ಬಳ್ಳಾರಿ: ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆ, ಸಂಜಯಗಾಂಧಿ ಪಾಲಿಟೆಕ್ನಿಕ್ ಬಳ್ಳಾರಿ ಇವರ ಸಹಯೋಗದಲ್ಲಿ ಹಾಗೂ ಅವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಯುವಕರ ದಿನಾಚರಣೆಯ ಅಂಗವಾಗಿ ಪ್ರಬಂಧ ಸ್ಪರ್ಧೆ ಹಾಗೂ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಟಿ.ಜಿ. ವಿಠ್ಠಲ್, ಅಧ್ಯಕ್ಷರು, ಬಳ್ಳಾರಿ ಅವರು, ಸ್ವಾಮಿ ವಿವೇಕಾನಂದರು ಯುವಜನತೆಯ ಮೇಲೆ ಅಪಾರ ನಂಬಿಕೆ ಹೊಂದಿದ್ದ ಮಹಾನ್ ಚಿಂತಕರಾಗಿದ್ದರು. “ಎದ್ದೇಳಿ, ಜಾಗೃತರಾಗಿ, ಗುರಿಯನ್ನು ಸಾಧಿಸುವವರೆಗೂ ನಿಲ್ಲಬೇಡಿ” ಎಂಬ ಅವರ ಸಂದೇಶ ಇಂದಿಗೂ ಯುವಕರಿಗೆ ಶಕ್ತಿ ಮತ್ತು ದಿಕ್ಕು ನೀಡುತ್ತಿದೆ. ಅವರು ಶಿಕ್ಷಣವನ್ನು ಕೇವಲ ಪುಸ್ತಕ ಜ್ಞಾನವಲ್ಲದೆ, ವ್ಯಕ್ತಿತ್ವ ವಿಕಾಸದ ಮಹತ್ವದ ಸಾಧನವೆಂದು ವಿವರಿಸಿದ್ದರು ಎಂದು ತಿಳಿಸಿದರು.
ನಂತರ ಮಾತನಾಡಿದ ಶ್ರೀಮತಿ ಎಸ್. ವಿಜಯಲಕ್ಷ್ಮಿ, ವ್ಯವಸ್ಥಾಪಕರು, ಬಳ್ಳಾರಿ ಅವರು, ಸ್ವಾಮಿ ವಿವೇಕಾನಂದರ ತತ್ವದ ಪ್ರಕಾರ ಯುವಜನತೆಯ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಆರೋಗ್ಯವಂತ ದೇಹ ಮತ್ತು ಶುದ್ಧ ಮನಸ್ಸು ಇದ್ದಾಗ ಮಾತ್ರ ವ್ಯಕ್ತಿ ಜೀವನದಲ್ಲಿ ಸರಿಯಾದ ನಿರ್ಧಾರ, ಮಾನಸಿಕ ನಿಯಂತ್ರಣ ಮತ್ತು ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಲು ಸಾಧ್ಯವೆಂದು ಹೇಳಿದರು ಹಾಗೂ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಮತ್ತು ಹಕ್ಕುಗಳ ಪ್ರಾಮುಖ್ಯತೆಗೆ ಸ್ವಾಮಿ ವಿವೇಕಾನಂದರ ತತ್ವಗಳು ಆಧಾರವಾಗಿವೆ ಎಂದು ಹೇಳಿದರು .
ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನು ನುಡಿದ ಶ್ರೀಯುತ ಗೌರಿಶಂಕರ್ ಹಿರೇಮಠ, ಪ್ರಾಂಶುಪಾಲರು, ಸಂಜಯಗಾಂಧಿ ಪಾಲಿಟೆಕ್ನಿಕ್ ಅವರು, ಯುವಕರು ಮೊದಲು ಉತ್ತಮ ಮಾನಸಿಕ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಅಂಥ ವ್ಯಕ್ತಿತ್ವ ರೂಪುಗೊಂಡಾಗ ಮಾತ್ರ ಸ್ವಾಮಿ ವಿವೇಕಾನಂದರಂತಹ ಮಹಾನ್ ಚಿಂತಕರ ತತ್ವಗಳು ಯುವಜನತೆಗೆ ಸರಿಯಾಗಿ ಅರ್ಥವಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ 49 ವಿದ್ಯಾರ್ಥಿಗಳ ಪೈಕಿ ಗೆದ್ದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಕಾಲೇಜಿನ ಎನ್‌ಎಸ್‌ಎಸ್ ಹಾಗೂ ಎಫ್ಪಿಎಐ ನ ಯುವ ಸ್ವಯಂ ಸೇವಕರು ಮತ್ತು ಶರಬಣ್ಣ ಎನ್ ಎಸ್ ಎಸ್ ಅಧಿಕಾರಿ ಒಟ್ಟುಗೂಡಿ ಅಗತ್ಯವಿರುವ ಎಲ್ಲಾ ರೀತಿಯ ಅನುಕೂಲಗಳನ್ನು ಕಲ್ಪಿಸಿ ಸಹಕರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ತತ್ವಗಳನ್ನು ಪ್ರತಿಜ್ಞೆ ಮಾಡಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


