ಇಇನ್ನೇನು ಕೆಲವೇ ನಿಮಿಷಗಳಲ್ಲಿ ತರಗತಿಗೆ ಹೋಗಲು ತಯಾರಾಗಿದ್ದ ಮಕ್ಕಳ ಬಳಿಗೆ ತರಗತಿಯ ಗುರುಗಳು ಬಂದು, “ಮಕ್ಕಳೇ, ನಿಮಗೆಲ್ಲ ಸರಕಾರದ ವತಿಯಿಂದ ಹೊಸ ಬ್ಯಾಗ್‌ಗಳನ್ನು ವಿತರಿಸಲಾಗಿದೆ. ಮೊದಲು ಅವುಗಳನ್ನು ಪಡೆದುಕೊಂಡು ನಂತರ ತರಗತಿಗೆ ಬನ್ನಿ” ಎಂದು ಹೇಳುತ್ತಾರೆ.
ಆ ಮಾತು ಮುಗಿಯುವ ಮುನ್ನವೇ ಮಕ್ಕಳೆಲ್ಲರೂ ಸಂತೋಷದಿಂದ ಓಡಿಹೋಗಿ, ಯಾವುದೇ ರೀತಿಯ ಶಿಸ್ತನ್ನು ಪಾಲಿಸದೆ ನಾ ಮುಂದು ನೀ ಮುಂದು ಎಂದು ಅವಸರಪಡುತ್ತಾ ತಮ್ಮ ತಮ್ಮ ಬ್ಯಾಗ್‌ಗಳನ್ನು ಪಡೆದುಕೊಳ್ಳುತ್ತಾರೆ. ಬಳಿಕ ಖುಷಿಯಿಂದ ತರಗತಿಗೆ ಬರುತ್ತಾರೆ.
ಇದನ್ನೆಲ್ಲ ದೂರದಿಂದಲೇ ಗಮನಿಸುತ್ತಿದ್ದ ಗುರುಗಳಿಗೆ ಮಕ್ಕಳ ಅಶಿಸ್ತಿನ ವರ್ತನೆ ಬೇಸರವನ್ನುಂಟುಮಾಡುತ್ತದೆ. “ಕೇವಲ ಪಠ್ಯಪುಸ್ತಕಗಳ ಪಾಠಗಳನ್ನು ಕಲಿಸಿದರೆ ಏನು ಪ್ರಯೋಜನ? ಅವು ಪರೀಕ್ಷೆಗೆ ಮಾತ್ರ ಸೀಮಿತವಾಗುತ್ತವೆ. ಆದರೆ ಜೀವನದಲ್ಲಿ ಯಶಸ್ವಿಯಾಗಲು ಮಕ್ಕಳಿಗೆ ಶಿಸ್ತು ಮತ್ತು ತಾಳ್ಮೆಯ ಪಾಠಗಳು ಅತ್ಯಂತ ಅಗತ್ಯ” ಎಂದು ಗುರುಗಳು ಮನಸಲ್ಲಿಯೇ ಚಿಂತಿಸುತ್ತಾ ಆ ದಿನದ ಪಾಠವನ್ನು ಮುಗಿಸಿ ಮನೆಗೆ ಹಿಂದಿರುಗುತ್ತಾರೆ.
ಮರುದಿನ ಶಾಲೆಗೆ ಬಂದ ಗುರುಗಳು ವಿದ್ಯಾರ್ಥಿಗಳಿಗೆ ಬದುಕಿನ ನಿಜವಾದ ಮೌಲ್ಯಗಳು, ಶಿಸ್ತು ಮತ್ತು ತಾಳ್ಮೆಯ ಮಹತ್ವವನ್ನು ವಿವರಿಸುತ್ತಾರೆ. ಮಕ್ಕಳಿಗೆ ಆ ಉಪದೇಶ ಸ್ವಲ್ಪ ಕಿರಿಕಿರಿಯಾದರೂ, ಗುರುಗಳ ಮೇಲಿನ ಗೌರವ ಮತ್ತು ಭಯದಿಂದ ಎಲ್ಲರೂ ಮೌನವಾಗಿ ಕೇಳಿಸಿಕೊಂಡು ಆ ದಿನವನ್ನು ಕಳೆಯುತ್ತಾರೆ.
ಆದರೆ ಆ ವಿದ್ಯಾರ್ಥಿಗಳಲ್ಲಿ ಒಬ್ಬನಿಗೆ ಮಾತ್ರ ಗುರುಗಳ ಮಾತುಗಳು ಮನಸ್ಸಿನಲ್ಲಿ ಆಳವಾಗಿ ನೆಲೆಸುತ್ತವೆ. “ಈ ಮಾತುಗಳು ಜೀವನದಲ್ಲಿ ಯಾವ ಸಂದರ್ಭದಲ್ಲಿ ಉಪಯೋಗವಾಗಬಹುದು?” ಎಂದು ಅವನು ಯೋಚಿಸುತ್ತಿರುತ್ತಾನೆ.
