ಗುರುಗಳಾದ ಶ್ರೀ ವಿಶ್ವೇಶ್ವರ್ ಭಟ್ ಅವರು ಕನ್ನಡ ಪತ್ರಿಕೆಯಲ್ಲಿ ನಿಖರತೆ, ಸೃಜನಶೀಲತೆ, ಹಾಗೂ ಮಾನವೀಯತೆಯ ಪ್ರತಿರೂಪ. ತಮ್ಮ ವಿಶೇಷ, ವಿಶಿಷ್ಟ ಬರಹಶೈಲಿ, ಸರಳ ಮಾತುಗಳಲ್ಲಿ ಆಳವಾದ ಅರ್ಥ ನೀಡುವ ಸಾಮರ್ಥ್ಯದಿಂದ ಓದುಗರ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿರುವ ಸಾಧಕರು.
ಇತ್ತೀಚೆಗೆ ಬಿಡುಗಡೆಯಾದ ಗುರುಗಳ 103ನೇ ಪುಸ್ತಕ “ಉಳಿದವರು ಕಂಡಂತೆ” ಈ ಪುಸ್ತಕದಲ್ಲಿ ಅವರ ಬರಹಗಳು ಕೇವಲ ವರದಿ ಅಥವಾ ಲೇಖನಗಳಲ್ಲ, ಬದಲಿಗೆ ಅವು ಜೀವನದ ಸತ್ಯಗಳನ್ನು, ನಿಗೂಢವಾದ ವೀಕ್ಷಣೆಯೊಂದಿಗೆ ವ್ಯಕ್ತಪಡಿಸುವ ಕಣ್ಣಿಗೆ ಬೀಳದ ಸತ್ಯ ಕಥೆಗಳು.
ಈ ಪುಸ್ತಕದಲ್ಲಿ 2023 ಅಕ್ಟೋಬರ್ 7 ರಂದು ನಡೆದ, ವಿಶ್ವವನ್ನೇ ಕಂಗೊಳಿಸಿದ ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ಕ್ರೂರ ದಾಳಿ. ಈ ದಾಳಿಯಲ್ಲಿ 1,200ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರು ಮತ್ತು ವಿದೇಶಿಗಳು ಸಾವನ್ನಪ್ಪಿದರೆ, ನೂರಾರು ಮಂದಿ ಗಾಯಗೊಂಡರು. ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ಮಕ್ಕಳು ಮತ್ತು ವೃದ್ಧರ ಮೇಲೆ ನಡೆದ ಹಿಂಸೆ ವಿಶ್ವ ಮಾನವೀಯ ಮೌಲ್ಯಗಳಿಗೆ ಕಪ್ಪು ಗುರುತು ಬೀರಿತು. ದಾಳಿಯಲ್ಲಿ ಜೀವ ಕಳೆದುಕೊಂಡ ಅಮಾಯಕ ನಾಗರಿಕರು, ಅತ್ಯಾಚಾರಕ್ಕೊಳಗಾದ ಮುಗ್ದ ಮಹಿಳೆಯರು, ಕಿಡ್ನಾಪ್ ಆಗಿ ಸಾವು ಬದುಕಿನ ನಡುವು ಒದ್ದಾಡಿದ ಜನರ ಸ್ಥಿತಿಗಳನ್ನು ವಿಶ್ವೇಶ್ವರ್ ಭಟ್ ಸರ್ ಅವರು ಹೃದಯ ಕಲುಕುವ ರೀತಿಯಲ್ಲಿ ವಿವರಿಸಿದ್ದಾರೆ.
