ಜಗತ್ತನ್ನು ಮಾನವೀಯಗೊಳಿಸುವ ಮನೋವೈಜ್ಞಾನಿಕ ಪ್ರಯೋಗಗಳು ಅಗತ್ಯ: ಡಾ.ಸತೀಶ್ಚಂದ್ರ ಎಸ್.

Upayuktha
0

ಎಸ್.ಡಿ.ಎಂ ಮನೋವಿಜ್ಞಾನ ರಾಷ್ಟ್ರೀಯ ವಿಚಾರ ಸಂಕಿರಣ



ಉಜಿರೆ:  ಪ್ರತಿಯೊಬ್ಬರ ಹಕ್ಕುಗಳಿಗೆ ಆದ್ಯತೆ ನೀಡಿ ಎಲ್ಲರನ್ನೂ ಸಮಾನವಾಗಿ ಕಾಣುವ ಪ್ರೇರಣಾದಾಯಕ ವಾತಾವರಣ ಸೃಷ್ಟಿಸುವುದನ್ನು ಕೇಂದ್ರ ಆಶಯವಾಗಿಸಿಕೊಂಡು ಜಗತ್ತನ್ನು ಮಾನವೀಯಗೊಳಿಸುವ ಪ್ರಯೋಗಗಳ ಕಡೆಗೆ ಮನೋವೈಜ್ಞಾನಿಕ ವಲಯ ಗಮನಹರಿಸಬೇಕಿದೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟರು.


ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಮನಶಾಸ್ತ್ರ ವಿಭಾಗವು 'ಪ್ರಮೋಟಿಂಗ್ ಹ್ಯೂಮನ್ ರೈಟ್ಸ್ ಇನ್ ಮೆಂಟಲ್ ಹೆಲ್ತ್ ಕೇರ್: ಅಪ್ರೋಚಸ್, ಅಪಾರ್ಚುನಿಟಿಸ್ ಆ್ಯಂಡ್ ಚಾಲೆಂಜಸ್' ಕುರಿತು ಆಯೋಜಿಸಿದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಆಧುನಿಕ ಜೀವನ ಶೈಲಿಯಿಂದ ಮನುಷ್ಯನ ಬದುಕು ಸಂಕೀರ್ಣವಾಗುತ್ತಿದೆ. ಮನುಷ್ಯರೆಲ್ಲರನ್ನೂ ಸಮಾನವಾಗಿ ನೋಡಿ ಸಮಾಜದಲ್ಲಿ ಮಾನಸಿಕ ನೆಮ್ಮದಿ ನೆಲೆಗೊಳಿಸುವ ಪ್ರಕ್ರಿಯೆ ಸವಾಲಿನದ್ದಾಗಿ ಪರಿಣಮಿಸಿದೆ. ದೈಹಿಕ ಮತ್ತು ಮಾನಸಿಕ ಅನಾರೋಗ್ಯಕ್ಕೆ ಮನಸ್ಸನ್ನು ಸಂಕಟಕ್ಕೀಡುಮಾಡುವ ವರ್ತನೆಗಳೇ ಕಾರಣ. ಇಂಥ ಮಿತಿಗಳನ್ನು ಮೀರುವ ಸಾಮಾಜಿಕ ಒತ್ತಡ ಸೃಷ್ಟಿಸುವಲ್ಲಿ ಮಾನವ ಹಕ್ಕುಗಳು ಪರಿಣಾಮಕಾರಿ ಪಾತ್ರವಹಿಸುತ್ತವೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಮನಃಶಾಸ್ತ್ರಜ್ಞರು ಸಾಮಾಜಿಕ, ಸಾಮೂಹಿಕ ಬದುಕಿನ ಮಾನಸಿಕ ಸುಸ್ಥಿರತೆ ಕಾಯ್ದುಕೊಳ್ಳುವಂತಹ ಮೌಲಿಕ ಪ್ರಯೋಗಗಳ ಕೊಡುಗೆಗಳನ್ನು ನೀಡಬೇಕು. ಹಾಗಾದಾಗ ಮಾತ್ರ ದೇಶ, ಪ್ರದೇಶ ಮತ್ತು ಜಾಗತಿಕ ಮಟ್ಟದ ಸಮಖೀರ್ಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಮಾರ್ಗಗಳನ್ನು ಹೊಳೆಸಿದಂತಾಗುತ್ತದೆ ಎಂದು ಹೇಳಿದರು.


ದೈಹಿಕ ಅನಾರೋಗ್ಯಕ್ಕೀಡಾದವರನ್ನು ನೋಡುವಂತೆಯೇ ಮಾನಸಿಕ ಅಸ್ವಸ್ಥತೆಯೊಂದಿಗಿರುವವರನ್ನು ನೋಡುವ ಕ್ರಮವಿಲ್ಲ. ಮಾನಸಿಕ ಅಸ್ವಸ್ಥತೆಯೊಂದಿಗಿರುವವರನ್ನು ನಿರ್ಲಕ್ಷಿಸುವ ಮನೋಭಾವ ಸಮಾಜದಲ್ಲಿದೆ. ಇದರಿಂದಾಗಿ ನಕಾರಾತ್ಮಕ ಒತ್ತಡ ಸೃಷ್ಟಿಯಾಗಿ ಮಾನಸಿಕ ಸುಸ್ಥಿರತೆಯನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಇಡೀ ಸಮಾಜದಲ್ಲಿ ಎಲ್ಲರನ್ನೂ ಗೌರವಿಸುವಂತಹ ಸಾಮೂಹಿಕ ಆವರಣ ಸೃಷಿಯಾಗಬೇಕು. ಮಾನಸಿಕವಾಗಿ ನಲುಗುವವರನ್ನು ಪ್ರತ್ಯೇಕವಾಗಿ ನೋಡದೇ ಅವರೂ ಬದಲಾಗಬಲ್ಲರು ಎಂಬ ಆಶಾಭಾವ ನೆಲೆಯೂರಬೇಕು. ಈ ನಿಟ್ಟಿನಲ್ಲಿ ಮನಃಶಾಸ್ತ್ರ ಮತ್ತು ಮನಃಶಾಸ್ತ್ರಜ್ಞರ ಹೊಣೆಗಾರಿಕೆ ಮಹತ್ವಪೂರ್ಣವಾದುದು ಎಂದು ವಿಶ್ಲೇಷಿಸಿದರು.


ಆರೋಗ್ಯಪೂರ್ಣ ಅಸ್ಮಿತೆಯು ದೈಹಿಕ ಮತ್ತು ಮಾನಸಿಕ ಸುಸ್ಥಿರತೆಯನ್ನೇ ಆಧರಿಸಿರುತ್ತದೆ. ಭಾವನಾತ್ಮಕ ಏರುಪೇರುಗಳಾದ ಸಂದರ್ಭಗಳನ್ನು ಎಚ್ಚರದಿಂದ ನಿರ್ವಹಿಸಲು ಸಾಧ್ಯವಾಗುತ್ತದೆ. ಬಾಲ್ಯದಿಂದ ವೃದ್ಧಾಪ್ಯದವರೆಗಿನ ಬದುಕಿನ ಹಂತಗಳಲ್ಲಿ ಮಾನಸಿಕ ಆರೋಗ್ಯವನ್ನು ಸಮತೋಲನದೊಂದಿಗೆ ಕಾಯ್ದುಕೊಳ್ಳುವಂತಾಗಬೇಕು. ಹಾಗಾದಾಗ ಮಾತ್ರ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ  ಮನಃಶಾಸ್ತ್ರ ವಿಭಾಗದ 25 ವರ್ಷಗಳ ಕಾರ್ಯ ಚಟುವಟಿಕೆಗಳ ವಿವರಗಳನ್ನೊಳಗೊಂಡ 'ಬೆಳ್ಳಿ ಹೆಜ್ಜೆಯ ಮನೋಲಹರಿ' ಸಂಚಿಕೆಯನ್ನು ಬಿಡುಗಡೆಗೊಳಿಸಿದರು.


ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿಶ್ವನಾಥ್ ಪಿ ಮಾತನಾಡಿದರು. ಸಮಾಜದ ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ನಿರ್ವಹಿಸುವುದಕ್ಕೆ ಮನಃಶಾಸ್ತ್ರ ಪೂರಕವಾದ ಚಿಂತನೆಯನ್ನು ಒದಗಿಸಿಕೊಡುತ್ತದೆ. ಮಾನವ ಹಕ್ಕುಗಳನ್ನು ಕೇಂದ್ರೀಕರಿಸಿಕೊಂಡು ಮಾನಸಿಕ ಸ್ವಾಸ್ಥ್ಯದ ಸಬಲೀಕರಣದ ಮೌಲಿಕ ಚರ್ಚೆಗಳು ವಿಸ್ತೃತವಾಗಿ ನಡೆಯಬೇಕು ಎಂದು ಶುಭ ಹಾರೈಸಿದರು.


ವಿಚಾರ ಸಂಕೀರ್ಣದ ಪ್ರಧಾನ ಆಶಯ ಪ್ರಸ್ತುತಪಡಿಸಿದ ಮಂಗಳೂರಿನ ಎಸ್.ಡಿ.ಎಂ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ತಾರಾನಾಥ ಶೆಟ್ಟಿ ಮಾತನಾಡಿದರು. ಭಾರತದ ಸಂವಿಧಾನದ ಉದ್ದೇಶವು ಮಾನವ ಹಕ್ಕುಗಳನ್ನು ಉತ್ತೇಜಿಸಿ ಸಮಾನತೆಯನ್ನು ಸಾರುವುದೇ ಆಗಿದೆ.ಎಲ್ಲರನ್ನು ಸಮಾನವಾಗಿ ಕಂಡಾಗ ಭಾರತದಲ್ಲಿ ಸ್ವಸ್ಥ ಸಮಾಜದ ನಿರ್ಮಾಣ ಆಗಲು ಸಾಧ್ಯ. 2017 ರಲ್ಲಿ  ಮೆಂಟಲ್ ಹೆಲ್ತ್ ಕೇರ್ ಸಂಬಂಧಿತ ಕಾಯ್ದೆಯನ್ನು ಪುನರ್ ವ್ಯಾಖ್ಯಾನಗೊಳಿಸಿ ಪಾಸಿಟಿವ್ ಮೆಂಟಲ್ ಹೆಲ್ತ್ ಕೇರ್ ಆಕ್ಟ್ ಎಂದು ಮರುನಾಮಕರಣ ಮಾಡಿದಾಗ ಮಾನಸಿಕ ಅಸ್ವಸ್ಥರನ್ನು ಸಮಾನವಾಗಿ ಕಾಣುವ ದೃಷ್ಟಿಕೋನ ಸಾಧ್ಯವಾಗಲಾರಂಭಿಸಿತು ಎಂದರು.


ವೇದಿಕೆಯಲ್ಲಿ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯ ಬಿ.ಪಿ, ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಂದನಾ ಜೈನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮಹೇಶ್ ಬಾಬು ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ಹೆಚ್ ವಂದಿಸಿದರು. ದ್ವಿತೀಯ ಎಂ.ಎಸ್.ಸಿ ಮನಶಾಸ್ತ್ರ ವಿಭಾಗದ ಸ್ಮಿತಾ ಮತ್ತು ಪ್ರಥಮ ಎಂ ಎಸ್ ಸಿ ಮನಶಾಸ್ತ್ರ ವಿಭಾಗದ ಜೆಸ್ಲಿನ್ ಜೈಮೊನ್ ಕಾರ್ಯಕ್ರಮ ನಿರ್ವಹಿಸಿದರು. 


  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top