Dog bites man is not news, but man bites dog is news"
ಸದಾ ಹೊಸ ಸುದ್ದಿಗಳಿಗೆ ಚಾತಕ ಪಕ್ಷಿಯಂತೆ ಕಾಯುವ ಸುದ್ದಿ ಮನೆಗಳಿಗೆ ಸಂವೇದನಾ ಶೀಲ ಬರಹಗಳು ಹೇಗೆ ಆಕರ್ಷಿಸುತ್ತದೆ ಎಂಬುದನ್ನು ತಿಳಿಸುವ ಈ ಮೇಲಿನ ಸಾಲುಗಳನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳು ನಿತ್ಯ ತರಗತಿಗಳಲ್ಲಿ ಕೇಳುವಂತದ್ದು. ಪತ್ರಕರ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಪತ್ರಿಕೆಯೇ ಪ್ರಯೋಗಶಾಲೆ ಹಾಗೂ ವೇದಿಕೆ. ಹಾಗಾಗಿಯೇ ಸದಾ ಹೊಸ ಸುದ್ದಿ, ಕುತೂಹಲಕಾರಿ ಬರಹ, ಕ್ರಿಯಾತ್ಮಕ ಚಟುವಟಿಕೆಯ ಬೆನ್ನಿಗೆ ಪತ್ರಿಕಾ ಪ್ರಪಂಚ ಓಡುವಂತೆ ಓದುಗರೂ ಇಂಥದ್ದೇ ಸುದ್ದಿಗೆ ಕಾಯುವುದು ಹೊಸತೇನಲ್ಲ. ಇದು ಸುದ್ದಿ ಮನೆಯ ಕಥೆಯಾದರೆ, ಸುದ್ದಿ ಮನೆಯೊಳಗೆ ಕಾರ್ಯನಿರ್ವಹಿಸುವ ಎಷ್ಟೋ ಪತ್ರಕರ್ತರು, ಪತ್ರಿಕೋದ್ಯಮವನ್ನು ಬೋಧಿಸುವ ಅಧ್ಯಾಪಕವರ್ಗ, ದೃಶ್ಯಮಾಧ್ಯಮದ ವಿವಿಧ ಸ್ತರಗಳಲ್ಲಿ ಕಾರ್ಯನಿರ್ವಹಿಸುವ, ಇಂಥ ಹಲವಾರು ಮಂದಿಯ ಬದುಕಿಗೆ ಬೆಳಕು ನೀಡಿದ ಪ್ರಾಧ್ಯಾಪಕರೊಬ್ಬರ ವೃತ್ತಿ ಬದುಕಿನ ಕೊನೆಯ ದಿನದ ಬೀಳ್ಕೊಡುಗೆ ಸಮಾರಂಭವು ಸಂವೇದನಾ ಶೀಲ ಬರಹಕ್ಕಿಂತಲೂ ಹೆಚ್ಚು. ಇಲ್ಲಿ ಸಂವೇದನಾ ಶೀಲ ಬರಹದಂತೆ ಅನಗತ್ಯ ಕುತೂಹಲ, ಏನನ್ನೋ ಹುಡುಕಿ ಗೆದ್ದ ಭಾವ, ಎಲ್ಲವನ್ನೂ ಚಿಕಿತ್ಸಕ ನೋಟದಿಂದ ನೋಡುವ ಹಪಾಹಪಿ ಯಾವುದೂ ಇಲ್ಲದೇ, ಸದಾ ಶಾಂತವಾಗಿ ಹರಿಯುವ ನದಿಯಂತೆ ಸ್ವಚ್ಛ ಮತ್ತು ಶುಭ್ರ. ಕೆಲವರ ವ್ಯಕ್ತಿತ್ವವೇ ಅಂಥದ್ದು. ಸಹನೆ, ಸಂಯಮ, ಸಮಚಿತ್ತ ಭಾವ ಬದಲಾಗುವುದೇ ಇಲ್ಲವೇನೋ ಎಂಬಂತೆ ಏನೇ ಏರಿಳಿತ ಬಂದರೂ ಒಂದೇ ಮಾನಸಿಕ ಸ್ಥಿತಿಯಲ್ಲಿ ನಡೆಯುವಂತದ್ದು. ಅಂತಹ ಮೇರು ವ್ಯಕ್ತಿತ್ವದ ಭಾಸ್ಕರ ಹೆಗಡೆ ಅವರ ಶಿಷ್ಯೆಯಾಗಿ ಈಗಲೂ ಒಡನಾಟವಿರುವುದು ನನ್ನ ಭಾಗ್ಯವೇ ಸರಿ.