ಈ ಪುಸ್ತಕದಲ್ಲಿರುವ ಇಸ್ರೇಲ್ ದಾಳಿಯ ಕುರಿತ ಅಧ್ಯಾಯಗಳು ಕೇವಲ ಮಾಹಿತಿಗಳ ವಿವರ ಮಾತ್ರವಲ್ಲ, ಅವು ಮಾನವೀಯ ಕಣ್ಣೀರು, ನೋವು ಮತ್ತು ಬದುಕುಳಿದವರ ಕಿರುಚಾಟದ ದಾಖಲಾತಿಗಳು. ಭಟ್ ಸರ್ ಅವರು ಘಟನೆಗಳನ್ನು ಬರೆಯುವಾಗ ಪತ್ರಕರ್ತನ ನಿಷ್ಪಕ್ಷಪಾತ ದೃಷ್ಟಿಯನ್ನು ಕಾಯ್ದುಕೊಳ್ಳುವುದರೊಂದಿಗೆ, ಮನುಷ್ಯನ ಹೃದಯವನ್ನು ಚುಚ್ಚುವ ಮೃದು ಸ್ಪರ್ಶವನ್ನೂ ಸೇರಿಸಿದ್ದಾರೆ. ಈ ಎರಡೂ ಗುಣಗಳ ಸಮನ್ವಯವೇ ಈ ಪುಸ್ತಕವನ್ನು ವಿಶೇಷವಾಗಿಸುತ್ತದೆ.
ಇಸ್ರೇಲ್ ಮೇಲೆ ನಡೆದ ದಾಳಿ ಕೇವಲ ಉಗ್ರರ ದಾಳಿಯಲ್ಲ, ಇದು ಸಾವಿರಾರು ಕುಟುಂಬದ ಮೇಲೆ ಬಿದ್ದ ಬಿರುಕು, ತಾಯಂದಿರ ಹೃದಯದಲ್ಲಿ ಮೂಡಿದ ಶಾಶ್ವತ ಗಾಯ, ಮಕ್ಕಳ ನಗು ಕಳೆದುಕೊಂಡ ದುರಂತ. ಇದನ್ನು ಭಟ್ ಸರ್ ಬರೆಯುವ ರೀತಿ ಓದುಗರ ಮನಸ್ಸನ್ನು ಮೌನಗೊಳಿಸುತ್ತದೆ. ಆದರೆ ಈ ಪುಸ್ತಕದ ಪ್ರಮುಖ ಶಕ್ತಿ ಎಂದರೆ ಅವಶೇಷಗಳ ನಡುವೆ ನಿಂತು ಪುನರ್‌ನಿರ್ಮಾಣಕ್ಕೆ ಕೈಜೋಡಿಸಿದ ಇಸ್ರೇಲ್ ಜನರ ಧೈರ್ಯ, ನಿರ್ಧಾರ. ವೇದನೆಯನ್ನೇ ಶಕ್ತಿಯನ್ನಾಗಿ ಮಾಡಿಕೊಂಡು ಮತ್ತೆ ಬದುಕನ್ನು ಕಟ್ಟಿಕೊಳ್ಳುವ ಇಸ್ರೇಲಿನ ಜನರ ತಾಳ್ಮೆ ಪುಸ್ತಕದಲ್ಲಿ ತುಂಬಾ ಅದ್ಭುತವಾಗಿ ವಿವರಿಸಿದ್ದಾರೆ. ತಮ್ಮವರನ್ನ ಕಳೆದುಕೊಂಡ ಅವಶೇಷಗಳ ಮುಂದೆ ನಿಂತು ಇದಕ್ಕಿಂತ ಬಲಿಷ್ಠ ದೇಶವನ್ನು ನಾವು ಕಟ್ಟುತ್ತೇವೆ ಎಂದು ಹೇಳಿದ ಕುರಿತೊಂದು ಘಟನೆ ಓದುಗರ ಹೃದಯವನ್ನು ನಿಲ್ಲಿಸಿ ಓಡಿಸುತ್ತದೆ.
