ಅಪಾರ ಜನಸ್ತೋಮಕ್ಕೆ ಸಾಕ್ಷಿಯಾದ ಸಂಡೂರು ಸಂಕಲ್ಪ ಸಮರ್ಪಣಾ ಸಮಾವೇಶ
ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದ ಕಟ್ಟ ಕಡೆಯ ಶೋಷಿತ ವರ್ಗಗಳ ಅಭಿವೃದ್ಧಿಗಾಗಿ ಸೇವೆ ಮಾಡುವುದೇ ಮುಖ್ಯ ಧ್ಯೇಯವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಅವರು ಹೇಳಿದರು.
ಸಂಡೂರು ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ವಿಠಲಾಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಂಡೂರು ಸಂಕಲ್ಪ ಸಮರ್ಪಣಾ ಸಮಾವೇಶ-2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನನ್ನ ರಾಜಕೀಯ ಜೀವನ ಪ್ರಾರಂಭವಾಗಿದ್ದು, ಇದೇ ವಿಠಲಾಪುರ ಗ್ರಾಮದಿಂದ. ನನ್ನನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದು ಇದೇ ಸಂಡೂರು ಜನತೆ. 2004 ರಲ್ಲಿ ಈ ಭಾಗದಲ್ಲಿ ವಿದ್ಯುತ್ ಕಂಬದಲ್ಲಿ 40 ವಾಟ್ ಬಲ್ಬ್ ನಿಂದ ಬೆಳಕು ಸಹ ನೆಲಕಚ್ಚುತ್ತಿರಲಿಲ್ಲ, ಅಷ್ಟೊಂದು ವಿದ್ಯುತ್ ಸಮಸ್ಯೆ ಇತ್ತು. ವಿಠಲಾಪುರ ಗ್ರಾಮದಲ್ಲಿಯೇ ವಿದ್ಯುತ್ ಉಪಕೇಂದ್ರ ಸ್ಥಾಪಿಸುವ ಮೂಲಕ ಗ್ರಾಮಗಳಲ್ಲಿ ಬೆಳಕು ಚೆಲ್ಲುವ ಕೆಲಸ ಮಾಡಲಾಯಿತು ಎಂದು ಸ್ಮರಿಸಿದ ಅವರು, ಹಂತ-ಹಂತವಾಗಿ ಅಭಿವೃದ್ಧಿಪಡಿಸುವ ಮೂಲಕ ಜಿಲ್ಲೆಯಲ್ಲಿ ಮಾದರಿ ತಾಲ್ಲೂಕನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.
ಅಂದಿನ ಸಂದರ್ಭದಲ್ಲಿಯೇ ತುಂಗಾಭದ್ರಾ ಅಣೆಕಟ್ಟಿನಿಂದ ಈ ಭಾಗದ 80 ಗ್ರಾಮಗಳ 80 ಸಾವಿರ ಮನೆಗಳಿಗೆ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಿದ್ದು ನಮ್ಮ ಸರ್ಕಾರ. ಈಗ ಪಂಚ ಗ್ಯಾರಂಟಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿ ವರ್ಷಕ್ಕೆ 60 ಸಾವಿರ ಕೋಟಿ ರೂ. ಗಳನ್ನು ಶೋಷಿತ ವರ್ಗಗಳ ಅಭಿವೃದ್ಧಿಗಾಗಿ ಖರ್ಚು ಮಾಡಲಾಗುತ್ತಿದೆ ಎಂದರು.
ಸಂಸದ ಈ.ತುಕಾರಾಮ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 2004 ರಿಂದ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಈವರೆಗೆ ಸುಮಾರು 4,700 ಕೋಟಿ ರೂ. ಅನುದಾನ ಪಡೆಯುವ ಮೂಲಕ ನಂಜುಂಡಪ್ಪ ವರದಿಯ ಪ್ರಕಾರ ಅತ್ಯಂತ ಹಿಂದುಳಿದ ತಾಲ್ಲೂಕಾದ ಸಂಡೂರನ್ನು ಅಭಿವೃದ್ಧಿ ಹೊಂದಿದ ತಾಲ್ಲೂಕನ್ನಾಗಿ ಮಾಡಲಾಗಿದೆ ಎಂದು ಹೇಳಿದರು.
ಸಂಡೂರು ಭಾಗದ 132 ಗ್ರಾಮಗಳಿಗೆ 425 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿಗಳ ಮೂಲಕ ನೀರಿನ ಸಮಸ್ಯೆ ನೀಗಿಸಿದ್ದೇವೆ. ಅದೇರೀತಿಯಾಗಿ ವಾರ್ಷಿಕವಾಗಿ 1.60 ಲಕ್ಷ ರೂ. ವೆಚ್ಚದಲ್ಲಿ ಕ್ಲಿನಿಕ್ ಆನ್ ವೀಲ್ ಯೋಜನೆಯ ಮೂಲಕ ಈ ಭಾಗದ ಜನರಿಗೆ ಮನೆ ಮನೆಗೆ ಉಚಿತ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಇದು ದೇಶದಲ್ಲಿಯೇ ಪ್ರಥಮ ವಿನೂತನ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಮಾಡುತ್ತಿದೆ. ಸಂಸದರ ಅನುದಾನದಲ್ಲಿಯೂ ಅಖಂಡ ಬಳ್ಳಾರಿ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಸಂಡೂರು ಶಾಸಕರಾದ ಈ.ಅನ್ನಪೂರ್ಣ ಅವರು ಮಾತನಾಡಿ, ಸಂಡೂರು ಭಾಗದಲ್ಲಿ ಕುಡಿಯುವ ನೀರು, ಆರೋಗ್ಯ, ರಸ್ತೆ, ಶಿಕ್ಷಣ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡುವ ಮೂಲಕ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಈ ಭಾಗದಲ್ಲಿ 82 ಹೆಣ್ಣುಮಕ್ಕಳು ಎಸ್ಎಸ್ಎಲ್ ಸಿ ನಂತರ ತಮ್ಮ ಶಿಕ್ಷಣ ಮೊಟಕುಗೊಳಿಸಿರುವುದು ಕಂಡುಬಂದಿದ್ದು, ದೂರದೂರಿಗೆ ಪದವಿಪೂರ್ವ ಶಿಕ್ಷಣ ಪಡೆಯುವಲ್ಲಿ ವಂಚಿತರಾಗಿದ್ದರು. ಇದನ್ನು ಮನಗಂಡ ನಮ್ಮ ಸರ್ಕಾರ ವಿಠಲಾಪುರ ಗ್ರಾಮದಲ್ಲಿಯೇ ಪಿಯು ಕಾಲೇಜು ನಿರ್ಮಾಣ ಮಾಡಲಾಯಿತು. ಸದ್ಯ ಇದೇ ಕಾಲೇಜಿನಲ್ಲಿಯೇ ಆ ಎಲ್ಲಾ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮುಂದುವರೆಸಿದ್ದಾರೆ. ಇದೊಂದು ಹೆಮ್ಮೆಯ ವಿಷಯವಾಗಿದ್ದು, ಗಡಿಗ್ರಾಮದ ಮಕ್ಕಳು ವಿದ್ಯಾಭ್ಯಾಸದಿಂದ ಹೊರಗುಳಿಯದಂತೆ ಮುತುವರ್ಜಿ ವಹಿಸಲಾಗಿದೆ ಎಂದರು.
ಸಾಮಾಜಿಕ ಪಿಡುಗಾದ ಬಾಲ್ಯ ವಿವಾಹ ಘಟನೆಗಳು ಸಂಡೂರು ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಹೆಣ್ಣು ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯುವ ಮೂಲಕ ಈ ಅನಿಷ್ಠ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದಾಕಬೇಕಾಗಿದೆ. ಹಾಗಾಗಿ ಈ ಭಾಗದ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣಕ್ಕಾಗಿ ಮುಖ್ಯಮಂತ್ರಿಯವರು ಸಂಡೂರು ಭಾಗಕ್ಕೆ ಬಿಎಸ್ಸಿ ನರ್ಸಿಂಗ್ ಕಾಲೇಜು ಮಂಜೂರು ಮಾಡಿದ್ದಾರೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತದ ಉಪಾಧ್ಯಕ್ಷ ಹೆಚ್.ಲಕ್ಷ್ಮಣ್ ಅವರು ಮಾತನಾಡಿ,
ಸಂಡೂರು ತಾಲ್ಲೂಕು ಭಾಗದಲ್ಲಿ ವಸತಿ ಶಾಲೆಗಳು, ರೈತರ ಹೊಲಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವುದರ ಮೂಲಕ 2004 ರಲ್ಲಿಯೇ ಈ ಭಾಗದ ಶಾಸಕರಾಗಿದ್ದ ಸಂತೋಷ್ ಲಾಡ್ ಅವರು ಸಂಡೂರಿನ ಏಳ್ಗೆಗೆ ಸಾಕಷ್ಟು ಶ್ರಮಿಸಿದ್ದಾರೆ. ಪ್ರಸ್ತುತ ಲಾಡ್ ಫೌಂಡೇಶನ್ ವತಿಯಿಂದ ಶಿಕ್ಷಣ ಸೌಲಭ್ಯ ಒದಗಿಸುವುದರ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆಯಾಗಿದ್ದಾರೆ ಎಂದು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಸಂಡೂರು ಭಾಗದ ವಿವಿಧೆಡೆ ಶಾಲಾ-ಕಾಲೇಜು ನಿರ್ಮಾಣಕ್ಕಾಗಿ ಭೂಮಿ ದಾನ ಮಾಡಿದ ಕುಟುಂಬದ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ 89.64 ಕೋಟಿ ರೂ. ವೆಚ್ಚದಲ್ಲಿ ಕೋಡಾಲ್ ಮತ್ತು ಇತರೆ 36 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ರೂ.39 ಕೋಟಿ ವೆಚ್ಚದಲ್ಲಿ ಅಂತಾಪುರ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಕಾಮಗಾರಿ ಶಂಕು ಸ್ಥಾಪನೆ, ರೂ.02 ಕೋಟಿ ವೆಚ್ಚದಲ್ಲಿ ವಿಠಲಾಪುರ 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಕ್ಕೆ ಹೆಚ್ಚುವರಿಯಾಗಿ 5 ಎಂವಿಎ ಪರಿವರ್ತಕದ ಲೋಕಾರ್ಪಣೆ, ನಾಲ್ಕು ಗ್ರಾ.ಪಂ ಗಳ ವ್ಯಾಪ್ತಿಯಲ್ಲಿ ರೂ.6.60 ಕೋಟಿ ವೆಚ್ಚದಲ್ಲಿ ಹೊಸ ವಿದ್ಯುತ್ ಪರಿವರ್ತಕಗಳು ಮತ್ತು ಹೊಸ ವಿದ್ಯುತ್ ಕಂಬಗಳನ್ನ ಅಳವಡಿಸುವ ಕಾಮಗಾರಿ ಲೋಕಾರ್ಪಣೆಗೊಳಿಸಿದರು.
ಬಳಿಕ ವಿವಿಧ ಇಲಾಖೆಗಳ ಸೌಲಭ್ಯಗಳಡಿ ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಚೆಕ್ ವಿತರಣೆ ಮಾಡಲಾಯಿತು. ಗರ್ಭಿಣಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು.
ಕೃಷಿ ಇಲಾಖೆ ವತಿಯಿಂದ ಸೂಕ್ಷ್ಮ ನೀರಾವರಿ ಯೋಜನೆಯಡಿ ಮತ್ತು ಕೃಷಿ ಯಾಂತ್ರೀಕರಣ ಯೋಜನೆಯಡಿ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಆದೇಶ ಪ್ರತಿ ವಿತರಿಸಲಾಯಿತು. ಕಾರ್ಮಿಕ ಇಲಾಖೆ ವತಿಯಿಂದ ಅಸಂಘಟಿತ ವಲಯ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್, ಸಲಕರಣೆ ಕಿಟ್ ವಿತರಣೆ ಮಾಡಲಾಯಿತು. ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜು ಅರಸು ನಿಗಮದಿಂದ ವಿವಿಧ ಸಾಲ-ಸೌಲಭ್ಯಗಳ ಆದೇಶ ಪ್ರತಿ ನೀಡಲಾಯಿತು. ತೋಟಗಾರಿಕೆಯ ಸೌಲಭ್ಯ, ಕಂದಾಯ ಇಲಾಖೆಯ ಪಿಂಚಣಿ ಸೌಲಭ್ಯ ಪ್ರತಿ ವಿತರಿಸಲಾಯಿತು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಸಂಡೂರು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ನೂರುದ್ದೀನ್, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್.ಸ್ವಾಮಿ., ತೋರಣಗಲ್ಲು ವಾಡಾ ಅಧ್ಯಕ್ಷ ಅಕ್ಷಯ್ ಅಶೋಕ್ ಲಾಡ್, ಅಂತಾಪುರ ಗ್ರಾಪಂ ಅಧ್ಯಕ್ಷ ಎನ್.ಹೊನ್ನೂರಸ್ವಾಮಿ, ವಿಠಲಾಪುರ ಗ್ರಾಪಂ ಅಧ್ಯಕ್ಷ ರಮೇಶ್, ಮೆಟ್ರಿಕಿ ಗ್ರಾಪಂ ಅಧ್ಯಕ್ಷ ವರಲಕ್ಷ್ಮಿ ರುದ್ರೇಶ್, ರಾಜಾಪುರ ಗ್ರಾಪಂ ಅಧ್ಯಕ್ಷ ಬಿ.ನಾಗೇಶ್, ಬಳ್ಳಾರಿ ಉಪವಿಭಾಗಾಧಿಕಾರಿ ರಾಜೇಶ್ ಹೆಚ್.ಡಿ ಸೇರಿದಂತೆ ಸಂಡೂರು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




