ಶ್ರೀ ವಿಶ್ವೇಶ ತೀರ್ಥ ಗುರು ಸ್ಮರಣೆ- 2

Upayuktha
0


ಅವರು ನಮ್ಮವರೇ... ಅವರನ್ನು ಮಠದ ಹೊರಗೆ ಯಾಕೆ ನಿಲ್ಲಿಸಿದ್ದು? ಒಳಗೆ ಕರೀರಿ... 


ಶ್ರೀ ವಿಶ್ವೇಶತೀರ್ಥರ 80 ನೇ ಜನ್ಮ ವರ್ಧಂತಿ ಪ್ರಯುಕ್ತ 2011 ರಲ್ಲಿ ಉಡುಪಿಯಲ್ಲಿ ಮೂರು ದಿನಗಳ ವೈಭವದ ಅಭಿವಂದನ ಕಾರ್ಯಕ್ರಮ.


ರಾಷ್ಡ್ರಮಾನ್ಯ ಘಟಾನುಘಟಿಗಳು ಪಾಲ್ಗೊಂಡ ಸತ್ರ ಅದು. ಎರಡನೇ ದಿನದ ಕಾರ್ಯಕ್ರಮ ಬೆಳುಗ್ಗೆಯಿಂದ ಸಂಜೆ ವರೆಗೆ ಅನ್ಯಾನ್ಯ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿತ್ತು. ಬೆಳಿಗ್ಗೆ 6 ಘಂಟೆಗೆ ಮೊದಲ ಕಾರ್ಯಕ್ರಮ ಶ್ರೀ ಕೃಷ್ಣಮಠದ ರಥಬೀದಿಯನ್ನು ದಶಕಗಳಿಂದ ದಿನನಿತ್ಯ ಸ್ವಚ್ಛಗೊಳಿಸುವ ಕೊರಗ ಸಮುದಾಯದ ಪೌರಕಾರ್ಮಿಕ ಬಂಧುಗಳಿಗೆ ಗುರುಗಳಿಂದ ಸಂಮಾನದೊಂದಿಗೆ ದಿನಪೂರ್ತಿ ಚಟುವಟಿಕೆಗಳ ಆರಂಭ.


ಸುಮಾರು 7-8 ಮಂದಿ ಕಾರ್ಮಿಕರನ್ನು ಪೇಜಾವರ ಮಠಕ್ಕೆ ಆಹ್ವಾನಿಸಲಾಗಿತ್ತು.‌ ಅಭಿನಂದನ ಸಮಿತಿಯ ಅಧ್ಯಕ್ಷರಾದ ಉದ್ಯಮಿ ಬಾಲಾಜಿ ರಾಘವೇಂದ್ರ ಆಚಾರ್ಯ, ಹಿರಿಯರಾದ ರಮೇಶ ಬೀಡು, ಎಲ್ರೂ ಸೇರಿದ್ರು. ನಾನೂ ಸಮಿತಿಯ ಜೊತೆ ಕಾರ್ಯದರ್ಶಿ ಮತ್ತು ಎರಡನೇ ದಿನದ ಸೇವಾ ಚಟುವಟಿಕೆಗಳ ಸಂಯೋಜನೆ ಮಾಡಲು ನಿರ್ದೇಶಿತನಾಗಿದ್ದೆ. ಪೌರಕಾರ್ಮಿಕ ಉಸ್ತುವಾರಿಯಾಗಿದ್ದ ಶಂಕರ್ ಎಂಬವರು ಕಾರ್ಮಿಕರನ್ನು ಕರೆದುಕೊಂಡು ಮಠಕ್ಕೆ ಬಂದಿದ್ರು. ಬಂದ ಮಾಹಿತಿ ಸಿಗುತ್ತಲೇ ಒಳಗೆ ಬರುವಂತೆ ತಿಳಿಸಿದರೂ ಬರಲು ಮುಜುಗರ ಪಟ್ಡರು. ಸರಿ ಅಂದವನೇ  ಒಳಗಡೆ ತಮ್ಮ ಕೊಠಡಿಯಲ್ಲಿದ್ದ ಗುರುಗಳಿಗೆ ಮಾಹಿತಿ ನೀಡಿದೆ. ಸ್ವಾಮೀ ಅವರು ಹೊರಗಡೆ ಇದ್ದಾರೆ. ಅಲ್ಲೇ ಬರಬಹುದಾ ಅಂದೆ. ಸ್ವಲ್ಪ ಮುನಿಸಿಕೊಂಡ ಗುರುಗಳು ಗಡುಸಾದ ಧ್ವನಿಯಲ್ಲಿ ಅಯ್ಯೋ... ಅವರನ್ನು ಹೊರಗೆ ನಿಲ್ಲಲು ಹೇಳಿದ್ಯಾರು? ಒಳಗೆ ಕರೆಯಿರಿ ಇಲ್ಲೇ ಸಂಮಾನ ಮಾಡ್ತೇನೆ ಅಂದ್ರು.