ಇಸ್ರೇಲ್ ಪುನರ್‌ನಿರ್ಮಾಣದ ಕಥೆಯನ್ನು ಗುರುಗಳು ಕೇವಲ ಬರಹಗಾರರ, ರಾಜಕೀಯ ದೃಷ್ಟಿಯಿಂದವಲ್ಲ, ಮನುಷ್ಯತ್ವದ ದೃಷ್ಟಿಯಿಂದ ದಾಖಲಿಸಿದ್ದಾರೆ. ಅವರು ಹೇಳುವಂತೆ ಒಂದು ದೇಶವನ್ನು ಕಟ್ಟುವುದು ಕಲ್ಲು ಮತ್ತು ಸಿಮೆಂಟ್‌ನ ಕೆಲಸವಲ್ಲ ಬದಲಿಗೆ ಅದು ಒಡೆದ ಮನಸ್ಸುಗಳನ್ನು ಮರುಹೊಂದಿಸುವ ಕಲೆ. ಈ ವಾಕ್ಯವು ಪುಸ್ತಕದ ತತ್ವ ಮತ್ತು ಭಾವನೆ ಎರಡನ್ನೂ ಸಾರುತ್ತದೆ.
ದಾಳಿಯಲ್ಲಿ ಬಲಿಯಾದ ಜನರ ಬಗ್ಗೆ ಅವರು ಬರೆದಿರುವ ಸಾಲುಗಳು ಓದುಗರ ಮನಸ್ಸನ್ನು ನಿಶ್ಚಲಗೊಳಿಸುತ್ತವೆ. ಒಂದು ಕ್ಷಣದಲ್ಲಿ ಮನೆ, ಕುಟುಂಬ, ಸಂತೋಷ, ನಗು ಎಲ್ಲದರ ಮದ್ದೆ ಕೊನೆಯಲ್ಲಿ ಉಳಿದದ್ದು ಕೇವಲ ಶವಗಳು, ನೋವು, ಧೂಳು, ಗೋಳು, ಹೊಗೆ ಮತ್ತು ನಿಶ್ಶಬ್ದ ವಾತಾವರಣ. ಭಟ್ ಸರ್ ಈ ನಶಿಸಿದ ಬದುಕುಗಳನ್ನು ಕೇವಲ ಅಂಕಿಅಂಶಗಳಂತೆ ಬರೆಯದೇ, ಪ್ರತಿ ಸಾವಿಗೆ ಒಂದು ಮಾನವೀಯ ಮುಖ, ಒಂದು ಹೆಸರು, ಒಂದು ಕನಸು ನೀಡುತ್ತಾರೆ.
ಅತ್ಯಾಚಾರಕ್ಕೊಳಗಾದ ಮಹಿಳೆಯರ ಕಥನವೂ ಪುಸ್ತಕದಲ್ಲಿ ಅತ್ಯಂತ ತೀವ್ರವಾದ ಅಂಶ. ಯುದ್ಧಗಳಲ್ಲೂ ಸಹ ಮಾನವೀಯ ಮೌಲ್ಯಗಳನ್ನು ಮರೆತ ಕತ್ತಲೆಯ ಬಗೆಯನ್ನು ಅವರು ಸ್ಪಷ್ಟವಾಗಿ ಬಿಚ್ಚಿಟ್ಟಿದ್ದಾರೆ. ಆ ಘಟನೆಗಳ ಶಾಕ್ ಮತ್ತು ವೇದನೆಗಳನ್ನು ವಿವರಿಸುವಾಗ ಅವರು ಬಳಕೆ ಮಾಡಿದ ಭಾಷೆ ಅತ್ಯಂತ ಗಮನಾರ್ಹ.
