ಬ್ರೇನ್‌ ಸ್ಟ್ರೋಕ್ ಕುರಿತು ಎಲ್ಲರೂ ಅರಿತುಕೊಳ್ಳಬೇಕಾದ ವಿಚಾರ

Upayuktha
0

ಒಂದು ಸರಳ ಸ್ಕ್ಯಾನ್ ಮಾಡುವ ಮೂಲಕ ಮೆದುಳಿನ ಸ್ಟ್ರೋಕ್‌ಗೆ ಕಾರಣವಾಗಬಹುದಾದ ಬ್ಲಾಕೇಜ್ ನಿಂದ ಪಾರಾಗಬಹುದು!



- ಡಾ. ವಿಕ್ರಮ್ ಹುಡೇದ್,

ಸೀನಿಯರ್ ಕನ್ಸಲ್ಟಂಟ್, ಡೈರೆಕ್ಟರ್ ಮತ್ತು ಕ್ಲಿನಿಕಲ್ ಲೀಡ್, ಇಂಟರ್‌ವೆನ್ಷನಲ್ ನ್ಯೂರಾಲಜಿ ಪ್ರೋಗ್ರಾಂ, ನಾರಾಯಣ ಹೆಲ್ತ್ 

----------------------

ಭಾರತದಲ್ಲಿ ಬ್ರೇನ್ ಸ್ಟ್ರೋಕ್ ಅಥವಾ ಮೆದುಳಿನ ಸ್ಟ್ರೋಕ್ ಅನ್ನುವುದು ಬಹಳ ಆತಂಕಕಾರಿ, ಅಪಾಯಕಾರಿ ವಿದ್ಯಮಾನವಾಗಿದೆ. ಒಬ್ಬ ನರರೋಗ ತಜ್ಞನಾಗಿ ನಾನು ಪ್ರತಿದಿನ ಬ್ರೇನ್ ಸ್ಟ್ರೋಕ್‌ನ ಭಯಾನಕ ಪರಿಣಾಮಗಳನ್ನು ನೋಡುತ್ತಿರುತ್ತೇನೆ. ಅವುಗಳಲ್ಲಿ ಬಹಳಷ್ಟು ಸ್ಟ್ರೋಕ್‌ ಗಳನ್ನು ತಡೆಯಬಹುದಿತ್ತು. ಸ್ಟ್ರೋಕ್ ಉಂಟಾಗುವುದು ಒಂದು ದೀರ್ಘಕಾಲಿಕ ಪ್ರಕ್ರಿಯೆಯ ಬಳಿಕ. ಈ ಪ್ರಕ್ರಿಯೆ ಬಹಳ ಸೈಲೆಂಟಾಗಿ ನಡೆಯುತ್ತಿರುತ್ತದೆ. ಈ ಕಾಲದಲ್ಲಿ ಆ ಪ್ರಕ್ರಿಯೆಯನ್ನು ನಾವು ಪತ್ತೆಹಚ್ಚಬಹುದು, ನಿಧಾನಗೊಳಿಸಬಹುದು ಮತ್ತು ಬಹುತೇಕ ಸಂದರ್ಭಗಳಲ್ಲಿ ಪೂರ್ತಿಯಾಗಿ ತಡೆಯಬಹುದು.

ಸ್ಟ್ರೋಕ್ ಅಪಾಯ ಉಂಟಾಗಲು ಕೊಡುಗೆ ನೀಡುವ ಪ್ರಮುಖ, ಆದರೆ ಕಡೆಗಣಿಸಲಾಗುವ ಕಾರಣಕರ್ತ ಇರುವುದು ಮೆದುಳಿನಲ್ಲಿ ಅಲ್ಲ, ಬದಲಿಗೆ ಗಂಟಲಿನಲ್ಲಿ. ಮೆದುಳಿಗೆ ರಕ್ತ ಸಾಗಿಸುವ ಕ್ಯಾರೊಟಿಡ್ ಧಮನಿಗಳು ಕೊಬ್ಬಿನ ಫಲಕಗಳ (ಫ್ಯಾಟಿ ಪ್ಲೇಕ್) ಸಂಗ್ರಹದಿಂದ ನಿಧಾನವಾಗಿ ಕಿರಿದಾಗಬಹುದು. ಈ ಪ್ರಕ್ರಿಯೆ ನಡೆಯುವಾಗ ಸಾಮಾನ್ಯವಾಗಿ ಯಾವುದೇ ಲಕ್ಷಣ ಇರುವುದಿಲ್ಲ. ಆದರೆ ಯಾವತ್ತೋ ಒಂದು ದಿನ ಆ ಫ್ಯಾಟಿ ಪ್ಲೇಕ್ ಒಡೆದರೆ ಅಥವಾ ರಕ್ತ ಹೆಪ್ಪು ಗಟ್ಟಿದರೆ ಮೆದುಳಿಗೆ ರಕ್ತದ ಹರಿವು ತಕ್ಷಣ ನಿಲ್ಲುತ್ತದೆ ಮತ್ತು ಅದರಿಂದ ಅಂಗವೈಕಲ್ಯ, ಮಾತು ಕಳೆದುಕೊಳ್ಳುವಿಕೆ ಅಥವಾ ಮರಣ ಕೂಡ ಸಂಭವಿಸಬಹುದು.