ಸ್ವಾಮೀ ಒಳಗೆ ಬರುವಂತೆ ಹೇಳಿದ್ರೂ ಸಂಕೋಚ ಪಡ್ತಾ ಇದ್ದಾರೆ ಅಂದೆ. ತಕ್ಷಣ ವೇಗದಲ್ಲಿ ಕುಳಿತಲ್ಲಿಂದ ಎದ್ದವರೇ ಹೊರಗೆ ನಡೆದರು.‌ ಕಾರ್ಮಿಕರನ್ನು ಒಳಗೆ ಬನ್ನಿ ಎಂದು ತಾಕೀತು ಮಾಡಿದ್ರು. ಸ್ವಾಮೀ ಇಲ್ಲೇ ಇರ್ತೇವೆ ಅಂತ ಕಾರ್ಮಿಕರು. ಇಲ್ಲ ಇಲ್ಲ, ಒಳಗೆ ಬನ್ನಿ ಅಲ್ಲೇ ಪ್ರಸಾದ ಕೊಡ್ತೇನೆ ಅಂತ ಗುರುಗಳು. ಅಂತೂ ಸಮ್ಮತಿಸಿದ ಕಾರ್ಮಿಕರು ಸಂತೋಷದಿಂದ ಒಳಗೆ ಬಂದ್ರು. ಗುರುಗಳು ತುಳುವಿನಲ್ಲಿ ಪ್ರತಿಯೊಬ್ವರ ಹೆಸರು, ಊರು, ಕುಟುಂಬದ ವಿಚಾರ, ಎಷ್ಟು ವರ್ಷದಿಂದ ಸೇವೆ ನಡೀತಾ ಇದೆ, ಸಂಬಳ ಎಲ್ಲ ಸರಿಯಾಗಿ ಸಿಗ್ತಾ ಇದೆಯಾ? ಏನಾದ್ರೂ ಸಮಸ್ಯೆಗಳುಂಟಾ ಎಂದೆಲ್ಲ ಅವರ ಬಳಿ ಸಂಭಾಷಣೆ ನಡೆಸಿ ಬಳಿಕ ಪ್ರತಿಯೊಬ್ಬರನ್ನೂ ಗೌರವ ಸಂಭಾವನೆ ಸಹಿತ ಸಂತೋಷದಿಂದ ಸಂಮಾನಿಸಿ ಬೀಳ್ಕೊಟ್ಟರು.



