ಭಾಷಣಕಾರನೊಬ್ಬ ವೇದಿಕೆಯ ಮೇಲೆ ನಿಂತು, 'ಮಹಾಜನಗಳೇ, ನಮ್ಮ ದೇಶದ ಪಿತರಾಗಿರುವ ಮಹಾತ್ಮ ಗಾಂಧೀಜಿಯವರು ಪಾಲಿಸುತ್ತಿದ್ದ ತತ್ವಗಳಂತೆಯೇ ಎಲ್ಲರ ಬಾಯಿಯಲ್ಲಿ ಸತ್ಯದ ಮಾತುಗಳೇ ಹೊರಡಬೇಕು, ಇನ್ನೊಬ್ಬರಿಗೆ ಹಿಂಸೆಯನ್ನು ಮಾಡುವುದು ಕಡು ಪಾಪ. ಅವರು ಸ್ವಚ್ಛತೆಗೆ ಬಹಳ ಮಹತ್ವವನ್ನು ನೀಡಿದ್ದು, ಎಲ್ಲೂ ಕಸವನ್ನು ಹಾಕುವುದು ಮಹಾ ಪಾಪ' ಎಂಬಿತ್ಯಾದಿ ವಿಷಯಗಳ ಕುರಿತು ನಿರರ್ಗಳವಾಗಿ ಹೇಳಿದವನೇ ಹೊರಬಂದು, ನೀರು ಕುಡಿದು ಪ್ಲಾಸ್ಟಿಕ್ ಲೋಟವನ್ನು ಹೊರ ಎಸೆಯುವ ಪ್ರಸಂಗ ನಾನು ನೋಡಿದ್ದೇನೆ. ಇದು ನಮ್ಮ ವಾಸ್ತವ ಬದುಕಿನ ವಿಪರ್ಯಾಸ.
ನಾವು ಯಾವುದೇ ವಿಚಾರಗಳನ್ನು ವಿನಿಮಯ ಮಾಡಿ ಪಾಲಿಸುವಂತೆ ಹೇಳುವ ಮುನ್ನ, ನಮ್ಮ ನಿಜವಾದ ಪಾಲ್ಗೊಳ್ಳುವಿಕೆ ಆ ವಿಷಯಗಳಲ್ಲಿ ಇದೆಯಾ ಎಂದು ವಿಮರ್ಶಿಸಿಕೊಳ್ಳುವುದು ಮುಖ್ಯವಾಗಿದೆ.
ದಿನ ಬೆಳಗಾದರೆ ಸಾಕು, ಮನೆಯವರೊಂದಿಗೆ, ಸಹಚರರೊಡನೆ, ಬಂಧು ಮಿತ್ರರೊಡನೆ ಹೀಗೆಯೇ ಹಲವಾರು ಜನರಲ್ಲಿ ತಮ್ಮ ಮಾತಿನ ಮಹಾಪೂರವೇ ನಡೆದು ಬಿಡುತ್ತದೆ. ಯಾರೊಂದಿಗೆ, ಯಾವುದನ್ನ, ಯಾವ ರೀತಿಯಲ್ಲಿ ಮಾತನಾಡಿದ್ದೇವೆ ಎಂಬ ಪರಿಜ್ಞಾನವೇ ಕೆಲವರಲ್ಲಿರುವುದಿಲ್ಲ. ಮೇಲೆ ನಾ ತಿಳಿಸಿದ ಪ್ರಸಂಗವನ್ನು ಗಮನಿಸಬಹುದಾಗಿದೆ. ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿರಿಸಿ ಇಟ್ಟುಕೊಳ್ಳಿ ಎಂದವನು ವೇದಿಕೆಯಲ್ಲಿದ್ದಾಗ ಒಂದು ರೀತಿಯಲ್ಲಿ, ಹೊರ ಬಂದಾಗ ಒಂದು ರೀತಿಯಲ್ಲಿ ವರ್ತಿಸಿ, ಈಚೆ ಸ್ವಚ್ಛತೆಯೂ ಇಲ್ಲ ಗಾಂಧಿಯ ತತ್ವವೂ ಪಾಲಿಸಲಿಲ್ಲ. ಅಂತೆಯೇ, ಎಂದಿಗೂ ಸತ್ಯವನ್ನೇ ಹೇಳಬೇಕು ಎಂದವನು ಮೊದಲಾಗಿ ಸತ್ಯವಂತನಾಗಿರಬೇಕು.
