ಆತ್ಮೋದ್ಧಾರಕ್ಕೆ ಗೀತೆಯ ಸಂದೇಶ

Upayuktha
0

ಗೀತಾ ಜಯಂತಿಯ ನಿಮಿತ್ತ ವಿಶೇಷ ಲೇಖನ




ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಭಗವದ್ಗೀತೆಯು ಅತ್ಯಂತ ಶ್ರೇಷ್ಠ ತತ್ತ್ವಗ್ರಂಥವಾಗಿದೆ. ಯುಗಾಂತರಗಳಿಂದ ಮಾನವಕುಲವನ್ನು ಒಳಗಿನತ್ತ ತಿರುಗಿಸುವ, ಜ್ಞಾನ–ಕರ್ಮ–ಭಕ್ತಿ ಎಂಬ ತ್ರಿಮಾರ್ಗಗಳನ್ನು ಸಮನ್ವಯಗೊಳಿಸುವ ಮಹಾಗ್ರಂಥವೆಂದೇ ಗೀತೆ ಗುರುತಿಸಿಕೊಂಡಿದೆ. ಗೀತೆಯ ನಿಜವಾದ ಉದ್ದೇಶ “ಜೀವನದ ಸಮರಕ್ಷೇತ್ರದಲ್ಲಿ ಸ್ಥಿರತೆ, ಶಾಂತಿ, ಜ್ಞಾನ, ಹಾಗೂ ಆತ್ಮೋದ್ದಾರವನ್ನು ಸಾಧಿಸುವುದು”. ಗೀತಾ ಜಯಂತಿಯಂದು ಈ ಸಂದೇಶವನ್ನು ಅರಿತು ಊರ್ಜಿತಗೊಳಿಸುವುದು ಆತ್ಮಶೋಧನೆಯ ಯಾತ್ರೆಯ ಮೊದಲ ಹೆಜ್ಜೆಯಾಗಿದೆ.


ಅರ್ಜುನನ ಕುಂಠಿತ ಮನಸ್ಸಿಗೆ ಕೃಷ್ಣನು ನೀಡಿದ ಗೀತೋಪದೇಶವು ಕೇವಲ ಯುದ್ಧಸಂದರ್ಭಕ್ಕೆ ಸೀಮಿತವಲ್ಲ; ಜೀವನದಲ್ಲಿ ಎದುರಾಗುವ ಕಷ್ಟನಷ್ಟಗಳಲ್ಲಿ, ಬೇಗೆಬೇಗುದಿಯಲ್ಲಿ ದಿಕ್ಕು ತೋರಬಲ್ಲ ಶಾಶ್ವತ ಜ್ಞಾನದೀಪವಾಗಿದೆ. ಅದರಲ್ಲಿ ಅತ್ಯಂತ ಮುಖ್ಯವಾದುದು ಆತ್ಮೋದ್ಧಾರದ ಮಾರ್ಗ — ಜೀವನು ತನ್ನನ್ನು ತಾನೇ ಔನ್ನತ್ಯಕ್ಕೇರಿಸಿಕೊಂಡು ಸಮನ್ವಿತ, ಶಾಂತ ಮತ್ತು ಸಾರ್ಥಕ ಜೀವನದ ದಾರಿಯಲ್ಲಿ ಸಾಗುವ ಮೊದಲ ಹೆಜ್ಜೆಯಾಗಿದೆ.

ಆತ್ಮೋದ್ದಾರದ ಮೂಲಮಂತ್ರ- “ಉದ್ಧರೇದಾತ್ಮನಾತ್ಮಾನಂ” 


ಭಗವದ್ಗೀತೆ 6.5ರಲ್ಲಿ ಶ್ರೀಕೃಷ್ಣನು ಹೀಗೆ ಸಾರುತ್ತಾನೆ: ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ । ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ ॥ ಅಂದರೆ  “ತನ್ನನ್ನು ತಾನೇ ಉದ್ಧರಿಸಬೇಕು; ತಾನೇ ತನ್ನನ್ನು ಕುಗ್ಗಿಸಿಕೊಳ್ಳಬಾರದು. ಯಾಕೆಂದರೆ ತನ್ನ ಆತ್ಮನೇ ತನ್ನ ಸ್ನೇಹಿತ; ತನ್ನ ಆತ್ಮನೇ ತನ್ನ ಶತ್ರುವೂ ಆಗಬಹುದು.” ಈ ಶ್ಲೋಕವೇ ಆತ್ಮೋದ್ದಾರದ ದೀರ್ಘ ಯಾತ್ರೆಯ ಮೊದಲ ಹೆಜ್ಜೆಯಾಗಿದೆ. ಮನುಷ್ಯನ ಜೀವನದಲ್ಲಿ ಬಾಹ್ಯಶತ್ರುಗಳಿಗಿಂತ ಭಯಾನಕವಾದದ್ದು ಆಂತರಿಕ ಅಶಾಂತಿ, ಅಜ್ಞಾನ, ದೌರ್ಬಲ್ಯ. ತನ್ನನ್ನು ತಾನೇ ಉದ್ಧರಿಸಿಕೊಳ್ಳುವುದು ಎಂದರೆ:

• ಮನಸ್ಸನ್ನು ನಿಗ್ರಹಿಸುವುದು

• ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವುದು

• ಜ್ಞಾನದಿಂದ ಅಜ್ಞಾನವನ್ನು ನೀಗಿಸುವುದು

• ಆಸಕ್ತಿರಹಿತ ಕರ್ಮದಿಂದ ಹೃದಯವನ್ನು ಶುದ್ಧಗೊಳಿಸುವುದು

ಈ ಮಾರ್ಗವನ್ನು ಗೀತೆ ಸಮಗ್ರವಾಗಿ “ಯೋಗ” ಎಂದು ಪದದಿಂದ ಕರೆಯುತ್ತದೆ.


ಆತ್ಮೋದ್ಧಾರಕ್ಕಾಗಿ ‘ಸ್ಥಿತಪ್ರಜ್ಞತೆ’ಯ ಭಾವ

ಗೀತಾ ಎರಡನೇ ಅಧ್ಯಾಯದಲ್ಲಿ ಕಲ್ಮಷರಹಿತ ಜೀವನದ ರೂಪಕವಾದ ಸ್ಥಿತಪ್ರಜ್ಞನ ಗುಣಗಳನ್ನು ವಿವರಿಸಲಾಗುತ್ತದೆ. ಆತ್ಮಜ್ಞಾನದಿಂದ ಸ್ಥಿರನಾಗುವವರು ಹೇಗಿರುತ್ತಾರೆ?


ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನೋಗತಾನ್ । ಆತ್ಮನ್ಯೇವಾತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ ॥ (ಭಗವದ್ಗೀತಾ 2.55) ಇದರ ಭಾವಾನುವಾದ ಇಂತಿದೆ - “ಮನಸ್ಸಿನಲ್ಲಿ ಉದಿಸುವ ಎಲ್ಲ ಕಾಮನೆಗಳನ್ನು ತ್ಯಜಿಸಿ, ಆತ್ಮನಲ್ಲೇ ಸಂತೃಪ್ತಿ ಹೊಂದುವವನು ಸ್ಥಿತಪ್ರಜ್ಞ.” ಸ್ಥಿತಪ್ರಜ್ಞ ಎಂದರೆ ಜಗತ್ತಿನಿಂದ ದೂರವಿರುವವನು ಎಂದಲ್ಲ-

ಜಗತ್ತಿನ ಮಧ್ಯದಲ್ಲಿದ್ದರೂ ಅಲೆಮಾರಿ ಮನಸ್ಸಿಗೆ ಕಡಿವಾಣ ತೊಡಿಸಿ, ಒಳಗಿನ ಶಾಂತಿಯ ತೋಟದಲ್ಲಿ ಅಚಲವಾಗಿರುವಂತೆ ಮಾಡುವುದು. ಕಷ್ಟ-ಸುಖ, ನಗು-ಅಳು, ಸೋಲು-ಗೆಲುವು, ಉನ್ನತಿ-ಅವನತಿ ಇವೆಲ್ಲವುಗಳಲ್ಲಿ ಸರ್ವಸಮಭಾವ - ಇವು ಸ್ಥಿತಪ್ರಜ್ಞನ ಲಕ್ಷಣಗಳು. ಇವೆಲ್ಲವೂ ಆತ್ಮೋದ್ಧಾರದ ಮುಂದಿನ ಹೆಜ್ಜೆಗಳು.


ನಿಷ್ಕಾಮ ಕರ್ಮ - ಆತ್ಮೋದ್ಧಾರದ ಮುಖ್ಯ ಹೆಜ್ಜೆ

ಆತ್ಮೋದ್ದಾರಕ್ಕೆ ಗೀತೆ ಬೋಧಿಸುವ ಪ್ರಮುಖ ಹೆಜ್ಜೆಯೆಂದರೆ ಕರ್ಮಯೋಗ. ಈ ಶ್ಲೋಕವು ಅದನ್ನೇ ಬೋಧಿಸುತ್ತದೆ- ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ । ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಽಸ್ತ್ವಕರ್ಮಣಿ  “ನಿನಗೆ ಕರ್ಮದಲ್ಲಿ ಮಾತ್ರ ಅಧಿಕಾರವಿದೆ, ಫಲದಲ್ಲಿ ಇಲ್ಲ. ಫಲದ ಅಪೇಕ್ಷೆಯಿಂದ ಕರ್ಮ ಮಾಡಬೇಡ; ಅಕರ್ಮದಲ್ಲೂ ಆಸಕ್ತನಾಗಬೇಡ.” ಕರ್ಮ ಮಾಡುವುದು ಮನುಷ್ಯನ ಸಹಜವಾದ ಗುಣ. ಆದರೆ ಫಲಾಪೇಕ್ಷೆ ಆತ್ಮಶಾಂತಿಯನ್ನು ಪಡೆಯುವಲ್ಲಿ ದೊಡ್ಡ ಅಡ್ಡಿಯಾಗಿರುತ್ತದೆ. ಫಲಾಪೇಕ್ಷೆಯಿಲ್ಲದೆ, ಕರ್ತವ್ಯಬುದ್ಧಿಯಿಂದ, ಭಗವದರ್ಪಣಭಾವದಿಂದ ಮಾಡುವ ಕರ್ಮ ಮನಸ್ಸನ ಶಾಂತಿಗೆ ಕಾರಣವಾಗುತ್ತದೆ. ಪರಿಶುದ್ಧ ಶಾಂತ ಹೃದಯವು ಜ್ಞಾನೋದಯಕ್ಕೆ ಮಾರ್ಗವಾಗುತ್ತದೆ. ಕರ್ಮಯೋಗವೇ ಆತ್ಮೋದ್ಧಾರದ ಮುಖ್ಯ ಹೆಜ್ಜೆಯಾಗಿದೆ.


ಮನಸ್ಸಿನ ಗೆಲುವೇ ಆತ್ಮೋನ್ನತಿ 

ಮನಸ್ಸಿನಲ್ಲಿ ಶಾಂತಿ ಇಲ್ಲದೆ ಆತ್ಮೋದ್ದಾರ ಸಾಧ್ಯವಿಲ್ಲ. ಗೀತೆಯಲ್ಲಿ ಮನಸ್ಸಿನ ಪಾತ್ರವನ್ನು ಹೀಗೆ ವಿವರಿಸಿದೆ: ಅಶಾಂತಸ್ಯ ಕುತಃ ಸುಖಮ್ ॥ (2.66) “ಅಶಾಂತಮನಸ್ಸಿನಿಂದ ಏನೂ ಸುಖವಿಲ್ಲ.” ಆದರೆ ಮನಶ್ಶಾಂತಿ ಮನೋನಿಗ್ರದಿಂದಷ್ಟೆ ಸಾಧ್ಯ. ಯತಃ ಯತಃ ನಿಶ್ಚರತಿ ಮನಶ್ಚಂಚಲಮಸ್ಥಿರಮ್ । ತತಃ ತತೋ ನಿಯಮ್ಯೈತದಾತ್ಮನ್ಯೇವ ವಶಂ ನಯೇತ್ ॥ (6.26) ಮನಸ್ಸು ಚಂಚಲವಾದರೂ ಅದನ್ನು ಪುನಃ ಪುನಃ ನಿಗ್ರಹಿಸಿ ಆತ್ಮಧ್ಯಾನದಲ್ಲಿ ನೆಲೆಸುವಂತೆ ಮಾಡಬೇಕು. ಹುಚ್ಚು ಕುದುರೆಯಂತೆ ಓಡುವ ಇಂದ್ರಿಯಗನ್ನು ಬುದ್ಧಿಯೆಂಬ ಸಾರಥಿಯ ಕೈಯ್ಯಲ್ಲಿರುವ ಮನಸ್ಸೆಂಬ ಕಡಿವಾಣದಿಂದ ನಿಯಂತ್ರಿಸಿದಾಗ ಮನಸ್ಸೆಂಬ ರಥಿಕನು ತನ್ನ ಗಮ್ಯವನ್ನು ಮುಟ್ಟಲು ಸಾಧ್ಯ.


ಸಮರ್ಪಣೆಯ ಮೂಲಕ ಉನ್ನತಿಗಾಗಿ ಭಕ್ತಿಯೋಗ 

ಆತ್ಮೋದ್ಧಾರದ ಅತ್ಯಂತ ಸುಲಭ, ಮತ್ತು ನೇರವಾದ ಮಾರ್ಗವೆಂದರೆ ಭಕ್ತಿಯೋಗ.

ಶ್ರೀಕೃಷ್ಣನು ಭಕ್ತನನ್ನು ತಾನು ಹೇಗೆ ಸ್ವೀಕರಿಸುತ್ತಾನೆ ಎಂಬುದನ್ನು ಹೀಗೆ ಹೇಳುತ್ತಾನೆ: ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ । ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ॥ (9.26) ಭಕ್ತಿಯಿಂದ ಅರ್ಪಿಸಿದ ಏನೇ ಇರಲಿ, ಕೃಷ್ಣನು ಅದನ್ನು ಸ್ವೀಕರಿಸುತ್ತಾನೆ. ಭಕ್ತಿಯು ಮನಸ್ಸಿನ ಅಹಂಕಾರವನ್ನು ಕರಗಿಸುವ ಅತ್ಯಂತ ಶಕ್ತಿಶಾಲಿ ಉಪಾಯವಾಗಿದೆ. ಭಕ್ತಿಯೋಗಕ್ಕೆ ಪ್ರಮುಖ ಲಕ್ಷಣಗಳು – ಸರ್ವಸಮರ್ಪಣಭಾವ, ನಿರಹಂಕಾರ, ದೈವಭಕ್ತಿ, ದಯೆ, ಸಹನೆ ಇತ್ಯಾದಿ. ಇವು ಆತ್ಮನನ್ನು ಉದ್ಧರಿಸಿ ಔನ್ನತ್ಯಕ್ಕೇರಿಸುತ್ತದೆ.


ಆತ್ಮೋದ್ಧಾರದೊಂದಿಗೆ ಸಮಾಜೋದ್ಧಾರ

ಗೀತೆಯ ಉಪದೇಶ ಕೇವಲ ವ್ಯಕ್ತಿಗಲ್ಲ; ಇದು ಸಮಾಜದ ನೈತಿಕ ಪುನರುಜ್ಜೀವನಕ್ಕೂ ಅನಿವಾರ್ಯ. ಶ್ರೀಕೃಷ್ಣನು ಹೀಗೆ ಹೇಳುತ್ತಾನೆ: ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ । ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ ॥ (3.21) ಪ್ರಮುಖರು ಹೇಗೆ ನಡೆಯುತ್ತಾರೆ, ಜನರು ಅದನ್ನೇ ಅನುಸರಿಸುತ್ತಾರೆ. ಆದ್ದರಿಂದ ಸಮಾಜದ ನಾಯಕ, ಗುರು, ಕಾರ್ಯಕರ್ತ, ಶಿಕ್ಷಿತ ಯುವಕರು ಎಲ್ಲರೂ ನೈತಿಕತೆಯ ದಾರಿಯಲ್ಲಿ ನಡೆಯಬೇಕು. 

ಆತ್ಮೋದ್ದಾರಕ್ಕೆ ಒಂದೇ ಒಂದು ಮಾರ್ಗವಲ್ಲ. ಗೀತೆ ಮೂರು ಮಾರ್ಗಗಳನ್ನೂ ಸಮಾನವಾಗಿ ಪರಿಗಣಿಸುತ್ತದೆ:


1. ಜ್ಞಾನಯೋಗ — ತತ್ತ್ವಜ್ಞಾನ, ಆತ್ಮ–ಅನಾತ್ಮ ವಿವೇಕ

2. ಕರ್ಮಯೋಗ — ನಿಷ್ಕಾಮ ಕರ್ಮ, ಕರ್ತವ್ಯಪಾಲನೆ

3. ಭಕ್ತಿಯೋಗ — ಸಮರ್ಪಣೆ, ಪ್ರೀತಿ, ದೈವಸಾಕ್ಷಾತ್ಕಾರ


ಈ ಮೂರು ಸೇರಿ “ಒಟ್ಟಾರೆ ಮಾನವೋದ್ಧಾರ” ಮಾಡುತ್ತದೆ. ಒಟ್ಟಿನಲ್ಲಿ ಮಾನವನು ನಿಷ್ಕಾಮಕರ್ಮಗಳಿಂದ ಶುದ್ಧನಾಗಿ, ತನ್ನ ದೈವೀಯ ಸ್ವರೂಪವನ್ನು ಅರಿತು, ಆತ್ಮೋದ್ಧಾರವನ್ನು ಮಾಡಿಕೊಂಡು, ಇತರರನ್ನೂ ಉದ್ಧರಿಸಿ, ಭಕ್ತಿ ಮತ್ತು ಸಮರ್ಪಣೆಯ ಭಾವದಿಂದ ದೈವಸಾನ್ನಿಧ್ಯವನ್ನು ಹೊಂದಬಹುದು ಎಂಬುದು ಗೀತೆಯ ಮುಖ್ಯ ತಾತ್ಪರ್ಯ.


- ಡಾ. ವಿಜಯಲಕ್ಷ್ಮಿ ಎಂ

ಸಹಾಯಕ ಪ್ರಾಧ್ಯಾಪಕರು

ಸಂಸ್ಕೃತ ವಿಭಾಗ

ಎಂ.ಜಿ.ಎಂ. ಕಾಲೇಜು, ಉಡುಪಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top