ಯಲಹಂಕ, ಬೆಂಗಳೂರು: ವಾಸ್ತುಶಿಲ್ಪ, ಯೋಜನೆ ಮತ್ತು ವಿನ್ಯಾಸವು ಕೇವಲ ತಂತ್ರಜ್ಞಾನಕ್ಕೆ ಒಳಪಡುವ ಶಿಸ್ತಿಗಳಲ್ಲ; ಅವು ಮಾನವ ಪರಿಕಲ್ಪನೆ, ಪ್ರತಿಭೆ ಹಾಗೂ ಸೃಜನಶೀಲತೆಯ ಸಶಕ್ತ ಅಭಿವ್ಯಕ್ತಿಗಳಾಗಿವೆ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್‌ನ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ ಹೇಳಿದರು.
ಅವರು ನಿಟ್ಟೆ ಸ್ಕೂಲ್ ಆಫ್ ಆರ್ಕಿಟೆಕ್ಚರ್, ಪ್ಲಾನಿಂಗ್ ಆ್ಯಂಡ್ ಡಿಸೈನ್‌ನ ವಿದ್ಯಾರ್ಥಿಗಳು ಸೃಷ್ಟಿಸಿರುವ ವಿನೂತನ, ಕಲಾತ್ಮಕ ಹಾಗೂ ವೈಜ್ಞಾನಿಕ ಪ್ರಾಜೆಕ್ಟ್‌ಗಳ ಪ್ರದರ್ಶನ ‘ಓಪನ್ ಹೌಸ್ 2026’ ಅನ್ನು ಉದ್ಘಾಟಿಸಿ ಮಾತನಾಡಿದರು. ವಾಸ್ತುಶಿಲ್ಪಿಗಳು, ಯೋಜಕರು ಹಾಗೂ ವಿನ್ಯಾಸಕಾರರು ನಿರ್ಮಿಸುವ ಕಟ್ಟಡಗಳು ಕೇವಲ ಭೌತಿಕ ರಚನೆಗಳಾಗಿ ಉಳಿಯದೆ, ತಾಂತ್ರಿಕ ಪರಿಪಕ್ವತೆ ಮತ್ತು ಕಲಾತ್ಮಕ ಅಭಿವ್ಯಕ್ತಿಗಳ ಸಮ್ಮಿಲನದಿಂದ ಸದಾ ಸ್ಫೂರ್ತಿಯ ಸೆಲೆಗಳಾಗುತ್ತವೆ ಎಂದು ಅವರು ಹೇಳಿದರು.
ಪ್ರದರ್ಶನದಲ್ಲಿರುವ ವಿದ್ಯಾರ್ಥಿಗಳ ಪ್ರಾಜೆಕ್ಟ್‌ಗಳಲ್ಲಿ ಕಲೆ ಮತ್ತು ತಂತ್ರಜ್ಞಾನಗಳ ಸಮರ್ಥ ಸಂಯೋಜನೆ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಸಾಂಸ್ಕೃತಿಕ ಮೌಲ್ಯಗಳು, ತಂತ್ರಜ್ಞಾನದ ನವೀನ ಆವಿಷ್ಕಾರಗಳು ಹಾಗೂ ಪರಿಸರ ಸಮತೋಲನದ ಕುರಿತ ಜಾಗೃತಿ ಪ್ರತಿಬಿಂಬಿತವಾಗಿದೆ. ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ಅನ್ವೇಷಣಾತ್ಮಕ ಚಿಂತನೆಗಳು ಈ ಪ್ರದರ್ಶನಕ್ಕೆ ವಿಶೇಷ ಮೆರಗು ನೀಡಿವೆ.
ಈ ಪ್ರದರ್ಶನವು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ನಿಟ್ಟೆ ಸ್ಕೂಲ್ ಆಫ್ ಆರ್ಕಿಟೆಕ್ಚರ್, ಪ್ಲಾನಿಂಗ್ ಆ್ಯಂಡ್ ಡಿಸೈನ್ ಸಂಸ್ಥೆಯಲ್ಲಿ ಜನವರಿ 10ರವರೆಗೆ ನಡೆಯಲಿದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಪ್ರದರ್ಶನ ವೀಕ್ಷಣೆಗೆ ಅವಕಾಶವಿದ್ದು, ಬೆಂಗಳೂರು ನಗರ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ವಾಸ್ತುಶಿಲ್ಪ ಮತ್ತು ವಿನ್ಯಾಸವನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಆಸಕ್ತರು ಉಚಿತವಾಗಿ ವೀಕ್ಷಿಸಬಹುದು.
ಈ ಸಂದರ್ಭದಲ್ಲಿ ಮಾತನಾಡಿದ ನಿಟ್ಟೆ ಸ್ಕೂಲ್ ಆಫ್ ಆರ್ಕಿಟೆಕ್ಚರ್, ಪ್ಲಾನಿಂಗ್ ಆ್ಯಂಡ್ ಡಿಸೈನ್‌ನ ಪ್ರಾಂಶುಪಾಲೆ ಪ್ರೊ. ನಂದಿತಾ ನಾಗರಾಜ್, ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನ ಯುಗದಲ್ಲಿ ಮಾನವ ಪ್ರತಿಭೆ ಮತ್ತು ಪರಿಕಲ್ಪನೆಗಳು ಸಮಾಜದಲ್ಲಿ ಆಮೂಲಾಗ್ರ ಬದಲಾವಣೆ ತರಬಲ್ಲವು ಎಂಬುದನ್ನು ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್‌ಗಳ ಮೂಲಕ ಸಮರ್ಥವಾಗಿ ಸಾದರಪಡಿಸಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯ ಎಂದು ಹೇಳಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

