ಸಂಕಲ್ಪಗಳು ಕಾಗದದಲ್ಲೇ ಉಳಿಯದಂತೆ ಮಾಡುವ ಜವಾಬ್ದಾರಿ ನಮ್ಮದೇ
ವಾಸ್ತವವಾಗಿ ಸಂಕಲ್ಪಗಳಿಗೆ ಅಥವಾ ನಿರ್ಣಯಗಳಿಗೆ ಒಂದು ನಿರ್ದಿಷ್ಟ ದಿನವೇ ಬೇಕೆಂಬ ನಿಯಮವೇ ಇಲ್ಲ. ಬದಲಾವಣೆ ಎನ್ನುವುದು ಕ್ಯಾಲೆಂಡರ್‌ನ ದಿನಾಂಕದಿಂದ ಆರಂಭವಾಗುವುದಿಲ್ಲ; ಅದು ವ್ಯಕ್ತಿಯ ಒಳಗಿನ ಆಲೋಚನಾ ಪರಿವರ್ತನೆಯಿಂದ ಹುಟ್ಟುತ್ತದೆ. ಆಂತರಿಕ ಸತ್ಯ, ನೈತಿಕ ಮೌಲ್ಯಗಳು ಮತ್ತು ಬದುಕಿನ ಮೇಲಿನ ಬದ್ಧತೆ ನಮ್ಮೊಳಗೆ ಗಟ್ಟಿಯಾಗಿದ್ದರೆ, ಯಾವ ದಿನವಾದರೂ ಹೊಸ ರೀತಿಯಲ್ಲಿ ಯೋಚಿಸಿ, ಕಾರ್ಯರೂಪಕ್ಕೆ ತರುವ ಸಾಧ್ಯತೆ ಇರುತ್ತದೆ.
ಇಂದಿನ ಸಮಾಜದಲ್ಲಿ ಜಾತಿ, ಶ್ರೀಮಂತಿಕೆ, ಅಧಿಕಾರಗಳು ವ್ಯಕ್ತಿಯ ಮೌಲ್ಯವನ್ನು ಅಳೆಯುವ ಮಾನದಂಡಗಳಾಗುತ್ತಿರುವುದು ಆತಂಕಕಾರಿ ಸಂಗತಿ. ಆದರೆ ಇವೆಲ್ಲಕ್ಕಿಂತ ಮಿಗಿಲಾದದ್ದು ಮಾನವೀಯತೆ. ನಾವು ಹೊರ ಜಗತ್ತಿನೊಂದಿಗೆ ಮಾನವೀಯವಾಗಿ ವರ್ತಿಸುವ ಗುಣವನ್ನು ಬೆಳೆಸಿಕೊಳ್ಳಬೇಕಾಗಿದೆ. ವ್ಯಕ್ತಿ ಹಾಗೂ ಸಮುದಾಯದ ನಡುವೆ ಅನುಮಾನ ಮತ್ತು ಅಪ್ಪನಂಬಿಕೆಗಳನ್ನು ಬಿತ್ತುವ ಬದಲು, ಪರಸ್ಪರ ಗೌರವ ಮತ್ತು ನಂಬಿಕೆಯನ್ನು ಕಟ್ಟಿಕೊಳ್ಳುವುದು ಈ ಕಾಲದ ಅಗತ್ಯವಾಗಿದೆ.
ಸಮಾಜದಲ್ಲಿ ನಿಜವಾದ ಬದಲಾವಣೆ ಬರಬೇಕಾದರೆ ಅದು ಘೋಷಣೆಗಳ ಮಟ್ಟಕ್ಕೆ ಸೀಮಿತವಾಗಬಾರದು. ನಾವು ನಮಗೆ ನಾವೇ ಹಾಕಿಕೊಳ್ಳುವ ಮೌಲ್ಯಗಳು, ನಿಯಮಗಳು ಮತ್ತು ಬದ್ಧತೆಗಳು ನಿತ್ಯ ಬದುಕಿನ ಭಾಗವಾಗಬೇಕು. ನಮ್ಮ ಮಾತು, ನಡೆ, ನಿರ್ಧಾರಗಳಲ್ಲಿ ಅವು ನಿರಂತರವಾಗಿ ಪ್ರತಿಬಿಂಬಿಸಬೇಕು.
