ಪರಿಸರಕ್ಕೆ ಅಳತೆಯ ಮಾನದಂಡ, ಅಭಿವೃದ್ಧಿಯ ಹೆಸರಿನಲ್ಲಿ ಮಾರಣಹೋಮ
ಭಾರತದ ಅತ್ಯಂತ ಪ್ರಾಚೀನ ಪರ್ವತಶ್ರೇಣಿಗಳಲ್ಲೊಂದು ಆಗಿರುವ ಅರಾವಳಿಗೆ ಸಂಬಂಧಿಸಿದಂತೆ ಸುಪ್ರೀಮ್ ಕೋರ್ಟ್ ನೀಡಿರುವ 100 ಮೀಟರ್ ವ್ಯಾಖ್ಯಾನ ದೇಶವ್ಯಾಪಿ ಚರ್ಚೆಗೆ ಕಾರಣವಾಗಿದೆ. ಈ ತೀರ್ಪಿನ ಪ್ರಕಾರ ಸುತ್ತಮುತ್ತಲಿನ ಭೂಭಾಗಕ್ಕಿಂತ ಕನಿಷ್ಠ 100 ಮೀಟರ್ ಎತ್ತರ ಹೊಂದಿರುವ ಪ್ರದೇಶಗಳನ್ನು ಮಾತ್ರ ಅರಾವಳ್ಳಿ ಪರ್ವತಗಳೆಂದು ಪರಿಗಣಿಸಲಾಗುತ್ತದೆ.
ಕಾನೂನು ದೃಷ್ಟಿಯಿಂದ ಸ್ಪಷ್ಟತೆಯನ್ನು ನೀಡಿದರೂ, ಪರಿಸರದ ದೃಷ್ಟಿಯಿಂದ ಗಂಭೀರ ಆತಂಕಗಳನ್ನು ಹುಟ್ಟಿಸಿದೆ. ಪರಿಸರ ತಜ್ಞರ ಅಭಿಪ್ರಾಯದಲ್ಲಿ ಅರಾವಳ್ಳಿಯ ಮಹತ್ವವನ್ನು ಕೇವಲ ಎತ್ತರದ ಆಧಾರದ ಮೇಲೆ ನಿರ್ಧರಿಸಲಾಗುವುದಿಲ್ಲ; ಕಡಿಮೆ ಎತ್ತರದ ಭಾಗಗಳು ಕೂಡ ಭೂಗರ್ಭ ಜಲಪೂರಣೆ, ಮರಳುಕರಣ ತಡೆ, ವಾಯುಮಾಲಿನ್ಯ ನಿಯಂತ್ರಣ ಮತ್ತು ಜೀವವೈವಿಧ್ಯ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಈ ತೀರ್ಪು ನೇರವಾಗಿ ಮರ ಕಡಿತಕ್ಕೆ ಅನುಮತಿ ನೀಡದಿದ್ದರೂ, ಅಭಿವೃದ್ಧಿ, ಗಣಿಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳಿಗೆ ಕಾನೂನಾತ್ಮಕ ದಾರಿಯನ್ನು ತೆರೆಯುವ ಸಾಧ್ಯತೆ ಇರುವುದರಿಂದ ಪರಿಸರ ಹಾನಿಯ ಭೀತಿ ಹೆಚ್ಚಾಗಿದೆ. ಅರಾವಳ್ಳಿಯ ಸಂರಕ್ಷಣೆ ಕೇವಲ ಒಂದು ಪ್ರದೇಶದ ಪ್ರಶ್ನೆಯಲ್ಲ, ಅದು ದೇಶದ ಪರಿಸರ ಸಮತೋಲನ ಮತ್ತು ಭವಿಷ್ಯದ ಹವಾಮಾನ ಭದ್ರತೆಯೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ವಿಚಾರವಾಗಿದೆ.
ಇತ್ತೀಚಿಗೆ ನಡೆದ ಸಂಸತ್ತಿನಲ್ಲಿ G RAM G ಬಿಲ್ ಪಾಸ್ ಮಾಡಲು ತಡರಾತ್ರಿ 1:30 ರ ವರೆಗೆ ಚರ್ಚೆ ನಡೆಯಿತು ಆದರೆ ಹಾಳಾಗುತ್ತಿರುವ AQI (ವಾಯು ಗುಣಮಟ್ಟ) ಕುರಿತು ಚರ್ಚೆ ನಡೆದರೂ ಅದರಿಂದ ಯಾವುದೇ ತೀರ್ಮಾನ ಅಥವಾ ಹೊಸ ನೀತಿ ಪ್ರಕಟವಾಗಲಿಲ್ಲ, ಗುಣಮಟ್ಟ ಸರಿ ಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದೆಂದು ಭರವಸೆ ನೀಡಲಾಯಿತು.
ಅರಾವಳಿ ನಾಶದಿಂದ ಆರ್ಥಿಕವಾಗಿ ಲಾಭಗಳು ಆಗಬಹುದು, ಆದರೆ ಅದೇ ಪರಿಸರವನ್ನು ನಂಬಿ ಬದುಕುತ್ತಿರುವ ಉಳಿದ ಜೀವಿಗಳ ಕಥೆಯೇನು. ಅಲ್ಲಿನ ಅಷ್ಟು ಜೀವರಾಶಿಗಳಿಗೆ ಆಸರೆಯಾಗಿ, ಸೂರಾಗಿ ನಿಂತ ಪರಿಸರ ನಿಂತಿದೆ ಎನ್ನುವ ಸಣ್ಣ ಪ್ರಜ್ಞೆ ಕೂಡ ಹೊಳೆಯದೆ ಹೋಯಿತೇ.ಯಾವ ಕಾನೂನು, ಯಾವ ಪ್ರಜಾಪ್ರಭುತ್ವ ದೇಶದ ಮಾನವರಿಗೆ ಮಾತ್ರವಲ್ಲ ಪರಿಸರ, ಪ್ರಾಣಿಗಳಿಗೂ ಹಾಗೂ ಪ್ರತಿ ಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಹೇಳುತ್ತದೋ ಅಥವಾ ಹಕ್ಕನ್ನು ಒದಗಿಸುತ್ತದೆ ಅದೇ ಕಾನೂನು ಪರೋಕ್ಷವಾಗಿ aa ಹಕ್ಕು ಮಾತ್ರವಲ್ಲ ಬದುಕನ್ನು ಕಿತ್ತುಕೊಳ್ಳುತ್ತಿದೆ ಎನ್ನುವುದು ಬೇಸರದ ಸಂಗತಿ.
ಇದರ ನಾಶದಿಂದ ದೇಶ ಅಭಿವೃದ್ಧಿ ಹೊಂದಬಹುದು ಆದರೆ ಮುಂದೊಂದು ದಿನ ಅಭಿವೃದ್ಧಿ ನೋಡಲು ನಾವೇ ಇಲ್ಲದೆ ಹೋದರೆ...?. ಈಗಾಗಲೇ ನಾವೆಲ್ಲ ಸೇರಿ ಪ್ರಕೃತಿಯನ್ನು ನಾಶ ಪಡಿಸುತ್ತಿದ್ದೇವೆ ಇನ್ನೂ ಎಷ್ಟು ? ಇಂತಹ ತೀರ್ಪುಗಳು ಹೊರಬಿದ್ದಾಗ ಕೆಲವೊಮ್ಮೆ ಭಾಸವಾಗುತ್ತದೆ ನಾವು ಯಾವ ಕಾನೂನು, ಯಾವ ನ್ಯಾಯಾಲಯ, ಯಾವ ಸರಕಾರ, ಯಾವ ನಾಯಕರು ಹೆಮ್ಮೆ ಎಂದು ಹೇಳಿಕೊಂಡು ಓಡಾಡುತ್ತೆವೆ ಅವೆಲ್ಲದಕ್ಕೂ ಯೋಚನೆಯ ಶಕ್ತಿ ಎನ್ನುವುದು ಮರೆತುಹೋತೇನೋ ಎಂಬಂತೆ ....
- ವೈಶಾಖ್ ರಾಜ್ ಜೈನ್