ಕೆಲವು ಸಂದರ್ಭದಲ್ಲಿ ಇಂತಹ ಸಂಗತಿಗಳು ನಂಬಿಕೆಯ ವಿಷಯಕ್ಕೆ ನೇರ ರೀತಿಯ ಸಂಬಂಧವನ್ನು ಹೊಂದಿರುತ್ತದೆ. ಅರ್ಹನೆನಿಸದೆಯೇ ಮಾತನ್ನ ಪಾಲಿಸದೆ ಇದ್ದರೆ ನಂಬಿಕೆಯ ಪರಿಧಿಯಿಂದ ದೂರ ಉಳಿಯುವುದಂತೂ ಖಂಡಿತ.
ಶಕ್ತಿ ಪರಾಕ್ರಮವನ್ನು ಹೊಂದಿ ರಾಜ್ಯವನ್ನು ಆಳುವ ರಾಜ ಮಾತ್ರ ಧೈರ್ಯದ ಮಾತುಗಳನ್ನ ತಮ್ಮ ಪ್ರಜೆಗಳಿಗೆ ತಿಳಿಸಲು ಅರ್ಹನು, ಸಂಸ್ಕಾರಯುತ ಶಿಕ್ಷಕನಿಂದ ಮಾತ್ರ ವಿದ್ಯಾರ್ಥಿಗಳಿಗೆ ಮೌಲ್ಯದ ಶಿಕ್ಷಣವನ್ನು ನೀಡಲು ಸಾಧ್ಯ. ಅಷ್ಟೇ ಅಲ್ಲದೆ, ಒಬ್ಬ ಕವಿಯು ಬಲು ನೈಜ, ಪರಿಣಾಮಕಾರಿ ಹಾಗೂ ಎಲ್ಲರ ಮನ ಮುಟ್ಟುವಂತೆ ತಮ್ಮ ಕಥನ ಕಾದಂಬರಿ ಬರೆಯಬೇಕಾದರೆ, ಅವರು ತಮ್ಮ ನಿಜವಾದ ಅನುಭವಗಳನ್ನು ತಮ್ಮದೇ ಕಲ್ಪನಾ ಶೈಲಿಯಲ್ಲಿ ಬರೆದಿರುತ್ತಾರೆ. ಇನ್ನೂ ಮುಖ್ಯವಾಗಿ, ತಮ್ಮ ಮಾತುಗಳಿಂದ ಮಗು ಪ್ರಜ್ಞಾತೀತ ವ್ಯಕ್ತಿಯಾಗಬೇಕು ಎಂದಿದ್ದರೆ, ಪೋಷಕರು ಮೊದಲು ಒಳ್ಳೆಯ ಗುಣನಡತೆಗಳಲ್ಲಿ ಗೆಲುವನ್ನು ಸಾಧಿಸಿರಬೇಕಾಗುತ್ತದೆ.
ಜೀವನವನ್ನು ಸಾಗಿಸುವ ಸಂದರ್ಭದಲ್ಲಿ ಎದುರಾಗುವ ಪ್ರತಿ ವಿಷಯಗಳನ್ನು ವಿಮರ್ಶಿಸಿ, ವಿಶ್ಲೇಷಿಸಿ ನಾವು ಅರ್ಹರೆನಿಸಿದಾಗ ಮಾತ್ರ ಇನ್ನೊಬ್ಬರಿಗೆ ಪಸರಿಸುವ ಮೂಲಕ ನಾವೂ ಬೆಳೆಯೋಣ, ಇತರರ ಬಾಳನ್ನೂ ಬೆಳಗಿಸೋಣ.
- ಕೆ ಎನ್ ಧನುಷ್, ದಿಡುಪೆ
ಪ್ರಥಮ ಪತ್ರಿಕೋದ್ಯಮ ವಿಭಾಗ,
ಎಸ್.ಡಿ.ಎಂ ಕಾಲೇಜು, ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