ತಮ್ಮ ಈ ಬಗೆಯ ಉದಾರವಾದಿ ನಿಲುವುಗಳಿಂದಲೇ ಜೀವನ ಪರ್ಯಂತ ಅನೇಕರಿಗೆ ಒಗಟಾಗಿಯೊ ಪ್ರಶ್ನೆಯಾಗಿಯೋ ಉಳಿದರು. ಶ್ರೀಗಳು ಒಂದೆಡೆ ತೀರಾ ಕಟ್ಟಾ ಸಂಪ್ರದಾಯವಾದಿ ಬ್ರಾಹ್ಮಣರಿಂದಲೂ ನಿಂದೆಯನ್ನು ಎದುರಿಸಿದರು. ಇನ್ನೊಂದೆಡೆ ಪರಿಶುದ್ಧ, ಕಠಿಣವಾದ ವಿಧಿ ನಿಷೇಧಗಳ ಸನ್ಯಾಸಿ ಜೀವನಾನುಷ್ಠಾನುಗಳಿಂದ ಸುಧಾರಣಾವಾದಿ ನಿಲುವಿನ ಮಂದಿಯ ಸಂದೇಹ, ಟೀಕೆ (ಕೆಲವೆಡೆ ಈ ವಿರೋಧಗಳು ಅತಿರೇಕಕ್ಕೆ ಹೋಗಿ ಗುರುಗಳ ಭಾವಚಿತ್ರಕ್ಕೆ ಚಪ್ಪಲಿ ಮಾಲೆ ಹಾಕಿಯೂ ಸಂಭ್ರಮಿಸಿದವರಿದ್ದಾರೆ) ಗಳಿಗೆ ವಸ್ತುವಾದರು.


ಆದರೆ ಅವರದ್ದು ಮಾತ್ರ ಅದೇ ನಿರ್ಮಲ ನಿಷ್ಕಲ್ಮಷ, ನಿಸ್ಪೃಹ ಭಾವ, ನಿಲುವುಗಳು ಕಳಕಳಿಗಳು. ನನ್ನ ಇತಿಮಿತಿಯೊಳಗೆ ಸನಾತನಧರ್ಮವನ್ನು ಆಂತರಿಕ ನ್ಯೂನತೆಗಳನ್ನು ಸರಿಪಡಿಸುವ ಕೆಲಸ ಮಾಡ್ತೇನೆ ಎಂಬ ದೃಢ ಸಂಕಲ್ಪ. ಅದಕ್ಕಾಗಿಯೇ ಬಂದ ಎಲ್ಲ ಸವಾಲುಗಳನ್ನು ವಿಷಕಂಠನಂತೆ ಸ್ವೀಕರಿಸಿ ಹಿಂದು ಸಮಾಜದಲ್ಲಿ ಸಾಧ್ಯವಿರುವಷ್ಟು ಸಾಮಾಜಿಕ  ಪರಿವರ್ತನೆಗಾಗಿ. ಸಮಸ್ತ ಸಮಾಜವನ್ನು ಸಂಘಟಿಸುವ ಮಹತ್ವದ ಭೂಮಿಕೆಯನ್ನು ನಿರ್ವಹಿಸಿಯೇ ನಿರ್ವಹಿಸಿದರು.


ಹಿಂದವಃ ಸೋದರಾಃ  ಸರ್ವೇ | ನ ಹಿಂದು ಪತಿತೋ ಭವೇತ್ | 

ಇಂತಹ ಅವರ ಮಾತೃ ಹೃದಯದಿಂದ ಧೀಮಂತ ವಾಣಿಯಿಂದ ಹೊಮ್ಮಿದ ಉದ್ಗಾರಗಳೇ ಮುಂದೆ ವಿಶ್ವ ಹಿಂದು ಪರಿಷತ್ತಿನ ಕಾರ್ಯಗಳಿಗೆ ಶಿರೋಧಾರ್ಯವಾಯಿತು.‌ ಸಾಮಾಜಿಕ ಸಮರಸತೆಯ ಕಾರ್ಯಗಳಿಗೆ ಪ್ರೇರಣೆ ನೀಡಿದ ಜೀವಸ್ವರಗಳಾದವು.


ಶ್ರೀ ವಿಶ್ವೇಶ ತೀರ್ಥರಿಗೆ ನಮೋ...


- ಜಿ ವಾಸುದೇವ ಭಟ್ ಪೆರಂಪಳ್ಳಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top