ಲೇಖಕರು: ಡಾ. ಕೆ. ಶಿವರಾಮ ಕಾರಂತ
ಕೃತಿ: ಬೆಟ್ಟದ ಜೀವ
ಪ್ರಕಾಶಕರು: ಎಸ್‌ಬಿಎಸ್ ಪಬ್ಲಿಷರ್ಸ್ ಡಿಸ್ಟ್ರಿಬ್ಯೂಟರ್ಸ್
ಮುದ್ರಣ ವರ್ಷ: 1943
"ಮನುಷ್ಯ ಬೆಳೆದ ಹಾಗೆ ಅವನ ಮನಸ್ಸು ಸಂಕೋಚವಾಗುತ್ತಾ ಬರುತ್ತದೆ, ಕರಟುತ್ತದೆ. ಹಾಗಾಗುವುದು ಸಮನಲ್ಲ. ಅವನ ಮೈಯೇನೊ ಬೆಳೆಯಬಹುದು; ಬೆಳೆಯಲೂ ಬೇಕು. ಮನಸ್ಸು ಜ್ಞಾನಗಳು ಬೆಳೆಯಬೇಕು ಆದರೆ ಶೀಲ, ಸ್ವಭಾವ ಎಳೆತಾಗಿಯೇ ಉಳಿಯಬೇಕು ".
-ಜ್ಞಾನಪೀಠ ಪುರಸ್ಕೃತ ಶಿವರಾಮ ಕಾರಂತ ಅವರು ತಮ್ಮ 'ಬೆಟ್ಟದ ಜೀವ' ಕೃತಿಯಲ್ಲಿ ಹೇಳುವ ಸಾಲುಗಳು ಇವು. ಈ ಸಾಲುಗಳಲ್ಲಿ ಕಾದಂಬರಿಕಾರರು ನೀಡಿದ ಒಳನೋಟ ಬಹಳ ಅಮೂಲ್ಯವಾದುದು, ನಮ್ಮ ಮುಗ್ಧತೆ ಮತ್ತು ಸ್ವಭಾವವನ್ನು ಕಳೆದುಕೊಳ್ಳಬಾರದು ಎಂಬ ಸಂದೇಶವನ್ನು ಆಳವಾಗಿ ಬಿತ್ತಿವೆ.
ಕೃತಿಯಲ್ಲಿ ಬರುವ 'ಗೋಪಾಲಯ್ಯನ ಮಗನನ್ನು ಕಾರಂತರು ಮೊದಲೇ ಭೇಟಿಯಾದ ಹಾಗೂ ಅದೇ ವ್ಯಕ್ತಿ ಗೋಪಾಲಯ್ಯನವರ ಮಗ ಎಂಬುದು ಭಾವಚಿತ್ರ ಕಂಡಾಗ ಅವರಿಗೆ ಅರಿವಾದ ಸನ್ನಿವೇಶಗಳನ್ನು ಅವರು ನೀಡಿರುವುದು, ಓದುಗರನ್ನು ಓದಿಸುತ್ತಾ ಹೋಗುತ್ತದೆ.
ಸಹಜವಾಗಿ ಪುಸ್ತಕಗಳು ಓದುಗರನ್ನು ಹೊಸ ಜಗತ್ತಿಗೆ ಕರೆದೊಯ್ಯುತ್ತವೆ. ಅವು ನಮ್ಮ ಮನಸ್ಸನ್ನು ಬಹಳವಾಗಿ ಪ್ರಭಾವಿಸುತ್ತವೆ. ಸಾಹಿತ್ಯದಲ್ಲಿ ಹಲವು ಪ್ರಕಾರಗಳಿವೆ. ಅದರಲ್ಲಿ ಕಾದಂಬರಿಯು ಬಹುತೇಕರ ನೆಚ್ಚಿನ ಪ್ರಕಾರ. ಶಿವರಾಮ ಕಾರಂತರು ರಚಿಸಿರುವ 'ಬೆಟ್ಟದ ಜೀವ' ಮನಸ್ಸಿಗೆ ಬಹು ಹತ್ತಿರವಾಗುವ ಕಾದಂಬರಿ. ಹೆಸರೇ ಸೂಚಿಸುವಂತೆ ಕಾದಂಬರಿಯು ಪ್ರಕೃತಿಗೆ ಹತ್ತಿರವಾಗಿದೆ. ಈ ಕೃತಿ ಓದುಗರನ್ನು ಪ್ರಾಕೃತಿಕ ಜಗತ್ತಿನಲ್ಲಿ ಜೀವಿಸುವಂತೆ ಮಾಡುತ್ತದೆ.
