇ ಅಲ್ಲದೇ ಇವನು ಸುಪರ್ಣ, ವೈನತೇಯ, ನಾಗಾರಿ, ನಾಗಭೂಷಣ, ವಿಷಾಂತಕ, ಜಿತಾರಿ, ಅಜಿತ, ವಿಶ್ವತೋಮುಖ, ಗರುತ್ಮಾನ್, ಖಗಪತಿ, ತಾಕ್ಷ್ರ್ಯಃ ಕಶ್ಯಪನಂದನಃ ದ್ವಾದಶನಾಮಗಳ ಉಚ್ಛಾರಣೆ ವಿಷವನ್ನು ಪರಿಹರಿಸುತ್ತದೆ. ವಿಜಯವನ್ನು ತಂದುಕೊಡುತ್ತದೆ. ಹಾವುಗಳ ಭಯವಿರುವುದಿಲ್ಲ. ಆಪತ್ಕಾಲದಲ್ಲಿ ವ್ಯವಹಾರದಲ್ಲಿ ಕಾರ್ಯಸಿದ್ಧಿ ಬಯಸುವ ಸಮಯದಲ್ಲಿ, ಬಂಧನದ ಭೀತಿಗೆ ಒಳಗಾಗುವ ಭಯದಲ್ಲಿ ಯಾತ್ರೆಯಲ್ಲಿ ಇವನ ನಾಮಗಳ ಸ್ಮರಣೆ ಶೀಘ್ರವಾಗಿ ಫಲ ಒದಗಿಸುತ್ತದೆ.
(ಪ್ರಣವ) ಸಂಸ್ಕೃತಿ ಚಿಂತಕರು
ಮೊಬೈಲ್ : 9739369621
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



