ಅನುಷ್ಠಾನಗೊಳಿಸದ ಮೇಲೆ ಕಾನೂನು ಮಾಡುವುದೇಕೆ...?

Upayuktha
0


ಪ್ರಜಾಪ್ರಭುತ್ವದಲ್ಲಿ ಬ್ರಿಟಿಷರಂತೆ ಎಲ್ಲವುದಕ್ಕೂ ಕಾನೂನು ಮಾಡಿ, ರಂಗೋಲಿ ಸಂಧಿ ನಿರ್ವಾತ ಮಾಡಲಾಗುವುದಿಲ್ಲ!


ಬ್ರಿಟಿಷ್ ಕಾಲದಲ್ಲೂ ಕೆಲವು ಅಸಂಬದ್ದ ಕಾನೂನುಗಳನ್ನು ತಂದು ಜನರ ಸ್ವಾತಂತ್ರ್ಯ ನಿಯಂತ್ರಣ ಮಾಡುವ ಪ್ರಯತ್ನ ಮಾಡಿದ ಬಗ್ಗೆ ಇತಿಹಾಸದಲ್ಲಿ ನಾವು ಕಾಣುತ್ತೇವೆ. ಆಗಿನ ಸ್ವಾತಂತ್ರ್ಯ ಹೋರಾಟಗಾರರು ಭಾಷಣದ ಬದಲಿಗೆ ಪರೋಕ್ಷ ಮಾರ್ಗಗಳನ್ನು ಕಂಡುಕೊಂಡಿದ್ದನ್ನೂ ಇತಿಹಾಸದಲ್ಲಿ ಕಾಣುತ್ತೇವೆ.


ಬ್ರಿಟಿಷರಂತೆ ರಂಗೋಲಿ ಮೇಲೆ ಸಿಕ್ಕಿದ್ದಕ್ಕೆಲ್ಲ ಕೇಸ್ ಹಾಕುವ ಅಸಂಬದ್ಧ ಕಾನೂನಿನ ಚಾಪೆ ಎಳೆದರೆ, ಅದರ ಕೆಳಗಡೆ ರಂಗೋಲಿ ಇರುತ್ತದೆ. ಮತ್ತೆ ರಂಗೋಲಿ ಕೆಳಗಡೆ ನುಸುಳುವ ಚತುರತೆಯನ್ನು ಸ್ವಾತಂತ್ರ್ಯ ಹೋರಾಟಗಾರರಿಂದಲೂ ಜನ ಸಮುದಾಯ ಕಲಿತಿರುತ್ತಾರೆ. ಈಗಿನ ಜ್ಞಾನ ತಂತ್ರಜ್ಞಾನಗಳಿಂದಲೂ ಕಲಿತಿರುತ್ತಾರೆ. 


ಪ್ರಜಾಪ್ರಭುತ್ವದಲ್ಲಿ ಅಧಿಕಾರ ಯಾರಿಗೂ ಶಾಶ್ವತ ಆಗಿರುವುದಿಲ್ಲ. ಅಧಿಕಾರ ಕಳೆದುಕೊಂಡ ಮೇಲೆ ಮಾಡಿದ ಕಾನೂನೇ ಮಾಡಿದವರಿಗೆ ಉರುಳಾಗಬಹುದು!?  


ಇತಿಹಾಸದ ಸತ್ಯ, ವರ್ತಮಾನದ ಸ್ಥಿತಿ, ಭವಿಷ್ಯದ ಪರಿಣಾಮಗಳನ್ನು ಚಿಂತಿಸದೆ, ಅರಿವು, ಚಿಂತನೆಗಳು ಇಲ್ಲದೆ ಏನೇನೋ ಕಾನೂನುಗಳನ್ನು ಯಾವುದೇ ಸರಕಾರ ತಂದರೂ ಅದು ತಿರುಗುಬಾಣವಾಗಬಹುದು!?


ಕಾನೂನು ಮಾಡುವಾಗ ಅದರ ಪರಿಣಾಮ, ಅನುಷ್ಠಾನ ಸಾಧ್ಯತೆ, ಪರ್ಯಾಗಳ ಸೂಕ್ಷ್ಮತೆ, ಜನಮತ ಚರ್ಚೆ, ಕಾನೂನು ತಜ್ಞರ ಅಭಿಪ್ರಾಯಗಳನ್ನು ಪರಿಗಣಿಸುವುದು ಕಾನೂನಾಗಿ ಹೇರುವ ಮೊದಲು ಸರಕಾರ ಚಿಂತನೆ ಮಾಡಬೇಕು.  