ಹೊಸ ವರ್ಷ ಬಂದಾಗಲೆಲ್ಲಾ ಗೋಡೆಯಲ್ಲಿ ಕ್ಯಾಲೆಂಡರ್ ಬದಲಾಗುತ್ತದೆ. ಅದರ ಜೊತೆಗೆ ನಮ್ಮ ಮನಸ್ಸಿನಲ್ಲೂ ಹಲವು ಸಂಕಲ್ಪಗಳು, ನಿರ್ಣಯಗಳು ಹುಟ್ಟಿಕೊಳ್ಳುತ್ತವೆ. “ಈ ವರ್ಷ ಹೀಗಿರಬೇಕು, ಹಾಗಿರಬೇಕು” ಎನ್ನುವ ಆಶಯಗಳು ಆರಂಭದ ಕೆಲವೇ ದಿನಗಳಲ್ಲಿ ಮಂಕಾಗುತ್ತಾ ಹೋಗುವುದು ಸಾಮಾನ್ಯ. ದಿನಗಳು ಸಾಗಿದಂತೆ, ಆ ಸಂಕಲ್ಪಗಳು ನಮ್ಮ ನಡೆ–ನುಡಿಯಲ್ಲಿ ಹೇಳಿಕೊಳ್ಳುವಷ್ಟು ಬದಲಾವಣೆಯನ್ನು ತರುವುದಿಲ್ಲ ಎಂಬುದು ಕಹಿ ಸತ್ಯ.
ಹೊಸತನವೆಂದರೆ ವರ್ಷ ಬದಲಾಗುವುದು ಮಾತ್ರವಲ್ಲ; ದೃಷ್ಟಿ ಬದಲಾಗುವುದೇ ಅದರ ನಿಜವಾದ ಅರ್ಥ. ಪ್ರತಿದಿನವೂ ಮಾನವೀಯತೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಹೊಸ ಕ್ಯಾಲೆಂಡರ್ ವರ್ಷಕ್ಕೂ, ಹೊಸ ಸಂಕಲ್ಪಗಳಿಗೂ ಸಾರ್ಥಕತೆ ಸಿಗುತ್ತದೆ.
ಉದಾಹರಣೆಗೆ, “ಪ್ರತಿ ದಿನ ಎರಡು ಗಂಟೆ ಓದುತ್ತೇನೆ” ಎಂಬ ಸಂಕಲ್ಪದ ಬದಲು “ಪ್ರತಿ ದಿನ ಹತ್ತು ನಿಮಿಷ ಓದುತ್ತೇನೆ” ಎನ್ನುವ ನಿರ್ಧಾರ ಹೆಚ್ಚು ಕಾರ್ಯಗತವಾಗುತ್ತದೆ. ಹಾಗೆಯೇ ಆರೋಗ್ಯ, ಸಮಯ ನಿರ್ವಹಣೆ, ಸಂಬಂಧಗಳು, ಸ್ವವಿಕಾಸ- ಈ ಎಲ್ಲ ಕ್ಷೇತ್ರಗಳಲ್ಲೂ ನಿಧಾನವಾದ ಆದರೆ ಸ್ಥಿರವಾದ ಪ್ರಯತ್ನ ಅಗತ್ಯ.
ಹೊಸ ವರ್ಷ ನಮಗೆ ಕೊಡುವ ನಿಜವಾದ ಸಂದೇಶವೇನೆಂದರೆ—ಹೊಸ ದಿನ, ಹೊಸ ಅವಕಾಶ. ಹಿಂದಿನ ತಪ್ಪುಗಳಿಂದ ಪಾಠ ಕಲಿದು, ಇಂದಿನ ದಿನವನ್ನು ಉತ್ತಮವಾಗಿ ಬದುಕುವ ಸಂಕಲ್ಪವೇ ಅತ್ಯುತ್ತಮ ನಿರ್ಣಯ. ವರ್ಷ ಬದಲಾಗುವುದಕ್ಕಿಂತ ಮೊದಲು ನಾವು ಬದಲಾಗಬೇಕು ಎಂಬ ಅರಿವು ಮೂಡಿದಾಗ ಮಾತ್ರ ಹೊಸ ಕ್ಯಾಲೆಂಡರ ಅರ್ಥ ಸಾರ್ಥಕವಾಗುತ್ತದೆ.
- ಭಾಗ್ಯಶ್ರೀ ಜೀವಂಧರ ಕಾಶಿನ (ಬಳಿಗಾರ)
ಕುಟುಂಬ ಪ್ರಬೋಧನದ ಮಹಾನಗರ ಸಹ ಸಂಯೋಜಕಿ
ಕನ್ನಡ ಉಪನ್ಯಾಸಕಿ
ಚೇತನ ವಾಣಿಜ್ಯ ಪದವಿ ಮಹಾವಿದ್ಯಾಲಯ, ಹುಬ್ಬಳ್ಳಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