ಪ್ರಕೃತಿಯು ದೇವರ ಕೃತಿ. ಇಂತಹ ಕೃತಿಯನ್ನು ಅಕ್ಷರ ರೂಪದಲ್ಲಿ ಹೆಣೆಯಲು ಸಾಹಿತಿಯೊಬ್ಬನಿಂದ ಮಾತ್ರ ಸಾಧ್ಯ. ಪ್ರಕೃತಿಯ ಕೆಲವು ಸನ್ನಿವೇಶಗಳನ್ನು ,ಅದರ ಮನೋಹರ ವರ್ಣನೆ ಹಾಗೂ ಕಾರಂತರು ಅದನ್ನು ಹೊಗಳಿ ಹಿಗ್ಗಿಸುವ ವಿಧಾನವೆ ಬೇರೆ ಎಂಬುದು ಈ ಕಾದಂಬರಿಯಲ್ಲಿ ಯಥೇಚ್ಛವಾಗಿ ಕಾಣುತ್ತದೆ. ಇದೆ ಅಂಶದಿಂದ ಕಾದಂಬರಿಯು ಓದುಗರನ್ನು ಸೆರೆಹಿಡಿಯುತ್ತದೆ. ಸುಬ್ರಹ್ಮಣ್ಯ ಸೀಮೆಯ ವಾತಾವರಣ ಹಾಗೂ ಆಗಿನ ಕಾಲದಲ್ಲಿ ಕುಮಾರ ಪರ್ವತದ ಬಗ್ಗೆ ಇದ್ದ ನಿಗೂಢತೆ ಆಕರ್ಷಣೀಯವೆನಿಸುತ್ತದೆ.
ಒಂದು ಪ್ರಶಾಂತ ಸಂಜೆಯ ಇಳಿ ಹೊತ್ತಿನಲ್ಲಿ ಕಥೆಯ ಆರಂಭ. ಕಾರಂತರು ಅಲೆದಾಡಿ ಆಯಾಸಗೊಂಡು ಸುಬ್ರಹ್ಮಣ್ಯದ ಒಂದು ಊರನ್ನು ಸೇರುವರು, ತುಸು ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಮಲಗಿದ ಕಾರಂತರಿಗೆ ಎಚ್ಚರವಾಗುವ ಹೊತ್ತಿಗೆ ಕತ್ತಲು ಬೆಳಕನ್ನು ಆವರಿಸಲು ಸಿದ್ಧವಾಗಿರುತ್ತದೆ. ಅವಸರದಲ್ಲಿ ಹೊರಟ ಕಾರಂತರು ದಾರಿ ತಪ್ಪಿ ಸುಳ್ಯ ರಸ್ತೆ ಹಿಡಿಯುವುದು ಅವರ ಅರಿವಿಗೆ ಬರುವಷ್ಟು ಹೊತ್ತಿಗೆ ಕತ್ತಲು ಕವಿಯುತ್ತದೆ.
