‘ನುಡಿ ನಿಪುಣ’ ಪ್ರಶಸ್ತಿಗೆ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಭಾಜನ

Upayuktha
0

ಪ್ರಣವ ಮೀಡಿಯಾ ಹೌಸ್‌ನ ಮಾಧ್ಯಮ ಸಮಾಲೋಚಕರು 





ಬೆಂಗಳೂರು: ಅನ್ನಪೂರ್ಣೇಶ್ವರಿ ಹ್ಯುಮಾನಿಟಿ ಫೌಂಡೇಶನ್ ಹಾಗೂ ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವಮಾನವ ದಿನಾಚರಣೆ ವಿಚಾರ ಸಂಕಿರಣ, ಅನ್ನಪೂರ್ಣೇಶ್ವರಿ ಫೌಂಡೇಶನ್ ಮೂರನೇ ವಾರ್ಷಿಕೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರ, ಕನ್ನಡ ಭವನ ಆವರಣದ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.


ಸಾಹಿತ್ಯ, ಅಧ್ಯಾತ್ಮ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಬಹುಮುಖ ಸಾಧನೆ ಮಾಡಿರುವ ಡಾ. ಗುರುರಾಜ್ ಪೋಶೆಟ್ಟಿಹಳ್ಳಿ ಅವರು ಕನ್ನಡದ ವಿಶಿಷ್ಟ ಅಕ್ಷರಸಾಧಕರು. ಸಾಂಸ್ಕೃತಿಕ ಹಾಗೂ ಧಾರ್ಮಿಕ ವೇದಿಕೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿರುವ ಅವರು, ಪರಂಪರೆಯ ಮೌಲ್ಯಗಳನ್ನು ಸಮಕಾಲೀನ ದೃಷ್ಟಿಕೋನದಲ್ಲಿ ಸಮಾಜದ ಮುಂದಿಟ್ಟಿದ್ದಾರೆ. ಅವರ ಈ ಸಾರ್ಥಕ ಸಾಧನೆಯನ್ನು ಗುರುತಿಸಿ, ಸಮಾಜಮುಖಿ ಸಾಹಿತ್ಯ–ಸಾಂಸ್ಕೃತಿಕ ಸೇವೆಗೆ ವಿಶ್ವಕರ್ಮ ಅಭಿವೃದ್ಧಿ ಫೌಂಡೇಷನ್  ಉದ್ಘಾಟನೆಯ ಸಂದರ್ಭದಲ್ಲಿ ‘ನುಡಿ ನಿಪುಣ’ ಎಂಬ ಈ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ.


ಅಧ್ಯಯನ, ಸೇವೆ ಮತ್ತು ಸಂಸ್ಕಾರಗಳ ಸಮನ್ವಯದೊಂದಿಗೆ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿದ ಇವರ ಕಾರ್ಯಚಟುವಟಿಕೆಗಳು ಸಮುದಾಯದ ಚಿಂತನೆಗೆ ದಿಕ್ಕು ನೀಡಿವೆ. ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಹಾಗೂ ಮಾನವೀಯ ಮೌಲ್ಯಗಳ ಬಲವರ್ಧನದಲ್ಲಿ ಇವರ ಪಾತ್ರ ಗಮನಾರ್ಹವಾಗಿದೆಎಂದು ಕಾರ್ಯಕ್ರಮದ ಆಯೋಜಕರಾದ ಅನ್ನಪೂರ್ಣೇಶ್ವರಿ ಹ್ಯುಮಾನಿಟಿ ಫೌಂಡೇಶನ್ ಬೆಳಗಾವಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಮಹಾಂತೇಶ ಎಸ್ ಕಡಲಗಿ ಮತ್ತು ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ ಅಧ್ಯಕ್ಷ ನಿತ್ಯಾ ಎಂ ಆಚಾರ್ ತಿಳಿಸಿದ್ದಾರೆ.


