ಕೋಟೆಗುಡ್ಡದಲ್ಲಿ ಶ್ರೀ ಆಂಜನೇಯ ಸ್ವಾಮಿಗೆ ವಾರ್ಷಿಕ ವಿಶೇಷ ಪೂಜೆ, ಪವಮಾನ ಅಭಿಷೇಕ

Upayuktha
0


ಕೊಪ್ಪ: ಕೊಪ್ಪ ತಾಲೂಕಿನ ಸಿಗದಾಳು ಗ್ರಾಮದಲ್ಲಿರುವ ಸುಮಾರು 400 ವರ್ಷಗಳ ಇತಿಹಾಸ ಪ್ರಸಿದ್ಧ ಕೋಟೆಗುಡ್ಡದಲ್ಲಿ ಇಂದು ಶ್ರೀ ಆಂಜನೇಯ ಸ್ವಾಮಿಗೆ ವಾರ್ಷಿಕ ವಿಶೇಷ ಪೂಜೆ ಹಾಗೂ ಪವಮಾನ ಅಭಿಷೇಕ ಶ್ರದ್ಧಾಭಕ್ತಿಯಿಂದ ನೆರವೇರಿತು.


ಸಿಗದಾಳು ಕೋಟೆಗುಡ್ಡ ಭಕ್ತಾಂಜನೇಯ ಪೂಜಾ ಸಮಿತಿಯ ಆಶ್ರಯದಲ್ಲಿ ಆಯೋಜಿಸಲಾದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಗ್ರಾಮಗಳ ಭಕ್ತರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 400ಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಂಡಿದ್ದರು.


ಪೂಜಾ ವಿಧಿ ವಿಧಾನಗಳನ್ನು ಪುರೋಹಿತರಾದ ಶಿವಶಂಕರ ಭಟ್ (ಸಿಗದಾಳು) ನೆರವೇರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಪ್ರಶಾಂತ್ ಕುಮಾರ್ ಸಿಗದಾಳು, ಉಪಾಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಅಶೋಕ ಸಿಗದಾಳು, ಸಹಕಾರ್ಯದರ್ಶಿ ಭರತ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಪೂಜೆಯ ನಂತರ ಕೋಟೆಗುಡ್ಡದ ಕೆಳಭಾಗದಲ್ಲಿರುವ ದೇವಪ್ಪ ಮಾಸ್ಟರ್ ಅವರ ತೋಟದಲ್ಲಿ ಸಮಸ್ತ ಭಕ್ತರಿಗೆ ಪ್ರಸಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.


ಈ ಸಂದರ್ಭದಲ್ಲಿ ಇತಿಹಾಸ ಪ್ರಸಿದ್ಧ ಕೋಟೆಗುಡ್ಡದಲ್ಲಿ ಸುಮಾರು ಎಂಟು ವರ್ಷಗಳ ಹಿಂದೆ ಇಂದಿನ ಹರಿಹರಪುರ ಮಠಾಧೀಶರು ಶ್ರೀ ಆಂಜನೇಯ ಸ್ವಾಮಿಯ ಮೂರ್ತಿ ಹಾಗೂ ಭಗವಾದ್ವಜವನ್ನು ಪ್ರತಿಷ್ಠಾಪಿಸಿದ್ದನ್ನು ಸ್ಮರಿಸಲಾಯಿತು.


ಕೆಳದಿ ವಂಶದ ಪ್ರಸಿದ್ಧ ದೊರೆ ಶಿವಪ್ಪನಾಯಕನ ಕಾಲದಲ್ಲಿ ಪಾಳೇಗಾರರು ನಿರ್ಮಿಸಿ ವಾಸವಿದ್ದ ಕೋಟೆಯೆಂದು ಹೇಳಲಾಗುವ ಈ ಕೋಟೆಗುಡ್ಡದಲ್ಲಿ ಹಿಂದೆ ಮಹಾಲಿಂಗೇಶ್ವರನ ದೇಗುಲವಿದ್ದು, ಪಾಳೇಗಾರರ ವಂಶ ನಶಿಸಿದ ನಂತರ ಅಲ್ಲಿದ್ದ ಮಹಾಲಿಂಗೇಶ್ವರನ ಮೂರ್ತಿಯನ್ನು ನುಗ್ಗಿಮಕ್ಕಿಗೆ ತಂದು ಪ್ರತಿಷ್ಠಾಪಿಸಿ ನಿತ್ಯ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ. ಈ ಪೂಜಾ ಪರಂಪರೆ ಇಂದಿಗೂ ಮುಂದುವರಿದಿದೆ.


ಕೋಟೆಗುಡ್ಡದಲ್ಲಿ ಇಂದಿಗೂ ಶಿಥಿಲಗೊಂಡ ಕೋಟೆ ಅವಶೇಷಗಳು, ಕುದುರೆ ಲಾಯ, ಕಲ್ಯಾಣಿ, ಕಲ್ಲಿನಿಂದ ನಿರ್ಮಿತ ಹೆಬ್ಬಾಗಿಲು, ಅಸಂಖ್ಯಾತ ನಾಗರ ಕಲ್ಲುಗಳು, ದ್ವಾರ ಬಾಗಿಲಿನ ಹೊರಭಾಗದಲ್ಲಿ ಶತ್ರುಗಳಿಂದ ರಕ್ಷಣೆಗೆ ನಿರ್ಮಿಸಿದ್ದ ವಿಶಾಲ ನೀರಿನ ಕಾಲುವೆ ಹಾಗೂ ಅಪಾಯದಿಂದ ತಪ್ಪಿಸಿಕೊಳ್ಳಲು ಬಳಸಲಾಗುತ್ತಿದ್ದ ಗುಹಾಂತರ ಮಾರ್ಗಗಳು ಕಂಡುಬರುತ್ತಿದ್ದು, ಈ ಸ್ಥಳವು ಚಾರಣ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ.


ಚಾರಣಕ್ಕೆ ಸೆಪ್ಟೆಂಬರ್‌ನಿಂದ ಫೆಬ್ರುವರಿ ಅವಧಿ ಸೂಕ್ತವಾಗಿದ್ದು, ಅರಣ್ಯ ಇಲಾಖೆಯಿಂದ ನಿಗದಿಪಡಿಸಿದ ಪ್ರವೇಶ ದರವನ್ನು ಆನ್‌ಲೈನ್ ಮೂಲಕ ಪಾವತಿಸಿ ಚಾರಣ ಮಾಡಬಹುದಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top