ನಾಡಿನ ಹೆಮ್ಮೆ ಮಂಗಳೂರು ಲಿಟ್ ಫೆಸ್ಟ್ ಜ.10–11ರಂದು

Upayuktha
0

ರಾಜ್ಯಸಭಾ ಸದಸ್ಯೆ ಪದ್ಮಶ್ರೀ ಮೀನಾಕ್ಷಿ ಜೈನ್ ಅವರಿಗೆ 2026ರ ವಿಶೇಷ ಪ್ರಶಸ್ತಿ



ಮಂಗಳೂರು: ನಾಡಿನ ಹೆಮ್ಮೆ ಎಂದೇ ಖ್ಯಾತಿ ಪಡೆದಿರುವ ಮಂಗಳೂರು ಲಿಟ್ ಫೆಸ್ಟ್‌ನ 2026ನೇ ಆವೃತ್ತಿ ಜ.10 ಮತ್ತು ಜ.11ರಂದು ನಗರದ ಡಾ. ಟಿ.ಎಂ.ಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಎರಡು ದಿನಗಳ ಕಾಲ ನಡೆಯಲಿದೆ. ಈ ವರ್ಷದ ಮಂಗಳೂರು ಲಿಟ್ ಫೆಸ್ಟ್ ವಿಶೇಷ ಪ್ರಶಸ್ತಿಗೆ ಪದ್ಮಶ್ರೀ ಪುರಸ್ಕೃತೆ, ಖ್ಯಾತ ಇತಿಹಾಸಕಾರ್ತಿ ಹಾಗೂ ರಾಜ್ಯಸಭಾ ಸದಸ್ಯೆಯಾದ ಮೀನಾಕ್ಷಿ ಜೈನ್ ಅವರನ್ನು ಆಯ್ಕೆ ಮಾಡಲಾಗಿದೆ. ಜ.10ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಆಯೋಜಕ ಸಂಸ್ಥೆ ಭಾರತ್ ಫೌಂಡೇಷನ್ ತಿಳಿಸಿದೆ.


ಭಾರತೀಯ ಚಿಂತನೆ ಮತ್ತು ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡಿರುವ ಮಂಗಳೂರು ಲಿಟ್ ಫೆಸ್ಟ್ ಇದುವರೆಗೆ ಯಶಸ್ವಿಯಾಗಿ ಏಳು ಆವೃತ್ತಿಗಳನ್ನು ಪೂರೈಸಿದ್ದು, ಈ ಬಾರಿ ಎಂಟನೇ ಆವೃತ್ತಿಗೆ ಕಾಲಿಟ್ಟಿದೆ. ಜ.10ರಂದು ಬೆಳಿಗ್ಗೆ ಲಿಟ್ ಫೆಸ್ಟ್ ಉದ್ಘಾಟನೆ ನಡೆಯಲಿದ್ದು, ಶತಾವಧಾನಿ ಡಾ. ಆರ್. ಗಣೇಶ್, ಮೀನಾಕ್ಷಿ ಜೈನ್, ಕ್ಯಾಪ್ಟನ್ ಬ್ರಿಜೇಶ್ ಚೌಟ, ರವಿ ಎಸ್. (ಮಿಥಿಕ್ ಸೊಸೈಟಿ) ಹಾಗೂ ಡಾ. ಅಜಕ್ಕಳ ಗಿರೀಶ್ ಭಟ್ ಉಪಸ್ಥಿತರಿರಲಿದ್ದಾರೆ.


ಸಮಾರಂಭದಲ್ಲಿ ಈ ವರ್ಷದ ಪ್ರಶಸ್ತಿ ಪುರಸ್ಕೃತೆ ಮೀನಾಕ್ಷಿ ಜೈನ್ ಅವರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ನಡೆಯಲಿದೆ. ಪದ್ಮಭೂಷಣ ಎಸ್.ಎಲ್. ಭೈರಪ್ಪ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ‘ಭೈರಪ್ಪ ಅವರ ಬೆಳಕಲ್ಲಿ ಮುಂದೆ ಬೆಳೆಯಬಹುದಾದ ಸಾಹಿತ್ಯ’ ಎಂಬ ವಿಶೇಷ ಗೋಷ್ಠಿಯನ್ನು ಶತಾವಧಾನಿ ಡಾ. ಆರ್. ಗಣೇಶ್ ಹಾಗೂ ಜಿ.ಬಿ. ಹರೀಶ್ ನಡೆಸಿಕೊಡಲಿದ್ದಾರೆ.


ಭಾರತದ ಗುಪ್ತಚರ ಸಂಸ್ಥೆ ‘ರಾ’ದ ಮಾಜಿ ಮುಖ್ಯಸ್ಥ ವಿಕ್ರಂ ಸೂದ್, ವಿಶ್ವಸಂಸ್ಥೆಯಲ್ಲಿ ಭಾರತದ ಮೊದಲ ಮಹಿಳಾ ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅಂಬಾಸಿಡರ್ ರುಚಿರಾ ಕಾಂಬೋಜ್, ವಿಶ್ವಸಂಸ್ಥೆಯಲ್ಲಿನ ಭಾರತದ ಮಾಜಿ ಖಾಯಂ ಪ್ರತಿನಿಧಿ ಅಂಬಾಸಿಡರ್ ಟಿ.ಎಸ್. ತಿರುಮೂರ್ತಿ ಸೇರಿದಂತೆ 65ಕ್ಕೂ ಹೆಚ್ಚು ಖ್ಯಾತ ಚಿಂತಕರು ಮತ್ತು ವಿದ್ವಾಂಸರು ಲಿಟ್ ಫೆಸ್ಟ್‌ನಲ್ಲಿ ಭಾಗವಹಿಸಲಿದ್ದಾರೆ.


ವಿಕ್ರಂ ಸೂದ್ ಮತ್ತು ಡಾ. ಶ್ರೀಪರ್ಣಾ ಪಾಠಕ್ ಅವರು ಜಾಗತಿಕ ಮಟ್ಟದ ಪವರ್ ಗೇಮ್ ಕುರಿತು ಸಂವಾದ ನಡೆಸಲಿದ್ದಾರೆ. ರುಚಿರಾ ಕಾಂಬೋಜ್, ಡಾ. ಸ್ವಸ್ತಿ ರಾವ್, ಪತ್ರಕರ್ತ ಆದಿತ್ಯ ರಾಜ್ ಕೌಲ್ ಹಾಗೂ ಡಾ. ಬಿದಂದ ಚೆಂಗಪ್ಪ ಅವರು ಭಾರತದ ನೆರೆಹೊರೆಯ ರಾಷ್ಟ್ರಗಳೊಂದಿಗೆ ಇರುವ ಸಂಬಂಧಗಳ ಕುರಿತು ಚರ್ಚಿಸಲಿದ್ದಾರೆ. ಅಂಬಾಸಿಡರ್ ಟಿ.ಎಸ್. ತಿರುಮೂರ್ತಿ, ಡಾ. ಶ್ರೀರಾಮ್ ಚೌಲಿಯಾ ಹಾಗೂ ವಿಜಿತ್ ಕನಹಳ್ಳಿ ಅವರು ಜಾಗತೀಕರಣಗೊಂಡ ವಿಶ್ವದಲ್ಲಿ ಭಾರತೀಯ ಚಿಂತನೆ ವಿಷಯದ ಮೇಲೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.


ಸಾಹಿತ್ಯದ ಮುಖಾಂತರ ಮೌಲ್ಯಗಳ ಅನ್ವೇಷಣೆ ಕುರಿತು ಶತಾವಧಾನಿ ಡಾ. ಆರ್. ಗಣೇಶ್ ಮತ್ತು ಡಾ. ಅಜಕ್ಕಳ ಗಿರೀಶ್ ಭಟ್ ಮಾತನಾಡಲಿದ್ದಾರೆ. ಮಾಧ್ಯಮ ಕ್ಷೇತ್ರದ ಗಣ್ಯರಾದ ಎಎನ್‌ಐ ಸಂಪಾದಕೀಯ ನಿರ್ದೇಶಕಿ ಸ್ಮಿತಾ ಪ್ರಕಾಶ್, ಪದ್ಮಜಾ ಜೋಶಿ ಹಾಗೂ ಸುರಭಿ ಹೊದಿಗೆರೆ ಅವರು ಡಿಜಿಟಲ್ ಸುದ್ದಿಗಳು ಸಾರ್ವಜನಿಕ ವಲಯವನ್ನು ಹೇಗೆ ರೂಪಿಸುತ್ತಿವೆ ಎಂಬ ವಿಷಯದಲ್ಲಿ ಚರ್ಚೆ ನಡೆಸಲಿದ್ದಾರೆ. ‘ಚಿತ್ರ ಮತ್ತು ಚಿಂತನೆ’ ಗೋಷ್ಠಿಯಲ್ಲಿ ಪಿ. ಶೇಷಾದ್ರಿ, ಮಾಳವಿಕಾ ಅವಿನಾಶ್ ಹಾಗೂ ಪಲ್ಲವಿ ರಾವ್ ಕಾರಂತ್ ಭಾಗವಹಿಸಲಿದ್ದಾರೆ.


ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಬದುಕುಳಿದವರು ಕಂಡಂತೆ ಕೃತಿಯ ಕುರಿತು ನಡೆಯುವ ಪುಸ್ತಕ ಸಂವಾದವನ್ನು ಶ್ರೀಕಾಂತ್ ಶೆಟ್ಟಿ ಕಾರ್ಕಳ ನಡೆಸಿಕೊಡಲಿದ್ದಾರೆ. ‘ಕಲ್ಪನೆ, ಕಥನ ಮತ್ತು ಕ್ಯಾಮರಾ’ ಗೋಷ್ಠಿಯಲ್ಲಿ ನಟಿ ರಂಜನಿ ರಾಘವನ್, ಸು ಫ್ರಂ ಸೋ ಖ್ಯಾತಿಯ ಪೂರ್ಣಿಮಾ ಸುರೇಶ್ ಹಾಗೂ ಲೇಖಕಿ ಸೀಮಾ ಬುರುಡೆ ಭಾಗವಹಿಸಲಿದ್ದಾರೆ. ಉಜ್ವಲಾ ಕೃಷ್ಣರಾಜ್ ಅವರಿಂದ ಬೊಂಬೆಯಾಟ ಪ್ರದರ್ಶನವೂ ನಡೆಯಲಿದೆ.


ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ವಿಶೇಷ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳವನ್ನೂ ಆಯೋಜಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಭಾರತ್ ಫೌಂಡೇಷನ್ ಟ್ರಸ್ಟಿ ಸುನೀಲ್ ಕುಲಕರ್ಣಿ, ಸದಸ್ಯರಾದ ರಾಮದಾಸ್ ಕಟೀಲ್ ಹಾಗೂ ಸುಜಿತ್ ಪ್ರತಾಪ್ ಮಂಗಲ್ಪಾಡಿ ಉಪಸ್ಥಿತರಿದ್ದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top