ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ : ಭಾರತದ ಮೊದಲ ಮಹಿಳಾ ಶಿಕ್ಷಕಿ

Upayuktha
0


ಮಕಾಲೀನ ವಿಸ್ಮಯದ ವಿಶ್ವವು ಸ್ಪರ್ಧಾತ್ಮಕ ಯುಗವಾಗಿದೆ. ಇಪ್ಪತ್ತೊಂದನೇ ಶತಮಾನದಲ್ಲಿ ವಿಶ್ವವು ಎಂದೆಂದೂ ಕಂಡು ಕೇಳರಿಯದಷ್ಟು ಬೆಳವಣಿಗೆ ಮತ್ತು ವಿಕಾಸವನ್ನು ಕಂಡಿದೆ. ಈ ವಿಶ್ವದ ವಿಭಿನ್ನ ಕ್ಷೇತ್ರಗಳಾದ ವಿಜ್ಞಾನ ಮತ್ತು ತಂತ್ರಜ್ಞಾನ, ಸಾಮಾಜಿಕ ಮತ್ತು ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ, ಐತಿಹಾಸಿಕ ಮತ್ತು ಸಾಂಸ್ಕೃತಿಕ ವಿಚಾರಗಳಲ್ಲಿ ವೈವಿಧ್ಯಮಯವಾದ ಪ್ರಗತಿ ಕಂಡು ಬಂದಿದೆ. ಆದರೆ ನಮ್ಮ ದೇಶದ ಚರಿತ್ರೆಯ ಪುಟಗಳ ಆರಂಭದಲ್ಲಿ ಶೈಕ್ಷಣಿಕ ಕ್ಷೇತ್ರವನ್ನು ಅವಲೋಕಿಸಿದಾಗ ಇಂದಿಗಿಂತ ಅಂದು ಕಾಲಘಟ್ಟದ ಹಿಂದುಳಿಯುವಿಕೆ ಕಂಡುಬಂದಿತ್ತು. ಇಪ್ಪತ್ತೊಂದನೇ ಶತಮಾನದಲ್ಲಿ ಸಾಕ್ಷರತೆಯು ಹೆಮ್ಮರವಾಗಿ ಬೇರು ಬಿಡಲು ಹತ್ತೊಂಬತ್ತನೇ ಶತಮಾನದಲ್ಲಿ ಸಾಕ್ಷರತೆಯ ಬೆಳವಣಿಗೆಗಾಗಿ ಅಕ್ಷರಶಃ ಕಾದಾಡಿದ ವೀರಾಗ್ರಣಿಗಳನ್ನು ಸ್ಮರಿಸುವುದು ನಾವು ಅವರಿಗೆ ನೀಡುವ ಗೌರವವೇ ಸರಿ. ಹತ್ತೊಂಬತ್ತನೇ ಶತಮಾನದ ಕಾಲಘಟ್ಟದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಉಂಟು ಮಾಡಿದ ಅಕ್ಷರದವ್ವ ಸಾವಿತ್ರಿಬಾಯಿ ಪುಲೆಯವರನ್ನು ಸದಾ ಸ್ಮರಿಸಬೇಕು. ಏಕೆಂದರೆ ಅಂದು ಮಹಿಳೆಯ ಸ್ಥಾನ ಮನೆಯ ಅಡುಗೆ ಕೋಣೆಗೆ ಸೀಮಿತವಾಗಿತ್ತು. ಸಾವಿತ್ರಿಬಾಯಿ ಫುಲೆಯವರ ಹೋರಾಟದ ಫಲವಾಗಿ ಮಹಿಳೆ ಮನೆಯಿಂದ ಹೊರಬಂದು ಶಿಕ್ಷಣ ಪಡೆದು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ವತಂತ್ರವಾಗಿ ಸ್ವಾವಲಂಬಿಯಾಗಿ ಜೀವನ ಸಾಗಿಸಲು ಅವಕಾಶ ಸಿಕ್ಕಿದೆ. ಅಂದಮೇಲೆ ಅಂತಹ ಮಹಾ ಮಹಿಳೆ ಅಕ್ಷರ ಮಾತೆ ಸಾವಿತ್ರಿಬಾಯಿ ಪುಲೆಯವರ ಬಗ್ಗೆ ತಿಳಿಯೋಣ ಬನ್ನಿ.


