ಸಹಸ್ರಾರು ಭಕ್ತರ ಭಾಗವಹಿಸುವ ನಿರೀಕ್ಷೆ– ಪಾದಯಾತ್ರೆ, ಸಭಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ
ಮಂಗಳೂರು: ಜಗದ್ಗುರು ಪರಮಪೂಜ್ಯ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿ ಮಂಗಳೋತ್ಸವವು ಜನವರಿ 11ರಂದು ಭಾನುವಾರ ಮಂಗಳೂರಿನ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾಶೀಮಠಾಧೀಶರಾದ ಪರಮಪೂಜ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಈ ಮಂಗಳೋತ್ಸವದಲ್ಲಿ ಊರ–ಪರವೂರ ಸಹಿತ ಸಹಸ್ರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಲಾಯಿತು.
ಹರಿದ್ವಾರದಲ್ಲಿ ವೃಂದಾವನಸ್ಥರಾಗಿರುವ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಕಾಶೀಮಠದ 20ನೇ ಪೀಠಾಧೀಪತಿಗಳಾಗಿ ಸುಮಾರು 70 ವರ್ಷಗಳ ಕಾಲ ಪೀಠವನ್ನು ಅಲಂಕರಿಸಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಮಾತ್ರವಲ್ಲದೆ ಸಮಸ್ತ ಸಮುದಾಯದ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಏಳಿಗೆಗಾಗಿ ತಮ್ಮ ತಪೋಶಕ್ತಿಯನ್ನು ಸಮರ್ಪಿಸಿದ್ದಾರೆ. ಅವರ ಜನ್ಮಶತಾಬ್ದಿಯನ್ನು ಅದ್ಧೂರಿಯಾಗಿ ಆಚರಿಸುವ ಉದ್ದೇಶದಿಂದ ಕಳೆದ ಒಂದೂವರೆ ವರ್ಷಗಳಿಂದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ದೇಶ–ವಿದೇಶಗಳಲ್ಲಿ ನಡೆಯುತ್ತಿವೆ.
ಸಮಾಜದ ಪ್ರತಿ ಮನೆಮನೆಯಲ್ಲಿ ಭಜನೆಯ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸಂದೇಶದಂತೆ, ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕಳೆದ ಒಂದೂವರೆ ವರ್ಷಗಳಲ್ಲಿ ಸುಮಾರು 10,000ಕ್ಕೂ ಅಧಿಕ ‘ಘರ್ ಘರ್ ಭಜನೆ’, ವ್ಯಾಸೋಪಾಸನೆ ಹಾಗೂ ಗುರುಗುಣಗಾನ ಕಾರ್ಯಕ್ರಮಗಳು ಭಾರತ ಸೇರಿದಂತೆ ಜಗತ್ತಿನ ವಿವಿಧೆಡೆ ನಡೆಸಲಾಗಿದೆ. ಅಬಾಲವೃದ್ಧರೆಲ್ಲರೂ ಇದರಲ್ಲಿ ಭಾಗವಹಿಸಿ ಹರಿಗುರು ಕೃಪೆಗೆ ಪಾತ್ರರಾಗಿದ್ದಾರೆ.
ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಸ್ವರ್ಣ ಪಾದುಕೆಯ ದಿಗ್ವಿಜಯ ಯಾತ್ರೆ ಹಿಮಾಲಯದ ಬದ್ರಿಯಿಂದ ಆರಂಭವಾಗಿ ರಾಮೇಶ್ವರ, ತಿರುವನಂತಪುರವರೆಗೆ ಸಂಚರಿಸಿ ಇದೀಗ ಮಂಗಳೂರು ತಲುಪಿದೆ. ಪಾದುಕಾ ಆರಾಧನೆ ನಡೆದ ಸ್ಥಳಗಳಲ್ಲಿ ಭಕ್ತರ ಜೀವನದಲ್ಲಿ ಕಂಡುಬಂದ ಸಕಾರಾತ್ಮಕ ಬದಲಾವಣೆಗಳು ಪಾದುಕೆಯ ಮಹತ್ವವನ್ನು ಪ್ರತಿಪಾದಿಸುತ್ತಿವೆ ಎಂದು ತಿಳಿಸಲಾಯಿತು.