ಬೆಳಗಾವಿ ಭೂತರಾಮನಹಟ್ಟಿ ಶ್ರೀಕ್ಷೇತ್ರ ಮುಕ್ತಿ ಮಠದ ಪರಮಪೂಜ್ಯ ಮಹರ್ಷಿ ತಪೋ ರತ್ನ ಶಿವಾಚಾರ್ಯರು– ಶಿವಸಿದ್ಧ ಸೋಮೇಶ್ವರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ವಿಶ್ವಕರ್ಮ ಅಭಿವೃದ್ದಿ ನಿಗಮದ ಅಧ್ಯಕ್ಷ ಸುಜ್ಞಾನ ಮೂರ್ತಿ ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್  ನ ಲೋಗೋ ಲೋಕಾರ್ಪಣೆ ಮಾಡಿದರು. ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಬರಮಣ್ಣ ಲಕ್ಷ್ಮಣ ಉಪ್ಪಾರ, ಕೆಪಿಸಿಸಿ ಪರಿಶಿಷ್ಟ ಪಂಗಡದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ದೊರೆ ಅಲ್ದಾಳ, ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲೆ ಉಪಾಧ್ಯಕ್ಷ ಶ್ರೀ ರಾಜು ಮಹಾದೇವ ನಾಶಿಪುಡಿ, ಬಾಗಲಕೋಟೆ ಜಿಲ್ಲೆಯ ಸಮಾಜ ಸೇವಕಿ ಶ್ರೀಮತಿ ನವನೀತ ಗೋವಿಂದರಾಜ ಮುಳಗುಂದ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ರಾಮನಗರ ರಾಜ್ಯಾಧ್ಯಕ್ಷ ಎಂ.ಟಿ ಮಹೇಶ್ ಕುಮಾರ್ ಮೊದಲಾದವರು ವೇದಿಕೆಯಲ್ಲಿದರು. 



ಡಾ. ಗುರುರಾಜ ಪೋಶೆಟ್ಟಿಹಳ್ಳಿ ಪರಿಚಯ:

ಡಾ. ಗುರುರಾಜ ಪೋಶೆಟ್ಟಿಹಳ್ಳಿ ಇಂದಿನ ಕನ್ನಡ ಲೋಕದಲ್ಲಿ ಬರಹ–ಭಕ್ತಿ–ಬುದ್ಧಿಯ ಸಂಗಮವನ್ನುನಿಶ್ಶಬ್ದವಾಗಿ, ನಿರಂತರವಾಗಿ ಕಟ್ಟುತ್ತಿರುವ ಹೆಸರು.


ಕನ್ನಡ ಸಾಹಿತ್ಯ–ಸಂಸ್ಕೃತಿಯ ಸಮಕಾಲೀನ ವಲಯದಲ್ಲಿ ಗಂಭೀರ ಅಧ್ಯಯನ, ಭಕ್ತಿಸಾಹಿತ್ಯದ ಆಳ ಮತ್ತು ಮಾಧ್ಯಮದ ಚೈತನ್ಯವನ್ನು ಒಂದೇ ಹೊಸ್ತಿಲಿಗೆ ತಂದ ಅಪರೂಪದ ಸಾಧಕರಲ್ಲಿ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಪ್ರಮುಖರು.


ಎಂ.ಎ. ಕನ್ನಡ ಪದವೀಧರರಾಗಿರುವ ಅವರು, ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕರಾಗಿ ಬರವಣಿಗೆ, ಸಂಪಾದನೆ, ಪ್ರಕಟಣೆ ಮತ್ತು ಸಾಂಸ್ಕೃತಿಕ ಸಂವಹನದ ವಿವಿಧ ಆಯಾಮಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.


ಭಕ್ತಿ, ದಾಸಸಾಹಿತ್ಯ, ಗುರುಪರಂಪರೆ, ವೇದ–ಪುರಾಣ, ಸಂಸ್ಕೃತಿ ಚಿಂತನೆ ಮತ್ತು ಸಮಕಾಲೀನ ಸಮಾಜ ಎಂಬ ವೈವಿಧ್ಯಮಯ ಕ್ಷೇತ್ರಗಳಲ್ಲಿ ಅವರ ಬರವಣಿಗೆ ಚಲಿಸಿದೆ. ‘ವಂದೇ ಗುರು ಪರಂಪರಾಮ್’, ‘ಸತ್ಸಂಗ ಸಂಪದ’, ‘ಕನ್ನಡದ ಕಂಪಿನಲಿ ಕರಿವದನ’, ‘ವಿಶ್ವವಂದಿತ ವಿನಾಯಕ’, ‘ಭಕ್ತಿ ಪಾರಿಜಾತ’, ‘ಕೃಷ್ಣನ ಹೆಸರೇ ಲೋಕಪ್ರಿಯ’, ದಾಸಪಂಥ’ ಸೇರಿದಂತೆ ಅನೇಕ ಕೃತಿಗಳು ಅವರ ಸಾಹಿತ್ಯ ಸಾಧನೆಯ ಸಾಕ್ಷ್ಯ.


ನಾಡಿನ  ಪ್ರಮುಖ ಪತ್ರಿಕೆಗಳಲ್ಲಿ ದೀರ್ಘಕಾಲ ಅಂಕಣಕಾರರಾಗಿ, ದೂರದರ್ಶನ–ರೇಡಿಯೋ–ಡಿಜಿಟಲ್ ಮಾಧ್ಯಮಗಳಲ್ಲಿ ವಿಶ್ಲೇಷಕರಾಗಿ, ಅನೇಕ ಸಾಂಸ್ಕೃತಿಕ ವೇದಿಕೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಸಕ್ರಿಯರಾಗಿದ್ದಾರೆ.


ದಾಸಸಾಹಿತ್ಯ, ಭಗವದ್ಗೀತಾ, ಯೋಗ, ಭಕ್ತಿ ಮತ್ತು ಸಂಸ್ಕೃತಿ ವಿಷಯಗಳಲ್ಲಿ ರಾಜ್ಯ, ರಾಷ್ಟ್ರಮಟ್ಟದ ವಿಚಾರಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿ ಗುರುತಿಸಿಕೊಂಡಿದ್ದಾರೆ.


ಇಂಡಿಯನ್ ವರ್ಚುವಲ್ ಅಕಾಡೆಮಿ ಫಾರ್ ಪೀಸ್ & ಎಜುಕೇಷನ್ ವತಿಯಿಂದ ಇಂಡಾಲಜಿ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಸೇರಿದಂತೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ಪ್ರಶಸ್ತಿ–ಪುರಸ್ಕಾರಗಳು ಇವರಿಗೆ ಲಭಿಸಿರುವುದು ಅವರ ಬಹುಮುಖ ಸೇವೆಯ ಮಾನ್ಯತೆ.


ವಿವಿಧ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳ ಸಲಹಾ ಮಂಡಲಿ ಸದಸ್ಯರಾಗಿ, ಅಧ್ಯಕ್ಷ–ಟ್ರಸ್ಟಿ–ಸಂಘಟಕರಾಗಿ ಅವರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.




“ಪರಂಪರೆ ಬದುಕಾಗಬೇಕು; ಗ್ರಂಥ ಮಾತ್ರವಾಗಬಾರದು”:  ಡಾ. ಗುರುರಾಜ ಪೋಶೆಟ್ಟಿಹಳ್ಳಿ

ಭಕ್ತಿ, ಸಂಸ್ಕೃತಿ ಮತ್ತು ಸಮಾಜವನ್ನು ಜೋಡಿಸುವ ಲೇಖನಿಗಳಲ್ಲಿ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರದ್ದು ವಿಭಿನ್ನ ಧ್ವನಿ. ದಾಸಸಾಹಿತ್ಯದಿಂದ ಗಾಂಧೀ ಚಿಂತನೆವರೆಗೆ, ಪುರಾಣದಿಂದ ಸಮಕಾಲೀನ ಪ್ರಶ್ನೆಗಳವರೆಗೆ- ಅವರ ಬರವಣಿಗೆ ಸಂಸ್ಕೃತಿಯನ್ನು ಸಂವಾದವಾಗಿಸುತ್ತದೆ.


ವಿಶ್ವಕರ್ಮ ಅಭಿವೃದ್ದಿ ಫೌಂಡೇಷನ್ ಲೋಕಾರ್ಪಣೆಯ ಸಮಯದಲ್ಲಿ ಶ್ರೀಯುತರ ಅಕ್ಷರ–ಅಧ್ಯಾತ್ಮ–ಅವಿರತ ಸಾಧನೆಯನ್ನು ಪರಿಗಣಿಸಿ ‘ನುಡಿ ನಿಪುಣ’ಪ್ರಶಸ್ತಿಗೆ ಭಾಜನರಾಗಿರುವ ಈ ಹೊತ್ತಿನಲ್ಲಿ ಅವರೊಂದಿಗೆ ಮಾತು- ಕತೆ:


ಪ್ರಶ್ನೆ: ನಿಮ್ಮ ಬರವಣಿಗೆಯ ಗುರುತು ಹೇಗೆ ರೂಪಾಯಿತು?

ಉತ್ತರ: ಮನೆತನದ ಸಂಸ್ಕಾರ, ಗುರುಗಳ ಪ್ರಭಾವ ಮತ್ತು ಪತ್ರಿಕೋದ್ಯಮದ ಅನುಭವ—ಮೂರು ಒಂದಾಗಿ ನನ್ನ ಧ್ವನಿಯನ್ನು ರೂಪಿಸಿವೆ.


ಪ್ರಶ್ನೆ: ಭಕ್ತಿ ಬರಹಗಳನ್ನು ಸಮಾಜಮುಖಿಯಾಗಿಸುವುದು ಹೇಗೆ ಸಾಧ್ಯ?

ಉತ್ತರ: ಭಕ್ತಿ ಎಂದರೆ ಪಲಾಯನವಲ್ಲ. ಅದು ಮೌಲ್ಯಗಳ ಅಭ್ಯಾಸ. ಅದನ್ನು ಜೀವನಕ್ಕೆ ಅನ್ವಯಿಸಬೇಕು.


ಪ್ರಶ್ನೆ: ದಾಸಸಾಹಿತ್ಯದ ಪ್ರಸ್ತುತತೆ?

ಉತ್ತರ: ಅದು ಭಾವನೆ ಮಾತ್ರವಲ್ಲ—ಸಾಮಾಜಿಕ ಚಿಂತನೆ. ಇಂದಿಗೂ ಸಮಾನವಾಗಿ ಪ್ರಸ್ತುತ.


ಪ್ರಶ್ನೆ: ಮಾಧ್ಯಮಗಳ ಪಾತ್ರ?

ಉತ್ತರ: ಸಂಸ್ಕೃತಿಯನ್ನು ಜನಪ್ರಿಯಗೊಳಿಸುವ ಜವಾಬ್ದಾರಿ ಮಾಧ್ಯಮಗಳದು.


ಪ್ರಶ್ನೆ: ನಿಮ್ಮ ಮುಂದಿನ ಗುರಿ?

ಉತ್ತರ: ಕನ್ನಡದಲ್ಲಿ ಸನಾತನ ಜ್ಞಾನಕ್ಕೆ ಕಾಲಾತೀತ ದಾಖಲೆ ಸೃಷ್ಟಿಸುವುದು.




ಪರಿಚಯ- ಸಂದರ್ಶನ: ಕೆ.ವಿ. ಪದ್ಮಾವತಿ

ಹವ್ಯಾಸಿ ಲೇಖಕಿ, ಬೆಂಗಳೂರು. 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top