ದಾರಿಯುದ್ದಕ್ಕೂ ಸಾಗುತ್ತಿದ್ದ ಕಾರಂತರಿಗೆ ದೇವಣ್ಣ ಗೌಡರ ಮುಖಾಮುಖಿಯಾಗುತ್ತದೆ. ಕಾರಂತರನ್ನು ಅವರು ಕಥಾ ನಾಯಕರಾದ ಗೋಪಾಲ ಭಟ್ಟರ ಮನೆಗೆ ಮುಟ್ಟಿಸುವರು, ಮರುಕ್ಷಣದಿಂದ ಕಾರಂತರು ಭಟ್ಟರ ಮನೆಯ ಸದಸ್ಯರಾಗಿ ಬಿಡುತ್ತಾರೆ. ಗೋಪಾಲಯ್ಯನವರು ನಿಷ್ಠೆ, ಶ್ರಮ ಮತ್ತು ನಿಸರ್ಗ ಪ್ರೀಯರಾದ್ದರಿಂದ ಓದುಗರಿಗೆ ಹತ್ತಿರವಾಗುವ ಪಾತ್ರ. ಅವರ ಸರಳ ಬದುಕು,ಆತ್ಮ ಸಂತೋಷ,ಸಹನೆ ಮತ್ತು ಸಹಜತೆ ಸಹೃದಯರ ಮೇಲೆ ಪ್ರಭಾವ ಬೀರುತ್ತದೆ.
ಆದರೆ, ಭಟ್ಟರ ಮನೆಯ ಮೂಲೆ ಮೂಲೆಯಲ್ಲಿ ಮೌನ ಆವರಿಸಿತ್ತು. ಎರಡು ಜೀವಗಳು ತಮ್ಮ ಮಗನ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದವು. ನಾಲ್ಕು ಗೋಡೆಯ ಮಧ್ಯೆ ಇರುತ್ತಿದ್ದ ಗೋಪಾಲಯ್ಯನವರ ಮಡದಿ ಶಂಕರಮ್ಮ. ಕಾರಂತರು ಆ ಮನೆಗೆ ಆಗಮಿಸಿದ ದಿನದಿಂದ ಅವರ ಮೊಗದಲ್ಲಿ ತಮ್ಮ ಮಗನನ್ನು ಕಾಣಲು ಪ್ರಾರಂಭಿಸಿದ್ದರು. ಈ ರೀತಿ ಕಾಡಿನ ಮಡಿಲಲ್ಲಿ ವಾಸಿಸುವ ಜನರ ಬದುಕು ಮತ್ತು ಅವರ ಭಾವನೆಗಳು ಓದುಗರ ಮನಸ್ಸಿಗೆ ತಾಕುತ್ತದೆ.
ಈ ಕಾದಂಬರಿಯು ಓದುಗರನ್ನು ನೇರವಾಗಿ ಬೆಟ್ಟ, ಕಾಡು ಪ್ರಾಣಿಗಳು ಮತ್ತು ಹಳ್ಳಿಯ ಜನ ಜೀವನದೊಳಗೆ ಕರೆದೊಯ್ಯುತ್ತದೆ. ಇಂತಹ ಅಮೂಲ್ಯ ಪರಿಸರದ ಮಧ್ಯೆ ಗೋಪಾಲಯ್ಯನವರ ಪರಿಶ್ರಮದಿಂದ ತಲೆಯೆತ್ತಿ ನಿಂತ ಭೂಮಿಯೇ ಕಾಟುಮೂಲೆ. ಅಲ್ಲಿ ಕಾರಂತರಿಗೆ ನಾರಾಯಣನ ಪುಟ್ಟ ಕುಟುಂಬದ ಪರಿಚಯವಾಗುತ್ತದೆ.
ಕೆಲ ಕಾರಣದಿಂದ ಕಾರಂತರು ಗೋಪಾಲಭಟ್ಟರ ಮನೆಯಲ್ಲಿ ಒಂದು ವಾರಗಳಷ್ಟು ದಿನ ಉಳಿಯುತ್ತಾರೆ. ಅದು ಒಳಿತೇ ಎನ್ನುವಂತೆ ಅಲ್ಲಿನ ಹಲವು ವಿಷಯಗಳು ಕಾರಂತರಿಗೆ ಮನವರಿಕೆ ಆಗುತ್ತದೆ.' ಹೆತ್ತವರಿಗೆ ಹೆಗ್ಗಣವು ಮುದ್ದು ' ಎನ್ನುವ ಗಾದೆ ಮಾತಿನಂತೆ ಹೆಣ್ಣನ್ನು ಪಡೆಯುವ ಆಸೆಗೊ ಅಥವಾ ತನ್ನ ತಂದೆ ಮಗನಂತೆ ಸಾಕಿದ ನಾರಾಯಣನ ಮಡದಿಯ ಮೇಲಿನ ಆಸೆಗೂ ಓದುವ ನೆಪ ಹೂಡಿ ಹೋದ ಮಗ ಹಿಂದಿರುಗುವುದಿಲ್ಲ, ನಾರಾಯಣನ ಮೇಲಿನ ಅಸೂಯೆಗೋ ತಂದೆ ಮೇಲಿನ ಕೋಪಕ್ಕೋ ಕಾರಣ ಕೊಡದೆ ತೊರೆದ ಮಗನನ್ನು ಇಂದಲ್ಲ ನಾಳೆ ಹಿಂದಿರುಗುವ ಎಂಬ ಸುಳ್ಳು ನಿರೀಕ್ಷೆ ಇಟ್ಟುಕೊಂಡಿದ್ದ ದಂಪತಿ.
