ಉಡುಪಿ: ಕರ್ನಾಟಕ ಕರಾವಳಿಯ ಜನರ ಜೀವನಾಡಿಯಾದ ತೆಂಗು ಬೆಳೆಯು ಬೇರಿನಿಂದ ಹಿಡಿದು ನಾರಿನವರೆಗೆ ಸರ್ವ ರೀತಿಯಲ್ಲೂ ಉಪಯೋಗಿಯಾಗಿ ಕಲಿಯುಗದ ಕಲ್ಪವೃಕ್ಷವೆನಿಸಿಕೊಂಡಿದೆ. ತೆಂಗುಬೆಳೆಗಾರರ ಸರ್ವತೋಮುಖ ಏಳಿಗೆಗಾಗಿ ಹಮ್ಮಿಕೊಂಡ ವಿಶಿಷ್ಟ ಮಾಹಿತಿ ಕಾರ್ಯಕ್ರಮದಿಂದಾಗಿ ಕಲ್ಪವೃಕ್ಷವಾದ ತೆಂಗು ಬೆಳೆಗೆ ಹೊಸ ಕಾಯಕಲ್ಪ ದೊರೆತು ಉಡುಪಿ ಜಿಲ್ಲೆಯು ತಮಿಳುನಾಡು ಮತ್ತು ಕೇರಳವನ್ನು ಹಿಂದಿಕ್ಕಿ ದೇಶಕ್ಕೇ ಮಾದರಿಯಾಗಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಸೋಮವಾರ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ, ತೆಂಗು ಅಭಿವೃದ್ದಿ ಮಂಡಳಿ ಕೊಚ್ಚಿ, ತೋಟಗಾರಿಕೆ ಇಲಾಖೆ ಉಡುಪಿ, ಕೃಷಿ ಇಲಾಖೆ, ಭಾರತೀಯ ಕಿಸಾನ್ ಸಂಘ, ಕರ್ನಾಟಕ ಪ್ರದೇಶ(ರಿ) ಉಡುಪಿ ಜಿಲ್ಲೆ, ಉಡುಪಿ ಕಲ್ಪರಸ ಕೊಕೊನಟ್ & ಆಲ್ ಸ್ಪೈಸಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ತೆಂಗು ಅಭಿವೃದ್ದಿ ಮಂಡಳಿಯ ಸ್ಥಾಪನಾ ದಿನಾಚರಣೆ ಹಾಗೂ ತೆಂಗು ಬೆಳೆ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಛತ್ತೀಸ್‍ಗಢದಲ್ಲಿ ನಡೆಯಬೇಕಾಗಿದ್ದ ಕಾರ್ಯಕ್ರಮವನ್ನು ವಿಶೇಷ ಮುತುವರ್ಜಿ ವಹಿಸಿ ರಾಜ್ಯದಲ್ಲಿ ನಡೆಸುವಂತೆ ಮಂಡಳಿಯ ಮನವೊಲಿಸಿ ಪ್ರಪ್ರಥಮ ಬಾರಿಗೆ ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ತೆಂಗು ಬೆಳೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಅಂದಾಜು 6.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಕೃಷಿ ನಡೆಯುತ್ತಿದೆ. ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಅಗಾಧ ಪ್ರಮಾಣದಲ್ಲಿ ತೆಂಗು ಬೆಳೆ ಬೆಳೆಯುತ್ತವೆ. ಇಷ್ಟು ಅಗಾಧ ಪ್ರಮಾಣದಲ್ಲಿ ಬೆಳೆಯಲಾಗುವ ತೆಂಗು ಕೃಷಿಗೆ ಹಲವಾರು ಸಮಸ್ಯೆ ಮತ್ತು ಸವಾಲುಗಳೂ ಇವೆ. ತೆಂಗು ಕೃಷಿಕರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಹಾಗೂ ಸಮಗ್ರ ತೆಂಗು ಉತ್ಪನ್ನಗಳಿಗೆ ಬೃಹತ್ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ತಜ್ಞರ ಮೂಲಕ ಸಂವಾದ, ಚರ್ಚೆ ನಡೆಸಿ ತೆಂಗು ಬೆಳೆ ಹಾಗೂ ತೆಂಗಿನ ಉತ್ಪನ್ನಗಳನ್ನು ದೇಶಾದ್ಯಂತ ಪ್ರಚುರಪಡಿಸುವ ಬಗ್ಗೆ ಮಾಹಿತಿ ನೀಡಿ ತೆಂಗು ಬೆಳೆಗಾರರಿಗೆ ಬದುಕು ಕಟ್ಟಿಕೊಡುವ ಪ್ರಯತ್ನ ಮಾಡಲಾಗುತ್ತಿದೆ. ತೆಂಗು ಬೆಳೆಗಾರರು ಕಾರ್ಯಕ್ರಮದಲ್ಲಿ ದೊರೆಯುವ ಮಾಹಿತಿಯನ್ನು ಸದುಪಯೋಗ ಪಡೆಸಿಕೊಂಡು ಅಭಿವೃದ್ದಿ ಹೊಂದಬೇಕು ಎಂದರು.
