ವಿದ್ಯಾಗಿರಿ: 'ಕ್ರಿಯಾಶೀಲ ನ್ಯಾಯಾಂಗದಿಂದ ಸದೃಢ ಪ್ರಜಾಪ್ರಭುತ್ವ' ಎಂದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು, 'ಜಾತಿ ಮತ ಮೀರಿದ ಬಾಂಧವ್ಯ ಹಾಗೂ ಸಮಾನತೆಯೇ ದೇಶದ ಸುಭದ್ರತೆಯ ಅಡಿಪಾಯ' ಎಂದು ಸಂದೇಶ ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಪುತ್ತಿಗೆ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ಬೃಹತ್ ವೇದಿಕೆಯಲ್ಲಿ ಸೋಮವಾರ ಹಮ್ಮಿಕೊಂಡ 77ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ವೈವಿಧ್ಯತೆಯಲ್ಲಿ ಏಕತೆಯೇ ದೇಶದ ಸುಭದ್ರತೆ. ಈ ಸದೃಢತೆಗೆ ನ್ಯಾಯಾಲಯದ ಕ್ರೀಯಾಶೀಲ ಪಾತ್ರ ಬಹುಮುಖ್ಯ. ಕಾನೂನು ಉಲ್ಲಂಘನೆ, ಅರಾಜಕತೆ ಮತ್ತಿತರ ಸಂದರ್ಭಗಳಲ್ಲಿ ನ್ಯಾಯಾಲಯವು ಪ್ರಜಾಪ್ರಭುತ್ವ ಚಿಂತನೆ ಮೂಲಕ ಪ್ರತಿ ನಾಗರಿಕರ ಹಕ್ಕುಗಳ ರಕ್ಷಣೆಗೆ ಬದ್ಧವಾಗಿದೆ. ಪ್ರಜಾಪ್ರಭುತ್ವದ ಕಾವಲು ನಾಯಿಯಂತೆ ನ್ಯಾಯಾಲಯ ಎಚ್ಚರದಿಂದ ಕಾರ್ಯ ನಿರ್ವಹಿಸುತ್ತದೆ ಎಂದು ವಿವರಿಸಿದರು
‘ಸ್ವಾತಂತ್ರ‍್ಯದ ಸದ್ಬಳಕೆಯಿಂದ ದೇಶದ ಅಭಿವೃದ್ಧಿ ಸಾಧ್ಯ'ಎಂದ ಅವರು, 'ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಸತ್ಯ ಮತ್ತು ಅಹಿಂಸೆ ನಮ್ಮ ಸ್ವಾತಂತ್ರ‍್ಯದ ಮೂಲ ಮಂತ್ರವಾಗಿದೆ. ಇದಕ್ಕೆ 1930ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಹಾಗೂ 1942ರ ಕ್ವಿಟ್ ಇಂಡಿಯಾ ಚಳವಳಿಗಳು ಪ್ರಮುಖ ನಿದರ್ಶನ. ಇದರಿಂದಾಗಿ 2ನೇ ಮಹಾಯುದ್ಧ ಸಂದರ್ಭದಲ್ಲಿ ಬ್ರಿಟಿಷರು ಸ್ವಾತಂತ್ರ‍್ಯ ನೀಡುವ ಆಲೋಚನೆಗೆ ಬಂದರು. 1946ರಲ್ಲಿಯೇ ಸಂವಿಧಾನ ರಚಿಸುವ ಕಾರ್ಯ ಆರಂಭಗೊAಡಿತು. ದೇಶಕ್ಕೆ ಸಂವಿಧಾನವೇ ಸುಪ್ರೀಂ. ನ್ಯಾಯಲಯ ಸಂವಿಧಾನದ ಸಂರಕ್ಷಕ ಎಂದರು.
ದೇಶದ ಬೆಳವಣಿಗೆ ಹಾಗೂ ಸುವ್ಯವಸ್ಥೆಯು ಆರೋಗ್ಯ ಮತ್ತು ಶಿಕ್ಷಣದಲ್ಲಿ ಇದೆ. ಆ ಮಹಾನ್ ಕಾರ್ಯ ಮಾಡುತ್ತಿರುವ ಡಾ.ಎಂ.ಮೋಹನ ಆಳ್ವ ಅನನ್ಯ ಸಾಧಕರು ಎಂದು ಶ್ಲಾಘಿಸಿದರು.
ಬದುಕಿನ ಯಶಸ್ಸಿಗೆ ಸ್ವಾಮಿ ವಿವೇಕಾನಂದ ಅವರು ಶಿಸ್ತು, ಶ್ರಮ, ಆತ್ಮ ವಿಶ್ವಾಸ, ಸಮಯಪ್ರಜ್ಞೆ ಮತ್ತು ನಿರ್ಭಯತೆ ಎಂಬ ಪಂಚಸೂತ್ರಗಳನ್ನು ನೀಡಿದ್ದಾರೆ. ನಾನು ಜೀವನದಲ್ಲಿ ಪಾಲಿಸಿದ್ದೇನೆ. ನೀವೂ ಅನುಸರಿಸಿ ಎಂದು ಮಕ್ಕಳಿಗೆ ಹಿತವಚನ ಹೇಳಿದರು
ಸನ್ನಡತೆ ಹಾಗೂ ಬಾಂಧವ್ಯ ಹೊಂದಿದ ನಾಗರಿಕ ಸಮಾಜದಿಂದ ಯಶಸ್ಸು ಸಾಧ್ಯ. ಅದಕ್ಕಾಗಿ ಆರ್ಥಿಕ, ಸಾಮಾಜಿಕ, ರಾಜಕೀಯ ಶೈಕ್ಷಣಿಕ ಸಮಾನತೆಯೇ ನಮ್ಮ ಐಕ್ಯ ಮಂತ್ರ. ಜಾತಿ- ಮತ ಮತ್ತಿತರ ವೈವಿಧ್ಯತೆ ನಡುವೆಯೂ ಐಕ್ಯತೆಯಿಂದ ಇದ್ದರೆ ಶಕ್ತಿ ಎಂದು ವಿಶ್ಲೇಷಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಆಡಳಿತಾಧಿಕಾರಿಗಳು, ಬೋಧಕ, ಬೋಧಕೇತರ ಸಿಬ್ಬಂದಿ, ಪೋಷಕರು, ವಿದ್ಯಾರ್ಥಿಗಳು, ಸ್ಥಳೀಯರು ಸೇರಿದಂತೆ 30000ಕ್ಕೂ ಅಧಿಕ ಜನಸಮೂಹ ದೇಶಭಕ್ತಿಯ ಕಹಳೆ ಮೊಳಗಿಸಿತು.
ಇದಕ್ಕೂ ಮೊದಲು, ವಂದೇ ಮಾತರಂ ಮೊಳಗಿದ ಬಳಿಕ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ತ್ರಿವರ್ಣ ಧ್ವಜ ಆರೋಹಣ ಮಾಡಿದ್ದು, ಬಳಿಕ ರಾಷ್ಟ್ರಗೀತೆ ‘ಜನ ಗಣ ಮನ' ಮೊಳಗಿತು. ಎಲ್ಲರೂ ಗೌರವ ಸಲ್ಲಿಸಿದರು.
ವೇದಿಕೆಯ ಬಾನೆತ್ತರದಲ್ಲಿ ತಿರಂಗಾ ಹಾರಾಡಿದರೆ, ಸಭಾಂಗಣದಲ್ಲಿ ನಿಂತ ವಿದ್ಯಾರ್ಥಿಗಳು ತ್ರಿವರ್ಣದಲ್ಲಿ Bharath ಮೂಡಿಸುವ ಮೂಲಕ ದೇಶಪ್ರೇಮ ಸಾರಿದರು. ಆಳ್ವಾಸ್ ಸಂಸ್ಥೆಯ 6257 ವಿದ್ಯಾರ್ಥಿಗಳು ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ಭಾರತ ವನ್ನು ಮೂಡಿಸಿದರು.
ಸಾಂಸ್ಕೃತಿಕ ಗಾಯನ ತಂಡವು ಕೋಟಿ ಕಂಠೋಸೇ ಗಾನ ಹಾಡಿದಾಗ ಸಭಾಂಗಣದಲ್ಲಿ ಸೇರಿದ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಎಲ್ಲರೂ ತ್ರಿವರ್ಣ ರಾಷ್ಟ್ರ ಧ್ವಜ ಬೀಸಿ ದೇಶದ ಪ್ರೀತಿಯನ್ನು ಸಾದರ ಪಡಿಸಿದರು. ವೇದಿಕೆಗೆ ಬಂದ ತ್ರಿವರ್ಣ ಸಿಂಹ ವೇಷ ವಿಶೇಷ ಮೆರುಗು ನೀಡಿದವು.
ಆವರಣದ ಎಲ್ಲೆಲ್ಲೂ ಕೇಸರಿ, ಬಿಳಿ, ಹಸಿರು ವರ್ಣದ ರಂಗು ಸಂಭ್ರಮಿಸಿತು. ಸುಮಾರು 300 ಕ್ಕೂ ಅಧಿಕ ಮಾಜಿ ಸೈನಿಕರೂ ಧ್ವಜಕ್ಕೆ ವಂದನೆ ಸಲ್ಲಿಸಿದರು. ಬಾನಂಗಳಕ್ಕೆ ತ್ರಿವರ್ಣ ರಂಗು ಬ್ಲೋವರ್ ಮೂಲಕ ಚಿಮ್ಮಿ ಬಂತು.
ಆರಂಭದಲ್ಲಿ ಎನ್‌ಸಿಸಿ ಸೀನಿಯರ್ ಅಂಡರ್ ಆಫೀಸರ್ ಗೌರಿ ಜಿ.ಪಿ ಅವರಿಂದ ಗೌರವ ಶ್ರೀರಕ್ಷೆ ಸ್ವೀಕರಿಸಿದ ನ್ಯಾಯಮೂರ್ತಿ ಅವರು, ಬ್ಯಾಂಡ್ ಹಾಗೂ ಗೌರವಗಳೊಂದಿಗೆ ವೇದಿಕೆಗೆ ಬಂದರು. ಸೀನಿಯರ್ ಅಂಡರ್ ಆಫೀಸರ್ ಯದುನಂದನ್ ಪರೇಡ್ ವರದಿ ಸಲ್ಲಿಸಿದರು. ಕರ್ನಾಟಕ ಸಿಇಟಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದ ಅಕ್ಷಯ್ ಹೆಗ್ಡೆ ಅವರಿಗೆ 2ಲಕ್ಷ ರೂಪಾಯಿ ನೀಡಿ ಗೌರವಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ ವಿನಯ್ ಆಳ್ವ ಶ್ರೀಪತಿ ಭಟ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ಇದ್ದರು.
ಫ್ಲ್ಯಾಗ್ ಏರಿಯಾದಲ್ಲಿ ವಸುದೈವ ಕುಟುಂಬಕಂ ಪರಿಕಲ್ಪನೆಯ ಮಣ್ಣಿನ ಕಲಾಕೃತಿ ಎಲ್ಲರ ಗಮನ ಸೆಳೆಯಿತು.
ಉಪನ್ಯಾಸಕರಾದ ರಾಜೇಶ್ ಡಿ’ಸೋಜಾ ಹಾಗೂ ಕಲಾ ವಿಭಾಗದ ಡೀನ್ ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