ಈ ಕಥೆಯಲ್ಲಿ ಗ್ರಾಮೀಣ ಜನರ ಪರಸ್ಪರ ಸಹಾಯ, ಸಹೋದರ ಭಾವ ಮತ್ತು ನಿಸರ್ಗವನ್ನು ಅನುಸರಿಸುವ ಶೈಲಿಯೂ ಚೆನ್ನಾಗಿ ಮೂಡಿಬಂದಿದೆ.
ಒಟ್ಟಾರೆಯಾಗಿ ಪಾತ್ರಗಳ ಬಗ್ಗೆ ಹೇಳುವುದಾದರೆ ತಂದೆ ತಾಯಿಯನ್ನ ತೊರೆದ ಮಗ, ಮಗನ ಆಗಮನಕ್ಕಾಗಿ ಕಾಯುತ್ತಿದ್ದ ತಾಯಿ, ಪರಿಶ್ರಮ ಜೀವಿಯಾದ ತಂದೆ, ನಿಷ್ಠಾವಂತ ಆಳುಗಳು, ಮಗನಂತೆ ಸಾಕಿದ ಸಂಬಂಧಿಕರ ಹುಡುಗ ಹಾಗೂ ಅವನ ಕಿರು ಸಂಸಾರ ಈ ಎಲ್ಲಾ ಪಾತ್ರಗಳು ಅಚ್ಚಳಿಯದಂತೆ ಓದುಗರ ಮನಸಲ್ಲಿ ನೆಲೆಸುತ್ತದೆ ಹಾಗೂ ಕಾದಂಬರಿ ಮುಗಿದ ನಂತರವೂ ಕಾಡುತ್ತವೆ.
ಈ ಕಾದಂಬರಿಯು ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ. ವ್ಯಕ್ತಿಯೊಬ್ಬನ ಸರಳ ಬದುಕು, ಆತ್ಮ ಸಂತೋಷ, ಸಹನೆ ಮತ್ತು ಸಹಜತೆಯ ಮೂಲಕ ಓದುಗರಿಗೆ ಈ ಕಾದಂಬರಿ ಗಾಢವಾದ ಪ್ರಭಾವ ಬೀರುತ್ತದೆ. ಲೇಖಕರು ಬಳಸಿರುವ ಮಾತಿನ ಲಯ, ಹಳ್ಳಿಯ ಜನರ ಭಾಷೆ ಮತ್ತು ಪ್ರಕೃತಿಯ ಬಗ್ಗೆ ಕವಿತೆಯಂತೆ ಹರಿದಿರುವ ವಾಕ್ಯಗಳು ಆಕರ್ಷಕ ಅನುಭವ ನೀಡುತ್ತದೆ. ನಿಸರ್ಗವನ್ನು ಪ್ರೀತಿಸುವ ಅಥವಾ ಸರಳ ಬದುಕಿನಲ್ಲಿ ಸಂತೋಷ ಕಾಣುವ ವ್ಯಕ್ತಿಗಳು ಈ ಕಾದಂಬರಿಯನ್ನು ಓದಬಹುದು.
- ವಿದಿಶಾ ಕಲ್ಲಮುಂಡ್ಕೂರು
ಆಳ್ವಾಸ್ ಕಾಲೇಜು ಮೂಡುಬಿದಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