ಭಾಸ್ಕರ ಹೆಗಡೆ ಎಂದರೆ ಸಾಕು ಉಜಿರೆಯ ಪತ್ರಿಕೋದ್ಯಮ ವಿಭಾಗ, ಪತ್ರಿಕೋದ್ಯಮ ಎಂದರೆ ಭಾಸ್ಕರ ಹೆಗಡೆ- ಎರಡೂ ಒಂದೇ ಎಂಬುದು ಅವರನ್ನು ಬಲ್ಲ ಪ್ರತಿಯೊಬ್ಬರ ಮನದಲ್ಲಿ ಮೂಡುವ ಮೊದಲ ಭಾವನೆಗಳು. 1998- 2001 ನೇ ಸಾಲಿನಲ್ಲಿ ಪದವಿಗೆಂದು ಕಾಲೇಜಿಗೆ ಕಾಲಿಟ್ಟ ದಿನಗಳಿಂದ ಇಲ್ಲಿಯವರೆಗೂ ಸರ್ ಎಂದರೆ ಮನದಲ್ಲಿ ಮೂಡುವುದು ಅವರ ಸಮಾಧಾನ, ಶಾಂತ ಚಿತ್ತ ಮನೋಭಾವ. ಸಹಜವಾಗಿ ಪತ್ರಿಕೋದ್ಯಮ ವಿಭಾಗವಾದ್ದರಿಂದ ಕಾಲೇಜಿನ ಯಾವುದೇ ಚಟುವಟಿಕೆಗಳಿಗೆ ಈ ವಿಭಾಗದವರ ಉಪಸ್ಥಿತಿ ಇರಲೇಬೇಕು.ಹಾಗಾಗಿಯೇ ವಿಭಾಗವೆಂದರೆ ಸದಾ ಮಕ್ಕಳು, ಸಹ ಪ್ರಾದ್ಯಾಪಕರು, ಬೇರೆ ವಿಭಾಗದ ಮಕ್ಕಳಿಂದ ಸುತ್ತುವರೆದ ಚಟುವಟಿಕೆಯ ಕೇಂದ್ರ.ಇದು ಒಂದು ದಿನದ ಕಥೆಯಲ್ಲ. ವರ್ಷದ ಎಲ್ಲಾ ಕಾರ್ಯನಿರ್ವಹಣೆಯ ದಿನ ಇರುವಂತದ್ದು. ವಿದ್ಯಾರ್ಥಿಗಳಿಗೆ ಸರ್ ಎಂದರೆ ಮನೆಯ ಹಿರಿಯಣ್ಣನ ಹಾಗೆ.ಇಲ್ಲಿ ಮನೆಯ ಕಥೆಯೂ ಬರುತ್ತದೆ ಜೊತೆಗೆ ಒಮ್ಮೊಮ್ಮೆ ವ್ಯಥೆಯೂ. ಎಲ್ಲವನ್ನೂ, ಎಲ್ಲರ ಮನದ ಮಾತುಗಳನ್ನು ಸಹನೆಯಿಂದ ಕೇಳುವ ಇವರ ಬಳಿ ಉತ್ತರ ಸದಾ ಸಿದ್ಧ. ಪ್ರಶ್ನೆಗಳನ್ನು ಮತ್ತು ಸನ್ನಿವೇಶಗಳನ್ನು ನಿಭಾಯಿಸುವ ರೀತಿಯಿಂದಲೇ ವಿದ್ಯಾರ್ಥಿಗಳು ಇವರ ಬಳಿ ತೆರಳುವುದು. ಇದು ಕೇವಲ ಅಲ್ಲಿರುವಾಗ ಶಿಕ್ಷಕ ಮತ್ತು ಗುರುವಿನ ನಡುವಿನ ಒಡನಾಟಕ್ಕೆ ಸೀಮಿತವಾಗಿರದೆ ಕಾಲೇಜು ಬಿಟ್ಟ ನಂತರವೂ ಮುಂದುವರೆದ ಪರಂಪರೆ. ಹಾಗಾಗಿಯೇ ನನ್ನಂತೆ ಅನೇಕ ಶಿಷ್ಯಂದಿರು ಈಗಲೂ ಸರ್ ಜೊತೆ ಸಂಪರ್ಕದಲ್ಲಿ ಇರುವಂತೆ ಮಾಡಿದೆ.
ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಗುರುವಿನ ನೇರ ಸಂಪರ್ಕಕ್ಕೆ ಅವಕಾಶ ಸಿಕ್ಕಿರುವುದು ಈ ವಾರಾಂತ್ಯದಲ್ಲಿ. ವೃತ್ತಿಯಿಂದ ನಿವೃತ್ತಿ ಹೊಂದುತ್ತಿರುವ ಭಾಸ್ಕರ ಹೆಗಡೆ ಅವರಿಗೆ ಅವರ ಸಹ ಪ್ರಾಧ್ಯಾಪಕರು, ಶಿಷ್ಯಂದಿರು, ಹಿರಿಯ ವಿದ್ಯಾರ್ಥಿಗಳೆಲ್ಲರೂ ಸೇರಿ ಹಮ್ಮಿಕೊಂಡಿರುವ "ಭಾಸ್ಕರ ಪರ್ವ" ಎಂಬ ಅಭೂತಪೂರ್ವ ಕಾರ್ಯಕ್ರಮದಲ್ಲಿ. ಇದೊಂದು ಉತ್ಸವದಂತಹ ಕಾರ್ಯಕ್ರಮವಾಗಿದ್ದು, ತಿಂಗಳಿಗೆ ಮುಂಚಿತವಾಗಿಯೇ ದೂರದಲ್ಲಿರುವ ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡಂತೆ ವ್ಯವಸ್ಥಿತವಾಗಿ ಕಾರ್ಯಕ್ರಮದ ರೂಪು ರೇಷೆಗಳನ್ನು ತಯಾರಿಸಲಾಗಿದೆ. ಈಗಿನ ಡಿಜಿಟಲ್ ಮಾಧ್ಯಮ ಇಂತಹ ವಿಚಾರಗಳಲ್ಲಿ ಸಹಕಾರಿಯಾಗಿದ್ದು ಎಲ್ಲರೂ ಕ್ರಿಯಾತ್ಮಕವಾಗಿ ಕಾರ್ಯಕ್ರಮವನ್ನು ಹೇಗೆಲ್ಲ ರೂಪಿಸಬಹುದೆಂಬ ವಿಚಾರ ವಿನಿಮಯ, ತಂಡ ರಚನೆ, ಒಮ್ಮತದ ಅಭಿಪ್ರಾಯಗಳು ಹೆಚ್ಚು ಸಮಯ ಪಡೆಯದೇ ಕಾರ್ಯರೂಪಕ್ಕೆ ಬಂದಿರುವುದನ್ನು ನೋಡಿದರೆ ವಿದ್ಯಾರ್ಥಿಗಳಿಗೆ ಗುರುವಿನ ಜೊತೆ ಇರುವ ಭಾವನಾತ್ಮಕ ಸಂಬಂಧವನ್ನು ತಿಳಿಸುತ್ತದೆ. ಬದುಕಿನ ವಿವಿಧ ಜವಾಬ್ದಾರಿಗಳಲ್ಲಿ ತೊಡಗಿರುವ ಪ್ರತಿಯೊಬ್ಬರೂ ಅರೆಕ್ಷಣಕ್ಕಾದರೂ ಗುಂಪಿನ ಮಾಹಿತಿ, ಜೊತೆಜೊತೆಯಲ್ಲಿಯೇ ತಮಾಷೆ, ಪಾಠ ಪ್ರವಚನದ ಸಂದರ್ಭದ ಮರು ನೆನಪಿಗೆ ಎಲ್ಲರೂ ಹೆಗಲಾಗಿದ್ದಾರೆ.
