ಡಾ. ಸುರೇಶ್ ನೆಗಳಗುಳಿ ಅವರಿಗೆ ಮಂಜೇಶ್ವರ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ

Upayuktha
0


ಕಾಸರಗೋಡು: ಕಾಸರಗೋಡಿನ ಕನ್ನಡ ಭವನದ ರಜತ ಸಂಭ್ರಮದ ಅಂಗವಾಗಿ ಆಯೋಜಿಸಲಾದ ನಾಡು–ನುಡಿ ಹಬ್ಬ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜ.18ರಂದು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದ ಬಯಲು ರಂಗಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ವೈದ್ಯ ಹಾಗೂ ಸಾಹಿತಿಗಳಾದ ಡಾ. ಸುರೇಶ್ ನೆಗಳಗುಳಿ ಅವರಿಗೆ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.


ಬೆಳಿಗ್ಗೆ 7.30ರಿಂದ ಕಾಸರಗೋಡಿನ ವಿಶ್ವಕರ್ಮ ಭಜನಾ ಸಂಘದ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು. ನಂತರ ಧಾರ್ಮಿಕ ಮುಖಂಡ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಅವರ ಸಾಹಿತ್ಯ ಪ್ರೀತಿ ಹಾಗೂ ಸ್ವಂತ ವೆಚ್ಚದಲ್ಲಿ ನಡೆಸುತ್ತಿರುವ ಕನ್ನಡ ಕಾರ್ಯಕ್ರಮಗಳು ಮತ್ತು ವಾಚನಾಲಯಗಳ ಸೇವೆಯನ್ನು ಶ್ಲಾಘಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಕೆ. ವಾಮನ್ ರಾವ್ ಬೇಕಲ್ ವಹಿಸಿದ್ದರು. ಸಾಹಿತಿ ಆಯಿಷಾ ಪೆರ್ಲ ದಿಕ್ಸೂಚಿ ಭಾಷಣ ಮಾಡಿ, ಕಯ್ಯಾರ, ಮಂಜೇಶ್ವರ, ಪಾರ್ತಿಸುಬ್ಬ ಸೇರಿದಂತೆ ಅನೇಕ ಹಿರಿಯ ಸಾಹಿತಿಗಳ ಕೊಡುಗೆಗಳನ್ನು ಸ್ಮರಿಸಿದರು.


ಹಿರಿಯ ಪತ್ರಕರ್ತ ಪ್ರದೀಪ್ ಬೇಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈಸೂರು ರಾಜವಂಶಸ್ಥ ಡಾ. ಎಂ.ಜಿ.ಆರ್. ಅರಸ್ ಅವರು ಕನ್ನಡ ಭುವನೇಶ್ವರಿಯ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ, ಕಾಸರಗೋಡಿನ ಜನರಲ್ಲಿ ಇರುವ ಕನ್ನಡ ಭಾಷಾಭಿಮಾನವನ್ನು ಕೊಂಡಾಡಿದರು.


ಡಾ. ರತ್ನಾ ಹಾಲಪ್ಪ ಗೌಡ ಅವರು ಅಮೇರಿಕಾದಲ್ಲಿ ನಡೆಸಿದ ಕನ್ನಡ ಕವಿಗೋಷ್ಠಿಯ ಅನುಭವವನ್ನು ಹಂಚಿಕೊಂಡರು. ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಜಯ ಚಾಮರಾಜ ಒಡೆಯರ್ ಪ್ರತಿರೂಪಕ್ಕೆ, ಹಾಗೂ ಮಂಗಳೂರಿನ ವೈದ್ಯ ಡಾ. ಸುರೇಶ್ ನೆಗಳಗುಳಿ ಕೃಷ್ಣದೇವರಾಯ ಪ್ರತಿರೂಪಕ್ಕೆ ಹಾರಾರ್ಪಣೆ ಮಾಡಿದರು. ಕಾಸರಗೋಡಿನಲ್ಲಿ ಕನ್ನಡ ಉಳಿವಿಗಾಗಿ ನಿರಂತರ ಹೋರಾಟ ಅಗತ್ಯವೆಂದು ಜಯಪ್ರಕಾಶ್ ಹೇಳಿದರು.


ಡಾ. ಸುರೇಶ್ ನೆಗಳಗುಳಿ ಅವರು ಗಡಿನಾಡಿನ ಕನ್ನಡ ಸಂಕಟ ಹಾಗೂ ಹೋರಾಟದ ಚಿತ್ರಣ ಒಳಗೊಂಡ ಮುಕ್ತಕವನ್ನು ವಾಚಿಸಿದರು. ಕಾಸರಗೋಡು ಕನ್ನಡದ ವಿಚಾರದಲ್ಲಿ ‘ವಾಮನ’ ನಾಮಧೇಯದ ವಾಮನ್ ರಾವ್ ಬೇಕಲ್ ಅವರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.


ಸಭೆಯಲ್ಲಿ ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ, ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಅರಿಬೈಲು ಗೋಪಾಲ ಶೆಟ್ಟಿ, ಪಮ್ಮಿ ಕೊಡಿಯಾಲಬೈಲ್, ಸಾಹಿತಿಗಳಾದ ಜಯಾನಂದ ಪೆರಾಜೆ, ವಿರಾಜ್ ಅಡೂರು, ರವಿ ನಾಯ್ಕಾಪು, ಶ್ರೀಧರ ಶೆಟ್ಟಿ ಮುಟ್ಟಂ, ಸಂಧ್ಯಾರಾಣಿ ಟೀಚರ್, ವಿಶಾಲಾಕ್ಷ ಪುತ್ರಕಳ, ಉಮೇಶ್ ರಾವ್ ಕುಂಬ್ಳೆ ಸೇರಿದಂತೆ ಹಲವರು ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ಕನ್ನಡದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಗುರುರಾಜ್ ಕಾಸರಗೋಡು ಸಾರಥ್ಯದ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆಯ ಸದಸ್ಯರಿಂದ ನೃತ್ಯ ವೈಭವ, ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಸದಸ್ಯರಿಂದ ಯಕ್ಷಗುರು ಬಾಯಾರು ಸೂರ್ಯನಾರಾಯಣ ಪದಕಣ್ಣಾಯರ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ವಿಶಾಲಾಕ್ಷ ಪುತ್ರಕಳ ಹಾಗೂ ರೇಖಾ ಸುದೇಶ್ ರಾವ್ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top