ಕ್ರಾಂತಿಜ್ಯೋತಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆಯವರು ಸ್ವಾತಂತ್ರ್ಯ ಪೂರ್ವ ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿಯಾಗಿದ್ದಾರೆ. ಸಾಮಾಜಿಕ ಬದಲಾವಣೆಯ ಕನಸು ಕಾಣುವುದಕ್ಕು. ಮಾತನಾಡುವುದಕ್ಕು ಬಹಳ ಸುಲಭ. ಆದರೆ ಕಂಡ ಕನಸನ್ನು ನೆನಸು ಮಾಡುವುದು ಮಾತನಾಡಿದಷ್ಟು ಸುಲಭವೇನಲ್ಲ. ಬಹು ಕಷ್ಟಸಾಧ್ಯದ ವಿಚಾರವಾಗಿದೆ. ಕಾರಣ ಸಮಾಜದಲ್ಲಿನ ಆತಂಕ, ಅಂಧಕಾರ, ಅಜ್ಞಾನ, ಮೂಢನಂಬಿಕೆ, ಕಂದಾಚಾರಗಳ ಕಟ್ಟುಪಾಡುಗಳ ಸಂಕೋಲೆಗಳು ಬಿಗಿಯಾದ ಬಂಧನವನ್ನು ಬೆಸೆದಿರುತ್ತವೆ. ಒಂದೊಮ್ಮೆ ಸಮಾಜದಲ್ಲಿನ ಜನ ಪ್ರಜ್ಞಾ ಹೀನ ವ್ಯವಸ್ಥೆಯಲ್ಲಿ ಬದುಕುಳಿಯಬೇಕಿತ್ತು. ಆದರೆ ಸಾಮಾಜಿಕ ಮತ್ತು ಇನ್ನಿತರ ಎಲ್ಲಾ ಕ್ಷೇತ್ರಗಳ ಬದಲಾವಣೆಗೆ ಶಿಕ್ಷಣವೊಂದು ಮೂಲ ಅಸ್ತ್ರವೆನ್ನುವುದನ್ನು ಮನವರಿಕೆ ಮಾಡಿಕೊಡುವ ಮೂಲಕ ಶಿಕ್ಷಣದಿಂದ ಏನೆಲ್ಲವನ್ನು ಸಾಧಿಸಬಹುದು ಎನ್ನುವ ಬಗ್ಗೆ ಸಾಧಿಸಿ ತೋರಿಸಿದ ಹತ್ತೊಂಬತ್ತನೇ ಶತಮಾನದಲ್ಲಿನ ಮಹಿಳಾ ಶಿಕ್ಷಣ ಮತ್ತು ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಮುಖ ಭಾರತೀಯ ಸ್ತ್ರೀ ಸಂಕುಲದ ಚಿರಧ್ರುವತಾರೆ, ಸಾಧಕರು, ಸಾಹಿತಿ, ಶಿಕ್ಷಣ ತಜ್ಞೆ, ಸಮಾಜ ಸುಧಾರಕರು ಆದ ಸಾವಿತ್ರಿ ಬಾಯಿ ಫುಲೆಯವರ ಜೀವನ ಗಾಥೆ ಅನನ್ಯವೆನಿಸಿದೆ.


ಸ್ತ್ರೀಯರು ಗೃಹಿಣಿಯಾಗಿರಬೇಕಷ್ಟೇ ವಿನಃ ಅಕ್ಷರಾಭ್ಯಾಸ ಕಲಿತು ವಿದ್ಯಾವಂತ ರಾಗುವ ಅವಶ್ಯಕತೆ ಇಲ್ಲ ಎಂಬ ಸ್ವಾತಂತ್ರ್ಯ ಪೂರ್ವದಲ್ಲಿನ ಅನಿಷ್ಟ ಪದ್ಧತಿಯ ಸನ್ನಿವೇಶದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲೇಬೇಕೆಂದು ಶಾಲೆಗಳನ್ನು ತೆರೆದು ತಾವೇ ಶಿಕ್ಷಕಿಯಾಗಿ ವಿದ್ಯೆ ಕಲಿಸುತ್ತಿದ್ದ ಸಾವಿತ್ರಿಬಾಯಿಯವರ ಪರಿಶ್ರಮ ವರ್ತಮಾನದ ಮತ್ತು ಭವಿಷ್ಯದ ಮಹಿಳಾವರ್ಗಕ್ಕೆ ಆದರ್ಶಪ್ರಾಯವಾಗಿದೆ.