ಕಾಲಕ್ರಮೇಣ ಆ ವಿದ್ಯಾರ್ಥಿ ತನ್ನ ಪದವಿಯನ್ನು ಪೂರ್ಣಗೊಳಿಸಿ ಉದ್ಯೋಗ ಸಂದರ್ಶನಕ್ಕಾಗಿ ಬೆಂಗಳೂರಿಗೆ ತೆರಳುತ್ತಾನೆ. ಅಲ್ಲಿ ಸಂದರ್ಶನಕ್ಕೆ ಬಂದಿರುವ ಅನೇಕ ಯುವಕರ ಪಟ್ಟಿಯನ್ನು ನೋಡಿ ಅವನ ಮನಸ್ಸಿನಲ್ಲಿ ಆತಂಕ ಮೂಡುತ್ತದೆ. “ನನಗೆ ಈ ಉದ್ಯೋಗ ಸಿಗುತ್ತದೆಯೇ? ಸಂದರ್ಶಕರು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು? ನಾನು ಸರಿಯಾಗಿ ಉತ್ತರಿಸಬಲ್ಲೆನಾ?” ಎಂದು ಚಿಂತಿಸುತ್ತಿರುವಾಗ, ಅಲ್ಲಿದ್ದ ಸೆಕ್ಯೂರಿಟಿ ಆಫೀಸರ್ ಬಂದು, “ಮ್ಯಾನೇಜರ್ ನಿಮ್ಮನ್ನು ಕರೆಯುತ್ತಾರೆ. ಒಬ್ಬೊಬ್ಬರಾಗಿ ಒಳಗೆ ಹೋಗಿ ಸಂದರ್ಶನ ಮುಗಿಸಿಕೊಂಡು ಹೋಗಬಹುದು” ಎಂದು ಹೇಳಿ ಮುಂದೆ ಹೋಗುತ್ತಾನೆ.
ಆದರೆ ಗಂಟೆಗಳ ಕಾಲ ಕಾದರೂ ಮ್ಯಾನೇಜರ್ ಯಾರನ್ನೂ ತನ್ನ ಕ್ಯಾಬಿನ್ ಒಳಗೆ ಕರೆಯುವುದಿಲ್ಲ. ಸೆಕ್ಯೂರಿಟಿ ಆಫೀಸರ್ ಕೂಡ ಅಲ್ಲೆಲ್ಲೋ ಕಾಣೆಯಾಗಿರುತ್ತಾನೆ. ಇದರಿಂದ ಕೋಪಗೊಂಡ ಹಲವಾರು ಯುವಕರು ನಿರಾಶೆಯಿಂದ ಮನೆಗೆ ಹಿಂತಿರುಗುತ್ತಾರೆ.
ಆದರೆ ಈತ ಮಾತ್ರ ಅಲ್ಲೇ ತಾಳ್ಮೆಯಿಂದ ಕುಳಿತಿರುತ್ತಾನೆ. “ನಾನು ಸಂದರ್ಶನಕ್ಕಾಗಿಯೇ ಬಂದಿದ್ದೇನೆ. ಸಂದರ್ಶನ ಮುಗಿಸದೆ ಮನೆಗೆ ಹೋಗುವುದಿಲ್ಲ,” ಎಂಬ ದೃಢನಿಶ್ಚಯದಿಂದ ಕಾಯುತ್ತಾನೆ.
ಸ್ವಲ್ಪ ಸಮಯದ ಬಳಿಕ ಮ್ಯಾನೇಜರ್ ತನ್ನ ಕ್ಯಾಬಿನ್ ಬಾಗಿಲು ತೆರೆದು ಹೊರಗೆ ಬರುತ್ತಾನೆ. ಇನ್ನೂ ಕಾದಿರುವ ಈತನನ್ನು ನೋಡಿ ಸಂತೋಷಪಟ್ಟು, “ನೀನು ಈ ಉದ್ಯೋಗಕ್ಕೆ ಆಯ್ಕೆಯಾದೆ” ಎಂದು ಹೇಳುತ್ತಾನೆ.
ಮುಂದುವರಿದು, “ನನಗೆ ಎಲ್ಲ ಅಭ್ಯರ್ಥಿಗಳ ತಾಳ್ಮೆಯನ್ನು ಪರೀಕ್ಷಿಸಬೇಕಿತ್ತು. ಅದಕ್ಕಾಗಿ ಯಾರನ್ನೂ ಸಂದರ್ಶನಕ್ಕೆ ಕರೆಯಲಿಲ್ಲ. ಆದರೆ ನೀನು ಮಾತ್ರ ತಾಳ್ಮೆಯಿಂದ ಕಾಯುತ್ತಿದ್ದೆ. ಈ ಉದ್ಯೋಗಕ್ಕೆ ಮೊದಲು ಬೇಕಾಗಿರುವ ಗುಣವೇ ತಾಳ್ಮೆ. ನಾಳೆಯಿಂದಲೇ ನೀನು ಕೆಲಸಕ್ಕೆ ಬರಬಹುದು” ಎಂದು ಹೇಳುತ್ತಾನೆ.
ಈ ಮಾತುಗಳನ್ನು ಕೇಳಿದ ಕ್ಷಣ ಆತನ ಕಣ್ಣಂಚಿನಲ್ಲಿ ಸಂತಸದ ಕಣ್ಣೀರು ಮಿನುಗುತ್ತದೆ. ಮನಸಲ್ಲಿಯೇ ತನ್ನ ಗುರುಗಳಿಗೆ ಕೃತಜ್ಞತೆ ಸಲ್ಲಿಸಿ, ಅಪಾರ ಸಂತೋಷದಿಂದ ಮನೆಗೆ ಹಿಂದಿರುಗುತ್ತಾನೆ.
ಸಂದೇಶ:
ಶಿಸ್ತು ಮತ್ತು ತಾಳ್ಮೆ ಪಠ್ಯಪುಸ್ತಕಗಳಲ್ಲಷ್ಟೇ ಅಲ್ಲ, ಜೀವನದ ಪ್ರತಿಯೊಂದು ಹಂತದಲ್ಲೂ ಯಶಸ್ಸಿನ ಪ್ರಮುಖ ಅಡಿಪಾಯ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