ಇತ್ತೀಚೆಗೆ ನಡೆದ ಕ್ರೆಸ್ಟ್-2 ಎಂಬ ಮಹತ್ವದ ಅಂತರರಾಷ್ಟ್ರೀಯ ಅಧ್ಯಯನ ಈ ವಿಚಾರಕ್ಕೆ ಸಂಬಂಧಿಸಿದಂತೆ, ಅದರಲ್ಲೂ ಜನರನ್ನು ಈ ಅಪಾಯದಿಂದ ಹೇಗೆ ಪಾರು ಮಾಡಬಹುದು ಎಂಬುದಕ್ಕೆ ಸ್ಪಷ್ಟತೆ ಒದಗಿಸಿದೆ. ಈ ಅಧ್ಯಯನದ ಭಾಗವಾಗಿ ರಕ್ತನಾಳ ಬಹಳಷ್ಟು ಕಿರಿದಾಗಿರುವ, ಆದರೆ ಯಾವ ಲಕ್ಷಣವೂ ಹೊಂದಿಲ್ಲದ ಕ್ಯಾರೊಟಿಡ್ ಕಿರಿದಾಗಿರುವಿಕೆ ಸಮಸ್ಯೆ ಇರುವ 2,400ಕ್ಕೂ ಹೆಚ್ಚು ವ್ಯಕ್ತಿಗಳನ್ನು ತಪಾಸಣೆ ನಡೆಸಲಾಯಿತು. ಅವರೆಲ್ಲರಿಗೂ ಅತ್ಯುತ್ತಮ ಔಷಧ ಚಿಕಿತ್ಸೆ ನೀಡಲಾಯಿತು. ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಇತರ ರಕ್ತನಾಳಕ್ಕೆ ಸಂಬಂಧಿಸಿದ ತೊಂದರೆಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಯಿತು. ಈ ಪರೀಕ್ಷೆಯ ಫಲಿತಾಂಶ ಒಂದು ಸತ್ಯವನ್ನು ತಿಳಿಸಿತು. ಅದೇನೆಂದರೆ ಕೇವಲ ಔಷಧ ಮಾತ್ರ ತೆಗೆದುಕೊಂಡವರಿಗಿಂತ ಕ್ಯಾರೊಟಿಡ್ ಸ್ಟೆಂಟಿಂಗ್ ಮಾಡಿಸಿಕೊಂಡವರಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ ಸ್ಟ್ರೋಕ್ ಅಥವಾ ಮರಣ ಪ್ರಮಾಣ ಅರ್ಧಕ್ಕಿಂತ ಕಡಿಮೆ ಆಗಿತ್ತು.

ಇದರ ಅರ್ಥ ಕ್ಯಾರೊಟಿಡ್ ಸಮಸ್ಯೆ ಇರುವ ಪ್ರತಿಯೊಬ್ಬರಿಗೂ ಶಸ್ತ್ರಚಿಕಿತ್ಸೆ ಅಗತ್ಯ ಅಂತಲ್ಲ. ಆದರೆ ಇದು ಕ್ಯಾರೊಟಿಡ್ ಕಿರಿದಾಗುವಿಕೆಯ ಗಂಭೀರ ಸಮಸ್ಯೆಯನ್ನು ಮೊದಲೇ ಪತ್ತೆಹಚ್ಚಿದರೆ ಅದರಿಂದ ಪಾರಾಗಬಹುದು ಎಂಬುದನ್ನು ಸೂಚಿಸುತ್ತದೆ. ವಿಶೇಷವಾಗಿ ನಿಜವಾಗಿ ಚಿಕಿತ್ಸೆ ಅಗತ್ಯವಿರುವವರಿಗೆ ಹೆಚ್ಚುವರಿ ರಕ್ಷಣೆ ನೀಡುವ ಅವಕಾಶ ಸಿಗುತ್ತದೆ. ಸಮಯಕ್ಕೆ ಸರಿಯಾಗಿ ಸಮಸ್ಯೆ ಪತ್ತೆ ಹಚ್ಚುವುದರಿಂದ ಅಪಾಯ ಉಂಟಾಗುವುದನ್ನು ತಡೆಯಬಹುದಾಗಿದೆ. ಈ ವಿಚಾರವಾಗಿ ನೋಡುವುದಾದರೆ ಈ ಅಪಾಯವನ್ನು ಪತ್ತೆ ಹಚ್ಚಲು ನಮ್ಮ ಬಳಿ ಲಭ್ಯವಿರುವ ಅತ್ಯಂತ ಸರಳ ಸಾಧನಗಳಲ್ಲಿ ಒಂದೆಂದರೆ ಅದು ಕ್ಯಾರೊಟಿಡ್ ಡಾಪ್ಲರ್ ಅಲ್ಟ್ರಾಸೌಂಡ್. 


ಯಾವುದೇ ರೇಡಿಯೇಷನ್ ಇಲ್ಲದ, ಆಕ್ರಮಣಶೀಲವಲ್ಲದ ಈ ಪರೀಕ್ಷೆಯಲ್ಲಿ ಧ್ವನಿ ತರಂಗಗಳನ್ನು ಬಳಸಿ ಫ್ಯಾಟಿ ಪ್ಲೇಕ್ ಗಳ ಸಂಗ್ರಹವನ್ನು ಮತ್ತು ಧಮನಿ ಎಷ್ಟು ಕಿರಿದಾಗಿದೆ ಎಂಬುದನ್ನು ಅಳೆಯಲಾಗುತ್ತದೆ. ಇದು ಅತ್ಯಂತ ತ್ವರಿತ, ನೋವಿಲ್ಲದ, ವ್ಯಾಪಕವಾಗಿ ಎಲ್ಲಾ ಕಡೆ ಲಭ್ಯವಿರುವ ಮತ್ತು ಅತ್ಯಂತ ಸೂಕ್ತ ಮಾಹಿತಿ ಒದಗಿಸುವ ಒಂದು ವಿಧಾನವಾಗಿದೆ.


ಇದನ್ನು ಎಲ್ಲರಿಗೂ ಯಾವುದೇ ಕಾರಣಕ್ಕೂ ಶಿಫಾರಸು ಮಾಡುವುದಿಲ್ಲ. ಆದರೆ ಹೆಚ್ಚಿನ ರಕ್ತದೊತ್ತಡ, ಮಧುಮೇಹ, ಹೆಚ್ಚಿನ ಕೊಲೆಸ್ಟ್ರಾಲ್, ಧೂಮಪಾನ, ಹೃದ್ರೋಗ, ಪೆರಿಫೆರಲ್ ಆರ್ಟರಿ ರೋಗ ಅಥವಾ ಕುಟುಂಬದಲ್ಲಿ ರಕ್ತನಾಳದ ಸಮಸ್ಯೆಗಳ ಇತಿಹಾಸದಂತಹ ಸ್ಟ್ರೋಕ್ ಅಪಾಯದ ಅನೇಕ ಅಂಶಗಳನ್ನು ಹೊಂದಿರುವವರಿಗೆ ಇದು ಬಹಳ ಪ್ರಯೋಜನಕಾರಿಯಾಗಿದೆ. 50-55 ವರ್ಷ ಮೇಲ್ಪಟ್ಟವರಲ್ಲಿ ಈ ಅಪಾಯಗಳಿದ್ದರೆ ವಾರ್ಷಿಕ ಆರೋಗ್ಯ ತಪಾಸಣೆಯಲ್ಲಿ ಕ್ಯಾರೊಟಿಡ್ ಡಾಪ್ಲರ್ ಸ್ಕ್ಯಾನ್ ಕೂಡ ಸೇರಿಸುವುದು ಒಳ್ಳೆಯದು. ಅದರಿಂದ ನಿಶಬ್ದವಾಗಿ ಹೆಚ್ಚುತ್ತಿರುವ ಅಪಾಯಕಾರಿ ಸಮಸ್ಯೆಯನ್ನು ಬಹಳ ಮುಂಚೆಯೇ ಪತ್ತೆಹಚ್ಚಲು ಸಹಾಯವಾಗಲಿದೆ.