ನಿವೃತ್ತಿ ಪ್ರತಿಯೊಬ್ಬರ ವೃತ್ತಿ ಬದುಕಿನ ಅಂಗವಾದರೂ ಈ ಮಟ್ಟದಲ್ಲಿ ಎಲ್ಲರೂ ಸೇರಿ ಕಾರ್ಯಕ್ರಮವನ್ನು ಹಮ್ಮಿಕೊಂಡು ತಮ್ಮ ಪ್ರೀತಿಯ ಗುರುವಿಗೆ ಗೌರವ ಸಲ್ಲಿಸುವುದು ಈ ದಿನಗಳಲ್ಲಿ ಅಪರೂಪ. ಸ್ನೇಹಿತರೆಲ್ಲರೂ ವರ್ಷಕ್ಕೊಮೆ ಒಟ್ಟು ಸೇರಿ ಕಲಿತ ಶಾಲೆಗೆ ಭೇಟಿ ನೀಡುವುದು, ಶಿಕ್ಷಕರನ್ನು ಗೌರವಿಸುವುದು ಸಾಮಾನ್ಯ ವಿಚಾರವಾದರೂ ಎಲ್ಲಾ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವುದು ಸಾಹಸವೇ ಸರಿ.ಗುರು ಮತ್ತು ಶಿಷ್ಯರ ನಡುವಿನ ಬಾಂಧವ್ಯ ಇಲ್ಲಿ ಅಗ್ರಸ್ಥಾನದಲ್ಲಿ ಇರುವುದರಿಂದ ಎಲ್ಲವೂ ಸರಳವಾಗಿ ತಮ್ಮ ಮನೆಯದ್ದೇ ಕಾರ್ಯಕ್ರಮ ಎಂಬಂತೆ ನಡೆಯುತ್ತಿರುವುದು ವಿಶೇಷವೇ ಸರಿ. ಉಜಿರೆಯ ಎಸ್ ಡಿ ಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರತಿ ಕಾರ್ಯಕ್ರಮದಂತೆ ಸಭಾ ಕಾರ್ಯಕ್ರಮ, ಸ್ಮರಣ ಸಂಚಿಕೆ ಬಿಡುಗಡೆ, ಸರ್ ಕುರಿತಾದ ಡಾಕ್ಯುಮೆಂಟರಿ ಬಿಡುಗಡೆಯ ಜೊತೆಯಲ್ಲಿಯೇ ಅವರ ಹೆಸರಿನಲ್ಲಿ ದತ್ತಿ ನಿಧಿ ಮಾಡುವುದು ಇವೆಲ್ಲದಕ್ಕಿಂತ ಮಹತ್ವಪೂರ್ಣ. ದತ್ತಿನಿಧಿಯ ಮೂಲಕ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಮಕ್ಕಳಿಗೆ ಈ ಹಣ ಬೆನ್ನುಲುಬಾಗಿ ಆ ಮಕ್ಕಳು ಬದುಕು ಕಟ್ಟಿಕೊಳ್ಳಲಿ ಎಂಬ ಸದಾಶಯ ಸರ್. ನಿವೃತ್ತರಾದರೂ ಗುರು ಶಿಷ್ಯರ ಬಾಂಧವ್ಯ ಮುಂದುವರೆಯಲು ಬುನಾದಿ ಹಾಕಿದಂತೆಯೇ ಸರಿ.
