ನಮ್ಮ ಇತಿಹಾಸದ ಪಠ್ಯಗಳು ನಿಜ ವಿಚಾರಗಳನ್ನು ಮುಚ್ಚಿಟ್ಟಿವೆ: ಸೌಜನ್ಯಾ ಕೌಶಿಕ್

Upayuktha
0

 ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಜಾಪ್ರಭುತ್ವ ದಿನಾಚರಣೆ



ಪುತ್ತೂರು: ನಮ್ಮ ಮಕ್ಕಳ ಇತಿಹಾಸ ಪಠ್ಯಗಳು ಭಾರತದ ನಿಜವಾದ ಕಥಾನಕಗಳನ್ನು ಬಚ್ಚಿಟ್ಟು, ಸೋಲಿನ ಕಥೆಗಳನ್ನು ಹೆಣೆದಿವೆ. ನಮ್ಮ ವೀರರು ಸೋತ ಘಟನಾವಳಿಗಳನ್ನು ವೈಭವೀಕರಿಸುತ್ತಾ ಗೆದ್ದ ಕಥನಗಳನ್ನು ಮರೆಮಾಚಲಾಗಿದೆ. ಆದ್ದರಿಂದ ನಮ್ಮ ನಿಜವಾದ ಇತಿಹಾಸವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಇತಿಹಾಸ ತಜ್ಞೆ, ಬೆಂಗಳೂರಿನ ಸೌಜನ್ಯಾ ಕೌಶಿಕ್ ಹೇಳಿದರು. 


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾದ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಸೋಮವಾರ ಮಾತನಾಡಿದರು.


ನಮ್ಮ ರಾಮಾಯಣದಂತಹ ಗ್ರಂಥಗಳು ಭಾರತೀಯ ಆದರ್ಶಗಳನ್ನು ಸಾರಿಹೇಳಿವೆ. ಯುದ್ಧವೊಂದನ್ನು ಗೆದ್ದಾಗ ಸೋತ ಅರಸನ ಮಡದಿ ಹಾಗೂ ಇನ್ನಿತರ ಹೆಣ್ಣುಮಕ್ಕಳನ್ನು ಹೇಗೆ ನಡೆಸಿಕೊಳ್ಳಬೇಕೆಂದು ತಿಳಿಸಿಕೊಟ್ಟಿವೆ. ಹಾಗಾಗಿಯೇ ಹಿಂದೂ ರಾಜರು ಅನ್ಯರನ್ನು ಗೆದ್ದಾಗ ಸೋತವನ ಹೆಣ್ಣುಮಕ್ಕಳು ಮಾನ ರಕ್ಷಣೆಗಾಗಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಸೃಷ್ಟಿಯಾಗಿಲ್ಲ. ಆದರೆ ಮುಸ್ಲಿಂ ಅರಸರು ಗೆದ್ದಾಗ, ಸೋತ ಹಿಂದೂ ರಾಜನ ಹೆಣ್ಣುಮಕ್ಕಳು ಅಗ್ನಿಕುಂಡದಲ್ಲಿ ಆತ್ಮಾಹುತಿ ಮಾಡಿಕೊಂಡು ತಮ್ಮ ಮಾನವನ್ನು ಉಳಿಸಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಇದು ನಮ್ಮ ದೇಶಿಯರಿಗೂ ಇತರರಿಗೂ ಇರುವ ವ್ಯತ್ಯಾಸ. ಆದರೆ ಈ ಸತ್ಯವಿಚಾರಗಳನ್ನು ಪಠ್ಯಪುಸ್ತಕ ತಿಳಿಸಿಕೊಡುತ್ತಿಲ್ಲ ಎಂಉ ನುಡಿದರು.


ಹೆಣ್ಣುಮಕ್ಕಳು ತಂದೆ, ಗಂಡ ಅಥವ ಮಗನ ಜತೆಗಿರಬೇಕೆಂಬ ಕಾಳಜಿಯುಕ್ತ ಮಾತನ್ನು ಮನುಸ್ಮೃತಿಯಲ್ಲಿ ಹೇಳಿರುವುದನ್ನು ಶೋಷಣೆ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಆದರೆ ಅಮೇರಿಕಾದ ನ್ಯೂಯಾರ್ಕ್ ನ್ಯಾಯಾಲಯವೂ ಪ್ರಕರಣವೊಂದರ ತೀರ್ಪೀನಲ್ಲಿ ಇದೇ ಮಾತನ್ನು ಹೇಳಿದೆ. ಆದರೆ ಅಲ್ಲಿ ಹೇಳಿರುವುದು ಮಾತ್ರ ಕಾಳಜಿಭರಿತ ಇಲ್ಲಿ ಹೇಳಿರುವುದು ಶೋಷಣೆ ಎಂದಾಗುವುದು ಹೇಗೆ ಎಂದು ಪ್ರಶ್ನಿಸಿದರು. ಆದ್ದರಿಂದ ವಿಶ್ವವೇ ಒಪ್ಪುವ ವಿಚಾರವನ್ನು ಶೋಷಣೆ ಎಂದು ಹೇಳುವುದರ ಹಿಂದಿನ ಕುತಂತ್ರ ಮನಸ್ಥಿತಿ ಇತಿಹಾಸದಲ್ಲಿ ದಾಖಲಾಗಬೇಕು ಎಂದರು.