ಖಂಡಿತವಾಗಿಯೂ ಯಾವುದೇ ಸ್ಕ್ಯಾನ್ ಕೂಡ ಎಚ್ಚರಿಕೆ ಕ್ರಮಗಳಿಗಿಂತ ಮೇಲಲ್ಲ. ಹಾಗಾಗಿ ಸ್ಟ್ರೋಕ್‌ನಿಂದ ಅತ್ಯುತ್ತಮ ರಕ್ಷಣೆ ಹೊಂದಬೇಕೆಂದರೆ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಮಧುಮೇಹದ ಕಟ್ಟುನಿಟ್ಟಾದ ನಿಯಂತ್ರಣ ಮಾಡಬೇಕು. ಧೂಮಪಾನ ಬಿಟ್ಟುಬಿಡುವುದು, ನಿಯಮಿತ ವ್ಯಾಯಾಮ ಮಾಡುವುದು ಮತ್ತು ಆರೋಗ್ಯಕರ ದೇಹ ತೂಕವನ್ನು ಕಾಪಾಡಿಕೊಳ್ಳುವುದು ಮುಖ್ಯ. ಈ ಉತ್ತಮ ಜೀವನಶೈಲಿಯೇ ನಮಗೆ ಬಲಿಷ್ಠ ರಕ್ಷಾಕವಚ.

ಇದೆಲ್ಲದರ ಜೊತೆಗೆ ತುರ್ತು ವೈದ್ಯಕೀಯ ಗಮನ ಅಗತ್ಯವಿರುವ ಲಕ್ಷಣಗಳನ್ನು ಎಂದಿಗೂ ಕಡೆಗಣಿಸಬಾರದು. ಒಮ್ಮೆಲೆ ಕೈ-ಕಾಲು ದುರ್ಬಲಗೊಳ್ಳುವುದು, ಮುಖ ಬಾಗುವುದು, ಮಾತು ತೊದಲುವುದು, ದೃಷ್ಟಿ ಕಳೆದುಕೊಳ್ಳುವುದು ಅಥವಾ ತುರಿಕೆಯಾಗುವುದು ಇಂತಹ ಲಕ್ಷಣಗಳನ್ನು ಯಾವಾಗಲೂ ತುರ್ತು ವೈದ್ಯಕೀಯ ಸ್ಥಿತಿಯೆಂದು ಪರಿಗಣಿಸಬೇಕು. ಈ ಕ್ಷಣಿಕ, ತಾತ್ಕಾಲಿಕ ಎಚ್ಚರಿಕೆಗಳು ಗಂಭೀರವಾದ ಕ್ಯಾರೊಟಿಡ್ ಸಮಸ್ಯೆಯ ಮೊದಲ ಸಂಕೇತವಾಗಿರಬಹುದು ಮತ್ತು ಇದು ಭಾರೀ ದುರಂತವನ್ನು ತಡೆಯಲು ಸಿಗುವ ಅತ್ಯಮೂಲ್ಯ ಸೂಚನೆಯಾಗಿರಬಹುದು.


ಸ್ಟ್ರೋಕ್ ಅನ್ನು ಎದುರಿಸಬಲ್ಲ ಒಂದು ಸಬಲ ವ್ಯವಸ್ಥೆಯನ್ನು ರೂಪಿಸುತ್ತಿರುವ ಈ ಹೊತ್ತಿನಲ್ಲಿ ಎಚ್ಚರಿಯಿಂದ ಅಪಾಯದ ಮೌಲ್ಯಮಾಪನ ಮಾಡುವುದು ಪ್ರಮುಖ ಆದ್ಯತೆಯಾಗಬೇಕಿದೆ. ಒಂದು ಸರಳವಾದ ಗಂಟಲ ಧಮನಿ ಸ್ಕ್ಯಾನ್ ಮಾಡುವ ಮೂಲಕ ಅಪಾಯವನ್ನು ಮುಂಚೆಯೇ ಪತ್ತೆಹಚ್ಚುವುದು ಒಳ್ಳೆಯದು. ಅದರಿಂದ ಅಂಗವೈಕಲ್ಯ ಅಥವಾ ಅದಕ್ಕೂ ಗಂಭೀರ ಸ್ಥಿತಿ ಉಂಟಾಗುವುದನ್ನು ತಪ್ಪಿಸಬಹುದು. ಸ್ಟ್ರೋಕ್ ತಡೆಗಟ್ಟುವುದು ಈಗ ಅಸಾಧ್ಯವಲ್ಲ, ನಾವು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಂಡರೆ ಸ್ಟ್ರೋಕ್ ತಡೆಗಟ್ಟುವುದು ನಮ್ಮ ಕೈಯಲ್ಲೇ ಇದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top