ಮಕ್ಕಳು ತಂದೆ ತಾಯಿ ಹಾಗೂ ವಿದ್ಯೆ ಕಲಿಸಿದ ಶಿಕ್ಷಕರ ಪ್ರತಿಫಲನ ಎಂಬುದು ಎಲ್ಲರ ನಂಬಿಕೆ. ಹಾಗಾಗಿ ಉತ್ತಮ ವ್ಯಕ್ತಿತ್ವ ಇದ್ದವರನ್ನು ನೋಡಿದ ತಕ್ಷಣ ಗೌರವದ ಭಾವನೆ ಬಂದೇ ಬರುತ್ತದೆ. ಇದಕ್ಕೆ ಭಾಸ್ಕರ್ ಹೆಗಡೆಯವರ ಎಲ್ಲಾ ಶಿಷ್ಯಂದಿರು ಭಾಜನರೇ ಸರಿ. ಇದಕ್ಕೆ ತಾಜಾ ಉದಾಹರಣೆಯಾಗಿ ಈ ಕಾರ್ಯಕ್ರಮ ಆಯೋಜಿಸುವುದು ಎಂಬ ಯೋಚನೆ ಬಂದ ಆರಂಭದಿಂದ ಇಲ್ಲಿಯವರೆಗೆ ಎಲ್ಲವನ್ನೂ ಸಮಯಕ್ಕೆ ತಕ್ಕಂತೆ ಅನುಷ್ಠಾನಗೊಳಿಸು ತ್ತಿರುವುದನ್ನು ಗಮನಿಸಿದಾಗ ಅರಿವಿಗೆ ಬರುತ್ತದೆ. ದೂರದ ಊರಿನಲ್ಲಿರುವ ಹಿರಿಯ ವಿದ್ಯಾರ್ಥಿಗಳಿಗೆ ಆಹ್ವಾನ ನೀಡುವುದರಿಂದ ಹಿಡಿದು ಉಳಿದು ಕೊಳ್ಳುವ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡುವುದೇ ಆಗಿರಲಿ ಎಲ್ಲದರಲ್ಲಿಯೂ ಅಚ್ಚುಕಟ್ಟು ಮತ್ತು ಆತ್ಮೀಯತೆ.
"ಮಂತ್ರೇ ತೀರ್ಥೇ ದ್ವಿಜೇ ದೇವೇ ದೈವಜ್ಞೇ ಭೇಷಜೇ ಗುರೌ | ಯಾದ್ರೃಶೀ ಭಾವನಾಂಕುರ್ಯಾತ್ ಸಿದ್ದಿರ್ಭವತಿ ತಾದೃಶಿ" || ಎಂಬಂತೆ ಗುರುಗಳನ್ನು ನಾವು ಯಾವ ರೀತಿ ಸ್ವೀಕರಿಸುತ್ತೇವೆ. ಅದೇ ರೀತಿ ಅನುಭವಕ್ಕೆ ಬರುತ್ತದೆ ಎಂಬುದಕ್ಕೆ ಭಾಸ್ಕರ ಪರ್ವವೇ ಸಾಕ್ಷಿ. ಮಳೆ ನಿಂತರೂ ಅದರ ಹನಿಗಳು ತೊಟ್ಟಿಕ್ಕುತ್ತಲೇ ಇರುವಂತೆ ವೃತ್ತಿಯಿಂದ ನಿವೃತ್ತರಾದರು ಗುರು ಮತ್ತು ಶಿಷ್ಯರ ಕೊಂಡಿ ಮುಂದುವರೆಯುತ್ತದೆ. ಹಾಗಾಗಿಯೇ ಭಾಸ್ಕರ ಹೆಗಡೆ ಅವರ ಇಡೀ ಬದುಕು ಇತರರಿಗೆ ಮಾದರಿ. ಇವರ ಬದುಕಿನ ಮತ್ತೊಂದು ಮಜಲು ನೆಮ್ಮದಿಯಿಂದ ಕೂಡಿರಲಿ ಎಂಬ ಆಶಯದೊಂದಿಗೆ ಪ್ರೀತಿ ಪೂರ್ವಕ ಶುಭ ಹಾರೈಕೆಗಳು .
- ಆತ್ಮ.ಜಿ.ಎಸ್, ಬೆಂಗಳೂರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