ಧ್ವಜಾರೋಹಣಗೈದ ವಿಶ್ರಾಂತ ಯೋಧ ಡಾ.ಕೆ.ಜಿ.ಶೆಣೈ ಮಾತನಾಡಿ ಯುದ್ಧವೊಂದು ಏರ್ಪಟ್ಟಾಗ ಅನೇಕ ಸಾವು ನೋವುಗಳು ಸಂಭವಿಸುತ್ತವೆ. ಪ್ರತಿಯುದ್ಧದಲ್ಲೂ ಕೆಲವಾರು ಜನ ವೀರ ಯೋಧರು ತಮ್ಮ ಜೀವವನ್ನು ತ್ಯಾಗಮಾಡುತ್ತಾರೆ. ಯೋಧರಿಗೆ ನೀಡುವ ವಿವಿಧ ಪದಕಗಳ ಹಿಂದೆ ಬೆವರು, ರಕ್ತಗಳ ಇತಿಹಾಸವಿರುತ್ತದೆ. ಕುಟುಂಬದವರ ನೋವು ಕಣ್ಣೀರಿನ ಕಥೆಗಳಿರುತ್ತವೆ. ಅವೆಲ್ಲವುಗಳ ಬಗೆಗೆ ತಿಳಿದುಕೊಳ್ಳುವುದು ಮುಖ್ಯ ಎಂದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ನಮ್ಮ ಸಂವಿಧಾನಕ್ಕೆ ಹಲವಾರು ತಿದ್ದುಪಡಿ ಮಾಡಲಾಗಿದೆ. ಆದರೆ ಎಪ್ಪತ್ತರ ದಶಕದಲ್ಲಿ ಸಂವಿಧಾನಕ್ಕೆ ಹೊಸದಾಗಿ ಸೇರಿಸಲಾದ ‘ಸೆಕ್ಯುಲರ್’ ಎಂಬ ಶಬ್ದ ಅತೀವ ಹಾನಿಯನ್ನುಂಟುಮಾಡುತ್ತಿದೆ. ಈ ಶಬ್ದ ಅಂಬೇಡ್ಕರ್ ನೇತೃತ್ವದ ಮೂಲ ಸಂವಿಧಾನದಲ್ಲಿ ಇದ್ದಿರಲಿಲ್ಲ. ಹಾಗಾಗಿ ಆ ಶಬ್ದವನ್ನು ಮತ್ತೆ ಹಿಂಪಡೆದುಕೊಳ್ಳಬೇಕಾದ ಅವಶ್ಯಕತೆ ಇದೆ. ಭಾರತ ಹಿಂದೂ ರಾಷ್ಟ್ರವಾಗಿ ಮೂಡಿಬರಬೇಕಾದ ಅವಶ್ಯಕತೆ ಇದೆ ಎಂದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ.ಕೆ.ಜಿ.ಶೆಣೈ ದಂಪತಿಯನ್ನು ಗೌರವಿಸಲಾಯಿತು. ವಿದ್ಯಾಥಿನಿ ನಿಶಾನಿ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಗೀತಾ ಸಹಕರಿಸಿದರು.


ಧ್ವಜಾರೋಹಣ, ಪದಕ ಪ್ರದರ್ಶನ ಉದ್ಘಾಟಣೆ: ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಆವರಣದಲ್ಲಿ ಡಾ.ಕೆ.ಜಿ.ಶೆಣೈ ಧ್ವಜಾರೋಹಣಗೈದರು. ತದನಂತರ ತಾನು ಸಂಗ್ರಹಿಸಿರುವ ವಿವಿಧ ಮಿಲಿಟರಿ ಪದಕಗಳ ಪ್ರದರ್ಶನವನ್ನು ಅವರು ಉದ್ಘಾಟಿಸಿದರು. 



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top