ಸಾವಿತ್ರಿಬಾಯಿ ಅವರು 1831 ನೇ ಇಸವಿ ಜನವರಿ 3, ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಖಂಡಾಲ ತಾಲ್ಲೂಕಿನ ಒಂದು ಸಣ್ಣ ಹಳ್ಳಿ ನಯಗಾಂವ್ ನಲ್ಲಿ ಜನಿಸಿದರು. ಇವರ ತಂದೆ ಖಂಡೋಜಿ ನೆವಸೆ ಪಾಟೀಲ ಮತ್ತು ತಾಯಿ ಲಕ್ಷ್ಮೀಬಾಯಿ ಸಮಾಜದಲ್ಲಿ ಪ್ರತಿಷ್ಠಿತ ಜಮೀನ್ದಾರರು ಮತ್ತು ಶ್ರೀಮಂತ ಕುಟುಂಬದವರಾಗಿದ್ದರು. ಸಾವಿತ್ರಿಬಾಯಿ ಬಾಲ್ಯದಿಂದಲೇ ಚುರುಕುತನ ಮತ್ತು ಧೈರ್ಯವನ್ನು ಮೈಗೂಡಿಸಿಕೊಂಡಿದ್ದಳು. ಅಂದಿನ ಸಮಾಜದಲ್ಲಿ ಹೆಣ್ಣು ಮಕ್ಕಳು ಶಾಲೆಗೆ ಹೋಗುವಂತಿರಲಿಲ್ಲ. ಶಿಕ್ಷಣ ಪಡೆಯುವಂತಿರಲಿಲ್ಲ. ಮಹಿಳೆಯರು ಅನಕ್ಷರತೆಯ ಕೂಪದಲ್ಲಿ ಬಡತನದ ಬೇಗೆಯಲ್ಲಿ ನರಳುತ್ತಿದ್ದ ಕಾಲವದು. ಸಾವಿತ್ರಿಬಾಯಿಗೆ ಬಾಲ್ಯದಲ್ಲೆ ಸಮಾಜದ ಹಲವಾರು ಸಮಸ್ಯೆಗಳು ಚಿಂತನೆಗಳಾಗಿ ಕಾಡತೊಡಗಿದವು. ಹೆಣ್ಣು ಮಕ್ಕಳು ಏಕೆ ಅಕ್ಷರ ಕಲಿಯಬಾರದು? ಶಾಲೆಗೆ ಏಕೆ ಹೋಗುವಂತಿಲ್ಲ? ಹೆಣ್ಣು ಮಕ್ಕಳು ಶಾಲೆಗೆ ಹೋಗುವುದರಿಂದ ಯಾರಿಗಾದರೂ ತೊಂದರೆಯಾಗುತ್ತದೆಯೇ? ಹೆಣ್ಣುಮಕ್ಕಳಿಗೆ ಮಾತ್ರ ಈ ನಿರ್ಬಂಧವೇಕೆ? ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಸಮಾನತೆ ಇರಬಾರದೆ? ಹೆಣ್ಣನ್ನು ಆದಿಶಕ್ತಿಯೆಂದು ಪೂಜಿಸಿ ಮನೆಯ ಮೂಲೆಯೊಂದರಲ್ಲಿ ನಿರ್ಬಂಧಿಸುವುದು ಎಷ್ಟು ಸರಿ? ಎಂದೆಲ್ಲಾ ಚಿಂತಿಸುತ್ತಿದಳು.