ಇರುವ ಕಾನೂನುಗಳನ್ನೇ ಸಮರ್ಥವಾಗಿ ಪರಿಪಾಲನೆ ಮಾಡಲು ಸಾಧ್ಯವಾಗದೇ ಇರುವಾಗ ಮತ್ತಷ್ಟು ಹೊಸ ಹೊಸ ಕಾನೂನುಗಳನ್ನು ನಿರ್ಧಿಷ್ಟ ಮತ, ವ್ಯಕ್ತಿ, ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಹೇರುವುದು ಕೂಡ ಸರಕಾರದ ದ್ವೇಷ ಭಾವನೆ ಎಂದೇ ಜನ ಪರಿಗಣಿಸಬಹುದು!?  ದೊರೆತ ಅಧಿಕಾರ ಕಳೆದುಕೊಳ್ಳುವುದಕ್ಕೂ ಅದು ಕಾರಣ ಆಗಬಹುದು!?


ಉದಾಹರಣೆಗೆ ನೋಡೋದಾದರೆ: 

1) ಹಸಿರು ಪಟಾಕಿ ಹೊರೆತಾಗಿ ಅಪಾಯಕಾರಿ ಪಟಾಕಿಗಳನ್ನು ನಿಷೇಧ ಮಾಡಲು ಕೋರ್ಟ್ ಆದೇಶದಂತೆ ಕಾನೂನು ಮಾಡಲಾಗಿದೆ.  ಆದರೆ, ಅದನ್ನು ಜಾರಿಗೆ ತರಲು ಸಾಧ್ಯವಾಗಿದೆಯಾ? ಪಂಚಾಯತಿ ಸದಸ್ಯನ ಹುಟ್ಟು ಹಬ್ಬಕ್ಕೂ ನಿಷೇಧಿತ ಪಟಾಕಿ ಸ್ಪೋಟಿಸುತ್ತವೆ!! 


2) ಧ್ವನಿ ವರ್ಧಕಗಳ ಧ್ವನಿಯ ಮಿತಿಯು ಕಾನೂನಿನ ಪ್ರಕಾರ ನಿಗದಿಪಡಿಸಲಾಗಿದೆ, ಇಂತಿಷ್ಟೇ ಡೆಸಿಬಲ್‌ಗಳು ಇರಬೇಕು ಅಂತ ಕಾನೂನಿದೆ. ವಸತಿ ಪ್ರದೇಶಗಳಲ್ಲಿ ಹಗಲು ಮತ್ತು ರಾತ್ರಿ ಮಿತಿಗಳಿವೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಮಿತಿಗಳು ಕಟ್ಟುನಿಟ್ಟಾಗಿವೆ! ಶಾಲೆಗಳು, ಆಸ್ಪತ್ರೆಗಳಂತಹ 'ಮೌನ ವಲಯಗಳಲ್ಲಿ' ಧ್ವನಿವರ್ಧಕ ನಿಷಿದ್ಧ!

 

ಆದರೆ, ಅನುಷ್ಠಾನದಲ್ಲಿ? ಅಟ್ಟರ್ ಪ್ಲಾಪ್! ಗಣಪತಿ ಹಬ್ಬಕ್ಕೂ ಅನುಷ್ಠಾನ ಇಲ್ಲ, ಆಜಾನ್‌ಗೂ ಇಲ್ಲ! ಕಾನೂನಿಗೆ ವಿರುದ್ಧವಾದ DJಯನ್ನೂ ಗಣೇಶೋತ್ಸವದಲ್ಲಿ ನಿಲ್ಲಿಸಲು ಸರಕಾರಕ್ಕೆ ಆಗುತ್ತಿಲ್ಲ.


3) ಏಕ ಬಳಕೆ ಪ್ಲಾಸ್ಟಿಕ್, ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್, ಗೋಡೆ ಬರಹ, ಶಾಲೆಗಳ 200 ಮೀಟರ್ ಸುತ್ತಳತೆಯಲ್ಲಿ ತಂಬಾಕು ವ್ಯಾಪಾರ ನಿಷೇಧ, ಅನಧಿಕೃತ ಮರಳು ಸಾಗಾಣಿಕೆ.... ಎಲ್ಲವುದಕ್ಕೂ ಕಾನೂನುಗಳೂ ಇವೆ. ಅನುಷ್ಠಾನದ ವಿಚಾರಕ್ಕೆ ಬಂದರೆ ವಾಸ್ತವ ಬೇರೆಯೇ ಇದೆ.  


"ಸರಕಾರಕ್ಕೆ ಯೋಗ್ಯತೆ ಇಲ್ಲ" ಎಂದು ಜನರು ಸರಕಾರವನ್ನು ಹಗುರವಾಗಿ ಆಡಿಕೊಳ್ಳುವ ಮಟ್ಟಿಗೆ ಕಾನೂನಿಗೆ ವಿರುದ್ಧವಾಗಿಯೇ ಎಲ್ಲವೂ ನೆಡೆಯುತ್ತವೆ.  


ಇರುವ ಕಾನೂನುಗಳನ್ನೇ ಅನುಷ್ಠಾನಕ್ಕೆ ತರಲಾಗದ ಪರಿಸ್ಥಿತಿಯಲ್ಲಿ, ಹೊಸ ಕಾನೂನುಗಳ ಬಲೆ ಹಣಿಯುತ್ತಾ ಹೋದರೆ ಸರಕಾರವೇ ಅದರೊಳಗೆ ಸಿಕ್ಕಿ ಹಾಕಿಕೊಂಡು ಒದ್ದಾಡುವಂತಾಗಬಹುದು!


ಇನ್ನು ಭಾಷಣದ ವಿಷಯಕ್ಕೆ ಬಂದರೆ, ಭಾಷಣಗಳನ್ನು ದ್ವೇಷ ಭಾಷಣ ಅಂತ ಬಿಗು ಕಾನೂನು ಮಾಡಿ ನಿಷೇಧಿಸಿದರೆ, ಬಹುತೇಕ ಈಗಿರುವ ಎಲ್ಲ ರಾಜಕಾರಣಿಗಳು ನಾಳೆಯಿಂದ ಹತ್ತು ವರ್ಷಗಳು ಜೈಲಲ್ಲಿ ಇರಬೇಕಾಗುತ್ತೆ! ಸ್ಪಷ್ಟವಾದ ನಿಯಮಾವಳಿಗಳು ಇಲ್ಲದೆ, ಮಾತಾಡಿದ್ದೆಲ್ಲ ದ್ವೇಷ ಭಾಷಣದ ಹೆಸರಲ್ಲಿ ಕೇಸ್ ಆಗ್ತಾ ಹೋಗಬಹುದು. ರಾಜ್ಯಾದ್ಯಂತ ಇರುವ ಎಲ್ಲ ಪೋಲೀಸ್ ಸ್ಟೇಷನ್, ಕೋರ್ಟ್‌ಗಳಲ್ಲಿ ಕೇಸ್ ಫೈಲ್‌ಗಳು ಬೆಳೆಯುತ್ತಾ ಹೋಗಬಹುದು!?  ಒಂದಿಷ್ಟು ವಿಚಾರಣೆಗಳು ಆದ ಮೇಲೆ "ಸಾಕ್ಷಾಧಾರಗಳು ಪೂರಕವಾಗಿಲ್ಲ" ಅಂತ ಖುಲಾಸೆ ಆಗ್ತಾ ಹೋಗಬಹುದು!?  ಅಥವಾ ನಾಳೆ ಪಕ್ಷಗಳ ವರಿಷ್ಠರು (ಅದು ಕಾಂಗ್ರೆಸ್ ಇರಬಹುದು, ಬಿಜೆಪಿ ಇರಬಹುದು, ಮತ್ತೊಂದಿರಬಹುದು) ಭಾಷಣ ಮಾಡಿದರೂ FIR ಆಗಿ ಹತ್ತ್ಹತ್ತು ವರ್ಷ ಜೈಲು ಸೇರಬಹುದು!? 


ಮನುವಾದಿ ಅಂತ ದ್ವೇಷ ಭಾಷಣ ಮಾಡಿದವರೂ, ಒಂದು ನಿರ್ಧಿಷ್ಟ ಧರ್ಮವನ್ನು ಕ್ಯಾನ್ಸರ್ ಅಂದವರೇ ಮೊದಲು ಜೈಲಿಗೆ ಹೋಗಬಹುದು?  


***


ಇನ್ನು ವಿಡಂಬನೆಯಾಗಿ ಭಾಷಣ ಕಾನೂನಿಂದ ತಪ್ಪಿಸಿಕೊಳ್ಳಲು ಇರುವ ಮಾರ್ಗಗಳನ್ನು ಲಘು ಭಾವದಲ್ಲಿ ಗಮನಿಸಿದರೆ: 


ಭಾಷಣದ ಬದಲಿಗೆ ಮೇಲಿನ ಚಿತ್ರದಲ್ಲಿ ವ್ಯಂಗ್ಯ ಚಿತ್ರಕಾರರು ಹೇಳಿದಂತೆ ಉಪನ್ಯಾಸ ಮಾಡಬಹುದು!


ಘಜ್ನಿ, ಗೋರಿಗಳ ಆಡಳಿತ ವೈಖರಿ ಅಂತ ಇತಿಹಾಸದ ಮೇಲೆ ಬೆಳಕು ಚೆಲ್ಲುವ ನೆವದಲ್ಲಿ ಸಾರ್ವಜನಿಕ ಪಾಠ ಮಾಡಬಹುದು, (ಘಜ್ನಿ, ಗೋರಿಗಳು ಬೇಡ ಅಂತ ಅಂದರೆ, ಬ್ರಿಟಿಷ್‌ರ ಆಡಳಿತವನ್ನೇ ವಸ್ತುವಾಗಿಸಿಕೊಳ್ಳಬಹುದು. ಪರೋಕ್ಷ ಹೋಲಿಕೆಯ ಲಿಂಕ್ ವರ್ತಮಾನದ ಸರಕಾರಕ್ಕೆ, ಮಂತ್ರಿಗಳಿಗೆ!)


ಕೌರವನ ದುಷ್ಕೃತ್ಯಗಳು ಅಂತ ಕಥಾಕಾಲಕ್ಷೇಪ ಮಾಡಬಹುದು, (ಕೌರವ ಕೇವಲ ಸಂಕೇತ!!)


ಮಾಸ್ಟರ್ ಹಿರಣ್ಣಯ್ಯನವರ ಶೈಲಿಯಲ್ಲಿ ಏಕ ವ್ಯಕ್ತಿ ನಾಟಕಗಳನ್ನು ಮಾಡಬಹುದು, 


ಉಪಮೆಗಳನ್ನು ಬಳಸಿದ ದಾಸರ ಪದಗಳನ್ನೇ ಬಳಸಿ ಸಂಗೀತ ಕಛೇರಿ ಮಾಡಬಹುದು.

(ಉದಾ: ನಾಯಿ ಬಂದದಪ್ಪ ಅಣ್ಣ ಅತ್ತಲಾಗಿರಿ|ಪ|

ನಾಯಿ ಅಂದರೆ ನಾಯಿಯಲ್ಲ ಮಾನವ ಜನ್ಮದ ಹೀನ ನಾಯಿ... 

ಕುರುಡು ನಾಯಿ ಸಂತೆಗೆ ಬಂತಂತೆ ಅದು ಯಾಕೆ ಬಂತೋ... ಇತ್ಯಾದಿ. ಸಾಂದರ್ಭಿಕ ಪರಿಸ್ಥಿತಿಗನುಗುಣವಾಗಿ ನಾಯಿ ಶಬ್ದ ವ್ಯಕ್ತಿ, ಪಕ್ಷ, ಸಂಸ್ಥೆಗಳಿಗೆ ಸಹಜವಾಗಿ ಶೋತೃಗಳೇ ಹೊಂದಿಸಿಕೊಳ್ತಾರೆ!)


