ಎಸ್‌ಡಿಎಂಇ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ನಿಧನ

Upayuktha
0





ಉಜಿರೆ: ಹಿರಿಯ ಶಿಕ್ಷಣ ತಜ್ಞ ಹಾಗೂ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಪ್ರೊ. ಎಸ್. ಪ್ರಭಾಕರ್ (90) ಬುಧವಾರ ಉಜಿರೆಯಲ್ಲಿ ಸ್ವಗೃಹದಲ್ಲಿ ನಿಧನರಾದರು.


ಅವರಿಗೆ ಮಗಳು ಶರ್ಮಿಳಾ ಮತ್ತು ಅಳಿಯ ಡಾ. ನರೇಂದ್ರ ಇದ್ದಾರೆ.  ಗುರುವಾರ ಸಂಜೆ ಆರು ಗಂಟೆಗೆ ಅವರ ಅಂತ್ಯಸಂಸ್ಕಾರ ಉಜಿರೆಯಲ್ಲಿ ನಡೆಸಲಾಗುವುದು ಎಂದು ತಿಳಿದುಬಂದಿದೆ. ಮೃತರ ಸ್ಮರಣಾರ್ಥ ಬುಧವಾರ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ.


ಉಡುಪಿ ಜಿಲ್ಲೆಯ ಸೂರಾಲು ಅರಮನೆಯಲ್ಲಿ ಪದ್ಮನಾಭಯ್ಯ ಮತ್ತು ಪುಷ್ಪಾವತಿ ಅಮ್ಮ ದಂಪತಿಯ ಮಗನಾಗಿ 1935 ರ ಜೂನ್ 28 ರಂದು ಪ್ರಭಾಕರ್ ಜನಿಸಿದರು.


ಪ್ರಾಥಮಿಕ ಶಿಕ್ಷಣವನ್ನು ಸೂರಾಲು ಶಾಲೆಯಲ್ಲಿ ಪೂರೈಸಿದ ಬಳಿಕ ಮೂಡಬಿದ್ರೆಯಲ್ಲಿ ಜೈನ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವರೆಗೆ ಕಲಿತರು. ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಪಿ.ಯು.ಸಿ. ಕಲಿತು ಮೈಸೂರಿನಲ್ಲಿ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. 1991 ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ರಾಜಕೀಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪರೀಕ್ಷೆಯಲ್ಲಿ ಸುವರ್ಣ ಪದಕದೊಂದಿಗೆ ಪ್ರಥಮ ರ‍್ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾರ್ಥಿ.


ಬಳಿಕ ಬೆಂಗಳೂರಿನಲ್ಲಿ ಮಹಾರಾಣಿ ಕಾಲೇಜಿನಲ್ಲಿ ಎರಡು ವರ್ಷ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ, ಮಂಡ್ಯದ ಸರ್ಕಾರಿ ಕಾಲೇಜಿಗೆ ವರ್ಗಾವಣೆಗೊಂಡು ಅಲ್ಲಿಯೂ ಎರಡು ವರ್ಷ ಉಪನ್ಯಾಸಕರಾಗಿ ಕೆಲಸ ಮಾಡಿದರು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವಾಗ ಧರ್ಮಸ್ಥಳದ ಅಂದಿನ ಧರ್ಮಾಧಿಕಾರಿಗಳಾಗಿದ್ದ ಕೀರ್ತಿಶೇಷ ರತ್ನವರ್ಮ ಹೆಗ್ಗಡೆಯವರ ಮನೆಯಲ್ಲೆ ವಾಸ್ತವ್ಯವಿದ್ದು ಅವರ ಮಕ್ಕಳಾದ ಡಿ. ವೀರೇಂದ್ರ ಕುಮಾರ್ (ಈಗಿನ ಧರ್ಮಾಧಿಕಾರಿಗಳು) ಮತ್ತು ಡಿ. ಸುರೇಂದ್ರ ಕುಮಾರ್ ವಿದ್ಯಾರ್ಥಿಗಳಾಗಿದ್ದು ಅವರಿಗೆ ಪೋಷಕರಾಗಿಯೂ ಪ್ರೊ. ಎಸ್. ಪ್ರಭಾಕರ್ ಮಾರ್ಗದರ್ಶನ ನೀಡಿದರು.


1966 ರಲ್ಲಿ ತನ್ನ ಸೋದರ ಮಾವನ ಮಗಳು ಮೂಡಬಿದ್ರೆಯ ಸರೋಜಿನಿಯನ್ನು ಪ್ರಭಾಕರ್ ವಿವಾಹವಾದರು. ಕೀರ್ತಿಶೇಷ ರತ್ನವರ್ಮ ಹೆಗ್ಗಡೆಯವರು 1966 ರಲ್ಲಿ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜು ಪ್ರಾರಂಭಿಸಿದಾಗ ಅವರ ಅಪೇಕ್ಷೆಯಂತೆ ಪ್ರಭಾಕರ್ ಸರ್ಕಾರಿ ಕಾಲೇಜಿನ ಹುದ್ದೆಗೆ ರಾಜಿನಾಮೆ ನೀಡಿ ಉಜಿರೆ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ ಸೇರಿದರು.


27 ವರ್ಷಗಳ ಸೇವೆ ಬಳಿಕ 1993 ರಲ್ಲಿ ಪ್ರಾಂಶುಪಾಲ ಹುದ್ದೆಯಿಂದ ನಿವೃತ್ತರಾದರು. ಪ್ರಾಂಶುಪಾಲರಾಗಿರುವಾಗಲೇ ಎಸ್.ಡಿ.ಎಂ. ಎಜ್ಯುಕೇಶನಲ್ ಟ್ರಸ್ಟ್ ಮತ್ತು ಎಜ್ಯುಕೇಶನಲ್ ಸೊಸೈಟಿಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.


ಪ್ರಾಂಶುಪಾಲ ಹುದ್ದೆಯಿಂದ ನಿವೃತ್ತರಾದ ಬಳಿಕ ಪೂರ್ಣಕಾಲಿಕ ಕಾರ್ಯದರ್ಶಿಯಾಗಿ ಸೇವೆ ನೀಡಿದ್ದಾರೆ. ಮಂಜುವಾಣಿ ಮಾಸಪತ್ರಿಕೆಯ ಸಂಪಾದಕರಾಗಿ ಹಾಗೂ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾಗಿಯೂ ಅವರು ಸೇವೆ ಮಾಡಿದ್ದಾರೆ.


ರತ್ನಮಾನಸ ವಿದ್ಯಾರ್ಥಿ ನಿಲಯ, ರುಡ್‌ಸೆಟ್ ಸಂಸ್ಥೆ, ಮಂಗಳೂರಿನಲ್ಲಿ ಕಾನೂನು ಕಾಲೇಜು, ಉಡುಪಿಯಲ್ಲಿ ಆಯುರ್ವೇದ ಕಾಲೇಜಿನ ಆಡಳಿತ, ಧಾರವಾಡದಲ್ಲಿ ಜನತಾ ಶಿಕ್ಷಣ ಸಮಿತಿ ಆಡಳಿತ ವಹಿಸಿಕೊಳ್ಳುವಾಗ ಪ್ರೊ. ಎಸ್. ಪ್ರಭಾಕರ್ ವಿಶೇಷ ಆಸಕ್ತಿ ಮತ್ತು ಶ್ರಮವಹಿಸಿದ್ದಾರೆ.

ಧರ್ಮಸ್ಥಳದಲ್ಲಿ ಪ್ರತಿವರ್ಷ ಲಕ್ಷದೀಪೋತ್ಸವ ಸಂದರ್ಭದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನಗಳ ಕಾರ್ಯದರ್ಶಿಯಾಗಿಯೂ ವಿಶೇಷ ಸೇವೆ ಸಲ್ಲಿಸಿದ್ದಾರೆ. 


ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ವಿಶೇಷ ಭಾಷಾಪ್ರಭುತ್ವ ಹೊಂದಿದ್ದ ಅವರು ಉತ್ತಮ ವಾಗ್ಮಿಯಾಗಿಯೂ, ಶಿಸ್ತಿನ ಸಿಪಾಯಿಯಾಗಿ, ದಕ್ಷ ಆಡಳಿತದಾರರಾಗಿ, ಆದರ್ಶ ಅಧ್ಯಾಪಕರಾಗಿ ಚಿರಪರಿಚಿತರಾಗಿದ್ದರು. ಅವರು ಜೈನ ಧರ್ಮದ ವ್ರತ-ನಿಯಮಗಳನ್ನೂ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು.

ಹೃದಯಶ್ರೀಮಂತಿಕೆಯೊಂದಿಗೆ ತಮ್ಮ ಇತಿ-ಮಿತಿಯೊಳಗೆ ಎಲ್ಲರಿಗೂ ಶಿಕ್ಷಣ ಹಾಗೂ ಉದ್ಯೋಗ ಪಡೆಯಲು ಸಹಕರಿಸುತ್ತಿದ್ದರು.


ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪ್ರೊ. ಪ್ರಭಾಕರ್ ನಿಧನಕ್ಕೆ ಗಾಢ ಸಂತಾಪ ವ್ಯಕ್ತಪಡಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ.

--

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಂತಾಪ:

ಧರ್ಮಸ್ಥಳದ ವತಿಯಿಂದ ನಾವು ಹೊಸ ಸಂಸ್ಥೆಗಳನ್ನು ಪ್ರಾರಂಭಿಸುವಾಗ, ಇತರ ಸಂಸ್ಥೆಗಳ ಆಡಳಿತವನ್ನು ವಹಿಸಿಕೊಳ್ಳುವಾಗ, ಶಿಕ್ಷಣತಜ್ಞರೂ, ಆಡಳಿತ ಪರಿಣತರೂ ಆದ ಪ್ರೊ. ಎಸ್. ಪ್ರಭಾಕರ್ ಅವರೊಂದಿಗೆ ಸಮಾಲೋಚನೆ ನಡೆಸಿ ಕಾರ್ಯಪ್ರವೃತ್ತರಾಗುತ್ತಿದ್ದೆವು.


ಧಾರವಾಡದ ಜನತಾ ಶಿಕ್ಷಣ ಸಮಿತಿಯ ಆಡಳಿತ ವಹಿಸಿಕೊಳ್ಳುವಾಗ, ಉಡುಪಿ ಆಯುರ್ವೇದ ಕಾಲೇಜಿನ ಆಡಳಿತ ವಹಿಸುವಾಗ, ಮಂಗಳೂರಿನಲ್ಲಿ ಕಾನೂನು ಕಾಲೇಜು ಪ್ರಾರಂಭ, ಮೈಸೂರಿನಲ್ಲಿ ಎಸ್.ಡಿ.ಎಂ. ಐ.ಎಂ.ಡಿ. ಪ್ರಾರಂಭಿಸುವಾಗ, ರುಡ್‌ಸೆಟ್ ಸಂಸ್ಥೆಗಳ ಪ್ರಾರಂಭ, ಎಂ.ಎA.ಕೆ. ಮಹಿಳಾ ಕಾಲೇಜು ಆಡಳಿತ ವಹಿಸುವಾಗ ಪ್ರೊ. ಪ್ರಭಾಕರ್‌ರೊಂದಿಗೆ ಸಮಾಲೋಚನೆ ನಡೆಸಿರುವುದಲ್ಲದೆ, ಅನೇಕ ಬಾರಿ ನಾವು ಜೊತೆಯಾಗಿ ಧಾರವಾಡ, ಮೈಸೂರು, ಉಡುಪಿಗೆ ಹೋಗಿ ಪರಿಶೀಲನೆ ನಡೆಸಿ, ವಿಚಾರ, ವಿಮರ್ಶೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿದ್ದೆವು.

ನಮ್ಮ ಸಂಸ್ಥೆಗಳಿಗೆ ಅರ್ಹ ಪ್ರಾಂಶುಪಾಲರು, ನಿರ್ದೇಶಕರುಗಳು, ಉಪನ್ಯಾಸಕರುಗಳ ಆಯ್ಕೆ ಮತ್ತು ನೇಮಕಾತಿಯಲ್ಲಿಯೂ ಪ್ರೊ. ಎಸ್. ಪ್ರಭಾಕರ್ ಸಹಕಾರ ನೀಡಿರುತ್ತಾರೆ.


ಧರ್ಮಸ್ಥಳಕ್ಕೆ ಪ್ರಧಾನಿ ಇಂದಿರಾಗಾಂಧಿ, ರಾಷ್ಟçಪತಿ ವಿ.ವಿ. ಗಿರಿ ಮೊದಲಾದ ಗಣ್ಯವ್ಯಕ್ತಿಗಳ ಭೇಟಿ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜನೆಯಲ್ಲಿ, ಲಕ್ಷದೀಪೋತ್ಸವ ಸಂದರ್ಭ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನಗಳಿಗೆ ಉದ್ಘಾಟಕರು, ಅಧ್ಯಕ್ಷರು ಹಾಗೂ ಸಾಹಿತಿಗಳು ಮತ್ತು ಕಲಾವಿದರನ್ನು ಆಹ್ವಾನಿಸುವಲ್ಲಿಯೂ ಅವರು ವಿಶೇಷ ಪಾತ್ರವಹಿಸಿದ್ದಾರೆ. ಶಿಸ್ತುಬದ್ಧವಾಗಿ ಎಲ್ಲಾ ಕಾರ್ಯಕ್ರಮಗಳ ಸಂಘಟನೆಯಲ್ಲಿ ಅವರು ಸಹಕರಿಸುತ್ತಿದ್ದರು.


ಅವರ ನಿಧನ ನಮ್ಮ ಸಂಸ್ಥೆಗಳಿಗೆ ತುಂಬಲಾರದ ನಷ್ಟವೇ ಸರಿ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಎಂದು ಡಿ. ವೀರೇಂದ್ರ ಹೆಗ್ಗಡೆಯವರು ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.


Post a Comment

0 Comments
Post a Comment (0)
To Top