ಕಿಡ್ನಾಪ್ ಆದವರ ಬಗ್ಗೆ ಬರೆದಿರುವ ಅಧ್ಯಾಯಗಳು ಮತ್ತೊಂದು ಮನಕಲಕುವ ಅನುಭವ. ಕುಟುಂಬದಿಂದ ಹರಿದು ಹೋದವರು, ಬದುಕಿರುವರೋ ಸತ್ತವರೋ ಎಂಬ ಅರಿವಿಲ್ಲದ ಮಧ್ಯಂತರದ ನರಕ, ಆತಂಕದಲ್ಲಿ ಒದ್ದಾಡುತ್ತಿರುವ ಪೋಷಕರು ನೋವು, ಮಕ್ಕಳನ್ನು ಬಿಟ್ಟುಕೊಂಡು ಬದುಕಲು ಸಾಧ್ಯವಿಲ್ಲದ ಪರಸ್ಥಿತಿ, ಈ ಎಲ್ಲಾ ಭಾವನೆಗಳು ಅವರ ಬರಹದಲ್ಲಿ ಸ್ಪಷ್ಟವಾಗಿ ಮೂಡಿವೆ. ಓದುಗನು ಆ ಕಥೆಗಳನ್ನು ಓದುವಾಗ ಕೇವಲ ‘ಮಾಹಿತಿ’ ಪಡೆಯುವುದಿಲ್ಲ, ಬದಲಾಗಿ ಆ ಕುಟುಂಬದೊಳಗಿನ ನೋವಿಗೆ ಸಾಕ್ಷಿಯಾಗುತ್ತಾನೆ. ಆ ಕುಟುಂಬದಲ್ಲಿ ತಾನು ಒಬ್ಬ ಎಂಬ ಮನೋಭಾವ ಮೂಡಿಸಿಕೊಳ್ಳುತ್ತಾನೆ. ಈ ಪುಸ್ತಕ ಕೇವಲ ಓದುವ ಗ್ರಂಥವಾಗಿರದೆ, ಜೀವನವನ್ನು ಅರ್ಥಮಾಡಿಕೊಳ್ಳುವ ಕನ್ನಡಿ ಆಗಿಸುತ್ತದೆ.
ಒಟ್ಟಿನಲ್ಲಿ ಹೇಳುವದಾದರೆ ಉಳಿದವರು ಕಂಡಂತೆ ಪುಸ್ತಕ ಯುದ್ಧದ ದುಃಖವನ್ನೂ, ಮಾನವೀಯತೆಯ ಶಕ್ತಿಯನ್ನೂ, ಪುನರ್‌ನಿರ್ಮಾಣದ ಅದ್ಭುತ ಮನೋಬಲವನ್ನೂ ತೋರಿಸಿ ಅದ್ಭುತ ಕೃತಿ. ಇಸ್ರೇಲ್‌ನ ದುರಂತ ಮತ್ತು ಮರುಕಟ್ಟಿದ ಭವಿಷ್ಯದ ನಡುವಿನ ಪಯಣವನ್ನು ಭಟ್ ಸರ್ ಮನಮುಟ್ಟುವಂತೆ ಬರೆದಿದ್ದು, ಓದುಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಜೊತೆಗೆ ಈ ಕೃತಿ ಮಾನವೀಯತೆ ಎತ್ತಿ ಹಿಡಿಯುವ, ನೋವಿನ ಮೌನ, ಕಿರುಚಾಟಗಳನ್ನು ಕೇಳಿಸುವ, ಯುದ್ಧದ ಬಲಿಯನ್ನಾಗಿ ಮಾರ್ಪಟ್ಟ ಸಾಮಾನ್ಯ ಜನರ ಕಥೆಗಳ ಗಾಢ ದಾಖಲೆಯಾಗಿದೆ.
ಓದುಗರ ಮನಸ್ಸಿನಲ್ಲಿ ನೆಲಸುವ, ಬದಲಾವಣೆಗೆ ಆಲೋಚನೆಯನ್ನು ಪ್ರೇರೇಪಿಸುವ ಶಕ್ತಿಯುತ ಕೃತಿ, ಪ್ರತಿಯೊಬ್ಬರೂ ಓದಲೇ ಬೇಕಾದ ಕೃತಿ, ಉಳಿದವರು ಕಂಡಂತೆ...
- ಸರಸ್ವತಿ ವಿಶ್ವನಾಥ್ ಪಾಟೀಲ್, ಕಾರಟಗಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ





