ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಕರೆ
ಬೆಂಗಳೂರು: ಚಾಮರಾಜಪೇಟೆ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಹಲವು ಅಹಿತಕರ ಘಟನೆಗಳನ್ನು ಖಂಡಿಸಿ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ಜನವರಿ 25ರಂದು ಫ್ರೀಡಮ್ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿರುವುದಾಗಿ ತಿಳಿಸಿದೆ. ಈ ಸಂಬಂಧ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾ ಪರಿಷತ್ತು ನಡೆಸಲಾಯಿತು.
ಪತ್ರಿಕಾ ಪರಿಷತ್ತಿನಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು, ಚಾಮರಾಜಪೇಟೆಯಲ್ಲಿ ಹಿಂದೂ ಭಕ್ತರು, ಮಹಿಳೆಯರು ಹಾಗೂ ವ್ರತಧಾರಿಗಳ ಮೇಲೆ ನಡೆದಿರುವ ದಾಳಿಗಳು ಗಂಭೀರ ಕಳವಳಕ್ಕೆ ಕಾರಣವಾಗಿವೆ ಎಂದು ಹೇಳಿದರು. ಇತ್ತೀಚೆಗೆ ಓಂ ಶಕ್ತಿ ಮಾಲಧಾರಿಣಿ ಮಹಿಳಾ ಭಕ್ತರು ಶಾಂತಿಪೂರ್ಣವಾಗಿ ಭಜನಾ ಮೆರವಣಿಗೆ ನಡೆಸುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅವರು ವಿವರಿಸಿದರು. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಕೇವಲ ‘ಅಪ್ರಾಪ್ತರಿಂದ ನಡೆದ ತಪ್ಪು’ ಎಂದು ಹೇಳಿರುವುದು ಆತಂಕಕಾರಿ ಎಂದು ಅವರು ಆರೋಪಿಸಿದರು.
ಇದಕ್ಕೂ ಮುನ್ನ ಚಾಮರಾಜಪೇಟೆಯ ನರಸಿಂಹ ದೇವಸ್ಥಾನದ ಉತ್ಸವ ಮೂರ್ತಿಯ ಮೇಲೆ ಅಶುದ್ಧ ನೀರು ಎರಚಿದ ಘಟನೆ, ಆಕಳ ಕೆಚ್ಚಲು ಕತ್ತರಿಸಿದ ಅಮಾನವೀಯ ಕೃತ್ಯ, ಅಯ್ಯಪ್ಪ ಮಾಲಧಾರಿಗಳ ಮೇಲೆ ದಾಳಿ ಹಾಗೂ ವ್ರತಾಚರಣೆಗೆ ಹಾಕಿದ್ದ ಟೆಂಟ್‌ಗೆ ಬೆಂಕಿ ಹಚ್ಚಿದ ಘಟನೆಗಳು ನಡೆದಿರುವುದಾಗಿ ಸಂಘಟನೆಯ ಪ್ರತಿನಿಧಿಗಳು ತಿಳಿಸಿದ್ದಾರೆ. ಈ ಘಟನೆಗಳು ಭಕ್ತರಲ್ಲಿ ಭಯದ ವಾತಾವರಣವನ್ನು ಉಂಟುಮಾಡಿವೆ ಎಂದು ಅವರು ಹೇಳಿದರು.
ಚಾಮರಾಜಪೇಟೆಯ ಆಟದ ಮೈದಾನ ಕಬಳಿಕೆ ಕುರಿತು ಕೂಡ ಆತಂಕ ವ್ಯಕ್ತಪಡಿಸಲಾಯಿತು. ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಅರುಣಾಚಲೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾನೂನುಬಾಹಿರ ಮಾಂಸದ ಅಂಗಡಿಗಳಿರುವ ಬಗ್ಗೆ ಹಾಗೂ ಪಶುಸಂಗೋಪನೆ ಇಲಾಖೆಗೆ ಸೇರಿದ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಜಾಗವನ್ನು ಅಲ್ಪಸಂಖ್ಯಾತ ಇಲಾಖೆಗೆ ಹಸ್ತಾಂತರಿಸುವ ಪ್ರಯತ್ನಗಳು ನಡೆದಿದ್ದವೆಂದು ಪ್ರಮೋದ್ ಮುತಾಲಿಕ್ ಆರೋಪಿಸಿದರು. ಈ ವಿಷಯದಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು ಮಧ್ಯಪ್ರವೇಶ ಮಾಡದೇ ಇದ್ದರೆ ಭೂಮಿ ವರ್ಗಾವಣೆ ಪೂರ್ಣಗೊಳ್ಳುತ್ತಿತ್ತು ಎಂದು ಅವರು ಹೇಳಿದರು.
ಈ ಎಲ್ಲಾ ಬೆಳವಣಿಗೆಗಳ ವಿರುದ್ಧ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ಜನವರಿ 25ರಂದು ಪ್ರತಿಭಟನೆ ನಡೆಸಲಿದೆ.
ಪ್ರತಿಭಟನೆಯ ವಿವರಗಳು:
ದಿನಾಂಕ: ಜನವರಿ 25
ಸಮಯ: ಬೆಳಿಗ್ಗೆ 11.00
ಸ್ಥಳ: ಫ್ರೀಡಮ್ ಪಾರ್ಕ್, ಬೆಂಗಳೂರು
ಸರ್ಕಾರವು ಕೂಡಲೇ ಪರಿಸ್ಥಿತಿಗೆ ಸ್ಪಂದಿಸಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯು ಆಗ್ರಹಿಸಿದೆ. ಹಾಗೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಜನಾಂದೋಲನ ನಡೆಸಲಾಗುವುದು ಎಂದು ಸಮಿತಿ ಎಚ್ಚರಿಸಿದೆ.
ಪತ್ರಿಕಾ ಪರಿಷತ್ತಿನಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ, ಅಯ್ಯಪ್ಪ ದೇವಸ್ಥಾನದ ಬಿ.ಎನ್. ಮಹೇಶ ಕುಮಾರ್, ಓಂ ಶಕ್ತಿ ಸಂಘಟನೆಯ ಕಾರ್ಯದರ್ಶಿ ರಕ್ಷಿತಾ, ಶ್ರೀರಾಮ ಸೇನೆ ಕರ್ನಾಟಕದ ಅಧ್ಯಕ್ಷ ಸುಂದ್ರೇಶ್ ನರ್ಗಲ್ ಹಾಗೂ ಬೆಂಗಳೂರು ನಗರ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