ಕಾನೂನಾತ್ಮಕವಾಗಿ ಭಾಷಣದಲ್ಲಿ ಹೇಳಲಾಗದ್ದನ್ನು ಕುಮಾರವ್ಯಾಸ, ಪಂಪ, ಜೈಮಿನಿ ಭಾರತಗಳ ಆಯ್ದ ಕಥಾ ಭಾಗಗಳ ಮೂಲಕ ಕಾವ್ಯವಾಚನ ವ್ಯಾಖ್ಯಾನದಲ್ಲಿ ಪ್ರಸ್ತುತಪಡಿಸಬಹುದು!


ಯಕ್ಷಗಾನ, ತಾಳಮದ್ದಳೆ ಗಳಲ್ಲಿ ಭಾಷಣಕ್ಕಿಂತ ಸೊಗಸಾಗಿ 'ಹೇಳಬೇಕಾದ್ದನ್ನು' ಅಲ್ಲಲ್ಲಿ ತಂದು ಹೇಳಬಹುದು!


ನಾಮಕಾವಸ್ತೆಗೆ ಇರುವ ಸೆನ್ಸಾರ್ ಮಂಡಳಿಗೆ ಬೇಕಾದರೆ A ಸರ್ಟಿಫಿಕೇಟೇ ಕೊಡಿ ಅಂತ ಹೇಳಿ ಸಿನಿಮಾ ಮಾಡಬಹುದು.


ಧರ್ಮಕ್ಷೇತ್ರದ ಮೇಲೆ ಷಡ್ಯಂತ್ರ ಮಾಡಿ, ಪುಂಖಾನುಪುಂಖವಾಗಿ  ಯೂಟೂಬ್‌ನಲ್ಲಿ, ಇನ್ಸ್ಟಾಗ್ರಾಮ್‌ಗಳಲ್ಲಿ ವೀಡಿಯೋ ಮಾಡಿ ಹರಿ ಬಿಟ್ಟಿದ್ದು ಅಪರಾಧ ಅಲ್ಲ, FIR ಊ ಆಗೋದಿಲ್ಲ ಅನ್ನುವ ಕಾಲಘಟ್ಟದಲ್ಲಿ ಇರುವಾಗ, ಅದೇ ಶೈಲಿಯಲ್ಲಿ ವೀಡಿಯೋ ಮಾಡಿ, ಹರಿಬಿಟ್ಟು ಲೈಕ್, ವಿವ್ಸ್, ಶೇರು ಮಾಡಿಸಿ, ಗಂಟೆ ಹೊಡೆಸಬಹುದು!, 


ಪ್ರವಚನ ಶೈಲಿಗೂ ಸಾಧ್ಯತೆ ಇದೆ!, 

ನ್ಯೂಸ್ ಚಾನಲ್‌ಗಳ ಟಿವಿ ಡಿಬೇಟ್ ನಲ್ಲಂತೂ ಭಾಷಣಕ್ಕಿಂತ ಪ್ರಖರವಾಗಿ ಮಾತಾಡಬಹುದು! 

ಇವತ್ತು ವಾಟ್ಸಪ್, ಇನ್ಸ್ಟಾ‌ಗ್ರಾಮ್, ಫೇಸ್‌ಬುಕ್, ಟೆಲಿಗ್ರಾಮ್‌ಗಳಲ್ಲಿ ಭಾಷಣಕ್ಕಿಂತ ದೊಡ್ಡ ಮಟ್ಟದಲ್ಲಿ ಮೆಸೇಜ್ ಮಾಡಬಹುದು.


**


ಅಂತಿಮವಾಗಿ ಪರಿಣಾಮ ಏನಪ್ಪ ಆಗುತ್ತೆ ಅಂದ್ರೆ, ಶಾಲೆಯ 200 ಮೀಟರ್ ಸುತ್ತಳತೆಯಲ್ಲಿ ತಂಬಾಕು ನಿಷೇಧ ಕಾನೂನಿದ್ದರೂ, ಶಾಲೆಯ ಕಾಂಪೌಂಡಿನ ಮೂರಡಿ ದೂರದ ಗೂಡಂಗಡಿಯಲ್ಲಿ ಬರ್ಕಲಿ ಸಿಗರೇಟ್, 66 ಮಾರ್ಕಿನ ನಸೀಮಾ ಬೀಡಿ ವ್ಯಾಪಾರ ನಡೆಯುವಂತೆ... ಕಾನೂನು ಸತ್ತು ಮಲಗಬಹುದು!


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top