ಪರಿಸರ ಸಂರಕ್ಷಣೆಯಲ್ಲಿಯೂ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಕೊಡುಗೆ ಅಪಾರವಾಗಿದ್ದು, ಅವರ ಸ್ಮರಣಾರ್ಥವಾಗಿ ಕಳೆದ ಒಂದು ವರ್ಷದಲ್ಲಿ ಸುಮಾರು 65,000ಕ್ಕೂ ಅಧಿಕ ಫಲ ನೀಡುವ ಗಿಡಗಳನ್ನು ವಿವಿಧ ದೇವಸ್ಥಾನಗಳು ಹಾಗೂ ಸಂಘ ಸಂಸ್ಥೆಗಳ ಮೂಲಕ ವಿತರಿಸಿ ನೆಡುವ ಅಭಿಯಾನ ನಡೆಸಲಾಗಿದೆ. ಜೊತೆಗೆ ಸುಮಾರು ಒಂದು ಲಕ್ಷ ವಿಷ್ಣು ಸಹಸ್ರನಾಮ ಪಠಣ ಅಭಿಯಾನ ನಡೆಸಿ, ಏಪ್ರಿಲ್‌ನಲ್ಲಿ ಹರಿದ್ವಾರದಲ್ಲಿ ಬೃಹತ್ ಯಾಗದ ಮೂಲಕ ಸಮರ್ಪಿಸಲಾಗಿದೆ.
ಜನವರಿ 11ರಂದು ಮಧ್ಯಾಹ್ನ 3.30ಕ್ಕೆ ಕೊಂಚಾಡಿ ಕಾಶೀಮಠದ ಶಾಖಾಮಠದಿಂದ ಭಜನಾ ಸಂಕೀರ್ತನೆ, ವ್ಯಾಸಧ್ವಜ ಹಾಗೂ ಸ್ವಾಮೀಜಿಯವರ ಪಾದುಕೆಯೊಂದಿಗೆ ಭವ್ಯ ಪಾದಯಾತ್ರೆ ಆರಂಭವಾಗಲಿದೆ. ಮೇರಿಹಿಲ್, ಯೆಯ್ಯಾಡಿ, ಬಿಜೈ, ಲಾಲ್‌ಭಾಗ್, ಎಂ.ಜಿ.ರಸ್ತೆ ಮೂಲಕ ಸಾಗುವ ಪಾದಯಾತ್ರೆ ಕೆನರಾ ಹೈಸ್ಕೂಲ್ ತಲುಪಲಿದ್ದು, ಅಲ್ಲಿ ಫಲಾಹಾರ ವ್ಯವಸ್ಥೆ ಮಾಡಲಾಗಿದೆ. ನಂತರ ಪಾದಯಾತ್ರೆ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ ತಲುಪಿ ಮಂಗಳೋತ್ಸವದ ಸಭಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 8.30ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾಶೀಮಠಾಧೀಶರಾದ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುಣಗಾನಗಳೊಂದಿಗೆ ಆಶೀರ್ವಚನ ನೀಡಲಿದ್ದು, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಭಕ್ತರ ಅನುಕೂಲಕ್ಕಾಗಿ ಪಾರ್ಕಿಂಗ್ ಹಾಗೂ ರಾತ್ರಿ ಭೋಜನ ಪ್ರಸಾದದ ವ್ಯವಸ್ಥೆಗಳನ್ನು ವಿವಿಧೆಡೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್, ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಅಡಿಗೆ ಬಾಲಕೃಷ್ಣ ಶೆಣೈ, ಮೊಕ್ತೇಸರ ಸಿಎ ಜಗನ್ನಾಥ್ ಕಾಮತ್, ಕೋಟೇಶ್ವರ ದಿನೇಶ್ ಕಾಮತ್, ವಾಸುದೇವ್ ಕಾಮತ್, ರಘುವೀರ್ ಭಂಡಾರಕಾರ್, ಟಿ. ಗಣಪತಿ ಪೈ, ಪ್ರಶಾಂತ್ ಪೈ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

