ಬೆಂಗಳೂರು: ಸಾಂಪ್ರದಾಯಿಕ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಲು ಶ್ರಮವಹಿಸಬೇಕು ಎಂದು ಹಿರಿಯ ಭರತನಾಟ್ಯ ಕಲಾವಿದೆ ಪೂರ್ಣಿಮಾ ಗುರುರಾಜ ಹೇಳಿದರು.
ಶ್ರೀ ವಾಣಿ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ವಿದ್ಯಾಪೀಠ ಐಟಿಐ ಬಡಾವಣೆಯ ಕಲಾ ಸಿಂಧು ಅಕಾಡೆಮಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸುಶೃತಿ ಸರಣಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಕಲಾ ಕ್ಷೇತ್ರಕ್ಕೆ ಸಾಕಷ್ಟು ಸ್ವಾತಂತ್ರ್ಯ ಇದೆ. ಅದು ಜಗತ್ತಿನ ಯಾವ ಭಾಷೆಯವರಿಗೂ ಅರ್ಥವಾಗುತ್ತದೆ. ಕಲೆಗಳಿಂದ ಮಾತ್ರ ವಿಶ್ವ ಮೈತ್ರಿ ಮತ್ತು ಸಮನ್ವಯ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಮೃದಂಗ ವಿದ್ವಾಂಸ ಬಾಲಕೃಷ್ಣ ಅವರ ಸುಶೃತಿ ಕಾರ್ಯಕ್ರಮ ಸರಣಿ ಸಾರ್ಥಕವಾಗಿದೆ ಎಂದರು.
ಹಿರಿಯ ಮೃದಂಗ ವಿದ್ವಾಂಸ ವಾಸುದೇವರಾವ್ ಅವರು ಮಾತನಾಡಿ, ಸಾಂಸ್ಕೃತಿಕ ಕಲೆಗಳನ್ನು ಕೇವಲ ನೋಡುವುದು ಮಾತ್ರ ಆಗಬಾರದು; ಅವುಗಳನ್ನು ಅಂತರಂಗದಲ್ಲಿ ಅನುಭವಿಸಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ ಚಲವಾದಿ, ವಿದುಷಿ ವಸುಧಾ ಬಾಲಕೃಷ್ಣ ಮತ್ತು ಕಾರ್ಯಕ್ರಮ ಆಯೋಜಕರಾದ ವಿದ್ವಾನ್ ಬಾಲಕೃಷ್ಣ ಹಾಜರಿದ್ದರು.
ಅಮೆರಿಕದ ಕಲಾವಿದೆ ಶ್ರೀದೇವಿ ಜಗನ್ನಾಥ ಮತ್ತು ದುಬೈನ ರೋಹಿಣಿ ಅನಂತ ಅವರು ಅಸ್ಸಾಮಿ ಮೂಲದ ಸತ್ರಿಯ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಪ್ರಖ್ಯಾತ ಕಲಾವಿದ ವಿದ್ವಾನ್ ಸತ್ಯನಾರಾಯಣ ರಾಜು ಅವರು ತಂಜಾವೂರು ಸಹೋದರರ ವಿಶೇಷ ರಚನೆಗಳನ್ನು ಮತ್ತು ಕೃಷ್ಣ ಅಷ್ಟೋತ್ತರದಿಂದ ಆಯ್ದ ಭಾಗದ ವರ್ಣಗಳನ್ನು ಮನೋಜ್ಞವಾಗಿ ಅಭಿನಯಿಸಿ ಕಲಾ ರಸಿಕರ ಮನ ಗೆದ್ದರು. ವಿದ್ವಾನ್ ಬಾಲಕೃಷ್ಣ ಅವರ ಶಿಷ್ಯರು ಮೃದಂಗವಾದನದಲ್ಲಿ ಮಿಶ್ರ ಛಾಪು ತಾಳವನ್ನು ನುಡಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಬೆಂಗಳೂರಿನ ವಿದ್ಯಾಪೀಠ ಐಟಿಐ ಬಡಾವಣೆಯ ಕಲಾ ಸಿಂಧು ಸಂಸ್ಥೆ ಆವರಣದಲ್ಲಿ ಶ್ರೀ ವಾಣಿ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ಸುಶ್ರುತಿ ಸರಣಿ ಕಾರ್ಯಕ್ರಮದಲ್ಲಿ ವಿದುಷಿಯರಾದ ಶ್ರೀದೇವಿ ಮತ್ತು ರೋಹಿಣಿ ಅವರು ಸತ್ರಿಯ ನೃತ್ಯ ಪ್ರದರ್ಶನ ಮಾಡಿ ಗಮನ ಸೆಳೆದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