ಚಿಕ್ಕ ಮುಗ್ಧ ಬಾಲಕಿ ಸಾವಿತ್ರಿಬಾಯಿ ಹತ್ತನೇ ವಯಸ್ಸಿನಲ್ಲಿ ಹದಿಮೂರು ವರ್ಷ ವಯಸ್ಸಿನ ಜ್ಯೋತಿ ಬಾ ಫುಲೆ ಅವರನ್ನು ವಿವಾಹವಾದರು. ಅಂದಿನಿಂದ ಸಾವಿತ್ರಿಬಾಯಿ ಫುಲೆಯಾದರು. ಜ್ಯೋತಿ ಬಾ ಫುಲೆಯವರೇ ತಮ್ಮ ಪತ್ನಿ ಸಾವಿತ್ರಿ ಬಾಯಿ ಫುಲೆಯವರಿಗೆ ಶಿಕ್ಷಣ ಕಲಿಸಲು ಪ್ರಥಮ ಗುರುವಾದರು. ಪ್ರಾಥಮಿಕ ಶಿಕ್ಷಣವನ್ನು ಮನೆಯಲ್ಲಿಯೇ ಕಲಿತರು. ಮುಂದಿನ ಶಿಕ್ಷಣಕ್ಕೆ ಉತ್ತೇಜನ ನೀಡುವ ಮೂಲಕ ಸಾವಿತ್ರಿಗೆ ಧೈರ್ಯ ತುಂಬಿ ವಿದ್ಯಾಭ್ಯಾಸಕ್ಕೆ ಪ್ರತಿಷ್ಠಿತ ಸ್ಕಾಟಿಷ್ ಮಿಷನರಿ ಶಾಲೆಗೆ ಸೇರಿಸಿದರು. ಅಲ್ಲಿ ಅವರು ಏಳನೆಯ ತರಗತಿಯವರೆಗೆ ವ್ಯಾಸಂಗ ಮಾಡಿದರು. ಸಾವಿತ್ರಿಬಾಯಿ ಫುಲೆಯವರ ಮುಂದಿನ ವಿದ್ಯಾಭ್ಯಾಸದ ಜವಾಬ್ದಾರಿ ಜ್ಯೋತಿ ಬಾ ಫುಲೆಯವರ ಗೆಳೆಯರಾದ ಸಖಾರಾಮ್ ಯಶವಂತ ಪರಾಂಜಪೆ ಮತ್ತು ಕೇಶವ ಶಿವರಾಮ ಭಾವಲ್ಕರ್ ಅವರ ಮೇಲಿದ್ದು, ಆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸಾವಿತ್ರಿಬಾಯಿ ಫುಲೆ ಅವರು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿದರು. ಅವರು ಎರಡು ಶಿಕ್ಷಕರ ತರಬೇತಿ ಕಾರ್ಯಕ್ರಮಗಳಿಗೆ ಸೇರಿಕೊಂಡರು. ಮೊದಲನೆಯ ಕೋರ್ಸ್ ನ್ನು ಅಹ್ಮದ್‌ನಗರದಲ್ಲಿರುವ ಸಿಂಥಿಯಾ ಫರಾರ್ ಎಂಬ ಅಮೇರಿಕನ್ ಮಿಷನರಿ ನಡೆಸುತ್ತಿದ್ದ ಸಂಸ್ಥೆಯಲ್ಲಿ ಪೂರೈಸಿದರು. ಎರಡನೇ ಕೋರ್ಸನ್ನು ಪುಣೆಯ ಸಾಮಾನ್ಯ ಶಾಲೆಯಲ್ಲಿ ಪೂರ್ಣಗೊಳಿಸಿದರು. ಸರ್ಕಾರಿ ದಾಖಲೆಗಳ ಪ್ರಕಾರ ಅವರ ತರಬೇತಿಯನ್ನು ಗಮನಿಸಿದರೆ, ಸಾವಿತ್ರಿಬಾಯಿ ಮೊದಲ ಭಾರತೀಯ ಮಹಿಳಾ ಶಿಕ್ಷಕಿ ಮತ್ತು ಮುಖ್ಯೋಪಾಧ್ಯಾಯಿನಿ ಯಾಗಿರಬಹುದು ಎಂದು ತಿಳಿದುಬರುತ್ತದೆ. ಈ ಹಿನ್ನೆಲೆಯಲ್ಲಿ ಅವರ ಜನ್ಮದಿನವನ್ನು ಮಹಾರಾಷ್ಟ್ರದಲ್ಲಿ ಬಾಲಿಕಾ ದಿನ್ ಎಂದು ಆಚರಿಸಲಾಗುತ್ತದೆ.


ಸಾವಿತ್ರಿಬಾಯಿ ಪುಲೆಯವರು ಆ ಸಮಯದಲ್ಲಿ ಕ್ರಾಂತಿಕಾರಿ ಸ್ತ್ರೀವಾದಿಗಳಲ್ಲಿ ಒಬ್ಬರಾಗಿದ್ದ ಸಗುಣಾಬಾಯಿ ಅವರೊಂದಿಗೆ ಪುಣೆಯ ಮರಾಠವಾಡದಲ್ಲಿ ಬಾಲಕಿಯರ ಶಾಲೆಯಲ್ಲಿ ಕಲಿಸಲು ಪ್ರಾರಂಭಿಸಿದರು. 1851 ರಲ್ಲಿ ಸಾವಿತ್ರಿಬಾಯಿ ಫುಲೆ ಮತ್ತು ಜೋತಿಬಾ ಫುಲೆಯವರು ಪುಣೆಯಲ್ಲಿ ಹೆಣ್ಣುಮಕ್ಕಳಿಗಾಗಿ ಮೂರು ವಿಭಿನ್ನ ಶಾಲೆಗಳನ್ನು ಪ್ರಾರಂಭಿಸಿ ನಡೆಸುತ್ತಿದ್ದರು. ಮೂರು ಶಾಲೆಗಳಿಂದ ಸೇರಿ ಸುಮಾರು ಒಂದು ನೂರ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ದಾಖಲಾಗಿದ್ದರು. ಮುಂದಿನ ದಿನಗಳಲ್ಲಿ ಸಾವಿತ್ರಿಬಾಯಿ ಫುಲೆಯವರು ಹದಿನೆಂಟು ಶಾಲೆಗಳನ್ನು ತೆರೆದು ವಿವಿಧ ಜಾತಿಗಳ ಮಕ್ಕಳಿಗೆ ಅವಕಾಶ ಕಲ್ಪಿಸಿ ಅವರಿಗೆ ವಿದ್ಯೆ ಕಲಿಸಿದರು. ಸಾವಿತ್ರಿಬಾಯಿ ಮತ್ತು ಫಾತಿಮಾ ಶೇಖ್ ಅವರು ಮಹಿಳೆಯರಿಗೆ ಮತ್ತು ದೀನದಲಿತ ಜಾತಿಗಳ ಇತರ ಜನರಿಗೆ ಕಲಿಸಲು ಪ್ರಾರಂಭಿಸಿದರು. ದಲಿತರ ಶಿಕ್ಷಣದ ವಿರುದ್ಧ ವಿಶೇಷವಾಗಿ ಪುಣೆಯ ಮೇಲ್ಟಾತಿಯವರು ಇದನ್ನು ಅನೇಕರು ಸರಿಯಾಗಿ ಸ್ವೀಕರಿಸಲಿಲ್ಲ. ಸಾವಿತ್ರಿಬಾಯಿ ಮತ್ತು ಫಾತಿಮಾ ಶೇಖ್ ಅವರನ್ನು ಸ್ಥಳೀಯರು ಬೆದರಿಕೆ ಹಾಕಿದರು ಮತ್ತು ಸಾಮಾಜಿಕವಾಗಿ ಕಿರುಕುಳ ಮತ್ತು ಅವಮಾನ ಮಾಡಿದರು. ಸಾವಿತ್ರಿಬಾಯಿ ಫುಲೆ ಶಾಲೆಯತ್ತ ಹೆಜ್ಜೆ ಹಾಕಿದಾಗ ಅವರ ಮೇಲೆ ಹಸುವಿನ ಸಗಣಿ ಮತ್ತು ಗಂಜಲ, ಮಣ್ಣು, ಕಲ್ಲುಗಳನ್ನು ಎಸೆದರು. ಅಂತಹ ದೌರ್ಜನ್ಯಗಳನ್ನು ಅನುಭವಿಸಿದಾಗ್ಯೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ತನ್ನ ಗುರಿಯಿಂದ ಅವರು ಹಿಂದೆ ಸರಿಯಲಿಲ್ಲ. ದೃಢನಿಶ್ಚಯದ ಸಾವಿತ್ರಿಬಾಯಿ ಪುಲೆಯವರನ್ನು ಇದಾವ ಅವಮಾನಗಳೂ ನಿರುತ್ಸಾಹಗೊಳಿಸಲಾರವು ಏಕೆಂದರೆ ಅವರ ನಿರ್ಧಾರ ದೃಢವಾಗಿತ್ತು. ಸಾವಿತ್ರಿಬಾಯಿ ಮತ್ತು ಫಾತಿಮಾ ಶೇಖ್ ಅವರೊಂದಿಗೆ ಸಗುಣಾಬಾಯಿ ಸೇರಿಕೊಂಡರು, ಸಾವಿತ್ರಿಬಾಯಿ ಫುಲೆಯವರು ಅಂತಿಮವಾಗಿ ಶಿಕ್ಷಣ ಚಳವಳಿಯಲ್ಲಿ ನಾಯಕರಾದರು.


ಅಂದಿನ ಕಾಲದ ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ಸಲುವಾಗಿ ಪ್ರಯತ್ನಿಸಿದರು. ಕೆಳವರ್ಗದ ಜನರಿಗೆ ಸಮಾನ ಹಕ್ಕುಗಳನ್ನು ದೊರಕಿಸಿ ಕೊಡಲು ಪ್ರಯತ್ನ ಮಾಡಿದರು. ಹಿಂದೂ ಕೌಟುಂಬಿಕ ಜೀವನದ ಸುಧಾರಣೆಯಲ್ಲಿ ಅವರು ತಮ್ಮ ಪತಿಯೊಂದಿಗೆ ಅವರ ಪ್ರಯತ್ನಗಳಲ್ಲಿ ಜೊತೆಯಾಗಿ ಕೆಲಸ ಮಾಡಿದರು. ಸೆಪ್ಟೆಂಬರ್ 24, 1873 ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಜ್ಯೋತಿ ಬಾ ಫುಲೆ 'ಸತ್ಯಶೋಧಕ ಸಮಾಜ' ವನ್ನು ಸ್ಥಾಪಿಸಿದರು. ಈ ಸಮಾಜ ಸುಧಾರಣಾ ಸಂಸ್ಥೆಯೊಂದಿಗೆ ಸಾವಿತ್ರಿಬಾಯಿ ಫುಲೆಯವರು ಸಂಬಂಧ ಹೊಂದಿದ್ದರು. ಸಾಮಾಜಿಕ ಮತ್ತು ಶೈಕ್ಷಣಿಕ ಸುಧಾರಣೆಗಳನ್ನು ಬಯಸುವ ಎಲ್ಲಾ ಜನರನ್ನು ಮತ್ತು ಸರ್ಕಾರಿ ಅಧಿಕಾರಿಗಳನ್ನು ಸದಸ್ಯರನ್ನಾಗಿ ಒಳಗೊಂಡಿತ್ತು ಸತ್ಯ ಶೋಧಕ ಸಮಾಜದ ಉದ್ದೇಶವು ಮಹಿಳೆಯರು, ಶೂದ್ರರು, ದಲಿತರು ಮತ್ತು ಸೌಲಭ್ಯ ವಂಚಿತರ ಏಳಿಗಯನ್ನು ಬಯಸುವುದೇ ಆಗಿದೆ. ಪುಲೆ ದಂಪತಿಗಳು ಯಾವುದೇ ಪುರೋಹಿತರು ಅಥವಾ ಯಾವುದೇ ವರದಕ್ಷಿಣೆಯಿಲ್ಲದೆ ಸಮಾಜದಲ್ಲಿ ಕನಿಷ್ಠ ವೆಚ್ಚದ ವಿವಾಹಗಳನ್ನು ಏರ್ಪಡಿಸಿದರು. ವಧು-ವರರಿಬ್ಬರೂ ತಮ್ಮ ವಿವಾಹದ ಸಮಯದಲ್ಲಿ ಸಮಾನವಾಗಿ ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡುತ್ತಿದ್ದರು.


ಫುಲೆ ದಂಪತಿಗಳಿಗೆ ಮಕ್ಕಳಿಲ್ಲದ ಕಾರಣ ಅವರು ಯಶವಂತ ರಾವ್ ಎಂಬ ಮಗುವನ್ನು ದತ್ತು ಸ್ವೀಕಾರ ಮಾಡಿದರು. ಆ ದತ್ತುಪುತ್ರ ಯಶವಂತರಾವ್ ಮುಂದೆ ಓದಿ ವೈದ್ಯರಾಗಿ ತಮ್ಮ ಪ್ರದೇಶದ ಜನರಿಗೆ ಸೇವೆ ಸಲ್ಲಿಸಿದರು. 1876 ರ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ಬಂದಿತು. ಸಾವಿತ್ರಿ ಬಾಯಿ ಫುಲೆ ಮತ್ತು ಅವರ ಪತಿ 1876 ರಿಂದ ಪ್ರಾರಂಭವಾದ ಬರಗಾಲದ ಸಮಯದಲ್ಲಿ ಬಿಡುವಿಲ್ಲದೆ ಕೆಲಸ ಮಾಡಿದರು. ಅವರು ಊರೂರು ಸುತ್ತಾಡಿ ಸಂತ್ರಸ್ತರಿಗಾಗಿ ಧನ ಸಂಗ್ರಹ ಮಾಡಿದರು. ನಿರಾಶ್ರಿತರಿಗೆ ಬಾಲಾಶ್ರಮವನ್ನು ಪ್ರಾರಂಭಿಸಿದರು. ಬೇರೆ ಮಹಿಳೆಯ ಸಹಕಾರದೊಂದಿಗೆ ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರ ನೀಡುವ ವ್ಯವಸ್ಥೆಯನ್ನು ಮಾಡಿದರು. ವಿವಿಧ ಪ್ರದೇಶಗಳಲ್ಲಿ ಉಚಿತ ಆಹಾರವನ್ನು ವಿತರಿಸಿದರು ಮಾತ್ರವಲ್ಲದೆ ಮಹಾರಾಷ್ಟ್ರದಲ್ಲಿ 52 ಉಚಿತ ಆಹಾರ ವಸತಿಗೃಹಗಳನ್ನು ಪ್ರಾರಂಭಿಸಿದರು. 1897 ರ ಸಮಯದಲ್ಲಿ ಪರಿಹಾರ ಕಾರ್ಯವನ್ನು ಪ್ರಾರಂಭಿಸಲು ಸಾವಿತ್ರಿಬಾಯಿ ಬ್ರಿಟಿಷ್ ಸರ್ಕಾರವನ್ನು ಮನವೊಲಿಸಿದರು.


1897 ರಲ್ಲಿ ಮಹಾರಾಷ್ಟ್ರದ ಸುತ್ತಮುತ್ತಲಿನ ಪ್ರದೇಶವನ್ನು ವ್ಯಾಪಕ ಸಾಂಕ್ರಾಮಿಕ ಪ್ಲೇಗ್ ರೋಗವು ಹರಡಿತು. ವಿಶ್ವದಾದ್ಯಂತ ಮೂರನೇ ಅಲೆಯಾಗಿ ಪ್ಲೇಗ್ ಸಾಂಕ್ರಾಮಿಕ ರೋಗವು ಕೆಟ್ಟದಾಗಿ ಬಾಧಿಸಿದಾಗ, ಧೈರ್ಯಶಾಲಿ ಸಾವಿತ್ರಿಬಾಯಿ ಮತ್ತು ಯಶವಂತರಾವ್ ರೋಗದಿಂದ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಪುಣೆಯ ಹೊರವಲಯದಲ್ಲಿ ಚಿಕಿತ್ಸಾಲಯಗಳನ್ನು ತೆರೆದರು. ರೋಗಿಗಳನ್ನು ಚಿಕಿತ್ಸಾಲಯಕ್ಕೆ ಕರೆತಂದರು. ಅಲ್ಲಿ ಅವರನ್ನು ಶುಕ್ರೂಷೆ ಮಾಡುತ್ತಿದ್ದರು. ಹೀಗೆ ಸೇವೆ ಮಾಡುತ್ತಿರುವಾಗ ಸ್ವತಃ ಇವರೇ ಪ್ಲೇಗ್ ರೋಗಕ್ಕೆ ತುತ್ತಾಗಿದರು. ಅದರಿಂದ ಚೇತರಿಸಿಕೊಳ್ಳಲಾಗದೆ ಮಾರ್ಚ್ 10, 1897 ರಂದು ಬಲಿಯಾದರು.


ಸಾವಿತ್ರಿಬಾಯಿ ಫುಲೆಯವರು ಓರ್ವ ಕವಯಿತ್ರಿಯಾಗಿಯೂ ಕಾಣಿಸಿ ಕೊಂಡಿದ್ದು 'ಕಾವ್ಯ ಫುಲೆ' ಎಂಬ ಗೀತೆಯನ್ನು ಬರೆದಿದ್ದಾರೆ. ತನ್ನ ಪತಿ ಜ್ಯೋತಿಬಾ ಪುಲೆ ಮರಣ ಹೊಂದಿದಾಗ ತನ್ನ ತಂದೆಗೆ ಅಗ್ನಿ ಸ್ಪರ್ಷ ಮಾಡುವ ಹಕ್ಕು ದತ್ತುಪುತ್ರನಿಗೆ ಇಲ್ಲವೆಂದು ಸಮಾಜವು ಟೀಕಿಸಿತು. ಆಗ ಈ ಸಮಾಜದ ಕಟ್ಟುಪಾಡನ್ನು ಪ್ರತಿರೋಧಿಸಿದ ಸಾವಿತ್ರಿ ಬಾಯಿ ಫುಲೆಯವರು ತಾನೇ ಸ್ವತಃ ತನ್ನ ಪತಿಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಅಂದಿನ ಕಾಲದ ಸಮಾಜದಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹಗಳನ್ನು ತಡೆಯಲು ಶ್ರಮಿಸಿದರು. ಒಟ್ಟಾರೆಯಾಗಿ ಹೇಳುವುದಾದರೆ ಸಾವಿತ್ರಿ ಬಾಯಿ ಫುಲೆಯವರು ಭಾರತದ ಓರ್ವ ಧೀರೋದಾತ್ತ ಮಹಿಳೆಯಾಗಿ ಕಂಡು ಬರುತ್ತಾರೆ. ಸಮಾಜ ಸುಧಾರಕಿಯಾಗಿ, ಶಿಕ್ಷಣ ತಜ್ಞೆಯಾಗಿ, THE FIRST LADY TEACHER OF THE BRITISH INDIA ಆಗಿ ಸಾವಿತ್ರಿಬಾಯಿ ಪುಲೆಯವರು ಶ್ರಮಿಸಿದ್ದಾರೆ.


ಇಂದು ಹೆಣ್ಣುಮಕ್ಕಳು ಸ್ವತಂತ್ರವಾಗಿ ಸಮಾನವಾಗಿ ಶಿಕ್ಷಣ ಪಡೆಯುತ್ತಿದ್ದಾರೆಂದರೆ ಇದರ ಹಿಂದಿನ ಪರಿಶ್ರಮ ಸಾವಿತ್ರಿಬಾಯಿ ಪುಲೆಯವರದೇ ಆಗಿದೆ. ಇವರ ಪರಿಶ್ರಮವನ್ನು ಸಾರ್ಥಕ್ಯಗೊಳಿಸಲು ಸರ್ವ ಭಾರತೀಯರೂ ಶ್ರಮಿಸಬೇಕಾದದ್ದು ಬಹಳ ಗಂಭೀರವಾದ ಜವಾಬ್ದಾರಿಯಾಗಿದೆ. ಶಿಕ್ಷಣವೇ ಶಕ್ತಿ ಶಿಕ್ಷಣವೇ ಮುಕ್ತಿ ಎಂದರಿತು ಬಾಳೋಣ.



-ಕೆ.ಎನ್. ಚಿದಾನಂದ. ಹಾಸನ



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top