ಇಂದಿನ ದಿನಗಳಲ್ಲಿ ಎಲ್ಲ ಆಹಾರ ವಸ್ತುಗಳಲ್ಲೂ ಕಲಬೆರಕೆ ಸಾಮಾನ್ಯವಾಗಿದ್ದು ತೆಂಗಿನ ಎಣ್ಣೆಯೂ ಇದಕ್ಕೆ ಹೊರತಾಗಿಲ್ಲ. ಜಿಲ್ಲೆಯ ರೈತ ಸಂಸ್ಥೆಗಳು ಗಾಣದ ಮೂಲಕ ತೆಗೆಯಲಾದ ಪರಿಶುದ್ದ ಎಣ್ಣೆಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆಮಾಡಿದ್ದು, ಜನರು ಇಂತಹ ಉತ್ಪನ್ನಗಳನ್ನು ಖರೀದಿಸುವ ಮೂಲಕ ಬೆಳೆಗಾರರಿಗೆ ಬೆಂಬಲ ನೀಡಬೇಕು. ತೆಂಗಿನಕಾಯಿ, ಎಳನೀರು, ತೆಂಗಿನಿಂದ ಮಾಡಲಾಗುವ ಗೊಬ್ಬರ, ಎಣ್ಣೆ, ಸಕ್ಕರೆ, ಹುರಿಹಗ್ಗ ಮುಂತಾದ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆತಾಗ ಕೃಷಿಕರ ಬಾಳು ಹಸನಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತೆಂಗಿನ ಗೆರಟೆಗಳಿಗೂ ಬೇಡಿಕೆ ಇದ್ದು ಜನರ ಮನೆಗೇ ಬಂದು ತೆಂಗಿನ ಗೆರಟೆಗಳನ್ನು ಕೊಂಡುಹೋಗುವಂತಾಗಿದೆ. ತೆಂಗು ಬೆಳೆಯ ಉತ್ಪನ್ನಗಳಿಗಿರುವ ಪ್ರಾಮುಖ್ಯತೆಯನ್ನು ಇದು ಸೂಚಿಸುತ್ತದೆ. ತೆಂಗಿನಿಂದ ತೆಗೆಯಲಾಗುವ ನೀರಾ ರಸಕ್ಕೂ ಹೆಚ್ಚಿನ ಬೇಡಿಕೆ ಇದೆ. ನೀರಾ ಉತ್ಪಾದನೆಗೆ ಬೆಂಬಲ ನೀಡಲು ತೆಂಗು ಬೆಳೆಯುವ ಕೃಷಿಕರನ್ನು ಗುರುತಿಸಿ ರಾಜ್ಯ ಸರ್ಕಾರದ ಮಟ್ಟದಲ್ಲಿ ಅವರಿಗೆ ಅನುದಾನ ಒದಗಿಸುವ ಕಾರ್ಯವಾಗಬೇಕು ಎಂದರು.
ತೆಂಗು ಬೆಳೆಗೆ ಕೀಟಗಳ ಬಾಧೆ ಹೆಚ್ಚು. ಕೀಟ ಬಾಧೆಯಿಂದಾಗಿ ಹಲವಾರು ರೈತರು ತೆಂಗು ಕೃಷಿಯಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಜ್ಞರ ತಂಡವನ್ನು ಅಧ್ಯಯನಕ್ಕಾಗಿ ನೇಮಿಸಲಾಗಿದ್ದು, ತಂಡದ ವರದಿಯ ಪ್ರಕಾರ 791 ಕೋಟಿ ರೂ.ಗಳ ಅನುದಾನದ ಅವಶ್ಯಕತೆ ಇದೆ. ಈ ಅನುದಾನಕ್ಕಾಗಿ ಈಗಾಗಲೇ ಕೇಂದ್ರ ಕೃಷಿ ಮಂತ್ರಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯಸರ್ಕಾರವೂ ತೆಂಗು ಬೆಳೆಗಾರರ ಸಮಸ್ಯೆಗಳ ಬಗ್ಗೆ ಗಮನಹರಿಸಿದಲ್ಲಿ ಕೃಷಿಕರ ಬವಣೆ ದೂರಾವಾಗುವುದು. ಇತರ ಎಲ್ಲ ಬೆಳೆ ಬೆಳೆಯುವ ರೈತರಿಗಿಂತ ತೆಂಗು ಬೆಳೆ ಬೆಳೆಯುವ ರೈತ ಎನ್ನುವ ಹೆಮ್ಮೆಗೆ ತೆಂಗು ಕೃಷಿಕರು ಪಾತ್ರರಾಗಬೇಕು. ತೆಂಗು ಬೆಳಗಾರರಿಗೆ ಶಕ್ತಿ ನೀಡುವ ಇಂತಹ ಕಾರ್ಯಕ್ರಮಗಳು ಪ್ರತಿವರ್ಷವೂ ನಡೆಯಬೇಕು ಎಂದು ಅವರು ಹೇಳಿದರು.
ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಕರಾವಳಿಗರ ಬದುಕು-ಸಾವಿನ ಮಧ್ಯೆ ಕಲ್ಪವೃಕ್ಷವು ಪ್ರಮುಖ ಪಾತ್ರ ವಹಿಸುತ್ತದೆ. ರಾಜ್ಯದಲ್ಲಿ ಸಾವಿರಾರು ರೈತರು ತೆಂಗು ಕೃಷಿಯಲ್ಲಿ ನಿರತರಾಗಿದ್ದಾರೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರೈತರಿಗೆ ಶೇ.60-40 ಅನುಪಾತದಲ್ಲಿ ಅನುದಾನ ನೀಡುತ್ತಿದೆ. ಉಡುಪಿ ಭಾಗದ ರೈತರಿಗೆ ಹೆಚ್ಚಿನ ಅನುದಾನ ದೊರಕಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೃಷಿಕರು ಇತರ ಬೆಳೆಗಳಿಗೆ ಪರ್ಯಾಯವಾಗಿ ತೆಂಗು ಬೆಳೆಯುವ ಬಗ್ಗೆ ಆಸಕ್ತಿ ಹೊಂದಿ ಕೌಶಲ್ಯಾಧಾರಿತವಾಗಿ ತೆಂಗಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಲ್ಲಿ ನಿರುದ್ಯೋಗ ಸಮಸ್ಯೆಗೂ ಮುಕ್ತಿ ಸಿಗಲಿದೆ. ರಾಜ್ಯ ಸರ್ಕಾರವು ಎಲ್ಲ ರೀತಿಯಲ್ಲಿ ತೆಂಗು ಬೆಳೆಗಾರರಿಗೆ ಬೆಂಬಲ ನೀಡಲಿದೆ ಎಂದರು.
ಈ ಸಂದರ್ಭದಲ್ಲಿ ತೆಂಗು ಕೃಷಿಯಲ್ಲಿ ಸಾಧನೆ ಮಾಡಿದ ಐವರು ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಪೂಜಾರಿ, ಕೋಟೇಶ್ವರ ಗ್ರಾ.ಪಂ ಅಧ್ಯಕ್ಷೆ ರಾಗಿಣಿ ದೇವಾಡಿಗ, ತೆಂಗು ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಶುಭ ನಾಗರಾಜನ್, ಕಾಸರಗೋಡು ಸಿ.ಪಿ.ಸಿ.ಆರ್.ಐ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್, ತೆಂಗು ಅಭಿವೃದ್ದಿ ಮಂಡಳಿಯ ವಲಯ ನಿರ್ದೇಶಕಿ ರಶ್ಮಿ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ನವೀನ್ ಚಂದ್ರ ಜೈನ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ, ಇಲಾಖೆಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ತೆಂಗು ಅಭಿವೃದ್ದಿ ಮಂಡಳಿಯ ಮುಖ್ಯ ತೆಂಗು ಅಭಿವೃದ್ದಿ ಅಧಿಕಾರಿ ಡಾ.ಹನುಮಂತ ಗೌಡ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ತೋಟಗಾರಿಕೆ ಇಲಾಖೆ ನಿರ್ದೇಶಕಿ ಕ್ಷಮಾ ಪಾಟೀಲ್ ಸ್ವಾಗತಿಸಿ, ಚಂದ್ರಶೇಖರ್ ಬೀಜಾಡಿ ನಿರೂಪಿಸಿ, ಉಕಾಸ ಅಧ್ಯಕ್ಷ ಸತ್ಯನಾರಾಯಣ ಉಡುಪ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


